ನಮಗೆ ನಾವೇ ಕೇಳುವಂತ ಪ್ರಶ್ನೆ!

 

 

ನಮಗೆ ನಾವೇ ಕೇಳುವಂತ ಪ್ರಶ್ನೆ!

ಈ ಆತ್ಮವೆಂಬ ಬತ್ತಿ ಕತ್ತಲೆಯ ತೊರೆದು ಹೊತ್ತಿ ಉರಿಯಬೇಕಿದೆ!

ಭಯವೆಂಬ ಬಾನು ಕತ್ತಲೆಯ ತೊರೆದು ಸೂರ್ಯನನ್ನು ಅರಸಿ ಹೊರಡಬೇಕಿದೆ..

ಕಣ್ಣೆದುರಲ್ಲೇ ಎಲ್ಲ ಉತ್ತರಗಳೂ ಅಂಗೈನ ಬೆಣ್ಣೆಯಂತಿದೆ ಆದರೂ

ತುಪ್ಪಕ್ಕಾಗಿ ಅಲೆವ ಬೆಪ್ಪನಂತೆ “ಇಲ್ಲಗಳ” ವ್ಯೂಹದಲ್ಲಿ ಸಿಲುಕಿದೆ ಈ ಮನ!.

 

ಈ ಅಭಯ ಭಾವನೆ ನನ್ನೊಳಗರಳುವುದಾದರೂ ಯಾವಾಗ ?,

ನಾ ಭಯವೆಂಬ ಗರ್ಭದಿಂದಾಚೆ ಬರುವುದ್ಯಾವಾಗ ??…

ಈ ಹೆಸರಿಗೊಂದು ಉಸಿರು ಬರುವುದ್ಯಾವಾಗ?,

ಈ ಮನವು ತನ್ನ ತಾನೇ ಪ್ರೀತಿಸದೇ ಹೋದಾಗ ಇನ್ನೆಲ್ಲಿಯಾ ಭರವಸೆ!

 

ಆದರೂ ಸಾಧನೆ ಬಿಸಿಲುಗೋಲು ಮನವೆಂಬ ಮನೆಯ ಕಿಟಕಿಯ ನುಸುಳಿ

ತನ್ನ ಬೆಳಕೊಗೆಯ ಬೇಕಿದೆ, ಆ ಬೆಳಕು ಈ ತನುವರಳಿದ ಕಾರಣವ ತೋರ ಬೇಕಿದೆ.

ಅರಳಿದ ತನುವು ಬಾಡುವ ಮೊದಲೇ ಸುಗಂಧಿಸಿ ಅದರ ಗಮ ಎಲ್ಲರ ನಾಸಿಕದಲ್ಲೇ ಚಿರಂಜೀವಿಯಾಗಬೇಕಿದೆ!, ಅರಿಯಬೇಕಿದೆ ಅರಿವು ಅರಳಬೇಕಿದೆ..

 

ನಾನೂ ನನ್ನ ಪ್ರಾಚಾರ್ಯರೊಂದಿಗೆ ನಿಂತು ಭಾವಚಿತ್ರವ ಪಡೆಯ ಬೇಕಿದೆ

ಆದರಾ ಭಾವಚಿತ್ರದೊಳಗೆ ನಾ ಮಾಡಿದ ಸಾಧನೆಯ ಭಾವಬೆಳಕು

ನನ್ನ ಪ್ರಾಚಾರ್ಯರ ಮೊಗದಲ್ಲಿ ಪ್ರತಿಫಲಿಸಿ ಪ್ರಜ್ವಲಿಸುತ್ತಿರ ಬೇಕಿದೆ..

ಸಾಧನೆಯ ಬಟ್ಟೆಯ ತೊಡಬೇಕಿದೆ,

 

ಹೊರಟ ಬಟ್ಟೆಯಲ್ಲೇ ಲಕ್ಷ್ಯವ ಇಟ್ಟು ಗುರಿಯ ಗರಿಯ ಸ್ಪರ್ಶಿಸಬೇಕಿದೆ.

“ಇಲ್ಲಗಳ” ಸೊಲ್ಲ ಹೇಳದೆ ಆತ್ಮ ವಿಶ್ವಾಸದ ದೀಪವ ಹಚ್ಚಿಕೊಂಡು ನಾ ಹೊರಡಲೇ ಬೇಕಿದೆ,

ನಾನೂ ಇರುವೆನೆಂಬ ಇರುವಿಕೆಯ ಅರವಳಿಕೆಯ ಮೂಡಿಸಬೇಕಿದೆ.

 

ನನ್ನಿಂದ ಅ’ಸಾಧ್ಯ’ ಎನ್ನುವ ಕಪ್ಪು ಅಂಧಕಾರದ ಪಟ್ಟಿಯ ಕಟ್ಟಿಕೊಂಡು

ತಿರುಗುತ್ತಿರುವ ಮನಸು ಪಟ್ಟಿಯ ಕಿತ್ತೊಗೆದು ತೇಜವ ಕಾಣಬೇಕಿದೆ.

ಒಟ್ಟಾರೆಯಾಗಿ ನನಗೆ ನಾನೇ ಕೇಳಿಕೊಳ್ಳುವ ಪ್ರಶ್ನೆ ಏನೆಂದರೆ..

 

ತನುವೆ ನೀನೇಕೆ ಅರಳಿರುವೆ?….”

ಕವನ ಕೆ. ,

ಪ್ರಥಮ ಬಿಎ, ವಿದ್ಯಾರ್ಥಿನಿ

ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

ನಮ್ಮ ಹೆಮ್ಮೆಯ ಸಮಾಜಕಾರ್ಯ

ವಿಶ್ವ ಸಮಾಜಕಾರ್ಯ ದಿನವನ್ನು ಪ್ರತಿ ವರ್ಷ ಮಾರ್ಚ್ ತಿಂಗಳ ಮೂರನೇ ಮಂಗಳವಾರದಂದು ವಿಶ್ವದ್ಯಂತ ಆಚರಿಸಲಾಗುತ್ತದೆ. ಈ ದಿನದ ವಿಶೇಷತೆ ಏನೆಂದರೆ, ಸಮಾಜ ಸೇವಕರ ಸಾಧನೆಗಳನ್ನು ಸರ್ವರಿಗೂ ತಿಳಿಸಲು ಅವರ ಕಾರ್ಯಗಳನ್ನು ಹಾಗೂ ಅವರ ಕಾರ್ಯಗಳ ಉದ್ದೇಶ ವನ್ನು ಸಮಾಜಕ್ಕೆ ದರ್ಶಿಸಲು ಹಾಗೂ ನವ ಸಮಾಜ ನಿರ್ಮಾಣದಲ್ಲಿ ಸಮಾಜ ಕಾರ್ಯ ಸೇವೆಗಳ ಅರಿವನ್ನು ಸರ್ವರಿಗೂ ಮೂಡಿಸಲು ಮೀಸಲಾದ ದಿನವೆಂದು ಹೇಳಬಹುದು

ಸಮಾಜ ಕಾರ್ಯಕರ್ತರು ವ್ಯಕ್ತಿಗಳು, ಕುಟುಂಬ, ಸಮುದಾಯ ಮತ್ತು ವಿವಿಧ ಸಂಸ್ಥೆಗಳೊಂದಿಗೆ ಅವರ ಅಳಲನ್ನು ನಿವಾರಿಸಲು ಮತ್ತು ಸಾಮರ್ಥ್ಯವನ್ನು ವೃದ್ಧಿಸಲು ಕೆಲಸ ಮಾಡುತ್ತಾರೆ. ಅಷ್ಟೇ ಅಲ್ಲದೆ ಸಾಮಾಜಿಕ ಸೇರ್ಪಡೆ, ಸಮಾನತೆ, ಸುಸ್ಥಿರ ಅಭಿವೃದ್ಧಿ, ಮಾನವ ಹಕ್ಕುಗಳನ್ನು ಉತ್ತೇಜಿಸುವಲ್ಲಿ ಸಮಾಜ ಕಾರ್ಯಕರ್ತರು ಪ್ರಮುಖ ಪಾತ್ರ ವಹಿಸುತ್ತಾರೆ.

ವಿಶ್ವ ಸಮಾಜಕಾರ್ಯ ದಿನವೂ ಇನ್ನೊಬ್ಬರ ಬದುಕಿನಲ್ಲಿ ಬದಲಾವಣೆಯನ್ನು ಮಾಡುವ ಸಮಾಜ ಕಾರ್ಯಕರ್ತನನ್ನು ಸಮಾಜದಲ್ಲಿ ಗುರುತಿಸಿ ಅವರಿಗೆ ಉತ್ತೇಜನ ನೀಡುವ ದಿನವಾಗಿದೆ ಅಂತೆಯೇ ಸಮಾಜ ಸೇವೆಗಳ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ವ್ಯಕ್ತಿಗಳ ಕುಟುಂಬದ ಹಾಗೂ ಸಮುದಾಯಗಳ ಮೇಲೆ ಸಮಾಜ ಕಾರ್ಯದಿಂದ ಆಗುವ ಸಕಾರಾತ್ಮಕ ಪರಿಣಾಮವನ್ನು ಉತ್ತೇಜಿಸುವ ದಿನವಾಗಿದೆ.

ಇಂದಿನ ಯುವ ಸಮಾಜ ಕಾರ್ಯಕರ್ತರಿಗೆ ಪ್ರೇರಕರಾಗಿ ಇರುವಂತಹ ಪ್ರಮುಖ ಚಿಂತಕರನ್ನು ನೋಡೋಣ:

ಮೇಧಾ ಪಾಟ್ಕರ್ ಇವರು ಸಾಮಾಜಿಕ ಕಾರ್ಯಕರ್ತೆ ಹಾಗೂ ಪರಿಸರ ಹೋರಾಟಗಾರ್ತಿ ಎಂದೇ ಪ್ರಸಿದ್ದರು.

ಮದರ್ ತೆರೇಸಾ ಇವರು ಮಾನವೀಯತೆಗೆ ಸಹಾನುಭೂತಿ ಮತ್ತು ನಿಸ್ವಾರ್ಥ ಸೇವೆಗೆ ತಮ್ಮನ್ನು ಮುಡುಪಾಗಿಸಿದವರು.

 ರಾಜಾರಾಮ್ ಮೋಹನ್ ರಾಯ್ ಇವರು ಭಾರತದಲ್ಲಿ ಸಾಮಾಜಿಕ ಸುಧಾರಕರಾಗಿ ಸತಿ ಪದ್ಧತಿಯ ನಿರ್ಮೂಲನೆ ಹಾಗೂ ವಿಧವೆಯರ ಮರುವಿವಾಹಕ್ಕೆ ಉತ್ತೇಜನ ನೀಡಿದವರು.

ಮಹಾತ್ಮ ಗಾಂಧೀಜಿ ಇವರು ತಮ್ಮ ಜೀವನವನ್ನು ದೇಶ ಮತ್ತು ದೇಶದ ಜನರಿಗೆ ಸೇವೆ ಸಲ್ಲಿಸಲು ಮುಡಿಪಾಗಿಟ್ಟವರು ಇವರು ತಮ್ಮ ಮೌಲ್ಯಗಳೊಂದಿಗೆ ಮತ್ತು ತತ್ವಗಳೊಂದಿಗೆ ವಿಶ್ವಾದ್ಯಂತ ಯುವಜನರಿಗೆ ಸ್ಪೂರ್ತಿ ಮತ್ತು ಪ್ರೇರಣೆಯಾಗಿದ್ದಾರೆ.

ಅಣ್ಣ ಹಜಾರೆ ಇವರು ಭ್ರಷ್ಟಾಚಾರ ನಿರ್ಮೂಲನೆಗೆ ಶ್ರಮಿಸಿದವರು. ಸರಕಾರದ ಪಾರದರ್ಶಕತೆಯನ್ನು ಹೆಚ್ಚಿಸಲು  ಚಳುವಳಿಗಳನ್ನು ಮುನ್ನಡೆಸಿದವರು.

ಕೈಲಾಶ್ ಸತ್ಯರ್ತಿ ಇವರು ಭಾರತೀಯ ಸಮಾಜ ಸುಧಾರಕ, ಮಕ್ಕಳ ಹಕ್ಕುಗಳ ಕಾರ್ಯಕರ್ತರು ಎಂದು ಪ್ರಖ್ಯಾತರಾದವರು.

ಸುನೀತಾ ಕೃಷ್ಣನ್ ಇವರು ಮಾನವ ಹಕ್ಕುಗಳ ಕಾರ್ಯಕರ್ತೆ, ಪ್ರಜ್ವಲ ಸಂಸ್ಥೆಯನ್ನು ಹುಟ್ಟು ಹಾಕಿದವರು ಹಾಗೂ ಮಾನವ ಕಳ್ಳ ಸಾಗಾಣಿಕೆ ವಿರುದ್ಧ ಹೋರಾಡಿದವರು.

ಇವರೆಲ್ಲರನ್ನು ಮಾದರಿಯಾಗಿಟ್ಟುಕೊಂಡು ನವ ಸಮಾಜ ಕಾರ್ಯಕರ್ತರು ರೂಪುಗೊಳ್ಳಬೇಕಾಗಿದ್ದು ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿಗಳ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕಾಗಿದೆ, ಪ್ರಸ್ತುತ ಸಮಾಜದಲ್ಲಿ ಪರಿಸರವನ್ನು   ರಕ್ಷಣೆ ಮಾಡುವಲ್ಲಿ ನಾವು ಹೊಸ ಜವಾಬ್ದಾರಿಗಳನ್ನು ನಿರ್ವಹಿಸುತ್ತ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡೋಣ.

ಸಮಾಜ ಕಾರ್ಯವು ಒಂದು ವೃತ್ತಿಪರ ಶಿಕ್ಷಣವಾಗಿದ್ದು ನೀವು ಕೂಡ ಸಮಾಜದಲ್ಲಿ ಸಮಾಜ ಕಾರ್ಯಕರ್ತನೆಂದು ಗುರುತಿಸಿಕೊಳ್ಳಬೇಕಾದರೆ ಬಿ.ಎಸ್.ಡಬ್ಲ್ಯೂ, ಎಂ.ಎಸ್.ಡಬ್ಲ್ಯೂ ಕೋರ್ಸ್ಗೆ ಸೇರಲು ಪ್ರವೇಶಾತಿ ಪಡೆದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿ, ಉತ್ತಮ ಸಮಾಜ ರಚನೆಯಲ್ಲಿ  ನಮ್ಮ ಪಾಲು ನೀಡೋಣ.

 

ಬರಹ : ನ್ಯಾನ್ಸಿ ಲವಿನಾ ಪಿಂಟೊ,

ಸಹಾಯಕ ಪ್ರಾಧ್ಯಾಪಕರು,

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

ಅಪ್ಪ ಐ ಲವ್ ಯೂ

ನೋವ ನುಂಗಿ ಮಕ್ಕಳಿಗೆ ಪ್ರೀತಿ ಧಾರೆ ಎರೆಯುವ ತಂದೆಗೆ ಮಕ್ಕಳ ಭವಿಷ್ಯವೇ ಮುಖ್ಯವಾಗಿರುತ್ತದೆ

ಅಪ್ಪ ಅಂದರೆ ಅದ್ಭುತ, ಅಮರ ಪ್ರತಿಪಾದಕ, ಅಮೋಘ, ಆನಂದ, ಆದರ್ಶ, ಅನಂತ, ನನ್ನ ಜಗತ್ತು, ಮೊದಲ ಸ್ನೇಹಿತ ಅಪ್ಪಾ… ಅಕಾಶದಷ್ಟು ಎತ್ತರವಿರುವ ಗೋಪುರ ಕೇಳಿದರು ಕೊಡಿಸುವ ಶಕ್ತಿ ಹೊಂದಿದವರು, ಕಿರು ಬೆರಳು ಹಿಡಿದು ನಿನ್ನೊಂದಿಗೆ ನಾನಿರುವೆ ಎಂದು ನಡೆದ ಹೆಜ್ಜೆ ಗುರುತು ಅಪ್ಪನದು, ತಾನು ನೋಡದ ಪ್ರಪಂಚವನ್ನು ಹೆಗಲ ಮೇಲೆ ಕೂರಿಸಿ ತೋರಿಸಿದ ಹೃದಯವಂತ, ಕಲಿತ ಪಾಠ, ಕಂಡ ಕಷ್ಟಗಳು, ಸದಾ ಕಾಲ ನಗು ಮುಖವ ತೋರು ಎಂದು ತಿಳಿಸಿದವರು, ಬದುಕಿನ ಉದ್ದಕ್ಕೂ ಭರವಸೆಯ ಬೆಳಕಲ್ಲೇ ಸಾಗುತ್ತಿದ್ದ ನನಗೆ ಜೀವನದ ಅರ್ಥ ತಿಳಿಸಿ, ಛಲದಿಂದ ಸಾಧನೆಯನ್ನು ಹುಡುಕಿ ಸಾಗು ಎಂದು ಹೇಳಿ ಹಿಂಬಾಲಿಸಿದವರು ನನ್ನಪ್ಪ…. ಸಾವಿರ ಸಾವಿರ ಕಷ್ಟ ಬಂದರು ಛಲ ಬಿಡದೆ ಹೆಜ್ಜೆ ಮುಂದಿಟ್ಟ ಸಾಹುಕಾರ, ಅಪ್ಪ ಬರೀ ಅಪ್ಪನಾಗಿಯೇ ಉಳಿಯದೇ ಸ್ನೇಹಿತನಾಗಿ, ಹಿತೈಷಿಯಾಗಿದ್ದಾನೆ. ತಪ್ಪು ಹೆಜ್ಜೆ ಇಟ್ಟಾಗ ತಿದ್ದಿ ತಿಳಿ ಹೇಳಿ ಸರಿದಾರಿ ತೋರಿಸಿದವ, ತಾನು ಶಿಕ್ಷಣ ಪಡೆದಿಲ್ಲ ಆದರೂ ಮಕ್ಕಳು ಪಾಠದಿಂದ ವಂಚಿತರಾಗದಿರಲಿ ಎನ್ನುವ ಗುಣ ಅಪ್ಪನದು, ನಾ ಕಂಡ ಪಾಡು ನನ್ನ ಮಕ್ಕಳು ಕಾಣದಿರಲಿ ಎಂದು ಹಗಲಿರುಳ್ಳೆನ್ನದೇ ದುಡಿಯುತ್ತಿದ್ದಾರೆ….

ನಾನು ನೋಡಿದ ಮೊದಲ ವೀರ

ಬಾಳು ಕಲಿಸಿದ ಸಲಹೆಗಾರ

ಬೆರಗು ಮೂಡಿಸೋ ಜಾದೂಗಾರ ಅಪ್ಪ✨❤

ತಂದೆ ಮಗಳ ಸಂಬಂಧ ಅನ್ನೋದೇ ಒಂಥರಾ ಚಂದ ಕರಗದಷ್ಟು ಪ್ರೀತಿ ಅನ್ನೋ ಆಸ್ತಿ ಕೊಡುವ ತಂದೆ, ಮಗಳ ಮೊದಲ ಹೀರೋ… ಅಪ್ಪನೆಂದರೆ ಹಬ್ಬುವ ಬಳ್ಳಿಗೆ ಆಸರೆ, ಗುರಿ ಮುಟ್ಟಿಸುವ ಹೊಣೆ, ಸದಾ ಜೊತೆಯಾಗಿರುವ ಬೆರಳು, ಬದುಕಿನ ಎಲ್ಲವೂ ಅಪ್ಪ…ಹೆಣ್ಣು ಮಕ್ಕಳು ತಾಯಿಗಿಂತ, ತಂದೆಯನ್ನ ಹಚ್ಕೊಳ್ಳೋದೇ ಜಾಸ್ತಿ…

ನೆನಪಿರಲಿ ಮಗಳೇ… ಈಗಲೇ ಹೇಳಿಬಿಡುತ್ತೇನೆ ನನಗೇನೂ ಬೇಡ ನಿನ್ನಿಂದ ಆದರೆ ನೀ ರಾಣಿಯಾಗು ನನ್ನ ಖುಷಿಯ ನೂರ್ಪಾಲು ನಿನಗಿರಲಿ ನಿನ್ನ ಕಣ್ಣೀರು ಬರೀ ಕನಸಾಗಲಿ. ಸಾಧಿಸು…ಧೈರ್ಯಗೆಡಬೇಡ ಬಿದ್ದರೆ ತುಳಿಯುವವರೇ ಇಲ್ಲಿ ಎದ್ದು ಗೆದ್ದು ಬಾ ಹಕ್ಕಿಯಂತೆ ಹಾರಾಡು…ಆದರೆ, ಮರೆಯಬೇಡ ಮಗಳೇ ನನ್ನ- ನನ್ನಾಕೆಯ ಮರೆಯಬೇಡ…

ಜನ್ಮ  ಕೊಡೋದು ತಾಯಿ,
ಜೀವನ ಕಲಿಸಿಕೊಡೋದು ತ೦ದೆ,

ತುತ್ತು ಕೊಡೋದು ತಾಯಿ
ತುತ್ತು ತ೦ದಾಕೋದು ತ೦ದೆ,

ಅತ್ತಾಗ ಮಡಿಲು   ಕೊಟ್ಟು ಕ೦ಬನಿ ಒರೆಸೋದು  ತಾಯಿ
ದ್ರುತಿಗೆಟ್ಟು ಕೂತಾಗ  ಹೆಗಲ ಕೊಟ್ಟು ಧೈರ್ಯ ತು೦ಬೋನು ತ೦ದೆ,,

ಮಗಳ ಮದುವೆಯಲ್ಲಿ ತನ್ನ ಕ೦ದನ ಅಗಲುವಿಕೆ
ನೆನೆದು ನೆನೆದು   ಕಣ್ಣೀರಿಡುವಳು ತಾಯಿ
ಮರೆಯಲಿ ನಿ೦ತು ಮಗಳೆದುರು ಕಣ್ಣೀರಿಡಲು
ಆಗದೇ ತಾಯಿ ಸ್ವರೂಪಿಣಿಯ೦ತಿದ್ದ  ಮಗಳು

ಜೀವ ಕೊಟ್ಟದ್ದು  ತಾಯಿಯೇ
ಜೀವವಿರುವ ವರೆಗೂ  ಜೀವನದ ಬಗ್ಗೆ ಪಾಠ ಕಲಿಸೋದು ತ೦ದೆ.. ❤❤

ತಂದೆ ನೀನು ತಂದೆ ನನ್ನ ಬಾಳ ತುಂಬಾ ಹರುಷ,
ಮರೆಯಲಾರೆ ನಿನ್ನ ನಾನು ಸಾವಿರ ವರುಷ,
ನೊಂದ ಗುರುತು ಬಹಳ ಕಂಡದ್ದು ನಗುವ ಮುಖ,
ಎಲ್ಲ ನಮಗೆ ಕೊಟ್ಟು ನೀ ಬಯಸಲಿಲ್ಲ ಸುಖ…

ನಮಗೆ ಎಲ್ಲ ಕೊಟ್ಟೆ ನೀ ಹರಿದ ಬಟ್ಟೆ ತೊಟ್ಟೆ,
ಕಷ್ಟ ನೋರಿದ್ದರು ನಿನ್ನೊಳಗೆ ಹುಧುಗಿ ಇಟ್ಟೆ,
ಸಂಸಾರ ಸಾಗಿಸಲು ಬಹಳ ಕಷ್ಟ ಪಟ್ಟೆ,
ಆದರೂ ನಿನ್ನ ನಾನು ಇಷ್ಟ ಪಟ್ಟೆ….

ನನ್ನ ನೋವ ಕಂಡ ನಿನ್ನ ಎರಡೂ ಕಣ್ಣಲ್ಲಿ,
ನೋವು ನಿನಗೆ ಹೆಚ್ಚು ಬಿದ್ದಾಗ ನಾನು ಮಣ್ಣಲ್ಲಿ,
ಆಡ ಬಯಸುವೆ ಆಟ ಮಗುವಾಗಿ ನಿನ್ನೊಂದಿಗೆ,
ಮರೆಯಲಾರೆ ನಿನ್ನ, ನಿನ್ನ ನೆನಪೇ ನನ್ನೊಂದಿಗೆ….

ಬಯದಿ ಅವಿತು ನೆನಪು ನಿನ್ನ ಬೆನ್ನಲ್ಲಿ,
ಮಗುವಾಗಿ ಆಡುವಾಸೆ ನಿನ್ನ ಬಳಿಯಲ್ಲಿ,
ಮಗುವಾಗಿ ಮಲಗುವಾಸೆ ನಿನ್ನ ತೋಳಲ್ಲಿ,
ಮಗುವಾಗಿ ನಲಿವ ಆಸೆ ನಿನ್ನ ಜೊತೆಯಲ್ಲಿ!❣….

ಅಪ್ಪ  ಐ  ಲವ್ ಯೂ….❤❤❣

 

ಸುಶ್ಮಿತಾ.  ಆರ್

ಪ್ರಥಮ ವರ್ಷದ ಬಿಎಸ್ಸಿ ವಿದ್ಯಾರ್ಥಿನಿ,

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ