ನಮಗೆ ನಾವೇ ಕೇಳುವಂತ ಪ್ರಶ್ನೆ!

 

 

ನಮಗೆ ನಾವೇ ಕೇಳುವಂತ ಪ್ರಶ್ನೆ!

ಈ ಆತ್ಮವೆಂಬ ಬತ್ತಿ ಕತ್ತಲೆಯ ತೊರೆದು ಹೊತ್ತಿ ಉರಿಯಬೇಕಿದೆ!

ಭಯವೆಂಬ ಬಾನು ಕತ್ತಲೆಯ ತೊರೆದು ಸೂರ್ಯನನ್ನು ಅರಸಿ ಹೊರಡಬೇಕಿದೆ..

ಕಣ್ಣೆದುರಲ್ಲೇ ಎಲ್ಲ ಉತ್ತರಗಳೂ ಅಂಗೈನ ಬೆಣ್ಣೆಯಂತಿದೆ ಆದರೂ

ತುಪ್ಪಕ್ಕಾಗಿ ಅಲೆವ ಬೆಪ್ಪನಂತೆ “ಇಲ್ಲಗಳ” ವ್ಯೂಹದಲ್ಲಿ ಸಿಲುಕಿದೆ ಈ ಮನ!.

 

ಈ ಅಭಯ ಭಾವನೆ ನನ್ನೊಳಗರಳುವುದಾದರೂ ಯಾವಾಗ ?,

ನಾ ಭಯವೆಂಬ ಗರ್ಭದಿಂದಾಚೆ ಬರುವುದ್ಯಾವಾಗ ??…

ಈ ಹೆಸರಿಗೊಂದು ಉಸಿರು ಬರುವುದ್ಯಾವಾಗ?,

ಈ ಮನವು ತನ್ನ ತಾನೇ ಪ್ರೀತಿಸದೇ ಹೋದಾಗ ಇನ್ನೆಲ್ಲಿಯಾ ಭರವಸೆ!

 

ಆದರೂ ಸಾಧನೆ ಬಿಸಿಲುಗೋಲು ಮನವೆಂಬ ಮನೆಯ ಕಿಟಕಿಯ ನುಸುಳಿ

ತನ್ನ ಬೆಳಕೊಗೆಯ ಬೇಕಿದೆ, ಆ ಬೆಳಕು ಈ ತನುವರಳಿದ ಕಾರಣವ ತೋರ ಬೇಕಿದೆ.

ಅರಳಿದ ತನುವು ಬಾಡುವ ಮೊದಲೇ ಸುಗಂಧಿಸಿ ಅದರ ಗಮ ಎಲ್ಲರ ನಾಸಿಕದಲ್ಲೇ ಚಿರಂಜೀವಿಯಾಗಬೇಕಿದೆ!, ಅರಿಯಬೇಕಿದೆ ಅರಿವು ಅರಳಬೇಕಿದೆ..

 

ನಾನೂ ನನ್ನ ಪ್ರಾಚಾರ್ಯರೊಂದಿಗೆ ನಿಂತು ಭಾವಚಿತ್ರವ ಪಡೆಯ ಬೇಕಿದೆ

ಆದರಾ ಭಾವಚಿತ್ರದೊಳಗೆ ನಾ ಮಾಡಿದ ಸಾಧನೆಯ ಭಾವಬೆಳಕು

ನನ್ನ ಪ್ರಾಚಾರ್ಯರ ಮೊಗದಲ್ಲಿ ಪ್ರತಿಫಲಿಸಿ ಪ್ರಜ್ವಲಿಸುತ್ತಿರ ಬೇಕಿದೆ..

ಸಾಧನೆಯ ಬಟ್ಟೆಯ ತೊಡಬೇಕಿದೆ,

 

ಹೊರಟ ಬಟ್ಟೆಯಲ್ಲೇ ಲಕ್ಷ್ಯವ ಇಟ್ಟು ಗುರಿಯ ಗರಿಯ ಸ್ಪರ್ಶಿಸಬೇಕಿದೆ.

“ಇಲ್ಲಗಳ” ಸೊಲ್ಲ ಹೇಳದೆ ಆತ್ಮ ವಿಶ್ವಾಸದ ದೀಪವ ಹಚ್ಚಿಕೊಂಡು ನಾ ಹೊರಡಲೇ ಬೇಕಿದೆ,

ನಾನೂ ಇರುವೆನೆಂಬ ಇರುವಿಕೆಯ ಅರವಳಿಕೆಯ ಮೂಡಿಸಬೇಕಿದೆ.

 

ನನ್ನಿಂದ ಅ’ಸಾಧ್ಯ’ ಎನ್ನುವ ಕಪ್ಪು ಅಂಧಕಾರದ ಪಟ್ಟಿಯ ಕಟ್ಟಿಕೊಂಡು

ತಿರುಗುತ್ತಿರುವ ಮನಸು ಪಟ್ಟಿಯ ಕಿತ್ತೊಗೆದು ತೇಜವ ಕಾಣಬೇಕಿದೆ.

ಒಟ್ಟಾರೆಯಾಗಿ ನನಗೆ ನಾನೇ ಕೇಳಿಕೊಳ್ಳುವ ಪ್ರಶ್ನೆ ಏನೆಂದರೆ..

 

ತನುವೆ ನೀನೇಕೆ ಅರಳಿರುವೆ?….”

ಕವನ ಕೆ. ,

ಪ್ರಥಮ ಬಿಎ, ವಿದ್ಯಾರ್ಥಿನಿ

ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

Teachers Day:2023

‘ಸಂಧ್ಯಾ’ ಕಾಲದಲಿ ‘ಅನರ್ಘ್ಯ’ ‘ಶ್ರೀಕರ’ನ ‘ರೇಷ್ಮೆ’ಯ
‘ಕಿರಣ’ಗಳು
‘ಅನು’ದಿನವು ‘ಶ್ವೇತ’ಪತ್ರಗಳ ಮೇಲೆ ‘ಮಂಜಿ’ನ
‘ಹನಿ’ಯ ಸುರಿಸುತ ‘ನೆನೆಸಿ’
‘ಸುನೀಲಾ’ಕಾಶದಲಿ ‘ರಜತ’ ಮೇಘಗಳ ‘ಅಂಜಿ’ಸಿ
ಹುತ’ವಹಾಬ’ನ ಹಿಂದಿಕ್ಕಿ ಹರಿಸುತ ‘ವಿಭಾ’ವಳಿಯ
‘ಚೆನ್ನ-ವಿಶ್ವ’ದಲಿ ಮುರುಳಿ ‘ರಾಯ’ನ ‘ಶೃತಿ’ಯ ‘ಮೋಹಿಸುತ’
‘ಜೇನ”ಸುವರ್ಚಲ’ ‘ಪ್ರಶಾಂತ’ ಮನಸಿನಲಿ
‘ಹುಚ್ಚ’ನ ಗುರು-‘ಪ್ರೇಮ’ ಕವಿತೆಗಳ
‘ನವೀನ’ ‘ಕಾವ್ಯದಿಂಚರ’ಗಳು ಕಡೆದು
‘ಅಶ್ವಿನಿ’ಯ ‘ರೂಪ’ವಿಹ ‘ವಜ್ರಕಾಯ’ನ
‘ಕೀರ್ತಿ’ಯ ಮಿತ್ರ,
ಉರದಿ ‘ನಾಗ’ವ ಧರಿಸಿಹ ಗುರು-‘ಗಣೇಶ’ನ ‘ಪೂಜೆ’ಯ
‘ವಿನಯ’ದಿ ‘ಅರ್ಚಿಸಿ’
ಹೆಸರ ಅರಿಯದ ಗುರುವ ಕ್ಷಮಿಸೆಂದು ಬೇಡುತ
ಸಹಸ್ರ ‘ಮನುಷ್ಯ’ ಜನುಮದಲಿ ‘ಸಂತೋಷ’ಕೆ ‘ಮೇರೆ’ಗಳಿಲ್ಲದೆ ನೀವು ಬದುಕಿ , ನಾವು ನಿಮ್ಮ ಪಾದದ
ಧೂಳಾಗಿರಲೆಂದು ‘ಶ್ರೀದೇವಿಗೆ’
‘ಅಶೋಕ’ವನದಡಿಗಿರುವ ಇವರೆಲ್ಲರಿಗೂ ‘ಶಿಕ್ಷಕರ-ದಿನಾಚರಣೆ’ಯ ದಿನ ಆಶೀರ್ವಾದಗಳ ‘ಅಕ್ಷಯ-ಪ್ರಸಾದವನು’ ನೀಡೆನುತ ಕೇಳುತಲಿ…..

 

ರಕ್ಷಿತ್.  ಹೆಚ್. ಆರ್

ತೃತೀಯ ಬಿ ಎ ,  ವಿಧ್ಯಾರ್ಥಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜುಶಿವಮೊಗ್ಗ

 

ಶಿಕ್ಷಕರ ದಿನಾಚರಣೆ ಪ್ರಯುಕ್ತ, ಕಾಲೇಜಿನ ಎಲ್ಲ ಅಧ್ಯಾಪಕರುಗಳ ಹೆಸರಿನಲ್ಲಿ ರಚಿಸಿರುವ ಕವನ,

ಸದ್ಯವಾದರೆ ! ಅವುಗಳನ್ನು ಗುರುತಿಸಿ ಕಮೆಂಟ್‌ ಮಾಡಿ. 

 

 

ಬದುಕು

ಬದುಕು,
ಬದುಕೊಂದು ಮರ,
ಹುಟ್ಟಿನಿಂದ ಸಾಯುವವರೆಗೂ,
ಸತತವಾಗಿ ಬೆಳೆಯುವ ಹೆಮ್ಮರ.

ಬೆಳೆಸಬೇಕಾಗಿದೆ ಈ ಮರವನ್ನು ಜಾಗ್ರತೆಯಿಂದ,
ಎರೆಯಬೇಕಾಗಿದೆ ಪ್ರೀತಿ, ಮಮತೆ ತುಂಬಿದ ನೀರನ್ನು,
ಹಾಕಬೇಕಾಗಿದೆ ಕರುಣೆ, ವಾತ್ಸಲ್ಯವೆಂಬ ಗೊಬ್ಬರವನ್ನು,
ಸೇರಿಸಬೇಕಾಗಿದೆ ಭಾಂದವ್ಯ, ಭ್ರಾತೃತ್ವವೆಂಬ ಎರೆಹುಳುವನ್ನು,
ಆಗಲೇ ಮರ ಬಿಡುವುದು ಇದೆಲ್ಲದರ ಮಿಶ್ರಿತ ಫಲ-ಪುಷ್ಪಗಳನ್ನು,

ಬದುಕು, ಬದುಕೊಂದು ಮರ.

ಬದುಕಬೇಕು ಹೆಮ್ಮರವಾಗುವ ತನಕ,
ಹೆಮ್ಮರವಾಗಬೇಕು ನೆರಳು ನೀಡುವ ತನಕ,
ನೆರಳು ನೀಡುತಿರಬೇಕು ಸಾಧ್ಯವಾಗುವ ತನಕ,
ಕೊನೆಯ ತನಕ, ಸಾಯುವ ತನಕ………………

ಸಾಗಿಸಲೇ ಬೇಕು, ತೂಗಿಸಲೇ ಬೇಕು,
ಎಷ್ಟಾದರೂ ಖರ್ಚಿರಲಿ ನಡೆಸಲೇಬೇಕು,
ಭಾಗಬೇಕು, ಬೀಗಬೇಕು,
ಏಳಬೇಕು, ಬೀಳಬೇಕು,
ನಗಬೇಕು, ಅಳಬೇಕು,
ಬಂದವರಿಗೆ “ಬಾ” ಎನ್ನಬೇಕು,
ಹೋಗುವವರಿಗೆ “ದಾರಿ” ಬಿಡಬೇಕು,

ಬದುಕು,ಬದುಕೊಂದು ಮರ.

ಮಳೆಯಿರಲಿ-ಬಿಸಿಲಿರಲಿ ಧೃಢವಾಗಿ ನಿಲ್ಲಬೇಕು,
ಕಷ್ಟವಿರಲಿ-ಇಷ್ಟವಿರಲಿ ನಿರಂತರವಾಗಿ ಸಲುಹಬೇಕು,
ಏನಾದರೂ ಸರಿ, ಮುಂದೆಸಾಗುವೇ ಎಂಬ ಛಲವಿರಬೇಕು,
ಸಾಗಬೇಕು, ಸಾಗುತಲಿರಬೇಕು, ಸಾಗಿಸುತಲಿರಬೇಕು,
ನಿನ್ನದೇ ಈ ಬದುಕು, ನೀ ಬದುಕಲೇಬೇಕು,
ಬದುಕು,ಬದುಕೊಂದು ಮರ,

ಬದುಕೊಂದು ಅವಕಾಶ ದೇವರು ಕೊಡುವ ತನಕ,
ಬಳಸಿಕೋ ಮನುಷ್ಯ ನೀ ಇರುವ ತನಕ,
ಬೆಳೆಸಿಕೊ ನಿನ್ನ ತನುವನ್ನು ಎಲ್ಲರೂ ನೆನೆಸುವ ತನಕ,
ಬದುಕು ಮತ್ತೆ ಆ ದೇವರು ಕರೆಯುವ ತನಕ…………

ಬದುಕು,ಬದುಕೊಂದು ಮರ,ಬದುಕೊಂದು ಹೆಮ್ಮರ,
ಬದುಕೊಂದು ವೃಕ್ಷ, ಬದುಕೊಂದು ಕಲ್ಪವೃಕ್ಷ..!!

ಖುಷಿ. ವಿ. ಹಿರೇಮಠ.
ದ್ವಿತೀಯ ಬಿ. ಎ. ವಿದ್ಯಾರ್ಥಿನಿ
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ.

ಕವಿವಾಣಿಯಂತೆ ‘ಸ್ತ್ರೀ’ ಅಂದರೆ ಅಷ್ಟೇ ಸಾಕೇ..?

ಏನೆಂದು ಹೇಳುವುದು, ಹೇಗೆ ವರ್ಣಿಸುವುದು, ಯಾವ ರೀತಿಯಲ್ಲಿ ಚಿತ್ರಿಸುವುದು? ಪ್ರತಿಯೊಬ್ಬರ ಬದುಕಿನಲ್ಲೂ ‘ಅವಳು’ ಇಲ್ಲದೆ ಪರಿಪೂರ್ಣವೇ ಅಲ್ಲ.

ನವಮಾಸ ಹೊತ್ತು ಜಗಕ್ಕೆ ಪರಿಚಯಿಸಿದ ತಾಯಿ. ಮೊದಲ ಬಾರಿಗೆ ಮಗುವ ಮುಖವ ಕಂಡು ಆರೈಕೆ ಮಾಡಿ, ತಾಯಿಯ ಮಡಿಲಲ್ಲಿ ಮಲಗಿಸಿದ ದಾದಿ. ಅಕ್ಕರೆಯಿಂದ ನೋಡಿಕೊಂಡ ವೈದ್ಯಕೀಯ ಸಿಬ್ಬಂದಿಗಳು. ನೀರುನಿಡಿ ಹೊಯ್ದು, ಚೆಂದದಿ ದೃಷ್ಟಿಬೊಟ್ಟು ಇಟ್ಟು, ಸಾಮ್ರಾಣಿಯ ಹೊಗೆಹಾಕಿ, ಜೋಲಿಯಲ್ಲಿಟ್ಟು ಜೋಗುಳವ ಹಾಡಿ ಮಲಗಿಸಿದ ಅಜ್ಜಿ. ಎತ್ತಿಕೊಳ್ಳಲು ಹಾತೊರೆಯುತ್ತಿದ್ದ ಅಕ್ಕಂದಿರು. ಹಗಲು-ಇರುಳು ನಿದ್ದೆ-ಎಚ್ಚರಗಳಲ್ಲಿ ಪಕ್ಕದಲ್ಲಿದ್ದು ಜೋಪಾನವಾಗಿ ಕಾಪಾಡಿದ, ಹೊತ್ತುಹೊತ್ತಿಗೂ ಅಮೃತ ಉಣಬಡಿಸಿದ ತಾಯಿಯ ಪ್ರೀತಿ. ಬೆಳೆಯುವಾಗ ಲಾಲನೆ-ಪಾಲನೆ ಮಾಡಿದ ಹಿರಿಯರು. ಕೈಯಬೆರಳು ಹಿಡಿದು ಅಕ್ಷರ ತಿದ್ದಿಸಿದ ಶಿಕ್ಷಕಿಯರು. ಮೊದಲ ಶಾಲಾದಿನಗಳಲ್ಲಿ ಸಿಕ್ಕ ಮುಗ್ದಮನಸ್ಸಿನ ಗೆಳತಿ, ಜೋಡಿಯಾಗಿ ನಿಂತು ಕುಣಿದು ಕುಪ್ಪಳಿಸಿದ ಬಾಲ್ಯದ ದಿನಗಳು, ‘ರಾಖಿ ಹಬ್ಬ’ಕ್ಕೆ ತಪ್ಪದೇ ಕಾದು ರಾಖಿಕಟ್ಟಿ, ಸಿಹಿ ತಿನ್ನಿಸಿ, ಒಂದಿಷ್ಟು ಹಣ ಬಿಡದೇ ಇಸ್ಕೊಂಡ ಸಹೋದರಿಯರು.

ಪರೀಕ್ಷೆಯ ಸಮಯದಲ್ಲಿ ಅಲ್ಪ-ಸ್ವಲ್ಪ ಉತ್ತರ ಹೇಳಿಕೊಟ್ಟ ಗೆಳತಿಯರು, ಕೇಳಿದರೂ ಹೇಳಿಕೊಡದ, ತಿರುಗಿಯೂ ನೋಡದ ಹುಡುಗಿಯರು. ಆಪ್ತವಾಗಿ ಹರಟಿದ ದಿನಗಳು, ಗೆಳೆಯ-ಗೆಳತಿಯರು ಸೇರಿ ಹೋದ ಕಿರುಪ್ರವಾಸಗಳು. ಮನಸ್ಸ ಕದ್ದ ಮನದನ್ನೆಯು, ಹೇಳಲಾಗದ ಭಾವನೆಗಳು, ಕೈಕೊಟ್ಟ ಪ್ರೇಯಸಿಯು, ಕಛೇರಿಯ ಕೆಲಸದಲ್ಲಿ ಜೊತೆಯಾದ ಸಹೋದ್ಯೋಗಿ, ಕೈಹಿಡಿದ ಸಹಧರ್ಮಿಣಿಯು, ಎಲ್ಲಾ ಕ್ಷಣಗಳಲ್ಲೂ ಜೊತೆಯಾಗುವ, ಸದಾ ಬೆನ್ನೆಲುಬಾಗಿ ಒಳಿತು-ಕೆಡಕಿನಲೂ ಕೈಬಿಡದೆ ಕೈಹಿಡಿದ ಹೆಂಡತಿಯು, ‘ಕೇಳಿದ್ದನ್ನೆಲ್ಲ ಮಾಡಿಕೊಡಲು ಸಮಯವಿಲ್ಲ’ವೆಂದು ಪ್ರೀತಿಯ ಬೆರೆಸಿ ಆಡುಗೆ ಮಾಡಿ ಉಣಬಡಿಸಿದ ಮಡದಿಯು, ಅಪ್ಪನೆಂಬ ಹೆಸರ ತಂದುಕೊಟ್ಟ ಮಗಳು. ಅಮ್ಮನ ಪ್ರತಿರೂಪದಂತೆ ಆಕೆ ನಗುವಳು, ನಮ್ಮೆಲ್ಲ ಕಷ್ಟಗಳ ಇಲ್ಲವಾಗಿಸುವಳು. ಕಠೋರತೆಯ ಮನಸ್ಸನ್ನು ಕ್ಷಣಮಾತ್ರದಲ್ಲೇ ನಗಿಸಿ ಎಲ್ಲ ನೋವುಗಳ ಮರೆಸುವವಳು. ಜವಾಬ್ದಾರಿಯನ್ನು ಕಲಿಸಿದವಳು, ಏನನ್ನೂ ಹೇಳದೇ ಎಲ್ಲವ ಕಲಿಸುವವಳು.

ಬೆಳೆದ ಮಗಳು ಉನ್ನತ ಶಿಕ್ಷಣಕ್ಕೆಂದು ಬೇರೆ ಊರಿಗೆ ತೆರಳುವಾಗ ಯಾರಿಗೂ ತಿಳಿಯದಂತೆ ಮಗುವಿನಂತೆ ಅತ್ತದ್ದು. ಅವಳಿಗೆ ಸನ್ಮಾನ ನಡೆದಾಗ ಖುಷಿಯಿಂದ ಚಪ್ಪಾಳೆ ತಟ್ಟಿದ್ದು, ಮದುವೆ ಮಾಡಿಕೊಡುವಾಗ ಏನೋ ಕಳೆದುಕೊಂಡಂತೆ ಅನಿಸಿದರೂ ಒಳ್ಳೆಯ ಮನೆಗೆ ಸೇರಿಸಿದೆವು ಎನ್ನುವ ಸಮಾಧಾನ. ಅವಳನ್ನು ಕಳಿಸಿಕೊಡುವಾಗ ಕಣ್ಣಂಚಲ್ಲಿ ತಿಳಿಯದೇ ಹನಿಗಳು ಮೂಡಿದ್ದು, ವಯಸ್ಸಾಗುತ್ತಾ ಹೋದಂತೆ ಅನಾರೋಗ್ಯಕ್ಕೆ ಸರಿಯಾದ ಸಮಯಕ್ಕೆ ಔಷಧಗಳನ್ನು ನೀಡಿ, ಪಥ್ಯವನ್ನು ತಾನೂ ಮಾಡಿ, ನನಗೂ ಮಾಡಿಸಲು ಹುರಿದುಂಬಿಸಿದ ಮಡದಿಯೇ ಮಮತೆ ತುಂಬಿದ ತಾಯಿಯಾಗಿದ್ದು. ಇಬ್ಬರೇ ಇದ್ದಾಗ ಕಿಚಾಯಿಸಿಕೊಂಡದ್ದು, ಹಾಸ್ಯಮಾಡಿದ್ದು, ಮಾತಿನ ಮೂಲಕ ಕಾಲು ಎಳೆದು ಮನಸಾರೆ ನಕ್ಕಿದ್ದು, ಏನೋ ನೆನಪಾಗಿ ಬಿಕ್ಕಿದ್ದು, ಒಲುವೆಯ ಕೈಗಳು ಕಣ್ಣೀರ ಒರೆಸಿ ಸಂತೈಸಿದ್ದು. ಕಣ್ಣಮುಂದೆ ಬೆಳೆದು ಮದುವೆಯಾಗಿ ಹೋದ ಮಗಳಿಗೆ ಪುಟ್ಟಮಗಳೊಬ್ಬಳು ಜನಿಸಿದ್ದು, ಅದರ ಲಾಲನೆ-ಪಾಲನೆಯಲ್ಲಿ ತೊಡಗಿಸಿಕೊಂಡದ್ದು, ಎತ್ತಿ ಆಡಿಸಿ ಬೆಳೆಸಿದ್ದು, ಬೆನ್ನಮೇಲೆ ಹೊತ್ತು ಆಟವಾಡಿಸಿ, ತಿರುಗಿಸಿ, ತಿನಿಸಿದ್ದು, ವಯಸ್ಸಾದವನು ಎಂಬುದನ್ನೇ ಮರೆಸಿದ್ದು. ಆಸ್ಪತ್ರೆಯಲ್ಲಿ ಮಲಗಿದಾಗ ‘ಎನೂ ಆಗಲ್ಲ ಭಯಪಡಬೇಡಿ ಸರ್’ ಎಂದ ಆ ಶುಶ್ರೂಷಕಿಯ ಭರವಸೆ ನೀಡುವ ಮಾತುಗಳು…

ಹೀಗೆ ಅದೆಷ್ಟು ನೆನಪಿನ ಬುತ್ತಿಗಳಲ್ಲಿ ವಿವಿಧ ರೂಪಗಳಲ್ಲಿ ‘ಅವಳು’ ತುಂಬಿರುವಳು. ಅವಳು ಪುರುಷನಿಗೆ ಸರಿಸಮಾನಳಲ್ಲ, ಅವನಿಗಿಂತಲೂ ಮಿಗಿಲಾದವಳು. ಆದರೆ ಆ ರೀತಿಯಲ್ಲಿ ಗೌರವ ಕೊಡುವ ನಮ್ಮ ಕರ್ತವ್ಯವನ್ನು ಮರೆತಿದ್ದೇವೆ. ಆಕೆಯೇ ಪ್ರಕೃತಿ, ಆಕೆಯೇ ಸೃಷ್ಠಿ, ಸಮಷ್ಠಿ ಎಲ್ಲವನ್ನೂ ಸರಿಯಾಗಿ ಅರಿತು ನಡೆದರೆ ಮಾತ್ರ ಬದುಕು ಸುಂದರ ನಮ್ಮಿಬ್ಬರಲ್ಲಿ ಯಾರು ಮೇಲು? ಎಂದು ತಿಳಿಯಹೊರಟರೆ ಯಾರಾದರೂ ಗೆಲ್ಲಬಹುದು, ಗೆಲುವಿನ ಭರದಲ್ಲಿ ಮೌಲ್ಯಗಳನ್ನೇ ಮರೆಯುತ್ತೇವೆ. ಗೆದ್ದರೂ ಸಂಭ್ರಮಿಸಲು ಜೊತೆಗಿರುವವರನ್ನೇ ಕಳೆದುಕೊಳ್ಳುತ್ತೇವೆ.

ಪ್ರತಿಯೊಬ್ಬರ  ಕೆಲಸ, ಸಾಧನೆ, ಸಂಶೋಧನೆ ಎಲ್ಲದರಲ್ಲೂ ಅವಳ ಪ್ರಭಾವವೋ, ಬೆಂಬಲವೋ ಇದ್ದೇ ಇರುತ್ತದೆ. ಮಹಿಳಾ ದಿನಾಚರಣೆ ಒಂದು ದಿನಕ್ಕೆ ಸೀಮಿತವಲ್ಲ, ದಿನನಿತ್ಯದಲ್ಲೂ ಅವರ ಮೇಲಿರುವ ಗೌರವ ಇಮ್ಮಡಿಯಾಗಲಿ, ಸದಾ ಕಾಲವೂ ಅದು ಹಾಗೆಯೇ ಇರಲಿ. ಎಲ್ಲಾ ರೀತಿಯ ಪಾತ್ರಗಳ ಮೂಲಕ ಎಲ್ಲಾ ರೀತಿಯ ಪ್ರೀತಿಯ ನೀಡಿದ ಅವಳಿಗೆ ಏನೆಂದು ಕರೆಯೋಣ? ಕವಿವಾಣಿಯಂತೆ ‘ಸ್ತ್ರೀ’ ಅಂದರೆ ಅಷ್ಟೇ ಸಾಕೇ..? ಬೇರೇನಾದರೂ ಹೇಳಬೇಕೆ..? ಹೇಳಿದರೂ ಆ ಪದಗಳು ಅವಳ ಮುಂದೆ ಗೌಣವೇ ಅಲ್ಲವೇ..?

ಮಹಿಳಾ ದಿನಾಚರಣೆಯ ಶುಭಾಶಯಗಳು🌱💐

 

ಚೇತನ್  ಸಿ ರಾಯನಹಳ್ಳಿ.

ಕನ್ನಡ ಶಿಕ್ಷಕರು ಮತ್ತು ರಂಗಕರ್ಮಿ. ಶಿವಮೊಗ್ಗ

 

ಭೂತಾಯಿಯ ಅಳಲು

Image Credit : Google / Share Chat

ಉಳಿಸಿರೋ ನನ್ನನ್ನು ನನಗಾಗಿ ಅಲ್ಲ ನಿಮಗಾಗಿ.
ಜೀವ ಸಂಕುಲದ ಒಳಿತಿಗಾಗಿ…

ಇಲ್ಲಿ ಹಾಳು ಮಾಡಿ ಭೂಮಿಯನ್ನು !
ಅನ್ಯ ಗ್ರಹ (ಮಂಗಳ ಮತ್ತು ಚಂದ್ರ)  ನೋಡುವಿರೇಕೊ??
ಇಲ್ಲಿ ಸಲ್ಲದ ನೀವು, ಅಲ್ಲಿ  ಸಲ್ಲುವೀರೇನೋ ಮೂರ್ಖರ?

ತಾಯಿಯನೆ  ಕೊಲ್ಲುತ ಹೊರಟ ನಿಮಗೆ ಬದುಕೆಲ್ಲಿ💔?
ಹಸಿರು ಕೊಂದ ಮೇಲೆ ಉಸಿರಾಡಲು ನಿಮಗೆ ಉಸಿರೆಲ್ಲಿ?!

ನನ್ನೊಡಲ ಬಗೆದರು  ನಾ ನಗುತ  ಸ್ವಾಗತಿಸುತಿದ್ದೆ.😊
ನನ್ನ ಮಾರಿದರು ಕೊಂಡವರ ಬಳಿ ನಗುತಲಿದ್ದೆ..🥺😁

ಹೆತ್ತ ತಾಯಿ ನಿಮ್ಮನ್ನು ಹಡೆದವಳು ನಿಜ  💯…
ಸತ್ತಾಗ ಹೆಣದ ವಾಸನೆ ಅವಳು ಸಹಿಸಿಕೊಳ್ಳದೆ ಮೂಗು ಮುಚ್ಚಿಕೊಳ್ಳುವ ಸಮಯದಲ್ಲಿ!
ನಿಮ್ಮ ಹೆಣವನ್ನು ಒಡಲಲ್ಲಿ ಬಚ್ಚಿಟ್ಟುಕೊಳ್ಳುವ
ಭೂತಾಯಿ ನಾ ಮನುಜ..

ಉಳಿಸಿರೋ ನನ್ನ ನನಗಾಗಿ ಅಲ್ಲ..
ನಿಮ್ಮ ಉಳಿವಿಗಾಗಿ 🥺💔
ನಾಳಿನ ಒಳಿತಿಗಾಗಿ…!!!!

ಮಧುಶ್ರೀ,

ತೃತೀಯ  ಬಿ. ಎ, ವಿದ್ಯಾರ್ಥಿನಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜುಶಿವಮೊಗ್ಗ

 

“ಕುವೆಂಪು” ಸಾಹಿತ್ಯ ನಮನ

Image Credit: Google-Star of Mysore

‘ಕಾನೂರು’ ಕಥೆಗೊಬ್ಬ ಹೂವಯ್ಯನ ಹುಟ್ಟು ಹಾಕಿ,

‘ಮದುಮಗಳು’ ಚಿನ್ನಮ್ಮನ

‘ಮಲೆಗಳಲ್ಲಿ’ ಕಟ್ಟಿಹಾಕಿ,

‘ಕಲಾ ಸುಂದರಿ’ ‘ದ್ರೌಪದಿ’ಯರ

‘ಶ್ರೀ ಮುಡಿಯ’ ಸೋಕಿ,

ಕುಪ್ಪಳ್ಳಿಯ ಕಂದ ನೀ

ರಸಿಕರೆಲ್ಲರೆದಯ ತಾಕಿ,

ಕಳೆದವಲ್ಲ ನೂರು ವಸಂತ

ಮತ್ತೆ ಹುಟ್ಟಿ ಬಾರೋ ಸಂತ….

 

ಪ್ರಕೃತಿ ಹೆಣ್ಣ ಬೆರಳುಗಳಿಂದ ಭಾವಗೀತೆಗಳ ಮಿಡಿಸಿ

ಮಲೆನಾಡ ಮಣ್ಣ ಗಂಧ ಸಾಲು ಸಾಲಿನಲ್ಲೂ ಸ್ಪರ್ಶಿಸಿ

ಮಾಧ್ಯಮ ಕನ್ನಡ ‘ಪಾಂಚಜನ್ಯ’ ಮೊಳಗಿಸಿ

‘ರಾಮಾಯಣದಿ’ ಕೈಕೆ, ಮಂಥರೆ, ಊರ್ಮಿಳೆಯಂ ಅಂತರಂಗ ‘ದರ್ಶಿಸಿ’

ನೀನಾದೆ ವಿಶ್ವಮಾನ್ಯ

ಹೇ ರಸ ಋಷಿ ನಿನ್ನ ಪ್ರತಿಭೆ ಅನನ್ಯ….

 

ನವೋದಯದ ನವಧಿ ‘ಚಂದ್ರಹಾಸ’ ಬೀರಿ

ಬೆಳಗಿ ಬೆಳೆದ ಭರದಿ ಭಾಷೆ ಬದುಕಮೀರಿ

ರಾಷ್ಟ್ರಕವಿಯಾಗಿ, ಪಂಪ, ಪದ್ಮ, ಜ್ಞಾನಪೀಠಗಳೆಲ್ಲ ನಿನ್ನಡಿಗೆರಗಿ

ಸಾಗಿ ಹೋದವೆಲ್ಲ ಧನ್ಯವಾದೆವೆಂದು ಬೀಗಿ

‘ಕರ್ನಾಟಕ ರತ್ನ’ ನಿನಗೆನ್ನ ಮನ

ಸಲ್ಲಿಸುತ್ತಿದೆ ಕೋಟಿ ಕೋಟಿ ನಮನ…..

 

ಮಹಾ ಛಂದಸ್ಸಿನ ಚಂದದ ಹರಹನೆಲ್ಲ ಬಳಸಿ

‘ಮಹಾರಾತ್ರಿ’, ‘ಸ್ಮಶಾನ ಕುರುಕ್ಷೇತ್ರದಲ್ಲಿ’ ಯಮನ ಸೋಲಿಸಿ

‘ಕೊಳಲನೂದುತ’  ‘ಅಗ್ನಿ ಹಂಸವೇರಿ’ ‘ಕಾವ್ಯ ವಿಹಾರ’ ನೆಡೆಸಿ

‘’ಚಕೋರಿ’ ವಾಗ್ದೇವಿಯ ಹೃದಯ ‘ಚಂದ್ರ ಮಂಚಕಿಳಿಸಿ’

 

ಕಳೆದವಲ್ಲ ನೂರು ವಸಂತ

ಮತ್ತೆ ಹುಟ್ಟಿ ಬಾರೋ ಸಂತ………

ಮಧುಶ್ರಿ,

ತೃತೀಯ  ಬಿ. ಎ, ವಿದ್ಯಾರ್ಥಿನಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜುಶಿವಮೊಗ್ಗ

 

ಹುಡುಕಾಟದ ಕತ್ತಲು

Image Credit : benstevens

ಹುಡುಕಾಟದ ಕತ್ತಲು

ಕತ್ತಲೆಂಬ ಗರ್ಭಗೂಡು..
ಕಣ್ಣ ತೆರೆದೆ ನವಮಾಸದ ಕೊನೆಯಲಿ
ಬೆಚ್ಚಗೆ ನೇವರಿಕೆ ಇತ್ತು ಭೂಮಿ ತಾಯಿ ಮಡಿಲಿಲಿ
ಪ್ರಾಣಿ-ಪಕ್ಷಿ ಗಿಡಗಂಟಿ
ಸಖರಂತೆ ಕೋಟಿ ಕೋಟಿ
ನಡುವೆ ಬೆಳೆದೆ ಅವುಗಳಂತೆಯೇ

ಕಂಡೆ ಜ್ವಾಲೆ ಕಿಡಿಯನು
ಕಂಡೆ ಭೂಮಿ ಕೊಡುವ ರುಚಿಯನು
ಮರ್ಕಟದಾ ಮೆದುಳಿಗೆ
ತೊಡಿಸ ಹೊರಟೆ ಮನುಜನೆಂಬ ಮುಖವಾಡ
ಅದು ಸ್ವಂತ ಸಮಾಧಿಗೆ ಮೊದಲ ಕುರುಹು ಗಾಢ
ಇನ್ನೂ ಬೆಳೆದೆ ಮಗುವಿನಂತೆ

ಹುಟ್ಟಿ ರಾಜ್ಯ ಸಾಮ್ರಾಜ್ಯದ ಕಲ್ಪನೆ
ಕ್ಷಣಕೆ ಸತ್ಯ..ಕ್ಷಣಕೆ ನಿತ್ಯ.. ಸಂಸ್ಕೃತಿಗಳ ಚಿಂತನೆ
ಸ್ವಾರ್ಥಪರತೆ ನಡೆಸೆ ಸಮರ ವಂಚನೆ
ಕುರುಡು ಮನಕೆ ಸಿಕ್ಕಿತು ಸ್ವಾತಂತ್ರದ ಘೋಷಣೆ
ಕತ್ತಲ ದಾರಿಯಲ್ಲೇ ಮೂಡಿತು ಹೊಸ ಕತ್ತಲ ಯೋಚನೆ..
ಇನ್ನೂ ಬೆಳೆದೆ ಕೊಬ್ಬಿನಿಂತೇ…

ತೃಪ್ತಿ ಇರದ ಮನದೊಳಗೆ ….
ಹೊಕ್ಕಿಬಂತು ಅಧಿಕಾರದ ಕರಿನೆರಳು
ಆ ನೆರಳು ತಾಕದಾಯಿತು ಅಹಂಕಾರದ ಮುಗಿಲು
ಪಾಪ-ಪುಣ್ಯ ಎಲ್ಲ ಮರೆಸಿ ಕುಣಿಸುತಿಹುದು  ಕಾಂಚಾಣ…
ಕುಣಿತ ಕುಣಿತ ಮರೆತೆನೀಗ ನನ್ನತನವ ನಾನೆನಾ?…
ಬೆಳೆದೆ ಹಮ್ಮ ಕೊಳೆಯಲಿ…

ಕಗ್ಗತ್ತಲ ಕತ್ತಲಲ್ಲಿ ಬೆಳಕ ಕಿಡಿಯ ಸಿಂಚನ
ನಮ್ಮ ನೆರಳು ಕತ್ತಲು, ನಮ್ಮತನವು ಕತ್ತಲು….
ಕತ್ತಲೆಯೆ ಹೇಳಿತು “ಬೆಳಕು ಬರಿಯ ಬೆತ್ತಲು”
ಕತ್ತಲಲಿ ಕಾಣದೇನೂ… ಬೆಳಕು ಬರಿಯ ಬೆತ್ತಲು..!
ಬೆಳೆದೆ ತಲ್ಲಣದ ಸುಳಿಯಲಿ…

ಕತ್ತಲ ಹುಚ್ಚು ನೆತ್ತಿಗ್ಹತ್ತಿ
ಬೆಳಕ ಸತ್ಯ ಕಣ್ಣಿಗೊತ್ತಿ
ಮನದ ಗೂಡಲವಿತು ಕೂತು
ಯೋಚಿಸಿದೆ… ಯೋಚಿಸಿದೆ..
ಬೆಳೆದೆ ಯೋಚನೆಯ ಜೊತೆಯಲಿ

ಬೆಳಕು – ಕತ್ತಲು ಎರಡು ಬೇಕು
ಸಮವಾಗಿ…ದೃಡವಾಗಿ
ಭೂಮಿ ಕರುಳ ಬಸಿಯ ಹೊರಟ “ಕತ್ತಲೆ”
ಕರಿ ಇರುಳ ಕಸಿಯ ಹೊರಟ  “ಬೆಳಕ ಬೆತ್ತಲೆ”
ಒಂದೇ ಎನಿಸಿದರೂ… ವಿರುದ್ಧ

ಬಂದಾಗಿದೆ ಸೊಕ್ಕಿನಿಂದ
ಉಂಟೆ ಒಂದು ಅವಕಾಶ
ಅಮ್ಮಾ…
ಕ್ಷಮಿಸುವೆಯಾ ಈ ಎಲ್ಲ ತಪ್ಪಿಗೆ?
ಇಲ್ಲ…
ಮರಳಬೇಕೆ… ನಾನೀಗ ಸ್ವರಚಿತ ಸಮಾಧಿಗೆ?

 

ಪ್ರಣಮ್ಯ ಬಿ.  ತೃತೀಯ ಬಿ.ಎ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು- ಶಿವಮೊಗ್ಗ

ಕಗ್ಗತ್ತಲ ಸಮಯದಲ್ಲಿ

ಕಗ್ಗತ್ತಲ ಸಮಯದಲ್ಲಿ

 

ಸಂತಸದಿ ತುಂಬಿತ್ತು ಈ ಜಗ
ಸಾವುನೋವಿನಲಿ ಮರುಗಿದೆ ಈಗ.
ಜೀವಿಗಳಿಗದು ಕತ್ತಲ ಕೂಪ
ಏನಿದೇನು ??… ಕರಿನೆರಳ ಕೋಪ?

ಜಗತ್ತೇ ಕತ್ತಲಿಂದ ಬಳಲುತ್ತಿದೆ
ನೋವಿಗೆ ಮಿತಿಯೇ ಇಲ್ಲದೆ?
ನಿನ್ನೆ ನೋಡಿದವರಿಂದಿಲ್ಲ ,
ಆಗು ಹೋಗುಗಳ ಅರಿವೇ ಇಲ್ಲ!

ಅಂದು ಆ ಮಲೆನಾಡು
ಇಂದು ಬಯಲುಸೀಮೆಯ ಬೀಡು
ಮನಸ್ಸಿಗೆ ಮುದ ನೀಡಿದ್ದ ತಂಗಾಳಿ
ಇಂದು ಮನಸ ಘಾಸಿಗೊಳಿಸುವ ಬಿರುಗಾಳಿ
ಅಯ್ಯೋ ಏನಿದು ಕರಾಳ ರಾತ್ರಿಯ ರೌದ್ರಾವತಾರ?

ಕತ್ತಲಾವರಿಸಿದೆ ಮನದಲ್ಲಿ
ಕರೋನ ಎಂಬ ಭಯದಲ್ಲಿ
ಹೊರ ಜಗಕ್ಕೆ ಪ್ರವೇಶವಿಲ್ಲ
ಒಳ ಜಗದಲ್ಲಿ ಮನಃಶಾಂತಿಯೇ ಇಲ್ಲ 😞..

ದುಡಿಮೆ ಇಲ್ಲದೆ ಕಾಸಿಲ್ಲ
ಕಾಸಿಲ್ಲದೆ ಕೂಳಿಲ್ಲ
ಕೂಳಿಲ್ಲದೆ ಜೀವವೇ ಇಲ್ಲಾ…
ಇರುವುದೊಂದೇ ಕಗ್ಗತ್ತಲು…

ಬೃಹದಾಕಾರದ ಕಟ್ಟಡಗಳ ನಿರ್ಮಾಣ,
ಅದೇ ಇಂದು ನಮ್ಮೆಲ್ಲರ ನಿರ್ವಾಣ,
ಹಾಕಿದೆವು ಪಕ್ಷಿಗಳ ಪಂಜರದಲ್ಲಿ,
ನೂಕಿದೇವು ಪ್ರಾಣಿಗಳ ಸರ್ಕಸಿನಲ್ಲಿ,
ಫಲವಾಗಿ ನಾವಿಂದು ಮನೆಯೆಂಬ ಸೆರೆಮನೆಯಲ್ಲಿ.

ಸಾಗಬೇಕಿದೆ ಜೀವನ ಸುಗಮವಾಗಿ.
ಬದಲಾಗಬೇಕಿದೆ ಕಗ್ಗತ್ತಲು ಬೆಳಕಾಗಿ.
ಜೀವನವನ್ನು ಪ್ರೀತಿಸುತ್ತಾ, ಮಗುವಂತೆ ನಗುತ್ತಾ, ಎಲ್ಲರನ್ನು ಗೌರವಿಸುತ್ತಾ , ಮೆರೆಯಬೇಕಿದೆ ಮಾನವೀಯತೆ.

ಮಧುಶ್ರಿ,

ಪ್ರಥಮ ಬಿ ಎ

ಕಟೀಲ್ ಅಶೋಕ್ ಪೈ ಸ್ಮಾರಕ ಸಂಸ್ಥೆ