
Photo Credit: Google.com
ಅವು ಬೇಸಿಗೆ ರಜೆಯ ದಿನಗಳು. ಪರೀಕ್ಷೆ ಮುಗಿದು ಫಲಿತಾಂಶ ಬಿಡುಗಡೆಯಾಗಿತ್ತು, ನಾನು ಎಲ್ಲಾ ವಿಷಯದಲ್ಲೂ ಉತ್ತಮ ಅಂಕಗಳನ್ನು ಪಡೆದು ಆರನೇಯ ತರಗತಿಯಿಂದ ಏಳನೇಯ ತರಗತಿಗೆ ತೇರ್ಗಡೆ ಹೊಂದಿದ್ದೆ. ನನ್ನಮ್ಮ ಬೇಗ ಏದ್ದು, ತಿಂಡಿ ಊಟ ಸಿದ್ದ ಮಾಡಿ ನನ್ನನ್ನು ಶಾಲೆಗೆ ಕಳುಹಿಸುವುದು ಪ್ರತಿನಿತ್ಯದ ಕೆಲಸವಾಗಿತ್ತು. ಅವಳಿಗೆ ಅನಾರೋಗ್ಯ ಇದ್ದರು ಈ ಕೆಲಸಗಳಿಂದ ಮುಕ್ತಿ ಇರಲಿಲ್ಲ. ಆದರೆ, ನನಗೆ ಆಗ ಬೇಸಿಗೆ ರಜೆ ಇದ್ದುದರಿಂದ ನಾನು ಮತ್ತು ನನ್ನಮ್ಮ ಅಜ್ಜಿಯ ಊರಿಗೆ ಹೋಗಲು ನಿರ್ಧರಿಸಿ ಸಿದ್ದರಾದೆವು. ನನ್ನ ತಂದೆಯವರು ನಮ್ಮಿಬ್ಬರನ್ನು ಅಜ್ಜಿಯ ಮನೆಗೆ ಬಿಟ್ಟು ಬಂದರು.
ನನ್ನನ್ನೂ ಸೇರಿದಂತೆಯೇ ಎಲ್ಲಾ ಮೊಮ್ಮಕ್ಕಳಿಗೂ ಅಜ್ಜಿ ಮನೆಯಂದರೆ ಒಂದುರೀತಿಯ ಸ್ವತಂತ್ರ ಮತ್ತು ನೆಮ್ಮದಿಸಿಗುವ ಜಾಗವೇ ಸರಿ. ನನಗೆ ನನ್ನಜ್ಜಿ ಯಾವಾಗಲು ‘ಕಾಮದೇನು’ವಿನಂತೆ ಅನ್ನಿಸುತ್ತಿದ್ದಳು,ಯಾಕಂದರೆ ಕೇಳಿದ್ದೆಲ್ಲವನ್ನು ಕೊಡುವ, ಕೈತುತ್ತು ತಿನ್ನಿಸುವ, ಅಮ್ಮನ ಹೊಡೆತದಿಂದ ರಕ್ಷಿಸುವ ಒಂದು ರೀತಿಯ ಅನ್ನಪೂರ್ಣೇಶ್ವರಿ ಅವಳು. ಅವಳು ಬೆಳೆದು ಬಂದಿದೆಲ್ಲವೂ ಮಾಧ್ಯಮ ವರ್ಗದ ಕುಟುಂಬದಿಂದ. ಆದರೆ, ಮದುವೆಯ ನಂತರ ಬಂದು ಸೇರಿದ್ದು ಶ್ರೀಮಂತರ ಮನೆಗೆ. ಆದ್ದರಿಂದ ಅವಳಿಗೆ ಬಡತನ, ಶ್ರೀಮಂತಿಕೆ, ಜೀವನ ಇದರ ಅಗಾಧವಾದ ಅನುಭವ ಮತ್ತು ತಿಳುವಳಿಕೆ ಇತ್ತು.
ಅಜ್ಜಿಯ ಮನೆ ನಮ್ಮ ಮನಯಿಂದ ಹಲವಾರು ಮೈಲಿ ದೂರವಿದ್ದು ಅಮ್ಮ ಪ್ರಯಾಣದ ಆಯಾಸದಿಂದ ಊಟಾ ಮಾಡಿ ರಾತ್ರಿ ಬೇಗ ಮಲಗಿಕೊಂಡಳು,ಆದರೆ ನಾನು ದಿನವಿಡೀ ನನ್ನ ಚಿಕ್ಕಿಯ ಮಕ್ಕಳೊಂದಿಗೆ ಆಟವಾಡಿ, ರಾತ್ರಿ ಅಜ್ಜಿಯ ಕೈತುತ್ತು ತಿಂದು ಮಲಗುವ ಸಮಯದಲ್ಲಿ “ಅಜ್ಜಿ ಅಜ್ಜಿ ಕತೆ ಹೇಳು” ಎಂದು ಕೇಳಿದೆ. ಆಗ ಅವಳು ರಾಜ -ರಾಣಿ, ಸಿಂಹ -ಮೊಲ, ಇಂತಹ ಕತೆಯನ್ನು ಹೇಳದೆ, ತನ್ನ ಅನುಭವದ ಬುಟ್ಟಿಯನ್ನು ನನ್ನೆದುರಿಗೆ ಕತೆಯ ರೂಪದಲ್ಲಿ ಬಿಚ್ಚಿದಳು. ಮತ್ತು ನನಗೆ ಯಾವದೋ ಒಂದು ರೀತಿಯಲ್ಲಿ ಅರಿವಿಗೆ ಬರುವ ರೀತಿಯಲ್ಲಿ ತಿಳಿಸಿದಳು ಆದರೆ ಅವಳ ಯಾವ ಮಾತುಗಳು ಸಹ ಆ ಸಮಯದಲ್ಲಿ ತಿಳಿದಿರಲಿಲ್ಲ ಆದರೆ ಈಗ ಅರ್ಥವಾಗುತ್ತಿದೆ.
ಅವಳು ಹೇಳಿದ್ದಳು ಯಾರನ್ನೋ ನೆಚ್ಚಿಸಲು ನಿನಗೆ ಇಷ್ಟವಿಲ್ಲದಿದ್ದರೂ ಇಷ್ಟವಿರುವಂತೆ ನಟಿಸುತ್ತಾ ಬದುಕ ಬೇಕಾಗುತ್ತದೆ, ಆದರೆ ಅದಕ್ಕೆ ಅವಕಾಶ ಕೊಡಬೇಡ ಎಂದು. ಆದರೆ ನಾನು ಆಗ ಹುಮ್ಮಸ್ಸಿನಲ್ಲಿ ಯಾರನ್ನು ಯಾಕೆ ನೆಚ್ಚಿಸಲಿ? ಯಾರಿಗಾಗಿ ಯಾಕೆ ನಾನು ಬಾಳಲಿ? ನಾನು ನನಗೆ ಇಷ್ಟ ಬಂದ ರೀತಿ ಬದುಕುವೆ, ಬೇಕಾದರೆ ನನ್ನನ್ನು ಅನುಸರಿಸಿ ಇನ್ನೊಬ್ಬರು ಬದುಕಲಿ ಎಂದಿದ್ದೆ. ಆದರೆ ಈಗ ನಾನು ಬದುಕುತ್ತ ಇರುವುದು ನನ್ನಜ್ಜಿ ನನಗೆ ಹೇಳಿದಂತೆಯೇ.
ಯಾರನ್ನೋ ನೆಚ್ಚಿಸುವ ಸಲುವಾಗಿಯೋ ಅಥವಾ ಸಮಾಜಕ್ಕೆ ಬೆದರಿಯೋ ವಿದ್ಯಾಭ್ಯಾಸದಿಂದ ಹಿಡಿದು ಪೂರ್ತಿ ಜೀವನವನ್ನೇ ಬದಲಾಯಿಸಿಕೊಂಡು ಬದುಕುವಂತೆ ಆಗಿದೆ. ನನ್ನೊಬ್ಬಳ ಜೇವನ ಹೀಗಿದೆಯೋ ಅಥವಾ ಎಲ್ಲಾ ಹೆಣ್ಣುಮಕ್ಕಳಿಗೂ ಹೀಗಿದೆಯೋ ಅಥವಾ ಪುರುಷರಿಗೂ ಇಂತಹ ಸವಾಲುಗಳೇ ಎದುರಾಗುತ್ತದೆಯೋ ತಿಳಿಯದು. ನನಗೆ ಬೇಕಾದಂತೆ ಬದುಕಲು ಜೀವನ ಕ್ರಮವನ್ನು ಬದಲಿಸಿದರೆ ಅಥವಾ ನಮಗೆ ಬೇಕಾದವುಗಳಿಗಾಗಿ ಅಥವಾ ನಮಗಾದ ಅನ್ಯಾಯಗಳ ವಿರುದ್ಧ ಧ್ವನಿಯನ್ನು ಎತ್ತಿದರೆ ನಮಗೆ ನೀಡುವ ಹೆಸರೇ ‘ಬಜಾರಿ’,’ಗಂಡುಬೀರಿ’ ಎಂದು. ಸಮಾಜಕ್ಕೆ ಹೆದರಿಕೊಂಡು ಬದುಕಿ ಎಂದು ನೇರವಾಗಿ ಪುರುಷರೇನು ಬಂದು ಹೇಳುವುದಿಲ್ಲ ಬದಲಾಗಿ ಮನೆಯಲ್ಲಿರುವ ಅಜ್ಜಿ, ಅಮ್ಮ, ಚಿಕ್ಕಮ್ಮ ಇಂತಹ ಹೆಣ್ಣುಮಕ್ಕಳೇ ಹೇಳಿ ಬೆಳೆಸುವುದು.ನನಗೆ ಇಷ್ಟೆಲ್ಲ ಅರಿವಾಗಿದ್ದೆ ನನಗೆ ಇಪ್ಪತ್ತು ವರ್ಷವಾದ ಬಳಿಕ. ಇನ್ನಾದರೂ ನಾನು ನನಗಾಗಿ ಬದುಕಬೇಕಾಗಿದೆ, ‘ನಾನು ನಾನಾಗ’ಬೇಕಿದೆ. ಇನ್ನು ಮುಂದಾದರು ನನ್ನ ಆಸೆಗಳನ್ನು, ಗುರಿಗಳನ್ನು ನನಸಾಗಿಸುವಲ್ಲಿ ಯಾವುದೇ ರಾಜಿಯನ್ನು ಮಾಡಿಕೊಳ್ಳದೆ ಬದುಕುತ್ತೇನೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಅದನ್ನು ಮಾಡಬೇಕಿತ್ತು, ಅಲ್ಲಿ ಸುತ್ತಬೇಕಿತ್ತು, ಇದನ್ನು ಓದಬೇಕಿತ್ತು, ಇಂತಹ ಬಟ್ಟೆ ಧರಿಸಬೇಕಿತ್ತು ಎಂಬ ಆಸೆಯ ಪಟ್ಟಿಗಳಿಗೆ ಅವಕಾಶವಿರುವುದಿಲ್ಲ.
ಸಂಜನಾ. ಜಿ. ಬೆಳ್ಳೂರ್
ತೃತೀಯ ಬಿ.ಏ