Manospandana : Autism

Dr. Shruthi,

Consultant Psychiatrist, Manasa Nursing Home, Shivamogga.

Explains about what is Autism.

Autism spectrum disorder (ASD) is a developmental disability caused by differences in the brain. ASD begins before the age of 3 years and can last throughout a person’s life, although symptoms may improve over time.
As children with ASD become adolescents and young adults, they may have difficulties developing and maintaining friendships, communicating with peers and adults, or understanding what behaviors are expected in school or on the job.
The abilities of people with ASD can vary significantly. For example, some people with ASD may have advanced conversation skills whereas others may be nonverbal.

ಆಟಿಸಂ ಸ್ಪೆಕ್ಟಮ್ ಡಿಸಾರ್ಡರ್ (ASD) ಮೆದುಳಿನಲ್ಲಿನ ವ್ಯತ್ಯಾಸಗಳಿಂದ ಉಂಟಾಗುವ ಬೆಳವಣಿಗೆಯ ಅಸಾಮರ್ಥ್ಯವಾಗಿದೆ.

ASD 3 ವರ್ಷ ವಯಸ್ಸಿನ ಮೊದಲು ಪ್ರಾರಂಭವಾಗುತ್ತದೆ ಮತ್ತು ವ್ಯಕ್ತಿಯ ಜೀವನದುದ್ದಕ್ಕೂ ಇರುತ್ತದೆ, ಆದಾಗ್ಯೂ ರೋಗಲಕ್ಷಣಗಳು ಕಾಲಾನಂತರದಲ್ಲಿ ಸುಧಾರಿಸಬಹುದು ASD ಯೊಂದಿಗಿನ ಮಕ್ಕಳು ಹದಿಹರೆಯದವರು ಮತ್ತು ಯುವ ವಯಸ್ಕರಾಗುತ್ತಾರೆ, ಅವರು ಸ್ನೇಹ ಬೆಳೆಸುವಲ್ಲಿ ಮತ್ತು ನಿರ್ವಹಿಸುವಲ್ಲಿ ತೊಂದರೆಗಳನ್ನು ಹೊಂದಿರಬಹುದು, ಗೆಳೆಯರು ಮತ್ತು ವಯಸ್ಕರೊಂದಿಗೆ ಸಂವಹನ ನಡೆಸುತ್ತಾರೆ ಅಥವಾ ಶಾಲೆಯಲ್ಲಿ ಅಥವಾ ಕೆಲಸದಲ್ಲಿ ಯಾವ ನಡವಳಿಕೆಗಳನ್ನು ನಿರೀಕ್ಷಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬಹುದು.

ASD ಯೊಂದಿಗಿನ ಜನರ ಸಾಮರ್ಥ್ಯಗಳು ಗಮನಾರ್ಹವಾಗಿ ಬದಲಾಗಬಹುದು. ಉದಾಹರಣೆಗೆ, ASD ಯೊಂದಿಗಿನ ಕೆಲವು ಜನರು ಸುಧಾರಿತ ಸಂಭಾಷಣೆ ಕೌಶಲ್ಯಗಳನ್ನು ಹೊಂದಿರಬಹುದು ಆದರೆ ಇತರರು ಅಮೌಖಿಕವಾಗಿರಬಹುದು.

ಬದುಕು

ಬದುಕು,
ಬದುಕೊಂದು ಮರ,
ಹುಟ್ಟಿನಿಂದ ಸಾಯುವವರೆಗೂ,
ಸತತವಾಗಿ ಬೆಳೆಯುವ ಹೆಮ್ಮರ.

ಬೆಳೆಸಬೇಕಾಗಿದೆ ಈ ಮರವನ್ನು ಜಾಗ್ರತೆಯಿಂದ,
ಎರೆಯಬೇಕಾಗಿದೆ ಪ್ರೀತಿ, ಮಮತೆ ತುಂಬಿದ ನೀರನ್ನು,
ಹಾಕಬೇಕಾಗಿದೆ ಕರುಣೆ, ವಾತ್ಸಲ್ಯವೆಂಬ ಗೊಬ್ಬರವನ್ನು,
ಸೇರಿಸಬೇಕಾಗಿದೆ ಭಾಂದವ್ಯ, ಭ್ರಾತೃತ್ವವೆಂಬ ಎರೆಹುಳುವನ್ನು,
ಆಗಲೇ ಮರ ಬಿಡುವುದು ಇದೆಲ್ಲದರ ಮಿಶ್ರಿತ ಫಲ-ಪುಷ್ಪಗಳನ್ನು,

ಬದುಕು, ಬದುಕೊಂದು ಮರ.

ಬದುಕಬೇಕು ಹೆಮ್ಮರವಾಗುವ ತನಕ,
ಹೆಮ್ಮರವಾಗಬೇಕು ನೆರಳು ನೀಡುವ ತನಕ,
ನೆರಳು ನೀಡುತಿರಬೇಕು ಸಾಧ್ಯವಾಗುವ ತನಕ,
ಕೊನೆಯ ತನಕ, ಸಾಯುವ ತನಕ………………

ಸಾಗಿಸಲೇ ಬೇಕು, ತೂಗಿಸಲೇ ಬೇಕು,
ಎಷ್ಟಾದರೂ ಖರ್ಚಿರಲಿ ನಡೆಸಲೇಬೇಕು,
ಭಾಗಬೇಕು, ಬೀಗಬೇಕು,
ಏಳಬೇಕು, ಬೀಳಬೇಕು,
ನಗಬೇಕು, ಅಳಬೇಕು,
ಬಂದವರಿಗೆ “ಬಾ” ಎನ್ನಬೇಕು,
ಹೋಗುವವರಿಗೆ “ದಾರಿ” ಬಿಡಬೇಕು,

ಬದುಕು,ಬದುಕೊಂದು ಮರ.

ಮಳೆಯಿರಲಿ-ಬಿಸಿಲಿರಲಿ ಧೃಢವಾಗಿ ನಿಲ್ಲಬೇಕು,
ಕಷ್ಟವಿರಲಿ-ಇಷ್ಟವಿರಲಿ ನಿರಂತರವಾಗಿ ಸಲುಹಬೇಕು,
ಏನಾದರೂ ಸರಿ, ಮುಂದೆಸಾಗುವೇ ಎಂಬ ಛಲವಿರಬೇಕು,
ಸಾಗಬೇಕು, ಸಾಗುತಲಿರಬೇಕು, ಸಾಗಿಸುತಲಿರಬೇಕು,
ನಿನ್ನದೇ ಈ ಬದುಕು, ನೀ ಬದುಕಲೇಬೇಕು,
ಬದುಕು,ಬದುಕೊಂದು ಮರ,

ಬದುಕೊಂದು ಅವಕಾಶ ದೇವರು ಕೊಡುವ ತನಕ,
ಬಳಸಿಕೋ ಮನುಷ್ಯ ನೀ ಇರುವ ತನಕ,
ಬೆಳೆಸಿಕೊ ನಿನ್ನ ತನುವನ್ನು ಎಲ್ಲರೂ ನೆನೆಸುವ ತನಕ,
ಬದುಕು ಮತ್ತೆ ಆ ದೇವರು ಕರೆಯುವ ತನಕ…………

ಬದುಕು,ಬದುಕೊಂದು ಮರ,ಬದುಕೊಂದು ಹೆಮ್ಮರ,
ಬದುಕೊಂದು ವೃಕ್ಷ, ಬದುಕೊಂದು ಕಲ್ಪವೃಕ್ಷ..!!

ಖುಷಿ. ವಿ. ಹಿರೇಮಠ.
ದ್ವಿತೀಯ ಬಿ. ಎ. ವಿದ್ಯಾರ್ಥಿನಿ
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ.

ಕವಿವಾಣಿಯಂತೆ ‘ಸ್ತ್ರೀ’ ಅಂದರೆ ಅಷ್ಟೇ ಸಾಕೇ..?

ಏನೆಂದು ಹೇಳುವುದು, ಹೇಗೆ ವರ್ಣಿಸುವುದು, ಯಾವ ರೀತಿಯಲ್ಲಿ ಚಿತ್ರಿಸುವುದು? ಪ್ರತಿಯೊಬ್ಬರ ಬದುಕಿನಲ್ಲೂ ‘ಅವಳು’ ಇಲ್ಲದೆ ಪರಿಪೂರ್ಣವೇ ಅಲ್ಲ.

ನವಮಾಸ ಹೊತ್ತು ಜಗಕ್ಕೆ ಪರಿಚಯಿಸಿದ ತಾಯಿ. ಮೊದಲ ಬಾರಿಗೆ ಮಗುವ ಮುಖವ ಕಂಡು ಆರೈಕೆ ಮಾಡಿ, ತಾಯಿಯ ಮಡಿಲಲ್ಲಿ ಮಲಗಿಸಿದ ದಾದಿ. ಅಕ್ಕರೆಯಿಂದ ನೋಡಿಕೊಂಡ ವೈದ್ಯಕೀಯ ಸಿಬ್ಬಂದಿಗಳು. ನೀರುನಿಡಿ ಹೊಯ್ದು, ಚೆಂದದಿ ದೃಷ್ಟಿಬೊಟ್ಟು ಇಟ್ಟು, ಸಾಮ್ರಾಣಿಯ ಹೊಗೆಹಾಕಿ, ಜೋಲಿಯಲ್ಲಿಟ್ಟು ಜೋಗುಳವ ಹಾಡಿ ಮಲಗಿಸಿದ ಅಜ್ಜಿ. ಎತ್ತಿಕೊಳ್ಳಲು ಹಾತೊರೆಯುತ್ತಿದ್ದ ಅಕ್ಕಂದಿರು. ಹಗಲು-ಇರುಳು ನಿದ್ದೆ-ಎಚ್ಚರಗಳಲ್ಲಿ ಪಕ್ಕದಲ್ಲಿದ್ದು ಜೋಪಾನವಾಗಿ ಕಾಪಾಡಿದ, ಹೊತ್ತುಹೊತ್ತಿಗೂ ಅಮೃತ ಉಣಬಡಿಸಿದ ತಾಯಿಯ ಪ್ರೀತಿ. ಬೆಳೆಯುವಾಗ ಲಾಲನೆ-ಪಾಲನೆ ಮಾಡಿದ ಹಿರಿಯರು. ಕೈಯಬೆರಳು ಹಿಡಿದು ಅಕ್ಷರ ತಿದ್ದಿಸಿದ ಶಿಕ್ಷಕಿಯರು. ಮೊದಲ ಶಾಲಾದಿನಗಳಲ್ಲಿ ಸಿಕ್ಕ ಮುಗ್ದಮನಸ್ಸಿನ ಗೆಳತಿ, ಜೋಡಿಯಾಗಿ ನಿಂತು ಕುಣಿದು ಕುಪ್ಪಳಿಸಿದ ಬಾಲ್ಯದ ದಿನಗಳು, ‘ರಾಖಿ ಹಬ್ಬ’ಕ್ಕೆ ತಪ್ಪದೇ ಕಾದು ರಾಖಿಕಟ್ಟಿ, ಸಿಹಿ ತಿನ್ನಿಸಿ, ಒಂದಿಷ್ಟು ಹಣ ಬಿಡದೇ ಇಸ್ಕೊಂಡ ಸಹೋದರಿಯರು.

ಪರೀಕ್ಷೆಯ ಸಮಯದಲ್ಲಿ ಅಲ್ಪ-ಸ್ವಲ್ಪ ಉತ್ತರ ಹೇಳಿಕೊಟ್ಟ ಗೆಳತಿಯರು, ಕೇಳಿದರೂ ಹೇಳಿಕೊಡದ, ತಿರುಗಿಯೂ ನೋಡದ ಹುಡುಗಿಯರು. ಆಪ್ತವಾಗಿ ಹರಟಿದ ದಿನಗಳು, ಗೆಳೆಯ-ಗೆಳತಿಯರು ಸೇರಿ ಹೋದ ಕಿರುಪ್ರವಾಸಗಳು. ಮನಸ್ಸ ಕದ್ದ ಮನದನ್ನೆಯು, ಹೇಳಲಾಗದ ಭಾವನೆಗಳು, ಕೈಕೊಟ್ಟ ಪ್ರೇಯಸಿಯು, ಕಛೇರಿಯ ಕೆಲಸದಲ್ಲಿ ಜೊತೆಯಾದ ಸಹೋದ್ಯೋಗಿ, ಕೈಹಿಡಿದ ಸಹಧರ್ಮಿಣಿಯು, ಎಲ್ಲಾ ಕ್ಷಣಗಳಲ್ಲೂ ಜೊತೆಯಾಗುವ, ಸದಾ ಬೆನ್ನೆಲುಬಾಗಿ ಒಳಿತು-ಕೆಡಕಿನಲೂ ಕೈಬಿಡದೆ ಕೈಹಿಡಿದ ಹೆಂಡತಿಯು, ‘ಕೇಳಿದ್ದನ್ನೆಲ್ಲ ಮಾಡಿಕೊಡಲು ಸಮಯವಿಲ್ಲ’ವೆಂದು ಪ್ರೀತಿಯ ಬೆರೆಸಿ ಆಡುಗೆ ಮಾಡಿ ಉಣಬಡಿಸಿದ ಮಡದಿಯು, ಅಪ್ಪನೆಂಬ ಹೆಸರ ತಂದುಕೊಟ್ಟ ಮಗಳು. ಅಮ್ಮನ ಪ್ರತಿರೂಪದಂತೆ ಆಕೆ ನಗುವಳು, ನಮ್ಮೆಲ್ಲ ಕಷ್ಟಗಳ ಇಲ್ಲವಾಗಿಸುವಳು. ಕಠೋರತೆಯ ಮನಸ್ಸನ್ನು ಕ್ಷಣಮಾತ್ರದಲ್ಲೇ ನಗಿಸಿ ಎಲ್ಲ ನೋವುಗಳ ಮರೆಸುವವಳು. ಜವಾಬ್ದಾರಿಯನ್ನು ಕಲಿಸಿದವಳು, ಏನನ್ನೂ ಹೇಳದೇ ಎಲ್ಲವ ಕಲಿಸುವವಳು.

ಬೆಳೆದ ಮಗಳು ಉನ್ನತ ಶಿಕ್ಷಣಕ್ಕೆಂದು ಬೇರೆ ಊರಿಗೆ ತೆರಳುವಾಗ ಯಾರಿಗೂ ತಿಳಿಯದಂತೆ ಮಗುವಿನಂತೆ ಅತ್ತದ್ದು. ಅವಳಿಗೆ ಸನ್ಮಾನ ನಡೆದಾಗ ಖುಷಿಯಿಂದ ಚಪ್ಪಾಳೆ ತಟ್ಟಿದ್ದು, ಮದುವೆ ಮಾಡಿಕೊಡುವಾಗ ಏನೋ ಕಳೆದುಕೊಂಡಂತೆ ಅನಿಸಿದರೂ ಒಳ್ಳೆಯ ಮನೆಗೆ ಸೇರಿಸಿದೆವು ಎನ್ನುವ ಸಮಾಧಾನ. ಅವಳನ್ನು ಕಳಿಸಿಕೊಡುವಾಗ ಕಣ್ಣಂಚಲ್ಲಿ ತಿಳಿಯದೇ ಹನಿಗಳು ಮೂಡಿದ್ದು, ವಯಸ್ಸಾಗುತ್ತಾ ಹೋದಂತೆ ಅನಾರೋಗ್ಯಕ್ಕೆ ಸರಿಯಾದ ಸಮಯಕ್ಕೆ ಔಷಧಗಳನ್ನು ನೀಡಿ, ಪಥ್ಯವನ್ನು ತಾನೂ ಮಾಡಿ, ನನಗೂ ಮಾಡಿಸಲು ಹುರಿದುಂಬಿಸಿದ ಮಡದಿಯೇ ಮಮತೆ ತುಂಬಿದ ತಾಯಿಯಾಗಿದ್ದು. ಇಬ್ಬರೇ ಇದ್ದಾಗ ಕಿಚಾಯಿಸಿಕೊಂಡದ್ದು, ಹಾಸ್ಯಮಾಡಿದ್ದು, ಮಾತಿನ ಮೂಲಕ ಕಾಲು ಎಳೆದು ಮನಸಾರೆ ನಕ್ಕಿದ್ದು, ಏನೋ ನೆನಪಾಗಿ ಬಿಕ್ಕಿದ್ದು, ಒಲುವೆಯ ಕೈಗಳು ಕಣ್ಣೀರ ಒರೆಸಿ ಸಂತೈಸಿದ್ದು. ಕಣ್ಣಮುಂದೆ ಬೆಳೆದು ಮದುವೆಯಾಗಿ ಹೋದ ಮಗಳಿಗೆ ಪುಟ್ಟಮಗಳೊಬ್ಬಳು ಜನಿಸಿದ್ದು, ಅದರ ಲಾಲನೆ-ಪಾಲನೆಯಲ್ಲಿ ತೊಡಗಿಸಿಕೊಂಡದ್ದು, ಎತ್ತಿ ಆಡಿಸಿ ಬೆಳೆಸಿದ್ದು, ಬೆನ್ನಮೇಲೆ ಹೊತ್ತು ಆಟವಾಡಿಸಿ, ತಿರುಗಿಸಿ, ತಿನಿಸಿದ್ದು, ವಯಸ್ಸಾದವನು ಎಂಬುದನ್ನೇ ಮರೆಸಿದ್ದು. ಆಸ್ಪತ್ರೆಯಲ್ಲಿ ಮಲಗಿದಾಗ ‘ಎನೂ ಆಗಲ್ಲ ಭಯಪಡಬೇಡಿ ಸರ್’ ಎಂದ ಆ ಶುಶ್ರೂಷಕಿಯ ಭರವಸೆ ನೀಡುವ ಮಾತುಗಳು…

ಹೀಗೆ ಅದೆಷ್ಟು ನೆನಪಿನ ಬುತ್ತಿಗಳಲ್ಲಿ ವಿವಿಧ ರೂಪಗಳಲ್ಲಿ ‘ಅವಳು’ ತುಂಬಿರುವಳು. ಅವಳು ಪುರುಷನಿಗೆ ಸರಿಸಮಾನಳಲ್ಲ, ಅವನಿಗಿಂತಲೂ ಮಿಗಿಲಾದವಳು. ಆದರೆ ಆ ರೀತಿಯಲ್ಲಿ ಗೌರವ ಕೊಡುವ ನಮ್ಮ ಕರ್ತವ್ಯವನ್ನು ಮರೆತಿದ್ದೇವೆ. ಆಕೆಯೇ ಪ್ರಕೃತಿ, ಆಕೆಯೇ ಸೃಷ್ಠಿ, ಸಮಷ್ಠಿ ಎಲ್ಲವನ್ನೂ ಸರಿಯಾಗಿ ಅರಿತು ನಡೆದರೆ ಮಾತ್ರ ಬದುಕು ಸುಂದರ ನಮ್ಮಿಬ್ಬರಲ್ಲಿ ಯಾರು ಮೇಲು? ಎಂದು ತಿಳಿಯಹೊರಟರೆ ಯಾರಾದರೂ ಗೆಲ್ಲಬಹುದು, ಗೆಲುವಿನ ಭರದಲ್ಲಿ ಮೌಲ್ಯಗಳನ್ನೇ ಮರೆಯುತ್ತೇವೆ. ಗೆದ್ದರೂ ಸಂಭ್ರಮಿಸಲು ಜೊತೆಗಿರುವವರನ್ನೇ ಕಳೆದುಕೊಳ್ಳುತ್ತೇವೆ.

ಪ್ರತಿಯೊಬ್ಬರ  ಕೆಲಸ, ಸಾಧನೆ, ಸಂಶೋಧನೆ ಎಲ್ಲದರಲ್ಲೂ ಅವಳ ಪ್ರಭಾವವೋ, ಬೆಂಬಲವೋ ಇದ್ದೇ ಇರುತ್ತದೆ. ಮಹಿಳಾ ದಿನಾಚರಣೆ ಒಂದು ದಿನಕ್ಕೆ ಸೀಮಿತವಲ್ಲ, ದಿನನಿತ್ಯದಲ್ಲೂ ಅವರ ಮೇಲಿರುವ ಗೌರವ ಇಮ್ಮಡಿಯಾಗಲಿ, ಸದಾ ಕಾಲವೂ ಅದು ಹಾಗೆಯೇ ಇರಲಿ. ಎಲ್ಲಾ ರೀತಿಯ ಪಾತ್ರಗಳ ಮೂಲಕ ಎಲ್ಲಾ ರೀತಿಯ ಪ್ರೀತಿಯ ನೀಡಿದ ಅವಳಿಗೆ ಏನೆಂದು ಕರೆಯೋಣ? ಕವಿವಾಣಿಯಂತೆ ‘ಸ್ತ್ರೀ’ ಅಂದರೆ ಅಷ್ಟೇ ಸಾಕೇ..? ಬೇರೇನಾದರೂ ಹೇಳಬೇಕೆ..? ಹೇಳಿದರೂ ಆ ಪದಗಳು ಅವಳ ಮುಂದೆ ಗೌಣವೇ ಅಲ್ಲವೇ..?

ಮಹಿಳಾ ದಿನಾಚರಣೆಯ ಶುಭಾಶಯಗಳು🌱💐

 

ಚೇತನ್  ಸಿ ರಾಯನಹಳ್ಳಿ.

ಕನ್ನಡ ಶಿಕ್ಷಕರು ಮತ್ತು ರಂಗಕರ್ಮಿ. ಶಿವಮೊಗ್ಗ