ಹುಡುಕಾಟದ ಕತ್ತಲು

Image Credit : benstevens

ಹುಡುಕಾಟದ ಕತ್ತಲು

ಕತ್ತಲೆಂಬ ಗರ್ಭಗೂಡು..
ಕಣ್ಣ ತೆರೆದೆ ನವಮಾಸದ ಕೊನೆಯಲಿ
ಬೆಚ್ಚಗೆ ನೇವರಿಕೆ ಇತ್ತು ಭೂಮಿ ತಾಯಿ ಮಡಿಲಿಲಿ
ಪ್ರಾಣಿ-ಪಕ್ಷಿ ಗಿಡಗಂಟಿ
ಸಖರಂತೆ ಕೋಟಿ ಕೋಟಿ
ನಡುವೆ ಬೆಳೆದೆ ಅವುಗಳಂತೆಯೇ

ಕಂಡೆ ಜ್ವಾಲೆ ಕಿಡಿಯನು
ಕಂಡೆ ಭೂಮಿ ಕೊಡುವ ರುಚಿಯನು
ಮರ್ಕಟದಾ ಮೆದುಳಿಗೆ
ತೊಡಿಸ ಹೊರಟೆ ಮನುಜನೆಂಬ ಮುಖವಾಡ
ಅದು ಸ್ವಂತ ಸಮಾಧಿಗೆ ಮೊದಲ ಕುರುಹು ಗಾಢ
ಇನ್ನೂ ಬೆಳೆದೆ ಮಗುವಿನಂತೆ

ಹುಟ್ಟಿ ರಾಜ್ಯ ಸಾಮ್ರಾಜ್ಯದ ಕಲ್ಪನೆ
ಕ್ಷಣಕೆ ಸತ್ಯ..ಕ್ಷಣಕೆ ನಿತ್ಯ.. ಸಂಸ್ಕೃತಿಗಳ ಚಿಂತನೆ
ಸ್ವಾರ್ಥಪರತೆ ನಡೆಸೆ ಸಮರ ವಂಚನೆ
ಕುರುಡು ಮನಕೆ ಸಿಕ್ಕಿತು ಸ್ವಾತಂತ್ರದ ಘೋಷಣೆ
ಕತ್ತಲ ದಾರಿಯಲ್ಲೇ ಮೂಡಿತು ಹೊಸ ಕತ್ತಲ ಯೋಚನೆ..
ಇನ್ನೂ ಬೆಳೆದೆ ಕೊಬ್ಬಿನಿಂತೇ…

ತೃಪ್ತಿ ಇರದ ಮನದೊಳಗೆ ….
ಹೊಕ್ಕಿಬಂತು ಅಧಿಕಾರದ ಕರಿನೆರಳು
ಆ ನೆರಳು ತಾಕದಾಯಿತು ಅಹಂಕಾರದ ಮುಗಿಲು
ಪಾಪ-ಪುಣ್ಯ ಎಲ್ಲ ಮರೆಸಿ ಕುಣಿಸುತಿಹುದು  ಕಾಂಚಾಣ…
ಕುಣಿತ ಕುಣಿತ ಮರೆತೆನೀಗ ನನ್ನತನವ ನಾನೆನಾ?…
ಬೆಳೆದೆ ಹಮ್ಮ ಕೊಳೆಯಲಿ…

ಕಗ್ಗತ್ತಲ ಕತ್ತಲಲ್ಲಿ ಬೆಳಕ ಕಿಡಿಯ ಸಿಂಚನ
ನಮ್ಮ ನೆರಳು ಕತ್ತಲು, ನಮ್ಮತನವು ಕತ್ತಲು….
ಕತ್ತಲೆಯೆ ಹೇಳಿತು “ಬೆಳಕು ಬರಿಯ ಬೆತ್ತಲು”
ಕತ್ತಲಲಿ ಕಾಣದೇನೂ… ಬೆಳಕು ಬರಿಯ ಬೆತ್ತಲು..!
ಬೆಳೆದೆ ತಲ್ಲಣದ ಸುಳಿಯಲಿ…

ಕತ್ತಲ ಹುಚ್ಚು ನೆತ್ತಿಗ್ಹತ್ತಿ
ಬೆಳಕ ಸತ್ಯ ಕಣ್ಣಿಗೊತ್ತಿ
ಮನದ ಗೂಡಲವಿತು ಕೂತು
ಯೋಚಿಸಿದೆ… ಯೋಚಿಸಿದೆ..
ಬೆಳೆದೆ ಯೋಚನೆಯ ಜೊತೆಯಲಿ

ಬೆಳಕು – ಕತ್ತಲು ಎರಡು ಬೇಕು
ಸಮವಾಗಿ…ದೃಡವಾಗಿ
ಭೂಮಿ ಕರುಳ ಬಸಿಯ ಹೊರಟ “ಕತ್ತಲೆ”
ಕರಿ ಇರುಳ ಕಸಿಯ ಹೊರಟ  “ಬೆಳಕ ಬೆತ್ತಲೆ”
ಒಂದೇ ಎನಿಸಿದರೂ… ವಿರುದ್ಧ

ಬಂದಾಗಿದೆ ಸೊಕ್ಕಿನಿಂದ
ಉಂಟೆ ಒಂದು ಅವಕಾಶ
ಅಮ್ಮಾ…
ಕ್ಷಮಿಸುವೆಯಾ ಈ ಎಲ್ಲ ತಪ್ಪಿಗೆ?
ಇಲ್ಲ…
ಮರಳಬೇಕೆ… ನಾನೀಗ ಸ್ವರಚಿತ ಸಮಾಧಿಗೆ?

 

ಪ್ರಣಮ್ಯ ಬಿ.  ತೃತೀಯ ಬಿ.ಎ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು- ಶಿವಮೊಗ್ಗ

Leave a Reply

Your email address will not be published. Required fields are marked *