“ಕುವೆಂಪು” ಸಾಹಿತ್ಯ ನಮನ

Image Credit: Google-Star of Mysore

‘ಕಾನೂರು’ ಕಥೆಗೊಬ್ಬ ಹೂವಯ್ಯನ ಹುಟ್ಟು ಹಾಕಿ,

‘ಮದುಮಗಳು’ ಚಿನ್ನಮ್ಮನ

‘ಮಲೆಗಳಲ್ಲಿ’ ಕಟ್ಟಿಹಾಕಿ,

‘ಕಲಾ ಸುಂದರಿ’ ‘ದ್ರೌಪದಿ’ಯರ

‘ಶ್ರೀ ಮುಡಿಯ’ ಸೋಕಿ,

ಕುಪ್ಪಳ್ಳಿಯ ಕಂದ ನೀ

ರಸಿಕರೆಲ್ಲರೆದಯ ತಾಕಿ,

ಕಳೆದವಲ್ಲ ನೂರು ವಸಂತ

ಮತ್ತೆ ಹುಟ್ಟಿ ಬಾರೋ ಸಂತ….

 

ಪ್ರಕೃತಿ ಹೆಣ್ಣ ಬೆರಳುಗಳಿಂದ ಭಾವಗೀತೆಗಳ ಮಿಡಿಸಿ

ಮಲೆನಾಡ ಮಣ್ಣ ಗಂಧ ಸಾಲು ಸಾಲಿನಲ್ಲೂ ಸ್ಪರ್ಶಿಸಿ

ಮಾಧ್ಯಮ ಕನ್ನಡ ‘ಪಾಂಚಜನ್ಯ’ ಮೊಳಗಿಸಿ

‘ರಾಮಾಯಣದಿ’ ಕೈಕೆ, ಮಂಥರೆ, ಊರ್ಮಿಳೆಯಂ ಅಂತರಂಗ ‘ದರ್ಶಿಸಿ’

ನೀನಾದೆ ವಿಶ್ವಮಾನ್ಯ

ಹೇ ರಸ ಋಷಿ ನಿನ್ನ ಪ್ರತಿಭೆ ಅನನ್ಯ….

 

ನವೋದಯದ ನವಧಿ ‘ಚಂದ್ರಹಾಸ’ ಬೀರಿ

ಬೆಳಗಿ ಬೆಳೆದ ಭರದಿ ಭಾಷೆ ಬದುಕಮೀರಿ

ರಾಷ್ಟ್ರಕವಿಯಾಗಿ, ಪಂಪ, ಪದ್ಮ, ಜ್ಞಾನಪೀಠಗಳೆಲ್ಲ ನಿನ್ನಡಿಗೆರಗಿ

ಸಾಗಿ ಹೋದವೆಲ್ಲ ಧನ್ಯವಾದೆವೆಂದು ಬೀಗಿ

‘ಕರ್ನಾಟಕ ರತ್ನ’ ನಿನಗೆನ್ನ ಮನ

ಸಲ್ಲಿಸುತ್ತಿದೆ ಕೋಟಿ ಕೋಟಿ ನಮನ…..

 

ಮಹಾ ಛಂದಸ್ಸಿನ ಚಂದದ ಹರಹನೆಲ್ಲ ಬಳಸಿ

‘ಮಹಾರಾತ್ರಿ’, ‘ಸ್ಮಶಾನ ಕುರುಕ್ಷೇತ್ರದಲ್ಲಿ’ ಯಮನ ಸೋಲಿಸಿ

‘ಕೊಳಲನೂದುತ’  ‘ಅಗ್ನಿ ಹಂಸವೇರಿ’ ‘ಕಾವ್ಯ ವಿಹಾರ’ ನೆಡೆಸಿ

‘’ಚಕೋರಿ’ ವಾಗ್ದೇವಿಯ ಹೃದಯ ‘ಚಂದ್ರ ಮಂಚಕಿಳಿಸಿ’

 

ಕಳೆದವಲ್ಲ ನೂರು ವಸಂತ

ಮತ್ತೆ ಹುಟ್ಟಿ ಬಾರೋ ಸಂತ………

ಮಧುಶ್ರಿ,

ತೃತೀಯ  ಬಿ. ಎ, ವಿದ್ಯಾರ್ಥಿನಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜುಶಿವಮೊಗ್ಗ