ನಮಗೆ ನಾವೇ ಕೇಳುವಂತ ಪ್ರಶ್ನೆ!

 

 

ನಮಗೆ ನಾವೇ ಕೇಳುವಂತ ಪ್ರಶ್ನೆ!

ಈ ಆತ್ಮವೆಂಬ ಬತ್ತಿ ಕತ್ತಲೆಯ ತೊರೆದು ಹೊತ್ತಿ ಉರಿಯಬೇಕಿದೆ!

ಭಯವೆಂಬ ಬಾನು ಕತ್ತಲೆಯ ತೊರೆದು ಸೂರ್ಯನನ್ನು ಅರಸಿ ಹೊರಡಬೇಕಿದೆ..

ಕಣ್ಣೆದುರಲ್ಲೇ ಎಲ್ಲ ಉತ್ತರಗಳೂ ಅಂಗೈನ ಬೆಣ್ಣೆಯಂತಿದೆ ಆದರೂ

ತುಪ್ಪಕ್ಕಾಗಿ ಅಲೆವ ಬೆಪ್ಪನಂತೆ “ಇಲ್ಲಗಳ” ವ್ಯೂಹದಲ್ಲಿ ಸಿಲುಕಿದೆ ಈ ಮನ!.

 

ಈ ಅಭಯ ಭಾವನೆ ನನ್ನೊಳಗರಳುವುದಾದರೂ ಯಾವಾಗ ?,

ನಾ ಭಯವೆಂಬ ಗರ್ಭದಿಂದಾಚೆ ಬರುವುದ್ಯಾವಾಗ ??…

ಈ ಹೆಸರಿಗೊಂದು ಉಸಿರು ಬರುವುದ್ಯಾವಾಗ?,

ಈ ಮನವು ತನ್ನ ತಾನೇ ಪ್ರೀತಿಸದೇ ಹೋದಾಗ ಇನ್ನೆಲ್ಲಿಯಾ ಭರವಸೆ!

 

ಆದರೂ ಸಾಧನೆ ಬಿಸಿಲುಗೋಲು ಮನವೆಂಬ ಮನೆಯ ಕಿಟಕಿಯ ನುಸುಳಿ

ತನ್ನ ಬೆಳಕೊಗೆಯ ಬೇಕಿದೆ, ಆ ಬೆಳಕು ಈ ತನುವರಳಿದ ಕಾರಣವ ತೋರ ಬೇಕಿದೆ.

ಅರಳಿದ ತನುವು ಬಾಡುವ ಮೊದಲೇ ಸುಗಂಧಿಸಿ ಅದರ ಗಮ ಎಲ್ಲರ ನಾಸಿಕದಲ್ಲೇ ಚಿರಂಜೀವಿಯಾಗಬೇಕಿದೆ!, ಅರಿಯಬೇಕಿದೆ ಅರಿವು ಅರಳಬೇಕಿದೆ..

 

ನಾನೂ ನನ್ನ ಪ್ರಾಚಾರ್ಯರೊಂದಿಗೆ ನಿಂತು ಭಾವಚಿತ್ರವ ಪಡೆಯ ಬೇಕಿದೆ

ಆದರಾ ಭಾವಚಿತ್ರದೊಳಗೆ ನಾ ಮಾಡಿದ ಸಾಧನೆಯ ಭಾವಬೆಳಕು

ನನ್ನ ಪ್ರಾಚಾರ್ಯರ ಮೊಗದಲ್ಲಿ ಪ್ರತಿಫಲಿಸಿ ಪ್ರಜ್ವಲಿಸುತ್ತಿರ ಬೇಕಿದೆ..

ಸಾಧನೆಯ ಬಟ್ಟೆಯ ತೊಡಬೇಕಿದೆ,

 

ಹೊರಟ ಬಟ್ಟೆಯಲ್ಲೇ ಲಕ್ಷ್ಯವ ಇಟ್ಟು ಗುರಿಯ ಗರಿಯ ಸ್ಪರ್ಶಿಸಬೇಕಿದೆ.

“ಇಲ್ಲಗಳ” ಸೊಲ್ಲ ಹೇಳದೆ ಆತ್ಮ ವಿಶ್ವಾಸದ ದೀಪವ ಹಚ್ಚಿಕೊಂಡು ನಾ ಹೊರಡಲೇ ಬೇಕಿದೆ,

ನಾನೂ ಇರುವೆನೆಂಬ ಇರುವಿಕೆಯ ಅರವಳಿಕೆಯ ಮೂಡಿಸಬೇಕಿದೆ.

 

ನನ್ನಿಂದ ಅ’ಸಾಧ್ಯ’ ಎನ್ನುವ ಕಪ್ಪು ಅಂಧಕಾರದ ಪಟ್ಟಿಯ ಕಟ್ಟಿಕೊಂಡು

ತಿರುಗುತ್ತಿರುವ ಮನಸು ಪಟ್ಟಿಯ ಕಿತ್ತೊಗೆದು ತೇಜವ ಕಾಣಬೇಕಿದೆ.

ಒಟ್ಟಾರೆಯಾಗಿ ನನಗೆ ನಾನೇ ಕೇಳಿಕೊಳ್ಳುವ ಪ್ರಶ್ನೆ ಏನೆಂದರೆ..

 

ತನುವೆ ನೀನೇಕೆ ಅರಳಿರುವೆ?….”

ಕವನ ಕೆ. ,

ಪ್ರಥಮ ಬಿಎ, ವಿದ್ಯಾರ್ಥಿನಿ

ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ