ಹೀಗೆಲ್ಲೋ ಕಲ್ಪನೆಯ ಸ್ವಪ್ನ!

Image Credit: Google.com
ನಿನ್ನೊಂದಿಗೆ ಕುಳಿತು
ನಿನ್ನೊಂದಿಗೆ ಕುಳಿತು
ಹುಣ್ಣಿಮೆಯ ಪೂರ್ಣ ಚಂದಿರನ ನೋಡಬೇಕು
ಅದ್ಯಾವುದೋ ಶೃಂಗರಿಸಿದ ಬೆಟ್ಟದ ತುದಿಯಲ್ಲೇ ಎಂಬ ಹಂಬಲವಿಲ್ಲ
ಮನೆಯ ತಾರಸಿಯಾದರೂ ಸಾಕು
ನೀ ತರುವ ಹೂ ಮುಡಿಯಬೇಕು
ಅದು ಮೈಸೂರು ಮಲ್ಲಿಗೆ ಆಗಬೇಕೆಂಬ ಆಸೆಯಿಲ್ಲ
ಹಿತ್ತಲಿನ ಬಿಳಿ ಜಾಜಿ ಮಲ್ಲಿಗೆ ಆದರೂ ಸರಿಯೇ
ನಾವಿಬ್ಬರೂ ಕೈ ಹಿಡಿದ ನಡೆಯಬೇಕು
ಅದ್ಯಾವುದೋ ಅರಮನೆಯ ಆವರಣವೇ ಆಗಬೇಕೆಂಬ ಆಸೆಯಿಲ್ಲ
ನಮ್ಮೂರ ಜಾತ್ರೆಯ ಕಿರಿದಾದ ಸಂಧಿಯಲ್ಲಾದರೂ ಸಾಕು.
ವೈಷ್ಣವಿ ಎಸ್ ಕೆ
ತೃತೀಯ ಬಿ ಎ, ವಿದ್ಯಾರ್ಥಿನಿ
ಕಟೀಲ್ ಆಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ
ಪ್ರೀತಿಯ ತೋರಣ

Image Credit : Google.com
ಬೆಳಗಿನ ಬೆಳಕಿನ ನಿಶ್ಯಬ್ದ ಝೇಂಕಾರದಲಿ,
ನಿನ್ನ ನೆರಳು ಮೃದುವಾಗಿ ಮರೆಯಾಯಿತು ನನ್ನ ದೃಷ್ಟಿಯಲಿ,
ಮೆಲ್ಲನೆ ಹೆಚ್ಚರಿಸುವೆ ನಿನ್ನ ಪ್ರೀತಿಯ ನನ್ನ ಹಾಡಿನಲಿ,
ಅದು ದೀರ್ಘಕಾಲ ಉಳಿಯುವುದು ನಮ್ಮ ಹೃದಯಗಳಲಿ.
ಸಂಜೆಯ ತಂಗಾಳಿಯ ಒಂದು ಪಿಸುಮಾತಿನಲಿ,
ಆತ್ಮವನು ನಿರಾಳವಾಗಿಸುವುದು ನಿನ್ನಯ ನೋಟದಲಿ,
ಸಾಮರಸ್ಯದಲ್ಲಿರುವ ಎರಡು ಆತ್ಮಗಳು ಭೇಟಿಯಲಿ,
ಕಾಣುವುದು ನಗುವಿನ ಸಿಹಿ ನಮ್ಮ ಮೊಗದಲಿ.
ಪ್ರೀತಿ ಮಳೆಯ ಲಯವಾಗಲಿ,
ಶಮನಗೊಳಿಸುವುದು ನಮ್ಮಯ ನೋವನು ಆಳದಲಿ,
ಬೇಸಿಗೆಯ ಉಷ್ಣವಿರಲಿ ಅಥವಾ ಚಳಿಗಾಲದ ಶೀತದಲಿ,
ನಿನ್ನಯ ಸ್ಪರ್ಶವೆ ಸಾಕಿನ್ನು ನನ್ನ ಕೈಗಳಲಿ.
ಭಾಷೆಯು ಮೌನವಾಗಲಿ , ಕಣ್ಣುಗಳು ಮಾತಾಗಲಿ
ಪ್ರೀತಿಯ ಭಾವದಲ್ಲಿ ಹೃದಯಗಳು ಸ್ಪಷ್ಟವಾಗಿರಲಿ
ತಾಳ್ಮೆ, ದಯೆ ಮತ್ತು ಅಂತ್ಯವು ನೀನಾಗಿರಲಿ,
ನನ್ನಯ ಪ್ರೇಮಿಯ ಕಾಣುವೆ ಸದಾ ಮನದಲಿ.
ನಮ್ಮಯ ಪ್ರೀತಿ ನಿತ್ಯ ಮಿನುಗುವ ನಕ್ಷತ್ರವಾಗಲಿ,
ನಮ್ಮ ಜೀವವೇ ನಿಮಗೆ ಸ್ಫೂರ್ತಿಯಾಗಲಿ,
ಕಾಣಿಸುವೆವು ನಾವು ನಮ್ಮ ತ್ಯಾಗದ ಬೆಳಕಿನಲಿ,
ಸದಾ ಇರುವೆವು ನಾವು ಜೊತೆಯಲಿ , ಜೊತೆ ಜೊತೆಯಲಿ……!
ಮಂಜುನಾಥ್. ಎಸ್
ಸಹಾಯಕ ಪ್ರಾಧ್ಯಾಪಕರು, ಮನೋವಿಜ್ಞಾನ ವಿಭಾಗ
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ
ನಮಗೆ ನಾವೇ ಕೇಳುವಂತ ಪ್ರಶ್ನೆ!
ನಮಗೆ ನಾವೇ ಕೇಳುವಂತ ಪ್ರಶ್ನೆ!
ಈ ಆತ್ಮವೆಂಬ ಬತ್ತಿ ಕತ್ತಲೆಯ ತೊರೆದು ಹೊತ್ತಿ ಉರಿಯಬೇಕಿದೆ!
ಭಯವೆಂಬ ಬಾನು ಕತ್ತಲೆಯ ತೊರೆದು ಸೂರ್ಯನನ್ನು ಅರಸಿ ಹೊರಡಬೇಕಿದೆ..
ಕಣ್ಣೆದುರಲ್ಲೇ ಎಲ್ಲ ಉತ್ತರಗಳೂ ಅಂಗೈನ ಬೆಣ್ಣೆಯಂತಿದೆ ಆದರೂ
ತುಪ್ಪಕ್ಕಾಗಿ ಅಲೆವ ಬೆಪ್ಪನಂತೆ “ಇಲ್ಲಗಳ” ವ್ಯೂಹದಲ್ಲಿ ಸಿಲುಕಿದೆ ಈ ಮನ!.
ಈ ಅಭಯ ಭಾವನೆ ನನ್ನೊಳಗರಳುವುದಾದರೂ ಯಾವಾಗ ?,
ನಾ ಭಯವೆಂಬ ಗರ್ಭದಿಂದಾಚೆ ಬರುವುದ್ಯಾವಾಗ ??…
ಈ ಹೆಸರಿಗೊಂದು ಉಸಿರು ಬರುವುದ್ಯಾವಾಗ?,
ಈ ಮನವು ತನ್ನ ತಾನೇ ಪ್ರೀತಿಸದೇ ಹೋದಾಗ ಇನ್ನೆಲ್ಲಿಯಾ ಭರವಸೆ!
ಆದರೂ ಸಾಧನೆ ಬಿಸಿಲುಗೋಲು ಮನವೆಂಬ ಮನೆಯ ಕಿಟಕಿಯ ನುಸುಳಿ
ತನ್ನ ಬೆಳಕೊಗೆಯ ಬೇಕಿದೆ, ಆ ಬೆಳಕು ಈ ತನುವರಳಿದ ಕಾರಣವ ತೋರ ಬೇಕಿದೆ.
ಅರಳಿದ ತನುವು ಬಾಡುವ ಮೊದಲೇ ಸುಗಂಧಿಸಿ ಅದರ ಗಮ ಎಲ್ಲರ ನಾಸಿಕದಲ್ಲೇ ಚಿರಂಜೀವಿಯಾಗಬೇಕಿದೆ!, ಅರಿಯಬೇಕಿದೆ ಅರಿವು ಅರಳಬೇಕಿದೆ..
ನಾನೂ ನನ್ನ ಪ್ರಾಚಾರ್ಯರೊಂದಿಗೆ ನಿಂತು ಭಾವಚಿತ್ರವ ಪಡೆಯ ಬೇಕಿದೆ
ಆದರಾ ಭಾವಚಿತ್ರದೊಳಗೆ ನಾ ಮಾಡಿದ ಸಾಧನೆಯ ಭಾವಬೆಳಕು
ನನ್ನ ಪ್ರಾಚಾರ್ಯರ ಮೊಗದಲ್ಲಿ ಪ್ರತಿಫಲಿಸಿ ಪ್ರಜ್ವಲಿಸುತ್ತಿರ ಬೇಕಿದೆ..
ಸಾಧನೆಯ ಬಟ್ಟೆಯ ತೊಡಬೇಕಿದೆ,
ಹೊರಟ ಬಟ್ಟೆಯಲ್ಲೇ ಲಕ್ಷ್ಯವ ಇಟ್ಟು ಗುರಿಯ ಗರಿಯ ಸ್ಪರ್ಶಿಸಬೇಕಿದೆ.
“ಇಲ್ಲಗಳ” ಸೊಲ್ಲ ಹೇಳದೆ ಆತ್ಮ ವಿಶ್ವಾಸದ ದೀಪವ ಹಚ್ಚಿಕೊಂಡು ನಾ ಹೊರಡಲೇ ಬೇಕಿದೆ,
ನಾನೂ ಇರುವೆನೆಂಬ ಇರುವಿಕೆಯ ಅರವಳಿಕೆಯ ಮೂಡಿಸಬೇಕಿದೆ.
ನನ್ನಿಂದ ಅ’ಸಾಧ್ಯ’ ಎನ್ನುವ ಕಪ್ಪು ಅಂಧಕಾರದ ಪಟ್ಟಿಯ ಕಟ್ಟಿಕೊಂಡು
ತಿರುಗುತ್ತಿರುವ ಮನಸು ಪಟ್ಟಿಯ ಕಿತ್ತೊಗೆದು ತೇಜವ ಕಾಣಬೇಕಿದೆ.
ಒಟ್ಟಾರೆಯಾಗಿ ನನಗೆ ನಾನೇ ಕೇಳಿಕೊಳ್ಳುವ ಪ್ರಶ್ನೆ ಏನೆಂದರೆ..
“ಓ ತನುವೆ ನೀನೇಕೆ ಅರಳಿರುವೆ?….”
ಕವನ ಕೆ. ಓ,
ಪ್ರಥಮ ಬಿಎ, ವಿದ್ಯಾರ್ಥಿನಿ
ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ