ಶೈಕ್ಷಣಿಕ ಪ್ರವಾಸದ ನೆನಪುಗಳು

ನೈಜ ಪ್ರಕೃತಿಯ ಪಾಠಗಳನ್ನು ಕಲಿಯಲು ಶೈಕ್ಷಣಿಕ ಪ್ರವಾಸವು ಒಂದು ಸದಾವಕಾಶ. ಇಂತಹ ಒಂದು ಅವಕಾಶ ಒದಗಿಸಿಕೊಟ್ಟದ್ದು ನಮ್ಮ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು.

ಅಂತಿಮ ವರ್ಷದ ಬಿ.ಎಸ್ಸಿ. ವಿದ್ಯಾರ್ಥಿಗಳಾದ ನಾವು ಗೋಕರ್ಣ-ಕಾರವಾರದ ಈ ಪ್ರವಾಸದಲ್ಲಿ ಭಾಗಿಯಾದೆವು. ಇಲ್ಲಿ ನಾವು ಆಹಾರ ತಯಾರಿಕಾ ಕಾರ್ಖಾನೆ ಹಾಗೂ ಸೆಂಟ್ರಲ್ ಮರೈನ್ ಫೀಶರೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (CMFRI) ಗೆ ಭೇಟಿ ನೀಡಿದೆವು. ಈ ಪ್ರವಾಸವು ಪ್ರಾಣಿಶಾಸ್ತ್ರ ಹಾಗೂ ರಾಸಾಯನಿಕಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಾದ ನಮಗೆ ಬಹು ಉಪಕಾರಿಯಾಗಿದ್ದು ಸುಳ್ಳಲ್ಲ. ಹಾಗೆಯೇ ಪ್ರಾಯೋಗಿಕ ಅನುಭವ ಪಡೆಯುವಲ್ಲಿ ಸಹಕಾರಿಯಾಗಿತ್ತು.

ನಮ್ಮ ಪ್ರವಾಸವು ನವೆಂಬರ್ ತಿಂಗಳಿನ 18ನೇಯ ತಾರೀಖಿನಂದು ಬೆಳಗಿನ ಜಾವ ಪ್ರಾರಂಭವಾಯಿತು. ಶಿವಮೊಗ್ಗದಿಂದ 6.30ಕ್ಕೆ ಉತ್ಸಾಹದಿಂದ ಹೊರಟೆವು. 10.30ರ ಸುಮಾರಿಗೆ ಬಂದಿತು ನಮ್ಮ ಮೊದಲ ನಿಲ್ದಾಣ- ಭೀಮೇಶ್ವರ ದೇವಸ್ಥಾನ. ಅಲ್ಲಿಯ ಆಧ್ಯಾತ್ಮಿಕತೆ ಮತ್ತು ಪ್ರಕೃತಿಯ ಸೌಂದರ್ಯ ಕಣ್ಮನ ಸೆಳೆಯುವಂತಿತ್ತು. ಶಾಂತಿಯುತ ವಾತಾವರಣದಲ್ಲಿ ನೆನೆದ ನಂತರ ನಾವು ಕುಮಟಾ ಕಡೆಗೆ ಪ್ರಯಾಣ ಬೆಳೆಸಿದೆವು. ಅಲ್ಲಿಗೆ ಮಧ್ಯಾಹ್ನ 1.00ರ ಹಾಗೆ ತಲುಪಿದ ನಾವು ಭೇಟಿ ನೀಡಿದ್ದು ಅಲ್ಲಿಯ ವಾತ್-ಜಾತ್ ಫಾರ್ಮಾ ಫುಡ್ಸ್ ಕಾರ್ಖಾನೆಗೆ (Vatjat Pharma Foods). ಅಲ್ಲಿ ರಾಸಾಯನಿಕ IP (Ingress Protection Grade) ದರ್ಜೆಯ ಉತ್ಪನ್ನ, ಆಹಾರ ಉತ್ಪನ್ನಗಳ ತಯಾರಿಕೆಯ ಬಗ್ಗೆ ಅರಿತುಕೊಂಡೆವು.

ಸಂಜೆ 4.00ರ ಹೊತ್ತಿಗೆ ನಾವು ಗೋಕರ್ಣ ತಲುಪಿದೆವು. ಅಲ್ಲಿ ಕರಾವಳಿಯ ಕಲರವವು ನಮ್ಮನ್ನು ಸ್ವಾಗತಿಸಿತ್ತು. ಹತ್ತಿರದಲ್ಲಿಯೇ ಇದ್ದ ಹೋಂ ಸ್ಟೇಯಲ್ಲಿ ನಮಗಾಗಿ ಕಾಯ್ದಿರಿಸಿದ್ದ ಕೋಣೆಗಳಿಗೆ ತೆರಳಿ ಸ್ವಲ್ಪ ಹೊತ್ತು ವಿಶ್ರಮಿಸಿ ಎದುರಿನಲ್ಲಿಯೇ ಇದ್ದ ಬೀಚ್ ಗೆ ವಾಯುವಿಹಾರಕ್ಕಾಗಿ ಹೊರಟೆವು. ಹಾಗೆಯೇ ನಮ್ಮ ಪ್ರಾಣಿಶಾಸ್ತ್ರ ವಿಭಾಗಕ್ಕೆ ಬೇಕಾಗುವ, ಅಲ್ಲಿ ಸಿಗುವ ಹಾಗೂ ನಾವು ಸಂಗ್ರಹಿಸಬಹುದಾದ ಮಾದರಿ(Specimen) ಗಳನ್ನು ಸಂಗ್ರಹಿಸಿ, ಸ್ನೇಹಿತರೊಡನೆ ಸಮುದ್ರದ ಅಲೆಗಳ ಇಂಪಾದ ದನಿಯನ್ನು ಸವಿಯುತ್ತಾ ಕಾಲ ಕಳೆದೆವು. ಸಂಜೆಯ ವೇಳೆಗೆ ಮಹಾಬಲೇಶ್ವರ ಸ್ವಾಮಿಯ ದರ್ಶನ ಪಡೆದು ಅಲ್ಲಿಯೇ ಪ್ರಸಾದ ಸ್ವೀಕರಿಸಿ ನಮ್ಮ ಕೋಣೆಗಳಿಗೆ ಮರಳಿ ವಿಶ್ರಾಂತಿ ಪಡೆದೆವು.

ಮರುದಿನ, ಗೋಕರ್ಣದಿಂದ ಕಾರವಾರದ ಕಡೆಗೆ ಬೆಳಗ್ಗೆ 8.00ಕ್ಕೆ ಹೊರಟು ಅಂದಿನ ನಮ್ಮ ಮೊದಲ ನಿಲ್ದಾಣವಾದ CMFRI (Central Marine Fisheries Research Institute) ತಲುಪಿದೆವು. ಇಲ್ಲಿ ನಮಗೆ ಸಮುದ್ರ ಜಗತ್ತಿನ ಅಚ್ಚರಿಯ ಪರಿಚಯವಾಯಿತು. ಇಲ್ಲಿ ನಾವು ಬ್ರೂಡರ್(Brooder) ಗಳನ್ನು ನೋಡಿ, ಅದರ ಗುಣಲಕ್ಷಣಗಳ ಬಗ್ಗೆ ಅರಿತೆವು.

ಮಧ್ಯಾಹ್ನ 2.15ರ ಹಾಗೆ ಕಾರವಾರದ ಮೀನು ಮಾರುಕಟ್ಟೆಗೆ ಹೋಗಿ, ನಮ್ಮ ಪ್ರಯೋಗಾಲಯಕ್ಕೆ ಬೇಕಾದ ಮಾದರಿಗಳನ್ನು ಖರೀದಿ ಮಾಡಿದೆವು. ನಂತರ 3.30ರ ಹಾಗೆ ರವೀಂದ್ರನಾಥ್ ಟಾಗೋರ್ ಬೀಚ್ ಗೆ ಹೋಗಿ ಅಲ್ಲಿ ಸೀಗಡಿ(Shrimp), ಏಡಿ ಹಾಗೂ ಇತರ ಮಾದರಿಗಳನ್ನು ಸಂಗ್ರಹಿಸಿದೆವು.

ಸಂಜೆ 5.30ಕ್ಕೆ ಹೊನ್ನಾವರದೆಡೆಗೆ ಹೊರಟು ಅಲ್ಲಿ ಬೋಟಿಂಗ್ ನ ಅನುಭವ ಪಡೆದೆವು. ಜೊತೆಗೆ ವಿಶೇಷ ಸಸ್ಯ ಬೇರುಗಳಾದ  ನ್ಯೂಮಾಟೋಫೋರ್ಗಳನ್ನು (pneumatophores) ನೋಡಿದೆವು. ಈ ಬೇರುಗಳು ಸಸ್ಯಗಳಿಗೆ ನೀರಿನಲ್ಲಿ ಉಸಿರಾಡಲು ಸಹಾಯ ಮಾಡುತ್ತವೆ ಎಂದು ತಿಳಿದೆವು. ನಂತರ ಅಲ್ಲಿಂದ ಸಂಜೆ 7.30ಕ್ಕೆ ಶಿವಮೊಗ್ಗದ ಕಡೆಗೆ ಮನದ ತುಂಬಾ ನೆನಪುಗಳ ಜೊತೆಗೆ ಶೈಕ್ಷಣಿಕ ಪ್ರವಾಸದ ಪ್ರಾಮುಖ್ಯತೆಯನ್ನು ಅರಿತು ನಮ್ಮ ಪ್ರಯಾಣವನ್ನು ಬೆಳೆಸಿದೆವು.

ಈ ಎರಡು ದಿನದ ಪ್ರವಾಸವು ಶಿಕ್ಷಣ, ಆಧ್ಯಾತ್ಮಿಕತೆ, ಸಂಸ್ಕೃತಿಯ ಪರಿಪೂರ್ಣ ಮಿಶ್ರಣವಾಗಿದ್ದು- ಎಂದೆಂದಿಗೂ ಮನದಲ್ಲಿ ಉಳಿಯುವ ಅನುಭವವಾಗಿದೆ. ಅಲ್ಲದೆ ಪುಸ್ತಕದಲ್ಲಿ ಓದಿದ ವಿಷಯಗಳನ್ನು ನೈಜ ಜಗತ್ತಿನಲ್ಲಿ ನೋಡುವ, ಅನುಭವಿಸುವ ಅವಕಾಶ ನಮ್ಮದಾಗಿಸಿಕೊಂಡೆವು. ನಾನು-ನೀನು ಎಂಬ ಅಂತಾರವಿಲ್ಲದೆ ಎಲ್ಲರೊಂದಿಗೆ ಬೆರೆತು ಕಳೆದ ಈ ಎರಡು ದಿನ ಅವಿಸ್ಮರಣೀಯ.

ಶ್ರೇಯಾ. ಪಿ

ಅಂತಿಮ ಬಿ. ಎಸ್ಸಿ. ವಿದ್ಯಾರ್ಥಿನಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

NATURE BY THE VIEW

Image Credit: Google.com

NATURE BY THE VIEW,

Nature is both question and answer.

It is teacher and child, touches to sight of eye and its mystery. It has many unknown things in itself, but man always tries to reveal them. It’s beauty is always enjoyable. Every creature on Earth needs nature to live.

Nature has given life as a gift of colourful and joyfulness for many living organisms. A very precious organism in coverage of nature is human being, by biological word is ‘HOMOSEPIENS’. For human being’s nature gifted many self –requirement action through which they take use of it for their livelihood.

Nature keeps changes for itself for the weather of itself.

Nature is wholestic word for anything the writer is going to write.

From the nature, the throw of birth of life for human being is a gift as we learn from itself, growth by itself and the eyes closed to something.

Nature’s nature is unknown. Nobody knows when it was born exactly. Its sight gives pleasure to eyes. Everyone needs it it – living or non-living depend on it.

 

“Nature is limited or unlimited nobody knows, but humans are more curious to know about it”

 Pritam B. Patil

III BSW Student

Kateel Ashok Pai Memorial College, Shivamogga

ಅಂತರಪಟದಾಚೆ ವಿಧಿ ತಂದ ವರ ನೀನು!

Image Credit: KAPMC Library

ಆಕೆ ಕೂಡು ಕುಟುಂಬದಲ್ಲಿ 3ನೇಯವಳಾಗಿ ಜನಿಸಿದವಳು. ಅಲ್ಲಿ ಕೂಡ ಬಡತನವೇ ಸೈ!, ಅದು ಹೆಣ್ಣು “ಭಾರ” ಎನ್ನುವಂತ ಕಾಲ. ಒಂದೇ ಜೊತೆ ಬಟ್ಟೆಯನ್ನು ಒಬ್ಬರಿಂದೊಬ್ಬರಿಗೆ ಬದಲಾಯಿಸಿ ಮತ್ತೊಮ್ಮೆ ಧರಿಸುವಂತ ಸಂದರ್ಭ,ಆದರೂ ಹೆಸರಿಗೆ ದೊಡ್ದ ಮನೆತನವದು. ಆ ಕುಟುಂಬದಲ್ಲಿ ನಾಲ್ವರು ಗಂಡು ಹಾಗೂ ಐವರು ಹೆಣ್ಣು ಮಕ್ಕಳು. ಒಂದು ಬಡ ಕುಟುಂಬದಲ್ಲಿ ಅವರ ಜೀವನ ಗುರಿಯೇ ಹೆಣ್ಣು ಮಕ್ಕಳ ಮದುವೆ ಮಾಡಿ ಕೈ ತೊಳೆದುಕೊಳ್ಳುವುದು, ಮನೆ ನಡಿಸುವುದು ಎಷ್ಟೇ ಕಷ್ಟವಾಗಿಯೇ ಇದ್ದರೂ ಮದುವೆ ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕಳುಹಿಸಿದರೆ ಸಾಕು ಎಂಬಂತ ಕಾಲ ,ಹಾಗೋ ಹೀಗೋ ಆಕೆಗೆ ಮದುವೆಯನ್ನಮಾಡಿದರು.

ಕಾಲಿಟ್ಟ ಮನೆಯಲ್ಲಿ ಕೂಡಾ ಅಷ್ಟೇ ತುಂಬು ಕುಟುಂಬ, ಬಡತನದ ಛಾಪು ಹೇರಳವಾಗೇ ಇತ್ತು!.ಹೇಗೊ ಇನ್ನು “ಅಂತರಪಟದಾಚೆ ನಿಂತ ನಲ್ಲನೇ ಜೀವನದ ಅರ್ಥ”, ಆತ ಕಪ್ಪಾಗಿರಲಿ, ಕಳ್ಳನಾಗಿರಲಿ,ಕುಬ್ಜನೇ ಆಗಿರಲಿ, ಮೃಗವೇ ಆಗಿರಲಿ ಆತನೇ ತನ್ನ ತನು ಮನದ ಅರ್ಧಾಂಗ ಎನ್ನುವುದನ್ನ ದೃಢವಾಗಿ ನಂಬಿದ್ದಳಾಕೆ. ಪ್ರತೀ ಹೆಣ್ಣಿಗೂ ಗಂಡನೊಂದಿಗೆ ಬೆಸೆದ ಬಾಂಧವ್ಯ ಎಷ್ಟೊಂದು ಅವಿನಾಭಾವವೆಂದರೆ!, ಆತನಾದರೂ ಆಕೆ ಸತ್ತರೆ ಇನ್ನೊಬ್ಬಳನ್ನ ಆರಾಮಾಗಿ ವರಿಸಬಲ್ಲ ಆದರೆ ಆಕೆಗೆ ಅದು ಸೂಜಿಗಳನ್ನು ನುಂಗುವಷ್ಟು ಕಷ್ಟ. ಈ ಕೂಡು ಕುಟುಂಬದಲ್ಲಿ ಹೊಂದಿಕೊಳ್ಳಲು ಆಕೆಗೆ ಅಂತೇನೂ ಕಷ್ಟವಾಗಲಿಲ್ಲ , ಆಕೆ ನೀಳವಾದ ಕೂದಲುಳ್ಳವಳು, ಸಲ್ಪ ಉಬ್ಬು ಹಲ್ಲು ಬಾಸಿಂಗದ ಸುಳಿ ಹೊತ್ತವಳು, ಅಂದದ ರಂಗೋಲಿ ಎಳೆವವಳು,ರೂಪಸಿ ಅಲ್ಲದಿದ್ದರೂ , ಚೆಂದವೇ ಇದ್ದವಳು,!..

ಈಗಿನಂಗೆ ಯಾವ ಫೋನೂ ಆಗ ಲಭ್ಯವಿರಲಿಲ್ಲ ಹಾಗಾಗಿ ಸಂಬಂಧಗಳ ಸಂತಸ ಅನು ದಿನ ಹೊಸತರಂತೆ ಇರುತ್ತಿತ್ತು!, ಅವಳು ಎಲ್ಲಾ ಕೆಲಸಗಳನ್ನೂ ಸಲೀಸಾಗಿ ಮಾಡುತ್ತಿದ್ದವಳು ಆದರೆ ಸಲ್ಪ ಕೋಪಿಷ್ಟೆ ಆದರೂ ಅಂತೇನೂ ತೊಂದರೆ ಇಲ್ಲ!.ಆಕೆಯ ದಿನಚರಿ ಪುಸ್ತಕ ಅವಳ ಗಂಡನೇ ಆಗಿರುತ್ತಿದ್ದ!. ಅದು ಎಷ್ಟು ಮುಗ್ಧ ಪ್ರೀತಿಯೆಂದರೆ ಆಕೆಯ ಎಲ್ಲಾ ಮಾತುಗಳಿಗೂ ಅವನು ಹೂ ಗೊಡುತ್ತಿದ್ದ, ನಳ ದಮಯಂತಿಯರಂತೆ ಅನ್ಯೋನ್ಯತೆ. ಅವನೂ ಕೂಡಾ ಅತೀ ಮುಗ್ಧ ಪ್ರೌಢ ದೇಹದಲ್ಲಿ ಮಗುವಿನ ಆತ್ಮ ಅಡಿಗಿದಂತೆ. ಗಂಡನಲ್ಲಿ ಎಂದೂ ಹಠ ಮಾಡಿದವಳಲ್ಲ. ಅದೋ ಕೂಡು ಕುಟುಂಬ ಬೇರೆ ಹಾಗಾಗಿ ಕೆಲಸಗಳು ಹಂಚಿಕೆಯಾಗಿರುತ್ತಿದ್ದವು!, ಮಾಡಲೇ ಬೇಕಾದ ಅನಿವಾರ್ಯತೆ ಇರುತ್ತಿತ್ತು. ಲಗ್ನವಾಗಿ ಒಂದು ವರ್ಷವಾಗುವಾಗಲೇ ಆ ದಂಪತಿಗಳಿಗೆ ಗಂಡು ಮಗುವನ್ನ ಮಡಿಲಿಗೆ ನೀಡಿದ ಪರಮಾತ್ಮ!..ಈ ಸಂತಸದ ಬೆನ್ನಲ್ಲೇ ಮತ್ತೊಂದು ಊಡುಗೊರೆಯಂತೆ ಹೆಣ್ಣು ಮಗುವೂ ಜನಿಸಿತು.

ಕಾಲ ನಡೆಯುತ್ತಿತ್ತು ಹೀಗೆ ಒಮ್ಮೆ ಒಂದು ದಿನ ಆಕೆ ಮಗುವಿಗೆ ಹಾಲುಣಿಸುತ್ತಾ ಇದ್ದಂತೆ ಜೋರು ಜೋರು ದನಿಯಲ್ಲಿನ ಮಾತುಕತೆ ಆಕೆಯ ಕಿವಿಗೆ ಬಿತ್ತು, ಏನೋ ಆಯಿತೆಂಬ ತರಾ ತುರಿಯಲ್ಲಿ ಮಗುವ ಮಲಗಿಸಿದ ಆಕೆ ಹಾಗೇ ಅಲ್ಲಿಗೆ ಹೋದಳು. ಸಲ್ಪ ದೂರದಲಿ ಬಾಗಿಲ ಬಳಿ ನಿಂತು ನೋಡುತ್ತಿದ್ದಳು, ಮಾತಿನ ಚಕಮಕಿಯಲ್ಲಿದ್ದ ಇಬ್ಬರಲ್ಲೊಬ್ಬರು ಬಾಗಿಲನ್ನ ತಿಳಿಯದೇ ತಳ್ಳಿದಾಗ ಮರುಕ್ಷಣ ಬಾಗಿಲು ಆಕೆಯ ಸ್ತನದ ಮೇಲೆ ರಬಸದಿ ಬಂದು ಬಡಿಯಿತು!, ಒಮ್ಮೆಲೇ ಜಲ್ಮ ಹೋದಂತಾಗಿ ಮನದಲ್ಲೇ ಅರಚಿದಳು.. ಮಾರನೇ ದಿನ ಸರಿಯಾದೀತೆಂದು ಸುಮ್ಮನಾಗಿಬಿಟ್ಟಳು, ಆದರೆ ಆಗಲೇ ಅದೇ ಭಾಗದಲ್ಲಿ ಹೆಪ್ಪುಗಟ್ಟಿದ ರಕ್ತ ತನ್ನ ಕೆಲಸ ಮಾಡಾಲಾರಂಭಿಸಿತ್ತು!.

ಹೀಗೆ ಆ ನೋವು ಆಕೆಯನ್ನು ಸೀಳುತ್ತಿತ್ತು, ಹೇಳಿಕೊಳ್ಳಲೂ ಆಗದೆ ಏನಾಗುತ್ತಿದೆ ಎಂದು ತಿಳಿಯದೇ ಆಕೆ ತನ್ನ ಓರಗಿತ್ತಿಯ ಬಳಿ ಒಮ್ಮೆ ಹೇಳಿಕೊಂಡಳು,”ಅಕ್ಕಮ್ಮ!, ಎದೆ ತುಂಬಾ ನೋವು ಒಮ್ಮೊಮ್ಮೆ, ಮಗುವಿಗೆ ಹಾಲನುಣಿಸಲೂ ಕಷ್ಟವಾದಂತೆ!”.. ಆದರೆ ಏನೂ ಅರಿಯದ ಅಕ್ಕ ಇಲ್ಲ ಈ ಸಮಯದಲ್ಲಿ ಹಾಗಾಗುತ್ತೆ ಬಾಣಂತಿ ಇದ್ದಾಗ ಇದೆಲ್ಲ ಸರ್ವೇ ಸಾಮಾನ್ಯ ಎಂದಳು. ಆಗಲೂ ಆಕೆ ಹೌದೇನೋ ಎಂದು ಸುಮ್ಮನಾದಳು ದಿನೇ ದಿನೇ ವಿಪರೀತವಾದಂತೆ, ಸ್ತನದಿಂದ ಮೊಸರಿನ ಅಂಶ ಹೊರಬರುವುದನ್ನ ಗಮನಿಸಿದಾಕೆ ಭಯಗೊಂಡು ಗಂಡನಲ್ಲಿ ಹೇಳಿಕೊಂಡಳು. ಮಾರನೇ ದಿನ ಆಸ್ಪತ್ರೆಗೆ ಹೋದಾಗಲೇ ಅವರಿಗೆ ತಿಳಿದದ್ದು “ಅರ್ಭುದವೀಗ ವ್ಯಾಘ್ರವಾಗಿದೆ ಎಂದು”..

ಅಂದರೆ ಸ್ತನದ ಕ್ಯಾನ್ಸರ್ ಈಗಾಗಲೇ ಆಕೆಯನ್ನ ಅರ್ಧ ತಿಂದಿತ್ತು. “ಕ್ಯಾನ್ಸರ್ ಬಂದವ ಸತ್ತ” ಎಂಬ ಮಾತಿದ್ದ ಕಾಲವದು, ವಿಷಯಾರಗಿಸಿಕೊಳ್ಳುವ ಮೊದಲೇ ಆಕೆಯ ಕೈಯಲ್ಲಿ ಎರಡು ಮಕ್ಕಳೂ ಒಬ್ಬ ಮುಗ್ಧ ಪತಿಯೂ ಇದ್ದ!.. ಹರಡುತ್ತಲೇ ಹೋದ ಕ್ಯಾನ್ಸರ್ ಮೊದಲು ಕೈ ಹಾಕಿದ್ದೆ ಆಕೆಯ ಕೇಶಕ್ಕೆ!.. ಬಡತನ ಬೇರೆ ಇನ್ನೊಂದೆಡೆ, ಮಕ್ಕಳಿಬ್ಬರೂ ಯಾರದ್ದೋ ಕೈ ಮೇಲೆ!,. ಕುಡಿದ ನೀರೂ ಕಂಬನಿಯಾಗುತ್ತಿರುವ ಸಂದರ್ಭ. ಅದರಲ್ಲೂ ವೈದ್ಯ ನಮ್ಮಿಂದಾಗದು ಇನ್ನು ನಿಮಗೆ ಮಣಿಪಾಲೆ ಸರಿ ಎಂದರು!, ಜನರು ಒಂದೆಡೆ ಅವಳೆದುರಲ್ಲೇ “ಮಣಿಪಾಲಿಗೆ ಹೋದವ ಮಣ್ಣುಪಾಲೇ” ಎಂದು ಮಾತುಗಳಲ್ಲೇ ಆಕೆಯನ್ನ ಕಿತ್ತು ತಿನ್ನುತ್ತಿದ್ದಾರೆ.. ಖಾಯಿಲೆಗಿಂತಲೂ ಆಕೆಯನ್ನ ಚಿಂತೆಯೇ ಚಿತೆಗೇರಿಸುತ್ತಿದೆ!

ತವರಿನವರು ಬಂದು ನೋಡುವಾಗ ಆಕೆ ಕೃಶವಾಗಿದ್ದಳು, ಕೆನ್ನೆ ಮೂಳೆಗಂಟಿ ಕಣ್ಣುಗಳ ಸುತ್ತಲೂ ಕಾರ್ಮೋಡ ಕವಿದಿತ್ತು!.. ಮಣಿಪಾಲ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾರಂಭಿಸಿದರು, ಏನಾದರೂ ಚೇತರಿಕೆಯ ಮಾತೇ ಇಲ್ಲ! ಆಕೆಯ ತೋಳುಗಳು ಮಕ್ಕಳನ್ನೇ ಬಯಸಿದರೂ ಆಕೆಯ ಖಾಯಿಲೆ ಆಗಲೇ ಅವರಿಂದ ದೂರವಾಗಿಸಿತ್ತು. ಪತಿಯೂ ಪ್ರತೀ ಕ್ಷಣವೂ ತನ್ನಿಂದಾದಷ್ಟು ಸಮಯವನ್ನು ಅವಳೊಡನೇ ಕಳೆಯುತ್ತಿದ್ದ,ಆಗಲೇ ಮೂರು ಸಂವತ್ಸರಗಳು  ಸುಳಿವಿಲ್ಲದೇ ಕಳೆದರೂ ಆತನ ಎದೆಯಲ್ಲಿದ್ದ ಹೊಳಪು ಕಳೆಗುಂದಲೇ ಇಲ್ಲ. ನನ್ನಾಕೆ ಮತ್ತೊಮ್ಮೆ ನಗುತ್ತಾಳೆ ಎಲ್ಲವೂ ಮೊದಲಿನಂತೆ ಆದೀತೆಂಬ ಹಂಬಲ ಅವನಲ್ಲಿ, ಆತ ಮಾಡಿದ್ದ ಹರಕೆಗಳೆಷ್ಟೋ!, ಕೈ ಮುಗಿದ ಕಲ್ಹೃದಯದ ದೇವರುಗಳೆಷ್ಟೋ..

ಇನ್ನಾಕೆಯ ಜೀವ ದೇವರದ್ದು ಎಂದು ವೈದ್ಯರೂ ಕೈಚೆಲ್ಲಿ ಕುಳಿತಾಗ, ಮತ್ತೆ ಮರಳಿ ಆಕೆಯನ್ನು ತವರಿಗೆ ವೊಯ್ಯುವಂತೆ ಮಾತಾಯಿತು. ಇಲ್ಲಿ ಗಂಡನ ಮನೆಯಲ್ಲಿ ಕೂಡು ಕುಟುಂಬ ಬೇರೆಯಾಗಲೇ ಬೇಕೆಂಬ ವಿವಾದದ ಕಳ್ಳಿಗಿಡ ಬೇರೂರಿತ್ತು, ಆಕೆಯ ತವರಿನವರು ಬಂದು ಅಂಗಲಾಚಿದರು ಇನ್ನು ಕೇವಲ 6 ತಿಂಗಳಷ್ಟೇ ಆಕೆ ಹೊರಡುತ್ತಾಳೆ ದಯವಿಟ್ಟು ಇಂತಾ ಸಮಯದಲ್ಲಿ ಬೇರೆಯಾಗುವ  ಮಾತುಬೇಡವೆಂದು. ಕಿವುಡರಂತೆ ಮಾನವೀಯತೆ ಕಳೆದುಕೊಂಡ ಮೃಗರು ಕೇಳಬೇಕಲ್ಲ!?..

ಇನ್ನೊಂದೆಡೆ ತವರಲ್ಲಿ ಗಂಡನನ್ನು ಮಕ್ಕಳನ್ನೂ ತೊರೆದು ದಿನವೂ ಸಾಯುತ್ತಿದ್ದಳು ಆಕೆ!, ಆತನೋ ಅಸಹಾಯಕ ಸ್ಥಿತಿಯಲ್ಲಿ ಇದ್ದವ ಅರ್ಧ ದೇಹವೇ ಕೊಳೆಯುತ್ತಿದೆ ಎಂಬ ತೀವ್ರ ನೋವು ಎದೆಯಲ್ಲಿ!, ಇನ್ನೊಂದೆಡೆ “ನೀನೇ ಸರಿ ಇಲ್ಲ” ಎಂದು ಸುತ್ತಿಗೆ ಏಟಿನಂತ ಮಾತುಗಳು ಬೇರೆ!. ಅನ್ಯಾಯದ ವಿರುದ್ಧ ಮಾತನಾಡಲೂ ಬಾರದಂತ ಮುಗ್ಧ ಅವನು, ಒಂದೇ ದೇಹವಾಗಿದ್ದ ಮಡದಿಯ ಮೊಗವ ನೋಡಲೂ ಅವಕಾಶವಿಲ್ಲ!,ಅಲ್ಲಿ ಹೋದರೆ ಅವರು ಇಲ್ಲಿ ಬಂದರೆ ಇವರು ನಿಂದಿಸುತ್ತಲೇ ಇದ್ದಾರೆ. ಆತನೀಗ ತನ್ನ ಯೋಚನೆಗಳನ್ನು ತಾನೇ ನೋಡಲಾಗದಂತಾಗಿದ್ದಾನೆ ಆತ ತಿರುಗಿ ಏನನ್ನೂ ಹೇಳದೇ ಸುಮ್ಮನೇ ಕೂತು ಬಿಡುತ್ತಿದ್ದ..

ಹೆಂಡತಿಯ ಮೊಗ ನೋಡಲು ಬೆಳಿಗ್ಗೆ ಹೊತ್ತು ಮೂಡುವ ಮೊದಲೇ ಎದ್ದು ಎಲ್ಲ ಕೆಲಸಗಳ ಪೂರೈಸಿ ಆ ನಲ್ವತ್ತು ಮೈಲಿ ನಡೆದು ಉಸಿರುತ್ತಾ ಅವರ ಮನೆ ಬಂದಮೇಲೆ ಆತ ನಿಲ್ಲುತ್ತಿದ್ದ. ಜಗುಲಿಯ ಮೇಲೆ ಕುಳಿತಾಗ ಅವನ ಕಂಗಳು ಆಕೆಯನ್ನೇ ಹುಡುಕುತ್ತಾ ಇರುತ್ತಿದ್ದಾಗ!, ಪೂರ್ತಿ ಸೊರಗಿ ಶಕ್ತಿ ಕಳೆದುಕೊಂಡ ಆಕೆ ಅವನ ದನಿಯ ಕೇಳಿ, ಚೈತನ್ಯ ತುಂಬಿಸಿಕೊಂಡು,ಕಣ್ದುಂಬಿಕೊಂಡು ತೆವಳುತ್ತಾ ತೆವಳುತ್ತಾ ಬಂದು ಆ ಬಾಗಿಲ ಬಳಿಯಲಿದ್ದ ಏಣಿ ಕಾಲಲ್ಲಿ ಕುಳಿತು ಆತನನ್ನೇ ದಿಟ್ಟಿಸಿ ನೋಡುತ್ತಾ ಕುಳಿತಾಗ ಅವಳ ಅನುಮತಿಯ ಕೇಳದೆ ಕಣ್ಹನಿಗಳು ಕಲ್ಲಾಗಿ ಗಲ್ಲದವರೆಗೂ ಇಳಿಯುತ್ತಿದ್ದವು!.  ಇತ್ತ ಈತ ‘ಮನೆಗೆ ಬಂದು ಬಿಡೇ ಎನ್ನೋಣವೆಂದರೆ’ ನನ್ನ ಕೈಯಲ್ಲಿ ಬಿಡಿಗಾಸೂ ಇಲ್ಲವಲ್ಲ, ನಲ್ಲೇ! ದುರಾದೃಷ್ಟದ ಇನ್ನೊಂದು ಹೆಸರೇ ನಾನು ಎಂದು ಮನದಲ್ಲೇ ದುಃಖ್ಕಿಯಾಗಿದ್ದಾನೆ..!..ಇಬ್ಬರಲ್ಲೂ ತಬ್ಬಿ ಅಳುವಷ್ಟು ಆಳತೆ!, ಒಬ್ಬರೆದುರಲ್ಲಿ ಒಬ್ಬರು ಕುಳಿತು ತಲ್ಲೀನರಾಗುವಷ್ಟು ಮೌನತೆ ನೀಳವಾಗಿ ಅಡಗಿದೆ ಆದರೆ ಇಬ್ಬರೂ ಮೌನಿಗಳು!..

ಆಕೆಯ ಇಡೀ ದೇಹವನ್ನೇ ಆವರಿಸಿದ ಕ್ಯಾನ್ಸರ್ ಸಾವಿಗೂ ಆಮಂತ್ರಣ ನೀಡಿದೆ!. ಈಗ ಆಕೆ ಮತ್ತೆ ಮಗುವಾಗಿದ್ದಾಳೆ ,ಹಠ ಮಾಡುತ್ತಾಳೆ!, ಒಮ್ಮೆ ನಗುತ್ತಾಳೆ!, ಮತ್ತೊಮ್ಮೆ ಅಳುತ್ತಾಳೆ, ಮಗದೊಮ್ಮೆ ಮೌನಿಯಾಗಿ ಆಳ ಆಲೋಚನೆಯಲ್ಲಿ ಮುಳುಗುತ್ತಾಳೆ. ಅಷ್ಟೂ ದಿನದ ಸಂಸಾರದಲ್ಲಿ ಒಂದು ಮಲ್ಲಿಗೆ ಹೂವನ್ನೂ ಬಯಸದವಳು,” ರೀ!,ನಂಗೊಂದು ಸೀರೆ ಕೊಡ್ಸೀ”.. ಎಂದು ಅವನನ್ನು ದಿಟ್ಟಿಸಿ ಬೇಡುತ್ತಿದ್ದಳು!,ಆತ ಎಂದೂ ಕಣ್ಣಿಂದ ನೀರ ನೆಲಕ್ಕುರುಳಿಸದವ ಅಂದು ಪೂರ್ತಿ ನೇತ್ರಾವತಿಯನ್ನೇ ಹರಿಸಿದ್ದಿದೆ!. ಒಂದೆಡೆ ಔಷಧಿಗೆ ಹಣವೆಂಬ ಕಾಗದವನ್ನು ಬೇಡಲೇ ಇಲ್ಲ ಸೀರೆ ತರಲೇ ಎಂಬಾತನ ನೋವಿನ ಬಿಸಿಯುಸಿರು ಅವನನ್ನೇ ಸುಡುತ್ತಿದೆ..

ಆಕೆಯ ದೇಹ ದೀಪದ ಬತ್ತಿಯು ಉರಿದು ಉರಿದು ನಂದಲು ಇನ್ನೇನು ಕೆಲವು ದಿನಗಳಿರುವಾಗ ಆಕೆ ಮಗುವಂತೆ ನಾನು ನನ್ನ ಮನೆಗೆ ಹೋಗಲೇಬೇಕೆಂದು ಹಠ ಮಾಡಿದಳು, ಇರುವಷ್ಟು ದಿನವಾದರೂ ನೆಮ್ಮದಿಯಿಂದಿರಲಿ ಎಂದು ಆಕೆಯನ್ನು ಕರೆದೊಯ್ದ ಆತ, ಈಗಾಗಲೇ ಕೂಡು ಕುಟುಂಬ ಒಡೆದಿದೆ!.

ಅದು ಗದ್ದೆ ನಾಟಿ ಸಮಯ ಎಲ್ಲರೂ ಗದ್ದೆಯಿಂದ ಬಂದು ಉಂಡು ಮತ್ತೆ ಮರಳುವ ಹೊತ್ತು, ಈಕೆಯೂ ಕೂಡಾ ಸಲ್ಪೆ ಸಲ್ಪ ಅನ್ನ ನುಂಗಿದ್ದಳು ಹಾಗೂ ಬಾಗಿಲಲ್ಲೇ ಕುಳಿತು ತನ್ನ ದುರಾದೃಷ್ಟತೆಯನ್ನು ಅನುಭವಿಸುತ್ತಾ ಕುಳಿತಿದ್ದಳು, ಗಂಡನನ್ನು ನೋಡಿ “ರೀ, ನಾನೂ ಹೊರಗಡೆ ಹೋಗ್ಬೇಕು ಕರ್ಕೊಂಡು ಹೋಗಿ” ಎಂದಳಾಕೆ!. ಅವಳನ್ನು ಕೈಮೇಲೆ ತನ್ನ ಮಗುವಂತೆ ಎತ್ತಿಕೊಂಡು ಆತ ಕರೆದೊಯ್ದ!, ಆಕೆಗೆ ಕೂರಲೂ ಸಾಧ್ಯವಾಗುತ್ತಿಲ್ಲ ಆದರೆ ಆತನಿಗೀಗ ಅವಳೊಂದು ಮಗುವಂತೆ ಕಾಣುತ್ತಿದ್ದಾಳೆ. ಅವನಿಗೆ ಅವಳ ಮೇಲಿದ್ದ ಅನಂತ ಪ್ರೇಮ ಅವಳ ದೇಹದಮೇಲಲ್ಲ, ಆಕೆಯ ಮೌನದೊಳಗಿದ್ದ ಮಾತಿನ ಮೇಲೆ!.. ಆತ ಅವಳೊಂದಿಗಿದ್ದು ಆಕೆಯ ಮಲ ಮೂತ್ರವನ್ನೂ ತೊಳೆದು ಮತ್ತೊಮ್ಮೆ ಕೈ ಮೇಲೆ ಹೊತ್ತು ಹೊಸ್ತಿಲ ಬಳಿ ಬರುವಾಗಾಗಲೇ ಆಕೆ ಅವನ ಕಣ್ಣುಗಳನ್ನೇ ನೋಡುತ್ತಾ ಮೌನವಾಗಿದ್ದಾಳೆ ಆಕೆ!..

ಒಮ್ಮೆಲೇ ಆತನ ಆರ್ತ ಕೂಗು ಜವನನ್ನೂ ನಡುಗಿಸಿತು!, ಅಂದು ಅವಳೊಂದಿಗೆ ಹೊಸ್ತಿಲ ದಾಟಿದ ಆತ ಇಂದು ಆಕೆಯ ಪಾರ್ಥೀವ ಶರೀರವನ್ನು ಹಿಡಿದು ಹೊಸ್ತಿಲಲ್ಲೇ ನಿಂತಿದ್ದಾನೆ!. ಈಗ ಆತನ ತಲೆಯಲ್ಲಿ ಕೊನೆಗೂ ಅವಳು ಕೇಳಿದ್ದ ಸೀರೆ ಅವಳಿಗಾಗಲೇ ಇಲ್ಲವಲ್ಲ ಎನ್ನುವ ಆಳ ಗಾಯದ ನೋವು!,ಅವನ ಕಣ್ಣೀರು ಮೆಲ್ಲನೆ ಜಾರಿ ಆಕೆಯ ತುಟಿಗಳ ಮೇಲೆ ಬೀಳುತ್ತಿದೆ..ಇತ್ತ ಈಕೆ ಕರ್ಮ ಹರಿದುಕೊಂಡು, ದೇಹದಿಂದ ಹೊರಗೆ ನಿಂತು!. ರೀ ಇಲ್ನೋಡಿ ನನಗೆ ಈಗ ನೋವುಗಳೇ ಇಲ್ಲ, ನಾನು ಮನಸ್ಪೂರ್ತಿಯಾಗಿ ನಗುತ್ತಿದ್ದೇನೆ ಆದರೆ ನಿಮಗೇಕೆ ಇಷ್ಟು ನೋವು ಎಂದು ಪ್ರಶ್ನಿಸುತ್ತಾ ನಿಂತಿದ್ದಾಳೆ!..ಯಮನೂ ಭೀಕರ ಮೌನದ ಏಟಿಗೆ ಬಲಿಯಾಗಿ ನಿಂತಿದ್ದಾನೆ.. ಆಕೆ ತನ್ನ ಪತಿಯ ಕೈಯಲ್ಲೇ ಮುತ್ತೈದೆಯಾಗಿ ತೆರಳಿದ್ದರಿಂದ ಆನಂದವಾಗಿ ನಗುತ್ತಿದ್ದಾಳೆ…! ಈಗ ಎಲ್ಲವೂ ಧೋ! ಎಂದು ಸುರಿದ ಮಳೆ ನಿಂತಾಗ ಬರುವ ತಣಿವಿನ ಭಾವದಲ್ಲಿದೆ..ಎಲ್ಲವೂ ಮುಗಿದಿದೆ…

ನಾ ಕಂಡಂತೆ ನೈಜ ಪ್ರೇಮವೂ ಹೀಗೇ ದೇಹದಲ್ಲಿ ಅಡಗಿರದೇ ಆತ್ಮದಲ್ಲೇ ಅಡಗಿರುತ್ತದೆ.. ಮೆಸೇಜ್,ಫೋನ್ ನಲ್ಲೇ ಪ್ರೀತಿಯ ಹುಡುಕುವ ಈ ಕಾಲದಲ್ಲಿ ನನಗೆ ಕಂಡ ನಿತ್ಯ ಪ್ರೇಮವೇ ಇದು!..ನನ್ನ ಸುತ್ತಲಿನದ್ದೆ

ಕವನ ಕೆ,

ದ್ವಿತೀಯ  ಬಿ ಎ, ವಿದ್ಯಾರ್ಥಿನಿ,

ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜುಶಿವಮೊಗ್ಗ

ಅಂಕೆಯಿಲ್ಲದ ಲಂಕೇಶನ ಕದಡಿದ ಮನಸು

ನೀನಾಸಂ ನಮ್ಮ ಕೈ ಗಿತ್ತ ಬ್ಯಾಗ್ ನಲ್ಲಿದ್ದ ಎಲ್ಲವನ್ನು ನೋಡುತ್ತಾ ಬಂದ ನಮಗೆ ಸಿಕ್ಕಿದ್ದೆ “ದಶಾನನ ಸ್ವಪ್ನ ಸಿದ್ಧಿ” ಎಂಬ ಶೀರ್ಷಿಕೆಯ ಹಸ್ತಪ್ರತಿ (ಭ್ರೋಚರ್). ದಶಾನನ ಸ್ವಪ್ನಿಸಿದ್ದಿ ಕುವೆಂಪು ರಚಿತಾ ರಾಮಾಯಣ ದರ್ಶನ೦

ಕೃತಿಯಿಂದ ಆಯ್ದ ರಂಗ ಪ್ರಯೋಗ. ಅದನ್ನು ನೋಡಿದ ನಮ್ಮ ಮೊದಲ ಅನಿಸಿಕೆ “ಅದು ಸರಳ ರಗಳೆಯಲ್ಲಿರುವ ಕೃತಿ ನಮಗೆ ಅರ್ಥವಾಗುವುದು ಸ್ವಲ್ಪ ಕಷ್ಟವೇ!! ಎಂದು. ಆದರೆ ಅದರ ರಂಗ ಪ್ರಯೋಗವನ್ನು ನೋಡುತ್ತಾ ಹೋದ ನಮಗೆ ಕೊನೆಗೆ ಆದ ಅನುಭವವೇ ಬೇರೆ!!.

ಆಧುನಿಕ ಕನ್ನಡ ಸಾಹಿತ್ಯದ ಮಹೋನ್ನತ ಕೃತಿ.

ಮಹಾಕಾವ್ಯಗಳ ರಚನೆಯ ಯುಗ ಮುಗಿದೆ ಹೋಯಿತು ಎನ್ನುವಾಗಲೇ ಸೃಷ್ಟಿಯಾದ ಆಧುನಿಕ ಮಹಾಕಾವ್ಯ “ಶ್ರೀ ರಾಮಾಯಣ ದರ್ಶನ0”. ಕುವೆಂಪುರವರ ಕಿರೀಟಕ್ಕೆ ಜ್ಞಾನಪೀಠವೆಂಬ ವಜ್ರವನ್ನು ಕೊಟ್ಟ ಕೃತಿ ಇದು.

“ದಶಾನನ ಸ್ವಪ್ನ ಸಿದ್ಧಿ” ಇಲ್ಲಿ ರಾವಣನು ನಮಗೆ ತೋರುವ ಬಗ್ಗೆ ಅದ್ಭುತ. ಅವನ ಮನಸ್ಸಿನ ಲಾಗುವ  ವಿಭಿನ್ನ ಮಾರ್ಪಾಡುಗಳನ್ನು ಜಗದ ಮುಂದೆ ಇಡುವ ಪ್ರಯತ್ನ ಕವಿಯದ್ದಾದರೆ ಅದನ್ನು ರಂಗ ಪ್ರಯೋಗ ಮಾಡಿ ಎಲ್ಲರ ಕಣ್ಣುಗಳಿಗೆ ಕಟ್ಟುವಂತೆ ಮಾಡಿದ್ದು ನಿರ್ದೇಶಕರಾದ ಮಂಜು ಕೊಡಗು, ಮತ್ತು ತಂಡ.

ಕಥೆ ಹೀಗಿದೆ: ರಾಮನ ಸೈನ್ಯವು ಲಂಕಾಧಿನಾಥನ ಸೈನ್ಯವನ್ನು ಸಂಪೂರ್ಣ ನಾಶ ಮಾಡಿದೆ ಕೋಪಗೊಂಡ ರಾವಣನು ಸಂಕಲ್ಪ ಸಿದ್ಧಿಯಾಗಿ ಕಾಳಿಕಾದೇವಿಯನ್ನು ಪೂಜಿಸುತ್ತಾನೆ ವರ ನೀಡಲು ತಡ ಮಾಡಿದ ಕಾಳಿಕಾ ದೇವಿಗೆ  ತನ್ನ ತಲೆಯನ್ನೇ ಅರ್ಪಿಸಲು ಸಿದ್ಧನಾಗುತ್ತಾನೆ ಆಗ ಪ್ರಕೃತಿ ಒಂದೊಮ್ಮೆ ನಡಗುತ್ತದೆ. ಅವನು ಸ್ವಪ್ನ ಸಮಾಧಿಗೆ ಉರುಳುತ್ತಾನೆ. ಆಗ ಲಂಕಾಲಕ್ಷ್ಮೀಯು ಗೋಚರಳಾಗುತ್ತಾಳೆ, ಅವಳ ಪಾಡನ್ನು ನೋಡಿದ ರಾವಣ ಯುದ್ಧದಲ್ಲಿ ತಾನೊಬ್ಬನೇ ಸಮರಕ್ಕಿಳಿಯುವೆ ಎಂದು ಭಾಷೆ ಕೊಡುತ್ತಾನೆ. ನಂತರ ಅಲ್ಲಿ ಕೆಲವು ಮಾರ್ಪಾಡುಗಳಗೊಂಡು ದುರ್ಗೆ ಕಾಣಿ ಸುತ್ತಾಳೆ ಮಗುವಿನಂತೆ ಅಳುತ್ತಾ ಕಾಲಿಗೆರಗುತ್ತಾನೆ. ರಾಮ ಸೋಲುವಂತೆ ಸೀತೆವಶವಾಗುವಂತೆ  ಮಾಡೆ೦ದು ಕೋರುತ್ತಾನೆ. “ಸೀತೆ ಆಲಂಗಿಸುವಳು ಮತ್ತು ರಾಮನ ಸೋಲಿಸುವೆ -ಪುನರ್ಜನ್ಮದಲ್ಲಿ” ಅಂಥ ವರವಿತ್ತು ಮಾಯವಾಗುತ್ತಾಳೆ. ನಂತರ ಅವನಿಗೆ ದೇವತಾ ವಿಗ್ರಹದ ಬದಲು ಕೆನೆವ ಕುದುರೆಯೊಂದು ರೂಪತಾಳಿ ರಾವಣನ  ಬೆನ್ನಟ್ಟಿ ಬರುತ್ತದೆ. ರಾವಣನಿಗೆ ಸೀತೆಯ ಮೇಲಿದ್ದ ಅಧಮ್ಯವಾದ ಕಾಮ ರುಚಿ ಸಂಪೂರ್ಣವಾಗಿ ವಿನಾಶವಾಗುತ್ತದೆ. ಹೀಗೆ ಮುಂದುವರೆಯುತ್ತಾ ನದಿಜಲವೆಲ್ಲ  ನೆತ್ತರಾಗಿ, ಅವನು ಏರಿದ ದೋಣಿ ತಲೆ ಕೆಳಗಾಗಿ , ಅವನು ತನ್ನ ತಮ್ಮನಾದ ಕುಂಭಕರ್ಣನನ್ನು ಕಂಡು ಕೂಗುತ್ತಾನೆ ಇಬ್ಬರೂ ಹೊಳೆಯೊಡನೆ ಹೋರಾಡಿ ದಡವನ್ನು ಸೇರುತ್ತಾರೆ, ಇದ್ದಕ್ಕಿದ್ದ ಹಾಗೆ ತಾವಿಬ್ಬರು ಶಿಶುಗಳಂತಾಗಿದ್ದಾರೆ, ಅವರಿಬ್ಬರೂ ಆಗ ತಾನೆ ಹುಟ್ಟಿದ ಮಕ್ಕಳಂತೆ ಅಳತೊಡಗಿದಾಗ ಸೀತೆ ಅಲ್ಲಿಗೆ ಬಂದು ಮಕ್ಕಳನ್ನು ಎತ್ತಿ ಮುದ್ದಾಡುತ್ತಾಳೆ. ಇಲ್ಲಿ ರಾವಣನ ಮನಸ್ಸು ಸೀತೆಯ ಬಗೆಗಿನ ಮಾತೃ ಭಾವದಲ್ಲಿ ಉದಾತ್ತವಾಗುತ್ತದೆ.

ಈ ಸ್ವಪ್ನ ವಿಸ್ಮಯದಿಂದ ಹೊರಬಂದ ರಾವಣನು ಮಂಡೋದರಿಯನ್ನ ಕರೆಯುತ್ತಾನೆ ಆಗ ಬದಲಾದ ರಾವಣನು ಮಂಡೋದರಿಗೆ ಕಾಣುತ್ತಾನೆ. ತನಗಾದ ಅನುಭವವನ್ನು ಮಂಡೋದರಿಯ ಮುಂದೆ ವ್ಯಕ್ತಪಡಿಸುತ್ತಾನೆ. ಸೀತೆಯಲ್ಲಿ ತನಗಿರುವ ಈಗಿನ ಭಾವವನ್ನು ತಿಳಿಸುತ್ತಾನೆ. ಅವನ ಆತ್ಮ ಮನಸ್ಸು ದೈವಿಕ ನೆಲೆಯಲ್ಲಿ ನಿಲ್ಲುತ್ತದೆ.” ನನಗೆ ರಾಮನ ಕೊಲ್ಲುವುದಲ್ಲ ಗುರಿ ಸೀತಾಶುಭೋದಯಕೆ ಗೆಲ್ಲುವುದಲ್ಲದೆ ಕೊಲ್ಲುವುದಲ್ಲ”. ಮಂಡೋದರಿಯನ್ನ ಬೀಳ್ಕೊಡುತ್ತಾನೆ ಅಂದಿನ ಬೆಳಗು ರಾವಣನ ಪಾಲಿಗೆ ಜೇನಿನ ಮಳೆ ಸುರಿದಂತೆ, ಸೊಬಗಾಗಿ ಕಾಣುತ್ತದೆ. ನಾಳ ನಾಳದಲ್ಲಿ ಅಮೃತತ್ವ ಪಸರಿಸುತ್ತದೆ.

ಕಥೆ ಹೀಗಿದ್ದರೆ ಇದರ ರಂಗ ಪ್ರಯೋಗ ನೋಡುಗರನ್ನು ಒಂದೊಮ್ಮೆ ಚಕಿತವು , ಮೂಕವಿಸ್ಮಿತವು ಮಾಡುವುದರಲ್ಲಿ ಎರಡು ಮಾತಿಲ್ಲ. ಇದರ ವಿನ್ಯಾಸ ನಿರ್ದೇಶನ ಮಂಜು ಕೊಡಗುರವರದ್ದು ಇದರ ಪ್ರಯೋಗವನ್ನು ಇಬ್ಬರು ವೃತ್ತಿಪರ ನಟ ಅವಿನಾಶ್ ರೈ ಮತ್ತು ನಟಿ ಶ್ವೇತಾ ಅರೆಹೊಳೆಯವರದ್ದು. ಅವರು ಮಾಡಿದ ಅಭಿನಯ ನನ್ನ ಕಣ್ಣುಗಳಲ್ಲಿ ಇನ್ನು ಕಟ್ಟಿದ ಹಾಗೆ ಇದೆ. ಎಲ್ಲಾ ಪಾತ್ರಗಳು ಇವರಿಬ್ಬರೇ ಅತ್ಯಂತ ನಾಜೂಕಾಗಿ ಮತ್ತು ಆಕರ್ಷಕವಾಗಿ ಮಾಡಿ ಎಲ್ಲರ ಗಮನವನ್ನು ಸೆಳೆಯುತ್ತಾರೆ.

 

ರಾವಣನ ಮನಸ್ಸಿನಲ್ಲಾಗುವ ವಿಭಿನ್ನ ರೀತಿಯ ಮಾರ್ಪಾಡುಗಳನ್ನು  ಒಮ್ಮೆ ಕೋಪ, ಒಮ್ಮೆ ಅಪಾರಭಕ್ತಿ, ಒಮ್ಮೆ ಮಗು ಹೀಗೆ ಹಲವಾರು ರೀತಿಯ ಭಾವಗಳನ್ನು , ಪ್ರತಿ ವ್ಯಕ್ತಿಯು ಬೆಳೆಯಬಲ್ಲ ಬದಲಾಗಬಲ್ಲ ಎಂಬ ಕುವೆಂಪುರವರ ಆಶಯವನ್ನು ತಮ್ಮ ಅಭಿನಯದ ಮೂಲಕ ಮತ್ತು ಕಂಠದ ಮಾರ್ಪಾಡುಗಳ ಮೂಲಕ ನಮ್ಮೆದುರಿಗೆ ಇರಿಸಿದ ರೀತಿ ಅದ್ಭುತ.

 

ಇನ್ನು ಕಾಳಿಕಾದೇವಿ, ಲಂಕಾಲಕ್ಷ್ಮೀ, ಸೀತೆ ,ದುರ್ಗೆ, ಮಂಡೋದರಿ ಈ ಎಲ್ಲಾ ಪಾತ್ರಗಳನ್ನು ನೋಡುಗರು ಕುಳಿತಲ್ಲೇ ಅಚ್ಚರಿಯಾಗುವಂತೆ ಮಾಡಿದ ಕೀರ್ತಿ ಶ್ವೇತಾ ಅರಹೊಳೆಯರವರದ್ದು. ನನಗೆ ರೆಡಿಯಾಗೋಕೆ ಒಂದು ಗಂಟೆ ಬೇಕಪ್ಪ ಅನ್ನು ಈಗಿನ ಕಾಲದ ಹುಡುಗಿಯರಿಗೆ ಕಪಾಳ ಮೋಕ್ಷ ಮಾಡುವಂತಿದ್ದದ್ದು ಅವರು ತಯಾರಾಗಲು ತೆಗೆದುಕೊಳ್ಳುತ್ತಿದ್ದ ಸಮಯ. ನಾಟಕದಲ್ಲಿ ತಮಗೆ ನೀಡಿದ ಎಲ್ಲಾ ಪಾತ್ರಗಳನ್ನು ನಿರ್ವಹಿಸುತ್ತಾ ಒಂದೊಂದು ಪಾತ್ರಕ್ಕೂ ವಿಭಿನ್ನ ಮತ್ತು ವಿಜೃಂಭಣೆಯ ವೇಷ ಭೂಷಣಗಳನ್ನ ತೊಡಲು ಅವರು ತೆಗೆದುಕೊಳ್ಳುತ್ತಿದ್ದ ಸಮಯ ನಿಮಿಷಗಳಷ್ಟೇ!! ನಾಟಕದಲ್ಲಿ ಎಲ್ಲೂ ಕೂಡ ಲೋಪಭಾರದಂತೆ ಸಮಯಪ್ರಜ್ಞೆಯಿಂದ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ಮತ್ತು ಬಹು ಆಕರ್ಷಣೀಯವಾಗಿ ತೆರೆಯ ಮೇಲೆ ವ್ಯಕ್ತಪಡಿಸಿದರು. ಸೀತೆಯ ಪಾತ್ರವನ್ನು ಕೂಡಿಯಾಟ್ಟಮ್ ಪ್ರಕಾರದಲ್ಲಿ ವಿನ್ಯಾಸ ಮಾಡಿದ ರೀತಿ ಬಹಳ ಆಕರ್ಷಣೀಯವಾಗಿತ್ತು.

ಇದೆಲ್ಲದರ ಸೂತ್ರಧಾರಿಗಳಾದ ಮಂಜು ಕೊಡಗು ಅವರಿಗೆ ಒಂದು ಚಪ್ಪಾಳೆ ಸಲ್ಲಲೇ ಬೇಕು, ಕುವೆಂಪುರವರ ಕಾವ್ಯಗಳನ್ನು ನಾಟಕ ರೂಪದಲ್ಲಿ ತೆರೆ ಮೇಲೆ ತರುವುದು ಕಷ್ಟ ಎಂಬ ಪದಕ್ಕೆ ವಿರುದ್ಧವಾಗಿ ನಾಟಕವನ್ನು ವಿನ್ಯಾಸಗೊಳಿಸಿ , ನೋಡುಗರ ಕಣ್ಮನ ಸೆಳೆದ ಕೀರ್ತಿ ನಿರ್ದೇಶಕರುದ್ದು.

ಒಟ್ಟಿನಲ್ಲಿ ನಾಟಕವು ರಂಗಾಸಕ್ತರ ಮನಸ್ಸನ್ನು ಸೆಳೆಯುವುದರಲ್ಲಿ ಬೇರೆ ಮಾತೇ ಇಲ್ಲ!!!

ಚಿತ್ರಗಳು: ಶ್ವೇತಾ ಅರೆಹೊಳೆ ಮತ್ತು ತಂಡ

ಸಂಧ್ಯಾ ಕೆ.ಕೆ

ತೃತೀಯ ಬಿ. ಎ

ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

 

“ನೀನಾಸಮ್ ಒಂದು ಬೇರೆಯೇ ಲೋಕ”

ಮೊದಲ ದಿನ ನೀನಾಸಮ್ ಗೆ ಕಾಲಿಟ್ಟ ತಕ್ಷಣ ಮಳೆಯ ಹನಿಗಳ ಸ್ವಾಗತ ಕಂಡರಿಯದ ಸ್ವರ್ಗಕೇ ದಾರಿ ತೋರುವಂತಿತ್ತು….ಸುತ್ತಲು ಸಂಗೀತ ಮತ್ತು ನಾಟಕಗಳ ತಯಾರಿ ಕಣ್ಣ ಮಿನುಗಿಸಿ ನೋಡುವಂತೆ ಮಾಡಿತು…

ಮೊದಲ ದಿನದ ಮೊದಲನೇ  ಪರಿಚಯ ಗೋಷ್ಠಿಯ ಪ್ರಾರಂಭದ “ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ” ಹಾಡೇ ಎಲ್ಲರ ಕರ್ಣಗಳ ಅರಳಿಸಿತು ಈ ಗೋಷ್ಠಿಯು ಅದ್ಭುತದ ಜೊತೆಗೆ ಆಶ್ಚರ್ಯವನ್ನು ನೀಡಿತ್ತು.. ಏಕೆಂದರೆ ಹೆಸರಾಂತ ಬರಹಗಾರರು, ವಿಮರ್ಶಕರು,  ಡಾಕ್ಟರು, ಶಿಕ್ಷಕರು ,ನಿರ್ದೇಶಕರು ಹಾಗೂ ಕಲಾವಿದರು ಇನ್ನೂ ಅನೇಕ ವಿದ್ಯಾವಂತರು , ಜ್ಞಾನಿಗಳು ಕೂಡ ಈ ಶಿಬಿರದಲ್ಲಿದ್ದರು..ನಾವು ಮಾತ್ರ ಏನು ಅರಿಯದ ಡಿಗ್ರಿ ಎಂಬ ಬಲೆಗೆ ಸಿಲುಕಿ ಲೋಕಜ್ಞಾನದ ಸಣ್ಣ ಪರಿಚಯವಿಟ್ಟುಕೊಂಡು ಅಲ್ಲಿಗೆ ಹೋದವರು..

ದಶಾನನ ಸ್ವಪ್ನಸಿದ್ಧಿ ಕಿರುನಾಟಕ ಅಂತೂ ಪದಗಳಲಿ ವರ್ಣಿಸಲಾಗದ ಅನುಭವ‌, ಒಬ್ಬಳೇ ಹುಡುಗಿ ೫-೬ ಪಾತ್ರಗಳನ್ನು ಅಷ್ಟು ಕಡಿಮೆ ಸಮಯದಲ್ಲಿ ನಿಭಾಯಿಸಿದ್ದು ನಿಜಕ್ಕೂ ಅಚ್ಛರಿಯ ವಿಷಯ !!ಹೀಗೆ ಒಂದೊಂದು ಗೋಷ್ಠಿಗಳು ಒಂದೊಂದು ಲೋಕಕೇ ಕರೆದೊಯ್ಯುವ ದಾರಿಯಂತಿದ್ದವು. ನನ್ನ ಗುರುಗಳಾದ ಡಾ‌.ರಾಜೇಂದ್ರ ಚೆನ್ನಿ ಸರ್ ಅವರ ಗೋಷ್ಠಿಯಂತು ಮೂಡನಂಬಿಕೆಗಳ ಮೇಲೆ ಹೆಣ್ಣಿನ ಧನಿಯ ತೆರೆಯಲಾರದ ಪರದೆ ಸರಿಸಿದಂತಿತ್ತು. ನನ್ನ ಆತ್ಮಿಯರೇ ಆದ ತೇಜಶ್ರೀ ಮೇಡಂ ನಿಖರವಾದ ಮಾತುಗಳು ಪದ್ಯದ ಪೂರ್ಣ ಅರ್ಥವನ್ನು ನೀಡಿತು.

ಮಾಲತಿ-ಮಾಧವ ನಾಟಕ ಹಿಂದಿನ ಸಮಾಜದ ದೃಷ್ಟಿಕೋನದ ಜೊತೆಗೆ  ಪ್ರೀತಿಯ ಬಲೆಯಲ್ಲಿ ಬಿದ್ದ ಇಬ್ಬರು ಪ್ರೇಮಿಗಳ ಲಜ್ಜೆಯ ಭಾವವಂತೂ ರಮಣೀಯ!!! ಪ್ರೀತಿಯನ್ನು ಪಡೆದುಕೊಳ್ಳಲು ಅವರು ಮಾಡಿದ ಸಾಹಸಗಳು ವಿಕ್ಷಕರನ್ನು ಅತ್ಯುನ್ನತ ಭಾವನೆಗೆ ಕರೆದೊಯ್ಯುತ್ತಿದ್ದವು..

ಮರುದಿನದ ಮುಂಜಾವು ನನ್ನನಾ ಅರಿಯುವ ತವಕ ಸೃಷ್ಟಿಸಿದಂತಿತ್ತು..ಆ ಮಂಜಿನ ಮುಸುಕಿನಲ್ಲಿ ಅರಳಿದ ಹೂಗಳು ನನ್ನ ಜೊತೆ ಸಂಭಾಷಣೆಗಿಳಿದಿದ್ದ ಭಾವ ಅದು…

ಗೋಷ್ಠಿಗಳ ಮೇಲೆ ಗೋಷ್ಠಿಗಳು ಲೋಕದ ಎಲ್ಲ ದೃಷ್ಟಿಕೋನಗಳನ್ನು ಕಣ್ಮುಂದೆ ತರುತ್ತಿದ್ದವು.. ಪ್ರಕೃತಿಗೆ ಸಹವೋ ವಿರುದ್ಧವೋ ಎಂಬ ಸಂದೇಹ ಹೊಂದಿರುವ ಒಂದೇ ಲಿಂಗಗಳ ಸಂಬಂಧದ ಕುರಿತು ಹೇಳುವ ಬಿ-ಲವೆಡ್ ನಾಟಕ ಸಮಾಜವೇ ಎಲ್ಲ ಸಂಬಂಧಗಳಿಗೂ ವೈರಿ ಎಂಬಂತೆ ಪ್ರಸ್ತುತ ಪಡಿಸಿತ್ತು.

ಅಂಕದ ಪರದೆ ಈ ನಾಟಕ ವೃದ್ಧರ ಕುರಿತಾಗಿದ್ದು ಅವರ ಮನಸ್ಸಿನ ತಲ್ಲಣಗಳು , ಮಕ್ಕಳ ನಿರಾಕರಣೆ ಪೋಷಕರ ಮೇಲೆ ಬೀರುವ ಪರಿಣಾಮ ಎಂತದ್ದು ಹಾಗೂ ನೋವಿನಲ್ಲೂ ಸದಾ ನಗುವ ಆ ಮುಗ್ಧ ಹೃದಯಗಳನ್ನು ಅವರ ಕೊನೆಯುಸಿರಿರೊವರೆಗೂ ನಮ್ಮ ಜೊತೆಯೇ ನೋಡಿಕೊಳ್ಳಬೇಕು ಎಂಬ ಮಹತ್ವಾಕಾಂಕ್ಷೆಯನ್ನು ಹೇಳುತಿರಲು ಕುಳಿತ ಪ್ರತಿಯೊಬ್ಬರ ಮನ ಪರಿವರ್ತಿಸಿತು…

ಟೆರ್ರಾಕೂಟಾಯಿಂದ ಹೊಳೆಯುತಿರುವ ನೀನಾಸಮ್ ಅನ್ನು ನೋಡುವುದೇ ಒಂದು ಖುಷಿ ,ದಿನಗಳು ಹೇಗೆ ಕಳೆಯುತ್ತಿವೆ ಎಂಬುವುದೇ ತಿಳಿಯುತ್ತಿರಲಿಲ್ಲ..

ಹಬ್ಬದ ಹನ್ನೆರಡನೇ ರಾತ್ರಿ ನಾಟಕ ಗಂಟೆಗಳಕಾಲ ಶೇಕ್ಸ್‌ಪಿಯರ್ ನ ಕಾಲಕ್ಕೆ ಕರೆದ್ಯೊದಿತ್ತು. ವೀಶೆಷವೆಂದರೆ ಈ ನಾಟಕದಲ್ಲಿ ನಟಿಸಿದ ಎಲ್ಲರೂ ಕಲಾವಿದರು ನೀನಾಸಮ್ ನ ಹವ್ಯಾಸಿ ರಂಗಭೂಮಿ ಕಲಾವಿದರು ಹಾಗೂ ಗ್ರಾಮಸ್ಥರೇ ಆಗಿದ್ದರು ….

ಟೀ ಬ್ರೇಕ್ ಗಳಿಗಾಗಿ ಕಾಯುತ್ತಿದ್ದ ನಮಗೆ ಸರಳ- ಸಜ್ಜನಿಕೆ ಜ್ಞಾನಿಗಳನ್ನು ಮಾತನಾಡಿಸಬೇಕೆಂಬ ಸಣ್ಣ ಹಂಬಲದಿಂದ ಭಯದ ಬಟ್ಟೆ ತೊಟ್ಟು  ಧೈರ್ಯದ ಚಿಟ್ಟೆ ಹಿಡಿದು ಹೋಗಿ ಒಂದೆರಡು ಮಾತನಾಡಿ ಬಂದದ್ದು ಪದಪುಂಜಗಳಲ್ಲಿ ವರ್ಣಿಸಲಾಗದ ಸಂತಸ..

ಜೊತೆಗಿರುವನು ಚಂದಿರ ಜಯಂತ ಕಾಯ್ಕಿನಿ  ಅವರು ಅನುವಾದ ಮಾಡಿದ ಈ ಅತ್ಯದ್ಬುತ ನಾಟಕ ಹುಲಗಪ್ಪ ಕಟ್ಟಿಮನಿ ಅವರ ಸಂಕಲ್ಪ ರಂಗ ತಂಡ ಮತ್ತು ಮಂಗಳಾ ಮೇಡಂ ನಿರ್ದೇಶನದಲ್ಲಿ ಮೂಡಿಬಂದ ಈ ಪ್ರದರ್ಶನ ಬಡತನದ ಬೇಗೆಯಲ್ಲೇ ಹುಟ್ಟಿ ಬೆಳೆದ ನನಗೆ ವೈಯಕ್ತಿಕವಾಗಿ ಈ ನಾಟಕ ಗಾಢವಾದ ಅನುಭವನ್ನೇ ನೀಡಿದೆ.

ದಿನವಿಡೀ ದುಡಿದು ದನಿದು ಮನೆಗೆ ಬಂದ ತಂದೆ, ತನ್ನ ಎತ್ತರಕ್ಕೆ ಬೆಳೆದ ಹೆಣ್ಣು ಮಕ್ಕಳ ಮೊಗದ ನಗು ನೋಡಿ ತನ್ನೆಲ್ಲ ದನಿವ ಮರೆಯುತ್ತಾನೆಂದರೇ ಈ ವಾತ್ಸಲ್ಯಕೇ ನಿಲುಕುವ ಬೇರೊಂದು ಅಂಶ ಸಿಗಲು ಸಾಧ್ಯವೇ ಜಗದಲಿ…

ತಮ್ಮ ಮೂರು ಹೆಣ್ಣು ಮಕ್ಕಳ ಮದುವೆ ಎಂಬ ಜವಾಬ್ದಾರಿಗಾಗಿ ಜೀವನವಿಡಿ ಶ್ರಮಿಸುವ ತಂದೆ-ತಾಯಿಗೆ ಎದುರಾಗುವ ಸಮಸ್ಯೆಗಳು ಸಾವಿರದಷ್ಟು..ಪ್ರೀತಿ ಎಂಬ ಹೆಸರು ಕೂಡ ಕೇಳಲು ಇಷ್ಟ ಪಡದ ಬಡ ಮುಸ್ಲಿಂ ಕುಟುಂಬವೊಂದು ತಮ್ಮ ಮೂರು ಹೆಣ್ಣು ಮಕ್ಕಳು ಅವರವರ ಮನಸ್ಸಿಚ್ಛೆಯಂತೆ ಮದುವೆಯಾದಾಗ ಆ ತಂದೆ-ತಾಯಿಗಳ ಮನಸ್ಸಿಗಾದ ಆಘಾತ ಹೇಳತೀರದು. ಆದರೂ ಕೊನೆಗೆ ತನ್ನ ಮಕ್ಕಳು ಅಪ್ಪಾ ಎಂದು ಕೂಗಿದಾಗ ಮನಸ್ಸಿನಲ್ಲಿದ್ದ ಎಲ್ಲ ಕೋಪ ತಣ್ಣಗಾಗಿ ಅಪ್ಪಿ- ಮುದ್ದಾಡುವ ಕ್ಷಣವಂತೂ ಬಯಕೆಗೂ ಮೀರಿದ ಭಾವಗೀತೆಯಂತಿತ್ತು!!! ಮುಂದೊಂದು ದಿನ ಧರ್ಮವೆಂಬ ಹೆಸರಿನಿಂದ ದಶಕಗಳ ಕಾಲ ಗಂಡ-ಮಕ್ಕಳ ಜೊತೆ ಬದುಕಿದ ಮನೆಯನ್ನ ಬಿಟ್ಟು ಹೋಗಬೇಕಾದರೇ ಆ ತಾಯಿಗೆ ಅದೇಷ್ಟು ಸಂಕಟವಾಗಿರಬೇಕು. ತಾಯಂದಿರಿಗೆ ತಮ್ಮ ಮನೆಯ ಮೇಲಿನ ಒಲವು ಎಷ್ಟಿರುತ್ತದೆಂದರೆ ಮನೆ ಬಿಟ್ಟು ಹೋಗುವ ಕೊನೆ ಕ್ಷಣದಲ್ಲೂ ಕೂಡ ಮನೆಯನ್ನು ಸ್ವಚ್ಛವಾಗಿ ಗುಡಿಸಿ ,ಕಿಟಕಿ ಬಾಗಿಲುಗಳನ್ನು ಸ್ಪರ್ಶಿಸಿ ಹೋರಡಬೇಕಾದರೇ ನಮಗೇ ತಿಳಿಯದೇ ನಮ್ಮನ್ನು ಅದು ಬೇರೆಯೇ ಲೋಕಕೇ ಕರೆದ್ಯೊದು ಪ್ರತಿ ಕ್ಷಣವನ್ನು ಎಂದಿಗೂ  ಕಣ್ಣಿಗೆ ಕಟ್ಟುವಂತೆ ಮಾಡಿದೆ. ಆ ಬಡ ಕುಟುಂಬದ ವಾತ್ಸಲ್ಯ ಹೆಣ್ಣು ಮಕ್ಕಳ ಮದುವೆ ಎಂಬುವುದು ಬಡ ತಂದೆ-ತಾಯಿಗೆ ನೀಡುವ ಅಪಾರ ನೋವಿನ ಸರಮಾಲೆಯನ್ನು ನಿಮಿಷಗಳಲ್ಲೇ ತೋರಿಸಿ ಎಲ್ಲ ವೀಕ್ಷಕರ ಕಂಬನಿಗೆ ಪಾರವೇ ಇರದಂತೆ ಮಾಡಿದರು.

ನಾಟ್ಯ ಮಯೂರಿಯಾಗಿ ನರ್ತಿಸಿ ಪ್ರತಿಯೊಬ್ಬರ ಕಣ್ಣಂಚಲ್ಲಿ ನೀರೂರುವಂತೆ ಮಾಡಿದವರು ಅನುಪಮಾ ರಾಜೇಂದ್ರ ಅವರು!.. ದ್ರೌಪದಿ ವಸ್ತ್ರಾಪಹರಣದ ಒಂದು ಘೋರ ಘಟನೆಯನ್ನು ಮತ್ತೆ ನಮ್ಮುಂದೆ ಇಟ್ಟು ಅವರು ನರ್ತಿಸುವಾಗ ಪ್ರತೀ ಪ್ರೇಕ್ಷಕರೂ ಕೂಡ ಅಸಹಾಯಕ ಹಾಗೂ ದುಃಖಿತರಾಗಿದ್ದನ್ನು ನಾನು ಗಮನಿಸಿದ್ದೇನೆ.. ಅಬ್ಬಾ ಒಂದೊಮ್ಮೆ ಪಾಂಚಾಲಿಯೇ ಬಂದು ತನ್ನ ಸೆರಗೊಡ್ಡಿ ಕಾಪಾಡಿ ಎಂದು ಕೇಳಿದ ಹಾಗೆ ಮೈ ನವಿರೇಳಿಸಿದ ಕ್ಷಣವದು. ನಾಟ್ಯ ಶಾರದೆ ನಮಗಾಗಿ ಇಳಿದುಬಂದು ಹಳದಿ ಸೀರೆಯುಟ್ಟು ನಗುತ್ತಾ ನರ್ತಿಸುವಂತಿತ್ತು ಆ ಅಮೋಘ ದೃಶ್ಯ.. ಇಷ್ಟೇ ಅಲ್ಲದೆ ಅವರಲ್ಲಿದ್ದ ಆ ವಿನಯತೆಯೇ ಆವರ ಈ ಎಲ್ಲ ಸಾಧನೆಗಳ ಮೂಲವೆನಿಸುತ್ತದೆ, ಯಾವ ಪದಗಳಲ್ಲಿ ವರ್ಣಿಸಲಿ ಆ ನಯನ ಮನೋಹರ ದೃಶ್ಯವನ್ನ!?..

ಹೀಗೆ ಹೊಸ-ಹೊಸ ಅನುಭಗಳ ಸುರಿಮಳೆಯ ಸುರಿಸಿದ ಐದು ದಿನಗಳ ಕಲೆಗಳ ಸಂಗಡ ಮಾತುಕತೆ ಶಿಬಿರ ಸಾಹಿತ್ಯದ ಹುಚ್ಚಿರುವ ನನಗೆ ಇನ್ನಷ್ಟು ಕಿಚ್ಚೆರುವಂತೆ ಮಾಡಿದೆ..

ನಮ್ಮ ನಾಗರಾಜ ಸರ್ ಕೂಡ ಎಲ್ಲರನ್ನು ಮಾತಾಡ್ಸಿ ಪರಿಚಯ ಮಾಡ್ಕೊಳ್ಳಿ , ನೀವು ಹೀಗೆ ನೂರಾರು ಶಿಬಿರಗಳಲ್ಲಿ ಭಾಗವಹಿಸಬೇಕು ಭಯ ಬಿಡಿ ಆರಾಮಾಗಿ ಎಲ್ಲರ ಜೊತೆ ಬೇರೆಯಿರಿ ಎಂದೂ ಕ್ಷಣ-ಕ್ಷಣಕ್ಕೂ ಧೈರ್ಯ ತುಂಬುತಿದ್ದರು . ಅವರ ಈ ಮಾತುಗಳಿಂದಲೇ ಭಯವಿದ್ದರೂ ತೋರದಂತೆ ಜಯಂತ ಕಾಯ್ಕಿನಿ ಸರ್ ಅವರನ್ನು ಮಾತನಾಡಿಸಲು ಹೋಗಿ ಅವರ ಆಟೋಗ್ರಾಫ್ ತಗೊಂಡು,ಅವರು ನಗೆ ಬೀರುತ  ಹೇಳಿದ ಮಾತು  “ಶಿಬಿರದ ಕೊನೆಯಾದರೇನು  ನಿನ್ನ ಜೀವನದ ಹೊಸದೊಂದು ದಾರಿ ಇಂದಿನಿಂದಲೇ ಪ್ರಾರಂಭವಾಗಲಿ” ನಾನು ಇದನ್ನೆ ಇಚ್ಛಿಸುವೆ..

ಇಂತಹ ಮಹೋನ್ನತ ಕಾರ್ಯವನ್ನು ಪ್ರತಿವರ್ಷವೂ ನಡೆಸಿಕೊಂಡು ಬರುತ್ತಿರುವ ಅಗಾಧ ಜ್ಞಾನ ಹೊಂದಿದ ಮಗು ಮನಸ್ಸಿನ ಕೆ.ವಿ. ಸುಬ್ಬಣ್ಣ ಅವರ ಮಗ ಅಕ್ಷರ ಸರ್ ಅವರಿಗೂ ಹಾಗೂ ಶಿಬಿರವನ್ನು ತಮ್ಮ ಮನೆಯ ಕಾರ್ಯಕ್ರಮದಂತೆ ನಡೆಸಿ ನಮ್ಮೆಲ್ಲರನ್ನು ಪ್ರೀತಿಯಿಂದ ನೋಡಿಕೊಂಡ ಮಾಧವ ಚಿಪ್ಪಳ್ಳಿ ಸರ್ ಅವರಿಗೆ ಮತ್ತು ನಮ್ಮಂತಹ ವಿದ್ಯಾರ್ಥಿಗಳಿಗೆ ಕಲೆ, ಸಾಹಿತ್ಯದ ಜೊತೆಗೆ  ಲೋಕಜ್ಞಾನವನ್ನು ನೀಡುತ್ತಿರುವ ನೀನಾಸಮ್ ಗೆ ನಾನೆಂದಿಗೂ ಋಣಿ..!!!

ನನ್ನ ಜೀವನದ ಹೊಸ ದಾರಿಗೆ ಬೆಳಕಾಗಿರುವ ಡಾ.ಎಚ್.ಎಸ್.ಅನುಪಮಾ ಮೇಡಂಗೆ, ಅನೀರಿಕ್ಷಿತವಾಗಿ ದೊರೆತ ಈ ಅಮೋಘ ಅವಕಾಶವನ್ನು ನೀಡಿದ ಹಾಗೂ ವಿದ್ಯಾರ್ಥಿಗಳ ಏಳಿಗೆಗಾಗಿಯೇ ಶ್ರಮಿಸುವ ನಮ್ಮ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿ ಮೇಡಂಗೆ , ತನ್ನ ಅವಕಾಶವನ್ನು ನನಗಾಗಿ ಬಿಟ್ಟುಕೊಟ್ಟ ಪ್ರೀತಿಯ ಸ್ನೇಹಿತೆ ಸ್ಪೂರ್ತಿಗೂ ಹಾಗೂ ಶಿಬಿರದ ಬಗ್ಗೆ ಕೊಂಚ ಭಯವಿದ್ದಾಗ ಪ್ರೊತ್ಸಾಹ ನೀಡಿ ಕಳಿಸಿದ ನನ್ನ ರೇಷ್ಮಾ ಮೇಡಂ ಇವರೆಲ್ಲರಿಗೂ ನನ್ನ ಮನ ಪೂರ್ವಕ ಧನ್ಯವಾದಗಳು….

ಸಂಗೀತಾ ಆರ್. ಬುದ್ನಿ

ಎರಡನೇ ವರ್ಷದ ಬಿ.ಎ ವಿದ್ಯಾರ್ಥಿನಿ

ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

 

ಸ್ವಾಭಿಮಾನದ ಸಾಧ್ವಿಗೆ ‘ಘನತೆ’ಯೆಂಬ ಗದ್ದುಗೆ!

ಸ್ವಾಭಿಮಾನದ ಸಾಧ್ವಿಗೆಘನತೆಯೆಂಬ ಗದ್ದುಗೆ!

ಮನುಷ್ಯ ಜಗತ್ತಿಗೆ ಸ್ವಾವಲಂಬನೆಯೆಂಬ ಹಂದರವನ್ನು ಇಳೆಯ ಮೇಲೆ ಹಾಕಿರುವವಳೇ ಮಹಿಳೆ. ಮಹಿಳೆ ಎಂದರೆ ಇನ್ನೊಬ್ಬರ ಹಾದಿಯಲ್ಲಿ ಸಾಗುವ ಬದಲು ತನ್ನದೇ ಆದ ದಿಟ್ಟ ಹೆಜ್ಜೆಯಲ್ಲಿ ನಡೆಯುವವಳು ಎಂದರ್ಥ. ವ್ಯಂಜನಕ್ಕೆ ಸ್ವರವು ಆಧಾರವಾಗುವಂತೆ ಅವಳ ಅಸ್ತಿತ್ವ ರೂಪಿಸಿಕೊಳ್ಳಲು ‘ಸ್ವಾವಲಂಬನೆ’ ಎಂಬ ಖಡ್ಗವನ್ನು ಹಿಡಿದವಳು ಮಹಿಳೆ. ಸಿಕ್ಕಿ ರೋವ್ ರವರು “ಮಹಿಳೆಯಾದರೆ ಆತ್ಮವಿಶ್ವಾಸ ಮತ್ತು ಸ್ವಾಭಿಮಾನ ಹೊಂದಿರುವ  ಮಹಿಳೆಯಾಗಬೇಕು, ಆಗ ಗಂಡಿಗೆ ಹೋರಾಡಲು ಒಂದು ಯೋಗ್ಯವಾದ ಕಾರಣ ಸಿಗುತ್ತದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಪುರುಷ ‘ಶಕ್ತಿ’ಯೇ ಮೇಲೆಂದು ಬೀಗುತ್ತಿದ್ದ ಇಂತಹ ಜಗತ್ತಿಗೆ ಸ್ತ್ರೀ ‘ಶಕ್ತಿ’ ಏನೆಂದು ತೋರಿಸಿಕೊಟ್ಟದ್ದು ‘ಶಕ್ತಿ’ ಯೋಜನೆಯು ಜಾರಿಯಾದಂತಹ ಈ ವರ್ಷ. ಈ ಯೋಜನೆಯಲ್ಲಿ ‘ಶಕ್ತಿ’ಯ ಪ್ರದರ್ಶನವೇನೋ  ಆಯಿತು ಎಂದು ನಾವು ದೂರದರ್ಶನ, ಸುದ್ದಿಪತ್ರಿಕೆ, ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ ಹಾಗೂ ಕೇಳಿದ್ದೇವೆ,  ಆದರೆ ‘ಶಕ್ತಿ’ಯಲ್ಲಿ ಪ್ರದರ್ಶನಗೊಂಡ ಮಹಿಳಾ ಶಕ್ತಿಯು ಶಾಶ್ವತವೋ ಅಥವಾ ತಾತ್ಕಾಲಿಕವೋ ನಾನರಿಯೇ..!!

ಜಾಗತಿಕವಾಗಿ 3.905 ದಶಕೋಟಿಗಳಷ್ಟು ಮಹಿಳಾ ಜನಸಂಖ್ಯೆ ಇದ್ದು, ಡಬ್ಲ್ಯೂ. ಈ.ಐ.ಯ ವರದಿಯ ಪ್ರಕಾರ 60 ಪ್ರತಿಶತದಷ್ಟು  ಮಹಿಳೆಯರು ಸ್ವಾವಲಂಬನೆ ಸಾಧಿಸಿದ್ದಾರೆ, ಅಂದರೆ ಪ್ರಮುಖ ಮಾನವ ಅಭಿವೃದ್ಧಿ ಆಯಾಮಗಳಲ್ಲಿ ಪುರುಷರು ಸಾಧಿಸುವ ಸರಾಸರಿ 72ರಷ್ಟು ಪ್ರತಿಶತವನ್ನು ಅವರು ಸಾಧಿಸಿದ್ದಾರೆ. ಇದನ್ನು ಜೆಪಿಪಿಐನಿಂದ ಅಳೆಯಲಾಗುತ್ತದೆ, ಇದು 28 ಪ್ರತಿಶತ ಲಿಂಗವನ್ನು ಪ್ರತಿಬಿಂಬಿಸುತ್ತದೆ .ಭಾರತದಲ್ಲಿ 48 ಪ್ರತಿಶತದಷ್ಟು ಮಹಿಳೆಯರು ಸ್ವಾವಲಂಬಿ ಜೀವನವನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ.

ಹೊನ್ನುಂಗಾರದಲ್ಲಿ ಹೆಣ್ಣಿನ ಕತ್ತು ಹಿಸುಕಿದ್ದರೂ, ಕತ್ತಲ ಕೋಣೆಗಳು ಕನಸ ಕೊಂದರೂ ಕೂಡ ಬಿಸಿಯ  ಮರಳ ಪದೇ ಪದೇ ನೆನೆಸುವ ಅಬ್ಧಿಯ ಅಲೆಯ ತೆರದಿ ತನ್ನ ಘನತೆಯ ಬದುಕಿಗೆ ಸ್ವಾವಲಂಬನೆ ಎಂಬ ಸ್ವಾಭಿಮಾನದ ಹಣತೆಯನ್ನ ಹೊತ್ತಿಸಿದವಳು ಮಹಿಳೆ!. ವಿಪರ್ಯಾಸವೆಂದರೆ ಬರಿಯ ಮಾತಲ್ಲೇ ಹಿಡಿದುಕೊಂದು, ನಗುನಗುತ್ತಲೆ ಹಂಗಿನೂಟವ ಉಣಿಸಿ, ಅವಳ ಸ್ವಾವಲಂಬನೆಯನ್ನು ಕಿತ್ತುಕೊಳ್ಳುವ ಕ್ರೂರ ಮನಸ್ಸಿನ ಮನುಷ್ಯ ಮುಖವಾಡವನ್ನು ಹಾಕಿಕೊಂಡಿರುವ ಮೃಗಗಳು ನಮ್ಮ ನಡುವೆ ಇದ್ದಾರೆ. “ಎಲ್ಲಿ ಅವಳು ಸ್ವಾವಲಂಬನೆಯಿಂದ ಪ್ರಗತಿಯ ಪತದತ್ತ ಸಾಗಿ ಬಿಡುವಳೋ!”  ಎಂದು ಅವಳಿಗೆ ವಂಚನೆಯನ್ನು ಮಾಡುತ್ತಿದ್ದಾರೆ. ಪುಸ್ತಕ- ಪೆನ್ನು ಹಿಡಿಯಬೇಕಾದ ಕೈಗೆ ಕಸ- ಮುಸುರೆ ಪಾತ್ರೆ ಕೊಟ್ಟು ಕೂರಿಸುವ ಕುಕೃತ್ಯ ನಡೆಸಿದ್ದಾರೆ. ಇದು ತಪ್ಪಲ್ಲವೇ? ಹೆಣ್ಣು ಗಂಡು  ಒಂದೇ ನಾಣ್ಯದ  ಎರಡು ಮುಖಗಳು. ಗಂಡು ಸ್ವಾವಲಂಬನೆಯಿಂದ ಬದುಕಬಹುದಾದರೆ ಹೆಣ್ಣು ಏಕೆ ಬದುಕಬಾರದು??

ತಾಳ್ಮೆಯ ಪ್ರತೀಕವಾದ ಹೆಣ್ಣು ಕೆಲವೊಮ್ಮೆ ಬದುಕಬಂಡಿಯ ಸಾಗಿಸುವ ಆಸೆ ಹೊತ್ತು ಸ್ವಾವಲಂಬನೆಯನ್ನು ಕಟ್ಟಿಕೊಳ್ಳಹೊರಟರೆ, ಇತ್ತ ತಾಳ್ಮೆಗೆ ತರ್ಪಣ ಕೊಟ್ಟು ರಕ್ತದ ಹಾದಿಯನ್ನು  ಹಿಡಿದದ್ದೂ  ಉಂಟು. ಸ್ವಾವಲಂಬನೆಯ ಬದುಕಿಗೆ ತಾಳ್ಮೆಯು ಅವಶ್ಯಕ, ಆದರೆ ತಾಳ್ಮೆಯೇ ನೇಣು ಕುಣಿಕೆಯಾದರೆ ಹೇಗೆ? ತಾಳ್ಮೆ ಎಷ್ಟು ದಿನ ಇರಲು ಸಾಧ್ಯ! ತಾಳ್ಮೆಯಿಂದಿರುವ ಹೆಣ್ಣನ್ನು ಸಮಾಜ ಹೇಗೆ ದೂಷಿಸುತ್ತದೆ, ಸ್ವಾವಲಂಬನೆಯನ್ನು ಕಟ್ಟಿಕೊಳ್ಳ ಹೊರಟ ಆಕೆಗೆ ಜನರೇನು ಹೇಳುತ್ತಾರೆ, ತಾಳ್ಮೆ ಕೆಟ್ಟರೆ ಹೇಗೆ ಹೆಣ್ಣು ಸ್ಫೋಟಗೊಳ್ಳುತ್ತಾಳೆ, ಅವಳನ್ನು ಸಮಾಜ ಯಾವ ದೃಷ್ಟಿಯಿಂದ ನೋಡಬಹುದು ಎಂಬುವುದನ್ನು ಒಂದು ಸ್ವಅನುಭವದ ಮೂಲಕ ನಾನು ತಿಳಿಸುತ್ತೇನೆ.

ಅವರದ್ದು ಗಂಡ-ಹೆಂಡತಿ, ಮಗಳು ಮತ್ತು ಮಗನಿರುವ ಸಾಮಾನ್ಯ ಕುಟುಂಬ. ಬಿತ್ತಿಬೆಳೆದು ಉಣ್ಣಲು ಮನೆ ಹಿತ್ತಲಿನ ಬರಡು ಜಾಗವೊಂದನ್ನು ಬಿಟ್ಟರೆ ಬಿಡಿಕಾಸಿನ ಭೂಮಿ ಸಹ ಇರಲಿಲ್ಲ. ಮನೆಯ ಯಜಮಾನ ಮಂಜುನಾಥ! ಹಳ್ಳಿಯಲ್ಲಿ ಆತನನ್ನು ‘ಬುಚ್ಚ’ ಅಥವಾ ‘ಬುಚ್ಚಣ್ಣ’ ಎಂದು ಕರೆದೇ ಅಭ್ಯಾಸ. ಹೆಸರಿಗೆ ದೇವರ ಹೆಸರನ್ನು ಇಟ್ಟುಕೊಂಡಿದ್ದರೂ ಸಹ ಸ್ವಭಾವದಲ್ಲಿ ತೀರಾ ತದ್ವಿರುದ್ಧ. ಇದರ ಜೊತೆಗೆ ಅವನಿಗೆ ಅಂಟಿಕೊಂಡು ಬಂದಿರುವ ಚರಾಸ್ತಿಯೆಂದರೆ ಕೃಷಿಜೀತ, ಸ್ತಿರಾಸ್ತಿಯೆಂದರೆ ಒಂದೆರಡು ಪಾತ್ರೆಪಗಾಡಿಗಳು. ಅಸಾಧ್ಯ ಹುಟ್ಟು ಕುಡುಕನೆಂದು ಊರಿಗೇ ಕುಖ್ಯಾತನಾಗಿದ್ದ ಇವನ ಹೆಂಡತಿ ಮಕ್ಕಳ ಒಡನಾಟ ಒಂದು ರೀತಿಯಾಗಿ ನಾಯಿ-ಬೆಕ್ಕಿನ ಸಂಬಂಧ! ದಿನಬೆಳಗೂ ಹೆಂಡತಿಗೆ  ಹೊಡೆಯುವುದು, ಬಡಿಯುವುದು ಮಾಡುತ್ತಾ ಬರುತ್ತಲಿದ್ದ ಅವನಿಗೆ ಊರಿನಲ್ಲಿ ಅವನದೇ ಕುಡುಕ ಸ್ವಭಾವದ ಮೂರ್ನಾಲ್ಕು ಜನ ಸ್ನೇಹಿತರು ಅನ್ನೋನ್ಯ ಸಂಬಂಧಿಗಳಾಗಿದ್ದರು ಎನ್ನಬಹುದು.

ಬುಚ್ಚಣ್ಣನಿಗೆ ಮಗಳಾದ ನಂತರ ಮಗನಾಗುವವರೆಗೂ ಬುಚ್ಚಣ್ಣನ ಎಲ್ಲಾ ಅರ್ಭಟಗಳನ್ನು ಸಹಿಸಿಕೊಂಡಿದ್ದು ಇನ್ನೂ ತಾಳಲಾಗದೆ ‘ಗೌರಿ’ ರೋಸಿಹೋದಳು. ತನ್ನದೇ ಜಮೀನಿನಲ್ಲಿ ದುಡಿಯುವ ಭಾಗ್ಯ ಹೊಂದಿರದ ಅಕೆಯು ಕಂಡ ಕಂಡವರ ಮನೆಯವರಿಗೆಲ್ಲ ಅತ್ತೂ ಕರೆದು,ಕಾಲಿಗೆ ಬಿದ್ದು ಕೆಲಸ ಮಾಡಿ ಬಂದದ್ದೂ ಉಂಟು. ಬೆಳಿಗ್ಗೆ ತನ್ನ ಮಗ ಹಾಗೂ ಮಗಳಿಗೆ ಮನೆಯ ನಿತ್ಯದ ಕೆಲಸವನ್ನು ವಹಿಸಿ ಮುಂಜಾನೆ ಜೀತದ ಕೆಲಸಕ್ಕೆ ಹೊರಟ ಆಕೆ ಬರುವುದು ತಿಳಿಸಂಜೆಯೇ. ಬಿಸಿಲು, ಮಳೆ, ಚಳಿ, ಗಾಳಿಗಳನ್ನು ಲೆಕ್ಕಿಸದೆ ಸೊಂಟ ಬಗ್ಗಿಸಿ ಭೂಮಿಗೆ ಕೈಹಾಕಿದಳೆಂದರೆ ಮತ್ತೆ ಏಳುವುದು ಮದ್ಯಾಹ್ನದ ಊಟದ ಸಮಯಕ್ಕೇ! ಮನೆಗೆ ಬಂದ ನಂತರ ಉಳಿದ ಮನೆಕೆಲಸಗಳನ್ನು ಮುಗಿಸಿ ಅಡಿಕೆ ಸುಲಿಯಲು ಹೊರಟು ಮನೆಗೆ ವಾಪಸ್ಸಾಗುವಷ್ಟರಲ್ಲಿ ಅರ್ಧರಾತ್ರಿಯಾಗುತ್ತಿತ್ತು.

ಗಂಡನ ನಿರ್ದಾರುಣ್ಯ ಹಿಂಸೆ, ಬಡಕಲಾದ ದೇಹ, ಹೊತ್ತಿನ ಊಟಕ್ಕಾಗಿ ಪಡುತ್ತಿರುವ ಕಷ್ಟವನ್ನು ನೋಡಿ ಕನಿಕರಪಡದೆ ಇರುವ ಮನುಜರೇ ಇರಲಿಲ್ಲ. ಆದರೂ ಈಕೆಯ ಕೆಲಸದ ಅಗ್ಗಕ್ಕೆ ಬಿದ್ದವರು ಗೌರಿ ಊರ ಗೌಡನ ಜೊತೆಯಲ್ಲಿ ಮಲಗಿದ್ದಾಳೆಂದು ಕುಟುಕು ಮಾತಾಡಲು ಅವರ ಎಲುಬಿಲ್ಲದ ನಾಲಿಗೆ ಸಾಹಸವನ್ನೇನೋ ಪಡುತ್ತಿರಲಿಲ್ಲ.

ಮೈಮುರಿದು ದುಡಿಯುವ ಕೆಲಸಕ್ಕೆ ವ್ಯಾಯಾಮವೋ ಎಂಬಂತೆ ವಾರಕ್ಕೊಮ್ಮೆ ಗಂಡನ ಹೊಡೆತಗಳು ತಪ್ಪದೇ ಇರುತ್ತಿದ್ದವು. ಕೆಲವೊಮ್ಮೆ ಬುಚ್ಚಣ್ಣನು ಆಸ್ಪತ್ರೆಗೆ ದಾಖಲಾದಾಗ ಗಂಡನಿಗಾಗಿ ಅವಳ ಬಿಕ್ಕಳಿಸುವ ಅಳು ಮುಗಿಲುಮುಟ್ಟುವಂತಹವುಗಳು.

ಮಕ್ಕಳು ಬೆಳೆದು ದೊಡ್ಡವರಾಗುತ್ತಿದ್ದಂತೆ ಜಗಳ ಗಲಾಟೆಗಳು ತಾರಕವನ್ನೇರತೊಡಗಿದವು. ಬುಚ್ಚಣ್ಣನೂ ಸಹ ಮಧ್ಯಾದೇವಿಯ ದಾಸನಾಗಿ ಗೌರಿಯಂತೆ ಬಡಕಲು ಪೇತನಾಗುವುದರಲ್ಲಿದ್ದನು. ಗೌರಿಯ ಮಗನಂತೂ ಯಾವುದಕ್ಕೂ ಹಿಂದೆ ಮುಂದೆ ನೋಡುವವನಲ್ಲ! ಒಂದೆರಡು ಬಾರಿ ಪಿತೃವಿಗೆ ಸೌದೆಯಿಂದಲೋ, ತುರೇಮಣೆ ಕತ್ತಿಯಿಂದಲೋ ಹೊಡೆತಗಳ ತರ್ಪಣವನ್ನು ಕೊಟ್ಟದ್ದೂ ಉಂಟು. ಅಂತೂ ಗೌರಿಯು ಮಕ್ಕಳ ಪರವಾಗಿಯೂ ನಿಲ್ಲಲಾಗದೆ, ಪಾತಿವ್ರತ ಧರ್ಮವನ್ನೂ ಮೀರಲಾಗದೆ ಕಕ್ಕಾಬಿಕ್ಕಿಯಾಗಿದ್ದಳು. ಹೀಗೆ ಸಾಗುತ್ತಿತ್ತು ಗೌರಿಯ ಹಾಗೂ ಆಕೆಯ ಮನೆಯ ದಿನಚರಿ!

ಒಂದು ದಿನ ಊರ ತುಂಬೆಲ್ಲಾ ವಿನೂತನ ಸುದ್ದಿಯೊಂದು ಕೇಕೆಹಾಕತೊಡಗಿತು. ಮನೆಯ ಜಗಲಿ ತುಂಬೆಲ್ಲಾ ರಕ್ತದ ಮಡು. ಗೌರಿಯ ತವರುಮನೆಯವರು, ಊರ ಮುಖ್ಯಸ್ಥರು, ಜನಗಳು ಓಡೋಡಿ ಗೌರಿಯ ಮನೆಯ ಕಡೆಗೆ ಧಾವಿಸುತ್ತಿದ್ದರು. ಕಂಡವರೆಲ್ಲ “ಅಯ್ಯೋ, ದೇವ್ರೆ ಎಂತ ಕಾಲ ಬಂತಪ್ಪಾ!”ಅಂದವರೇ. . ಬುಚ್ಚಣ್ಣನ ತಮ್ಮನ ಹೆಂಡತಿ ಎಲೆ, ಅಡಕೆ ಹಾಕಿ ತುಪ್ಪುತ್ತ- ಕ್ಯಾಕರಿಸುತ್ತ ಆಕಾಶ-ಭೂಮಿ ನಡುಗುವಂತೆ ಬೊಂಬಾಯಿ ತೆರೆದು, “ ಅವಳ ಕುಲನಾಶ ಅಗೋಗ,ಅವ್ಳ್ ಕಾಲಿಗೆ ಹುಳಾ ಬೀಳಾ, ನೀನು ಹಾಳಾಗಿ ಹೋಯ್ತಿಯಾ ” ಎಂದು ಬೈಯುತ್ತ ಅರ್ಭಟಿಸುತ್ತಿದ್ದಳು! ಅಲ್ಲಿಂದ ಮರಳಿ ಬಂದವರ ಬಾಯಲ್ಲಿ ಬಂದದ್ದು ಒಂದೇ ಮಾತು –‘ಅಯ್ಯೋ, ಏನ್ ಕಾಲ ಬಂತಪ್ಪಾ, ಹಾಳಾದ್  ಗೌರಿ ಗಂಡನ್ನೇ ತಿಂದ್ಳಲ್ಲಪ್ಪಾ!”

ಈ ರೀತಿಯಾದರೆ ಯಾವ ಹೆಣ್ಣು ತಾನೇ ಸ್ವಾವಲಂಬನೆಯ ಬದುಕನ್ನ ಕಟ್ಟಿಕೊಳ್ಳಲು ಸಾಧ್ಯ? ಸ್ವಾವಲಂಬನೆಗೆ ಅಡ್ಡಲಾಗಿ ಸಮಾಜವೆಂಬ ನಾಣ್ಯದ ಇನ್ನೊಂದು ಮುಖವಾದ ಪುರುಷ ಪ್ರಧಾನ ಅಂಶಗಳು  ಮುಳ್ಳಿನ ಹಾದಿಗಳಾಗುತ್ತವೆ.  ಈ ರೀತಿಯಾಗಿ ಮಹಿಳೆಯ ತಾಳ್ಮೆಗೆ ಕತ್ತಲು ಕವಿದಾಗ ಅವಳ ಘನತೆಯು ವೃದ್ಧಿಸುವುದಾದರೂ ಹೇಗೆ?

ಹೆಣ್ಣಾಗಿ ಜೀವನ ನಡೆಸುವುದು ಸುಲಭದ ಆಟವಲ್ಲ. ಪ್ರತಿದಿನ ಸೂರ್ಯನಾಗಿ ಹುಟ್ಟಬೇಕಾಗುತ್ತದೆ, ಎದುರಿಗೆ ಘನವಾದ ಕತ್ತಲೆ ಇದ್ದರೂ ಎಲ್ಲರ ಜೀವನದಲ್ಲಿ ಬೆಳಕನ್ನು ಕೊಡಬೇಕಾಗುತ್ತದೆ. ಅಂತಹ ಹೆಣ್ಣೆಂಬ ಶಕ್ತಿಯ ಪ್ರಗತಿಗೆ ಪೂರಕವಾದ ಅಂಶಗಳಲ್ಲಿ ಸ್ವಾವಲಂಬನೆಯಿದ ಸಿಗುವ ‘ಘನತೆಯು’ ಮೊದಲನೆಯದಾಗಿ ನಿಲ್ಲುವ ಅಂಶವಾಗಿದೆ. ಘನತೆಯ ಬದುಕಿಗೆ ಸ್ವಾವಲಂಬನೆಯ ಅಂಶ ಹೇಗೆಲ್ಲಾ ಅವಶ್ಯಕತೆಯಾಗಿದೆ ಎಂಬುವುದನ್ನು ನೋಡುವುದಾದರೆ, ಸ್ವಾವಲಂಬನೆಯಿಂದಾಗಿ ಮಹಿಳೆಯರು ಶಿಕ್ಷಣ ಪಡೆಯುವಂತಾಗಿ, ಮಹಿಳಾ ಅನಕ್ಷರಸ್ಥರು ಕಡಿಮೆಯಾಗಿ ಅಕ್ಷರಸ್ಥರು ಹೆಚ್ಚಾಗುತ್ತಾರೆ.  ನೇಮಿಚಂದ್ರ, ಡಾ. ಅನುಪಮ ನಿರಂಜನ. ಸಾರಾ ಅಬೂಬಕ್ಕರ್ ಮುಂತಾದವರು ನಮ್ಮ ನಡುವೆಯೇ ಶೈಕ್ಷಣಿಕವಾಗಿ ಸಾಧನೆ ಮಾಡಿರುವ ಹಲವಾರು ಮಹಿಳೆಯರು, ಇವರೆಲ್ಲರು ಸರ್ವರಿಗೂ ಮಾದರಿಯಾಗಿದ್ದಾರೆ.

ಸ್ವಾವಲಂಬನೆಯಿಂದಾಗಿ ಆರ್ಥಿಕವಾಗಿ ಮಹಿಳೆಯರು ಬಲಗೊಳ್ಳುತ್ತಾರೆ, ಇದರಿಂದ ತನ್ನನ್ನು ಮತ್ತು ತನ್ನ ಕುಟುಂಬದ ಆರ್ಥಿಕತೆಗೆ ಸಹಾಯವಾಗುತ್ತದೆ. ಮಹಿಳೆ ಎಷ್ಟೋ ಬಾರಿ ಪುರುಷರಿಗೂ ಸಹ ಆರ್ಥಿಕವಾಗಿ ಸಹಾಯ ಮಾಡಿರುವುದುಂಟು.

ಸುಧಾ ಮೂರ್ತಿ, ಕಿರಣ್ ಮಜುಂದಾರ್ ಶಾ ,ಇಂದ್ರನೋಹಿ, ವಂದನಾ ಲುತ್ರ ಇವರುಗಳು ಆರ್ಥಿಕವಾಗಿ ತನ್ನ ಸಂಸ್ಥೆಗೂ , ದೇಶಕ್ಕೂ ಹಲವು ಕೊಡುಗೆಗಳನ್ನು ನೀಡಿದ್ದಾರೆ.

ಸ್ವಾವಲಂಬನೆಯಿಂದ ಸಾಮಾಜಿಕವಾಗಿ ಸಮಾನತೆಯ ಹಾದಿಯಲ್ಲಿ ಗಂಡನ ಜೊತೆ ಪಯಣ ಸಹಾಯಕವಾಗುತ್ತದೆ. ಹೇಗೆ ಒಂದು ಬಂಡಿಯ ಎರಡು ಚಕ್ರಗಳು ಸಮಾನವಾಗಿ ಒಂದೇ ರೀತಿಯಲ್ಲಿ ಸಾಗುತ್ತದೆಯೋ ಹಾಗೆ ಸ್ವಾವಲಂಬನೆಯಿಂದ ಪುರುಷ ಮಹಿಳೆ ಒಟ್ಟಿಗೆ ಸಾಗಿದರೆ ಅದರ ಮಾತೇ ಬೇರೆ ಅಲ್ಲವೇ?   ಕಿರಣ್ ಬೇಡಿ, ಕಮಲಾ ದಾಸ್ ಮುಂತಾದವರನ್ನು ನೋಡಿ ನಾವು ಕಲಿತುಕೊಳ್ಳಲೇಬೇಕು ಎಂದನಿಸುವುದಂತೂ ನಿಜ!

ರಾಜಕೀಯವಾಗಿ ಸ್ವಾವಲಂಬನೆ ಆಗುವ ಮೂಲಕ ತನ್ನ ಸುತ್ತಲಿನ ಮತ್ತು ರಾಜ್ಯದ ದೇಶದ ಪ್ರಗತಿಯ ಪಥದತ್ತ ಕರೆದುಕೊಂಡು ಹೋಗಲು ಸ್ವಾವಲಂಬನೆಯಿಂದ ಕೂಡಿದ ಮಹಿಳೆಯ ಘನತೆಯು ಸಹಾಯ ಮಾಡುತ್ತದೆ. ರಾಜಕೀಯವಾಗಿ ರಾಣಿಯ ತೆರದಿ ಬದುಕಿರುವುದನ್ನು , ಬದುಕುತ್ತಿರುವುದನ್ನು ಸಹ ನಾವು ನೋಡಬಹುದು. ಉದಾಹರಣೆಗೆ ಸರೋಜಿನಿ ನಾಯ್ಡು, ಇಂದಿರಾಗಾಂಧಿ, ನಿರ್ಮಲಾ ಸೀತಾರಾಮನ್, ದ್ರೌಪದಿ ಮುರ್ಮು, ಇವರುಗಳು ರಾಜಕೀಯವಾಗಿ ಸ್ತ್ರೀಶಕ್ತಿಯಾಗಿ ಹೊರಹೊಮ್ಮಿದರು.

ಸ್ವಾವಲಂಬನೆಯಿಂದ ಕ್ರೀಡೆಯಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿರುವ ಧೀರ ಮಹಿಳೆಯರನ್ನು ಸಹ ನಾವು ನೋಡಿದ್ದೇವೆ. ಚಿನ್ನ ಬೆಳ್ಳಿ ಕಂಚನ್ನು ಭಾರತಮಾತೆಯ ಕೊರಳಿಗೆ ಹಾಕಿದ ಎಷ್ಟೋ ಮಹಿಳೆಯರು ನಮಗೆ ಸರಿಸಾಟಿ ಇಲ್ಲವೆಂದು ತೋರಿಸಿಕೊಟ್ಟರು. ಉದಾಹರಣೆಗೆ ಪಿವಿ ಸಿಂಧು ,ಸೈನಾ ನೆಹ್ವಾಲ್, ಮಮತಾ ಪೂಜಾರಿಯಂತಹ ಮಹಾನ್ ಮಹಿಳೆಯರು ಪ್ರತೀ ಹೆಣ್ಣು ಕುವರಿಯರ ಪ್ರೇರಣೆ.

ಲತಾ ಮಂಗೇಶ್ಕರ್  (ಸಂಗೀತ), ರುಕ್ಮಿಣಿ  ದೇವಿ ( ಭರತನಾಟ್ಯ) ಮುತಾದವರು ಸ್ವಾವಲಂಬನೆಯ ಮೂಲಕ ಸಾಂಸ್ಕೃತಿಕ ಕ್ಷೇತ್ರವನ್ನು ರಾರಾಜಿಸುವಂತೆ ಮಾಡಿ ಘನತೆಯ ಸಂಕೇತವನ್ನು ಮಿಂಚಿಸಿದಂತಹ  ಮಹಿಳೆಯರು ನಮ್ಮ ನಡುವೆ ಇದ್ದಾರೆ

ಒಟ್ಟಿನಲ್ಲಿ ಆಕೆಗಿರುವ ಧೈರ್ಯ, ಸ್ಥೈರ್ಯ ಜೊತೆಗೆ ಸ್ವಾವಲಂಬನೆಯು ಸೇರಿದಾಗ ಮಗಳಾಗಿ, ಮಡದಿಯಾಗಿ, ತಾಯಿಯಾಗಿ, ಶ್ರೇಷ್ಠ ಮಹಿಳೆಯಾಗಿ ಹತ್ತು ಹಲವು ಕಾರ್ಯಗಳನ್ನು ಮಾಡುತ್ತಾಳೆ.ಆಕೆಯ ಸಾಮರ್ಥ್ಯಕ್ಕೆ ಆಕೆಯೇ ಸರಿಸಾಟಿಯಾಗುತ್ತಾಳೆ.

ಹೆಣ್ಣಿನ ಪೂರಕ ಶಕ್ತಿಯಾಗಿರುವ ಸ್ವಾವಲಂಬನೆ ಇಲ್ಲದಿದ್ದರೆ ಅವಳ ಸ್ಥಿತಿ ಏನಾಗುತ್ತದೆ ಎಂದು ಒಮ್ಮೆ ಅವಲೋಕನ ಮಾಡಿದರೆ, ಅವಳಿಗಾಗುವ ತೊಂದರೆಯಿಂದ ಇಡೀ ಪ್ರಪಂಚಕ್ಕೆ ಬಾರುಕೋಲಿನ ಹೊಡೆತ ಬಿದ್ದಂತಾಗುತ್ತದೆ. ಸ್ವಾವಲಂಬನೆ ಇಲ್ಲದಿದ್ದರೆ ಅಂದಿನ ಅನಿಷ್ಠ ಪದ್ಧತಿಗಳಾದ ವರದಕ್ಷಿಣೆ, ಸತಿ ಪದ್ಧತಿ ಇನ್ನೂ ಕೂಡ ತನ್ನ ಅಟ್ಟಹಾಸವನ್ನು ಮೆರೆಸುತ್ತಿತ್ತು. ಸ್ವಾವಲಂಬನೆ ಇಲ್ಲದಿದ್ದರೆ ನಾಲ್ಕು ಗೋಡೆಯ ಮಧ್ಯೆಯೇ ಕೀಲಿ ಹಾಕಿಕೊಂಡು ಕೂರಬೇಕಾಗುತ್ತಿತ್ತು. ಹಾರುವ ರೆಕ್ಕೆಗಳಿದ್ದರೂ ಗಗನದೆತ್ತರಕ್ಕೆ ಹಾರುವ ಸಾಮರ್ಥ್ಯವಿದ್ದರೂ ಕೂಡ ಪಂಜರದ ಹಕ್ಕಿಗಳಾಗಿ ಜೀವನ ನಡೆಸಬೇಕಾಗುತ್ತಿತ್ತು.

‘ಸ್ವಾವಲಂಬಿ ಜೀವನ ಸಾರ್ಥಕತೆಯ ಸಂಕೇತ’ ಎನ್ನುವ ಮಾತಿನ ಪ್ರಕಾರ ಸ್ವಾವಲಂಬನೆ ಇಲ್ಲದಿದ್ದರೆ ಮಹಿಳೆಯ ಬದುಕಿಗೆ ಮತ್ತು ದೇಶದ ಸರ್ವತೋಮುಖ ಬದುಕಿಗೂ ಅಡ್ಡಿಯಾಗಿ ನಿಲ್ಲುವ ಮೊದಲ ಅಂಶ ಅವಲಂಬನೆಯಾಗಲಿದೆ. ಹಾರುವ ಹಕ್ಕಿಗೆ ರೆಕ್ಕೆ ಇಲ್ಲದಂತಾಗುತ್ತದೆ. ಕನಸುಗಳನ್ನು ಕಣ್ಣೊಳಗೇ ಕೊಂದುಕೊಳ್ಳಬೇಕಾಗುತ್ತದೆ. ಚಿಗುರಿದ ಆಸೆಗಳನ್ನು ಮನದೊಳಗೆ ಚಿವುಟಬೇಕಾಗುತ್ತದೆ. ಒಲ್ಲದ ಮನಸ್ಸು ಇದ್ದರೂ ಒಲ್ಲೆನೆಂದು ಹೇಳಲಾರದೆ ‘ಬದುಕು  ಜಟಕಾಬಂಡಿ ಗಂಡು ಅದರ ಸಾಹೇಬ’ ಎಂದು ಜೀವನವನ್ನು ಕಳೆಯಬೇಕಾಗುತ್ತದೆ ಎಚ್ಚರ!!

 

ಸಂಧ್ಯಾ ಕೆ ಕೆ  &  ರಕ್ಷಿತ್ಹೆಚ್. ಆರ್

ವಿದ್ಯಾರ್ಥಿಗಳು

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು – ಶಿವಮೊಗ್ಗ

THE ROAD

According to Lewis carroll,

       “IF YOU DON’T KNOW WHERE ARE YOU GOING, ANY ROAD WILL GET YOU THERE”

For human beings, all living creature exists on the Earth, sky, mountains, trees, and many natural wonders are visible to the eye because of the road. For vehicles and pedestrians alike, the road is essential. Even airplane, before taking off, first moves on the road, its wheels rolling briefly on the ground before it lifts off and soars into the sky, only to land back on the road.

Countless wheels signals, more than four roads converge at the one point, and zebra crossing are marked on the road, vehicles stop due to red light, and pedestrians walk across safely. The way road is used reflects human ingenuity – vehicles stop, and pedestrians walk on zebra lines. The road guides us, having been created by digging the ground. It leads us in many directions, offering experiences and feelings to those who travel on it. The is stable, accommodating everything that travels across it. It plays a crucial in everyone’s life.

THINK ABOUT FOLLOWING QUESTIONS

*How far have you came?

*How did you get here?

*what helped to reach this place?

This kinds of questions arise in someone’s mind, and the answer often highlights the word “ROAD”.

Roads are constructed by digging the ground, carving through mountains, and building bridges over the water bodies.

 

Pritam B Patil

I BSW Student

Kateel Ashok Pai Memorial College, Shivamogga

“ಅಶೋಕವನದೊಳು ಅಮೃತದೆಲರು”

ಅಶೋಕ ವನದೊಳು ಎರಡು ದಿನಗಳಿಂದ ನಿರಂತರ ಬೀಸಿದ “ಅಮೃತ” ಎಲರು(ಗಾಳಿ) ನೀವು.. ಪದ ಪುಂಜಗಳ ಬಲೆಯೊಳಗೆ ಸಿಲುಕಲಸಾಧ್ಯವಾದ ನಿಮ್ಮೀ ಆತ್ಮ ವಿಶ್ವಾಸವ ಹೇಗೆಂದು ವರ್ಣಿಸಲಿ!!!

ಭಾಸ್ಕರನ ಭವ್ಯ ತೇಜಸ್ಸು ಒಂದೆಡೆಯೇ ಕೇಂದ್ರೀಕೃತವಾಗಿ ಪ್ರಜ್ವಲಿಸುವಂತಿರುವ ನಿಮ್ಮ ವ್ಯಕ್ತಿತ್ವ ಸರಳತೆಯ ಆಡಂಬರವೇ ಆಗಿತ್ತು ನಮಗೆ……

ಅಂಬರದಂತೆ ತೆರೆದಿಟ್ಟುಕೊಂಡ ನಿಮ್ಮ ಮೆದುಳು ಅಂಬುದಿಯಂತೆ ಹಲವು ಅರಿವ ಹೊಳೆಯ ಸಂಗಮಿಸಿಕೊಂಡು ತುಂಬಿಕೊಳ್ಳದೇ ಇನ್ನಷ್ಟು ಅರಿವಿಗಾಗಿ ಹವಣಿಸುತ್ತಿದೆ.. ನಿಮ್ಮರಿವ ಛಾಯೆ ನಮ್ಮೆಲ್ಲರನಪ್ಪಿ ನದುಳಂತೆ ಹೊಳೆವಂತಿದೆ!.. “ದೇಶ ಮೊದಲು!” ಎಂದೆದೆಗೊಗೆದ ನಿಮ್ಮ ಮೊದಲ ಮಾತಿನ ಬೀಜ ಯುವಕ ಯುವತಿಯರಾದ ನಮ್ಮ ಮನಭೂಮಿಗೆ ಬಿದ್ದು ಹಸಿರೊಡೆದಿದೆ. ಮೊದಲ ದಿನದ ಹತ್ತು ಮಾತುಗಳಲ್ಲಿ ಎಲ್ಲರ ಮಸ್ತಕದಲ್ಲಿ ಅಚ್ಚಳಿಯದೇ ಉಳಿದ ಮಾತು ‘ನಾನ್ಯಾಕೆ ಹೀಗಿರುವೆ?’ ಹಾಗೂ ಸಾಧನೆಯ ಬಾಗಿಲ ತೆರೆಯಲು “ಮುಂದೆ ಗುರಿ – ಹಿಂದೆ ಉರಿ” ಇರಬೇಕು ಎಂದು ನಿಮ್ಮ  ವಾಕ್ಯಗಳ ಹೆದೆಯಲ್ಲೇ ನೇರ ಬಾಣವ ಅಂತರಾಳಕ್ಕೆ ಗುರಿ ಇಟ್ಟು ಬೀಸಿದಿರಿ ,ನಮ್ಮೆಲ್ಲರನ್ನೂ ಖಾರವಾದ ನಿಂದನೆಯಲ್ಲಿ ಮೀಯಿಸಿ ಅದರ ಹಸಿ ಆವಿಯಾಗುವ ಮೊದಲೇ ಸಾಧನೆಯ

ಮಾರ್ಗವ ಭಾರ್ಗವ ಅರ್ಜುನನಿಗೆ ವಿವರಿಸಿದಂತೆ ವಿವರಿಸಿದಿರಿ..

ಸೈನಿಕನಾಗಿ ದೇಶದ ಜೀವಮಣಿಯ  ಹೊಳಪಲ್ಲಿ ಪ್ರಜ್ವಲಿಸಿದವರು, ಕಷ್ಟ ಒದಗಿಸುವ ಪಾಠಗಳ ನಿಮ್ಮುದಾರಣೆ ಮೂಲಕವೇ ಅಚ್ಛರಿಯಂತೆ ಅರಿವಂತೆ ಮಾಡಿದಿರಿ. ಜ್ಞಾನಕ್ಕೂ ವಿದ್ಯೆಗೂ ಕಾಗದಕ್ಕೂ ಇರುವ ಅಂತರವ ಅರ್ಥೈಸಿದಿರಿ!, ಹದಿ ಹರೆಯದ ವಯಸ್ಸಿನ ಭಾವಕ್ಕಿರುವ ಮರ್ಕಟನ ಬುದ್ಧಿಯ ತಿಳಿಸಿದಿರಿ. ನಿನ್ನಿಂದಸಾಧ್ಯ, ನಿನ್ನಿಂದಸಾಧ್ಯ!! ಎಂಬ ಸಮಾಜದೊಳು  ನಿನ್ನಿಂದ – “ಸಾಧ್ಯ” ಎನ್ನುವ ಅಕ್ಷರಾರ್ಥವನ್ನೂ ಜೀವಂತ ಉದಾಹರಣೆ ಮೂಲಕ ಮನದಾಳಕ್ಕಿದು ಚಿತ್ರಿಸಿದ್ದೀರಿ, ‘ಹಸಿವು’ ಪದದ ನಿಜಾರ್ಥವ ತಿಳಿಸಿದ ನಿಮಗೆ ಋಣಿ ನಾನು ನಿಮ್ಮಡಿದಾವರೆಗಳಿಗೆ‍♀…..

ಯಾವುದೊಂದೋ ಪಶ್ಚಾತಾಪದ ಅಗ್ನಿಯೊಳು  ಬೇಯುತ್ತಿದ್ದ ಬಳಲುತ್ತಿದ್ದ ನನ್ನಾತ್ಮಕ್ಕೆ  ಸಾಂತ್ವಾನ,ಸ್ಫೂರ್ತಿಯ ತುತ್ತ ನೀಡಿ  ಮರಣದ ಮಡುವಿನಿಂದ  ಹೊರತಂದ ನಿಮಗೆ… ಕೋಟಿ ಕೋಟಿ ಪ್ರಣಾಮಗಳು..

 

ತಂದೆಯ ಸ್ಥಾನದಲ್ಲಿರುವ ನಿಮಗೆ…

ಭಾವೋನ್ಮಾದದಿಂದ ಎರಗುವೆನು ನಾನು..

ಇದೊ ನಿಮಗಿದು ಭಾವಕ್ಷರಗಳ ಒಂದನೆ

 

ಕವನ ಕೆ. ಓ,

ಪ್ರಥಮ ಬಿಎ, ವಿದ್ಯಾರ್ಥಿನಿ

ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

 

ಸ್ವಾಭಿಮಾನದ ಕಡಲು ನನ್ನಮ್ಮ ನೊಡಲು……..

Image Credit : Google / Merrill Weber

ಯಾಕೆ !? ತಾಯಂದಿರ ದಿನದಂದು ಮಾತ್ರ ತಾಯಿಯ ಬಗ್ಗೆ ಭಾವನಾತ್ಮಕವಾಗಿ ಸೋಶಿಯಲ್ ಮೀಡಿಯಾಗಳಲ್ಲಿ, ಪತ್ರಿಕೆಗಳಲ್ಲಿ ಬರೆಯಬೇಕೇ ? ತನ್ನ ಹೃದಯದ ಮಂದಿರದಲ್ಲೇ ನಮ್ಮನ್ನು ಇಟ್ಟುಕೊಂಡಿರುವ ತಾಯಿಯ ಬಗ್ಗೆ ಪ್ರತಿದಿನವೂ ನೆನೆಸಿಕೊಳ್ಳುತ್ತಾ ಮೈ ಮರೆಯಬಾರದೇಕೆ ? ಅದಕ್ಕಾಗಿಯೇ ಇವತ್ತೊಂದು ತಾಯಿಯ ಬಗೆಗಿನ ಭಾವನಾತ್ಮಕ ಲೇಖನವನ್ನು ಓದಿ ;

ಸ್ವಾಭಿಮಾನ, ಧೈರ್ಯ, ಆತ್ಮ ವಿಶ್ವಾಸ, ಆತ್ಮಗೌರವವನ್ನು ನಾನು ಕಲಿಯಲಾರಂಬಿಸಿದ್ದು ನನ್ನಮ್ಮನನ್ನು ನೋಡಿ. ಅವಳು ನಿರೂಪಮಾಧ್ಬುತ. ಅವಳನುಭವಿಸಿದ ಕಷ್ಟಗಳು, ನೋವು, ಅವಮಾನಗಳು, ಅನುಮಾನಗಳು ಒಂದೇ ಎರಡೆ !..? ಆಕೆಯೊಡಲಾಳದಲ್ಲಿ ಅದೆಷ್ಟು ನೋವುಗಳಿದೆಯೋ ಅದೆಷ್ಟು ಪ್ರಶ್ನೆಗಳಿವೆಯೋ..? ಬಲ್ಲವರಾರು !. “ಹುಟ್ಟಿನಿಂದ ಸಾಯವವರೆಗೂ ಇದೆ ಹಣೆ ಬರಹ”. ಇದು ಅವಳ ಸರ್ವೇ ಸಾಮಾನ್ಯ ಮಾತು. ತನ್ನ ನೋವಿನಡುಗೆಯನ್ನ ತಾನೊಬ್ಬಳೇ ಉಂಡು ಅರಗಿಸಿಕೊಳ್ಳಲೂ ಆಗದೆ ಹಾಗೆ ಬಸಿರಲ್ಲೇ ಇಟ್ಟುಕೊಳ್ಳಲೂ ಆಗದೇ ಮರುಗುತಿಹಳು ನನ್ನಮ್ಮ.

ಕೂಡು ಕುಟುಂಬವೆಂಬ ಸಂಪಿಗೆ ಮರದಲ್ಲಿ ಅರಳಿದ ಮೊದಲ ಹೂವು ನನ್ನಮ್ಮ. ಅವಳು ತನ್ನ ಹದಿಮೂರನೇ ವಯಸ್ಸಿಗೇ ತಂದೆಯನ್ನು ಕಳೆದುಕೊಂಡಳು, ತಂದೆ ಹೊರಟ ಹಲವು ದಿನಗಳಲ್ಲೇ ಕೂಡು ಕುಟುಂಬ ಬೇಸಿಗೆಯಲ್ಲಿ ಗದ್ದೆ ಬಿರಿದಂತೆ ಬಿರಿಯಿತು. ಆಗ ಆಕೆಯ ಮೇಲೆ ಮೂವರು ತಂಗಿಯರು ಹಾಗೂ ಓರ್ವ ತಮ್ಮನ ಜವಾಬ್ದಾರಿ ಬಿತ್ತು. ಏನೂ ಅರಿಯದ ಮುಗ್ಧ ಮನದ ಅಮ್ಮ ಒಂದೆಡೆಯಾದರೆ ಇನ್ನೊಂದೆಡೆ ಅರಿಯದ ವಯಸ್ಸಿನಲ್ಲಿ ತಂದೆಯಿಂದ ತೆಗೆದುಕೊಂಡ ಭಾಷೆ, ದುಡಿಯಲೇಬೇಕಾದ ಅನಿವಾರ್ಯತೆ ಎದುರಾಗಿತ್ತು. ಇಂತಹ ಸಂದಿಗ್ಧ ಸಂದರ್ಭದಲ್ಲಿ ಊರಿನ ಬ್ರಾಹ್ಮಣರ ಮನೆಯಲ್ಲಿ ಕಾಯಕ ತೋರಿದಾಗ ಅವಳಿಗೆ ಬೆಲ್ಲ ತಿಂದಷ್ಟು ಖುಷಿ. ಯಾರದ್ದೋ ಮನೆಯ ಎಂಜಲ ಬಟ್ಟಲ ತೊಳೆದಳು. ಆದರೆ, ಒಂದು ದಿನವೂ ಕೂಡ ತನ್ನ ಕೆಲಸದ ಮೇಲೆ ಅಸೂಯೆ ಪಡಲಿಲ್ಲ ಆಕೆ.

“ಸ್ವಂತ ದುಡಿಮೆಯೇ ಜೀವನ” ಎಂಬುದೇ ಅಮ್ಮನ ಬಾಳ ಸೂಕ್ತಿ. ಕಷ್ಟಗಳ ಸಾಲು ಒಂದರಮೇಲೊಂದು ಬಂದರೂ ಎಂದಿಗೂ ಆತ್ಮ ವಿಶ್ವಾಸ ಕಳೆದುಕೊಳ್ಳದೇ ಗಟ್ಟಿ ಗೊಡೆಯಾಗಿ ನಿಂತಳು. ಮನೆಯನ್ನು ನಿಭಾಯಿಸಲು ಅಕ್ಕನಿಗೊಬ್ಬಳಿಗೆ ಕಷ್ಟ ಎಂದು ಸ್ವ – ಅರಿವು ಮೂಡಿಸಿಕೊಂಡ ತಂಗಿಯರು ಊರಲ್ಲಿದ್ದ ಶಾಲೆಯಲ್ಲಿ ಅಕ್ಷರ ಜ್ಞಾನವನ್ನು ಪಡೆದುಕೊಂಡರು. ಪ್ರೌಢ ಶಿಕ್ಷಣಕ್ಕಾಗಿ ದೂರದೂರಿಗೆ ನಡೆದೇ ಹೋಗಬೇಕಾದ್ದರಿಂದ ಮೊದಲು ಮತ್ತು ಕೊನೆಯ ತಂಗಿ – ತಮ್ಮಂದಿರು ವ್ಯಾಸಂಗವನ್ನು ಅಲ್ಲೇ ಅರ್ಧ ದಾರಿಗೇ ಮರೆತರು. ಆದರೆ ಕಲಿಕೆಯ ಹಸಿವು ಎರಡನೆ ತಂಗಿಯನ್ನು ಬಿಡಲೇ ಇಲ್ಲ, ಆಕೆ ಕೂಡ ತನಗೆ ಕೈಗೆಟಕಿದ ಕೆಲಸ ಮಾಡಿ ತನ್ನ ಓದನ್ನು ಮುಂದುವರಿಸಿದಳು. ಅದೆಷ್ಟೋ ದಿನದ ಉಪವಾಸ, ಅದೆಷ್ಟೋ ಗೋಳಾಟ, ಕಂಬನಿಗಳು, ಬಿಸಿಯುಸಿರು ನನ್ನಮ್ಮನ ದೇಹದ ಮಾಂಸ ಖಂಡಗಳಂತೆ….. ಇದರ ನಡುವೆಯೇ ಪುಟ್ಟ ತಮ್ಮನ ಆರೋಗ್ಯ ಕೈ ಮೀರಿದಾಗ ತಾನೊಬ್ಬಳೇ ಒಬ್ಬ ಪುರುಷನ ಸರಿ ಸಮನಾಗಿ ನಿಂತು ಯಮನೆದುರು ತಿಂಗಳುಗಟ್ಟಲೆ ಹೋರಾಡಿ ತಮ್ಮನನ್ನು ಉಳಿಸಿಕೊಂಡಳು ನನ್ನಮ್ಮ…. ತನ್ನ ಯವ್ವನ ಪೂರ್ತಿ ಬೇರೆಯವರಿಗಾಗಿಯೇ ತೆಯ್ದಳು ಅಮ್ಮ…..ಅವಳೇ ನನ್ನ ಅಮ್ಮ…..

ವಿವಾಹದ ವಯಸ್ಸಿಗೆ ಬಂದಾಗ ಆಕೆಯ ಬಾಳಿಗೇ ಇನ್ನೊಂದು ಅಚ್ಚರಿ ಕಾದಿತ್ತು. ಅದುವೇ ತಾಯಿ ಇಲ್ಲದ ಎರಡು ಮುಗ್ಧ ಮಕ್ಕಳ ಜವಾಬ್ದಾರಿ. ತಿರಸ್ಕರಿಸಲು ಅವಕಾಶವೇ ಇಲ್ಲದಂತಹ ಸಂದರ್ಭ ಒದಗಿದಾಗ ಆಕೆಯ ಇಷ್ಟ ಕಷ್ಟಗಳನ್ನು ಕೇಳಿದವರೇ ಇಲ್ಲ !. ನವ ಜೀವನದಲ್ಲೂ ನವ ತಿರುವುಗಳು, ಹೊಸ ಸಮಸ್ಯೆಗಳು. ಬೇರಾವುದೇ ದಾರಿ ಇಲ್ಲದೆ ಕಂಡಂತಹ ದಾರಿಯಲ್ಲಿ ನಡೆಯಬೇಕಾಯಿತು. ತವರು ಮನೆಯ ಸೊಬಗನ್ನು ತೊರೆಯಲೇಬೇಕಾದ ಆ ಕಷ್ಟದ ಅನುಭವವನ್ನು ಅನುಭವಿಸಿದವರಿಗೆ ಗೊತ್ತು. ಹೊಸ ಮನೆಯಲ್ಲಿ ನಾಲ್ಕು ಜನ ಕುಳಿತುಕೊಳ್ಳಲು ಕಷ್ಟವಾಗುವಂತಹ ಇಕ್ಕಟ್ಟಿನ ಜಾಗ….. ತರಕಾರಿ ಹೆಚ್ಚುವ ಕತ್ತಿಗೂ ಗತಿ ಇಲ್ಲದಂತಹ ಕ್ಲಿಷ್ಟ ಪರಿಸ್ಥಿತಿ, ಜೊತೆಗೆ ಅರಿಯದ ಎರಡು ಮುಗ್ಧ ಮಕ್ಕಳು ಬೇರೆ. ಇಂತಹ ವಿಷಮ ಪರಿಸ್ಥಿತಿಯಲ್ಲೂ ನನ್ನ ಅಮ್ಮನಿಗೆ ತಾನು ಸ್ವಂತ ಮನೆಯನ್ನ ಕಟ್ಟಲೇಬೇಕೆಂಬ ಛಲ, “ನನ್ನ ಕಣ್ಣೀರು, ನನ್ನ ನೋವುಗಳು ನನ್ನ ಮಕ್ಕಳಿಗೆ ಕಾಣಬಾರದು” ಎಂದು ಕೈಲಾದಷ್ಟು ದುಡಿದು ಸಂಪಾದಿಸಿದ ಹಣದಿಂದ ಮನೆಯ ಅಡಿಪಾಯವನ್ನಂತು ಮಾಡಿದಳು, ಆದ್ರೆ ಆ ಹೊತ್ತಿಗೆ ಗರ್ಭಿಣಿಯಾಗಿದ್ದ ನನ್ನಮ್ಮನಿಗೆ ಮತ್ತೊಂದು ಆಘಾತ ಕಾದಿತ್ತು.

ತುಂಬು ಗರ್ಭಿಣಿಯಾದ ಅವಳು ತಣ್ಣಗೆ ಬಾಗಿಲ ಬಳಿಯಲ್ಲಿ ದಣಿದು ಮಲಗಿದ್ದಾಗ ಆಡುವ ಮಕ್ಕಳೆರಡು ಬಂದು ಅರಿಯದೆ ಆಕೆಯ ಹೊಟ್ಟೆಯ ಮೇಲೆ ತಮ್ಮ ಕಾಲಿಟ್ಟು ಜಿಗಿದರು. ತೀವ್ರ ನೋವಲ್ಲಿ ಹೊಟ್ಟೆಯ ಒಳಗಡೆಯೇ ಒದ್ದಾಡಿ – ಒದ್ದಾಡಿ ಕಣ್ತೆರೆವ ಮೊದಲೇ ತನ್ನ ಕಣ್ಣನ್ನ ಗರ್ಭದಲ್ಲೇ ಮುಚ್ಚಿತು ಆ ಮಗು. ಒಂಭತ್ತು ತಿಂಗಳು ಹೊತ್ತ ಮಗು ಕೈಗೆ ಸಿಗದಂತಹ ಪರಿಸ್ಥಿತಿಯಲ್ಲೂ ಕುಗ್ಗದ ನನ್ನಮ್ಮ, ನಿಂದನೆಯ ಮಾತುಗಳನ್ನು ನುಂಗಿದ ನನ್ನಮ್ಮ ತನ್ನ ಮನೆಯ ಕೆಲಸಗಳನ್ನು ಮುಂದುವರಿಸಿದಳು. ಅಷ್ಟರಲ್ಲಿ ಮತ್ತೆ ಗರ್ಭಿಣಿಯಾದ ನನ್ನಮ್ಮ ನನ್ನನ್ನು ತನ್ನ ಗರ್ಭದಲ್ಲಿ ಹೊತ್ತಳು. ತಾಯಿ ಇಲ್ಲದ ಆ ಎರಡು ಮುಗ್ಧ ಮಕ್ಕಳನ್ನು ಎಂದಿಗೂ ಬೇರೆಯವರೆಂದು ಭಾವಿಸದೇ ತನ್ನ ಸ್ವಂತ ಮಕ್ಕಳಿಗಿಂತಲೂ ಹೆಚ್ಚು ಪ್ರೀತಿಯನ್ನು ಉಣಿಸಿ ಸಾಕಿದಳು. ನಾನು ಆಕೆಯ ಸ್ವಂತ ಮಗಳೇ ಆದರೂ ನನ್ನನ್ನು ಎಂದಿಗೂ ಕೂಡ ಅತಿಯಾಗಿ ಪ್ರೀತಿಸಲಿಲ್ಲ, ನನಗೆ ಕೆಲವೊಮ್ಮೆ ಅನುಮಾನವಾಗುತ್ತದೆ “ಈಕೆ ನಿಜವಾಗಿಯೂ ನನ್ನ ತಾಯಿಯೇ” ಎಂದು. ಇಂದಿಗೂ ಕೂಡ ನನಗೆಂದೇ ಪ್ರತ್ಯೇಕವಾಗಿ ಯಾವುದನ್ನೂ ಎತ್ತಿಟ್ಟವಳಲ್ಲ ನನ್ನಮ್ಮ, ಒಂದು ದಿನವೂ ನನ್ನನ್ನ ಮುದ್ದು ಮಾಡಿದವಳಲ್ಲ ನನ್ನಮ್ಮ, ಅಬ್ಬಾ….! ಅವಳಷ್ಟು ತಾಳ್ಮೆ ಯಾರಿಗೂ ಇಲ್ಲ. ನೋವಿನಲ್ಲಿ ತನ್ನ ಹೃದಯ ಜರ್ಜರಿತವಾಗಿದ್ದರು ಎಂದಿಗೂ ರಕ್ತದ ಕಲೆಯನ್ನು ತೋರಿದವಳಲ್ಲ ನನ್ನಮ್ಮ. ಅವಲಂಬನೆ ಎಂಬುದೊಂದು ಬಂಧನ ಎಂದು ಅರಿತ ಅವಳು ಮುಕ್ತ ಜೀವನವನ್ನೇ ನಡೆಸಿದಳು. ಆಕೆಯ ಪ್ರೀತಿಗೆ ಪಾಲುದಾರರಿದ್ದಾರಲ್ಲವೇ, ಅವರಿಗೂ ಕೂಡ ನ್ಯಾಯ ಒದಗಿಸಬೇಕಲ್ಲವೇ ?!. ಪುಣ್ಯ ಮಾಡಿರುವೆನು ಅವಳ ಮಡಿಲ ಮಗುವಾಗಿ ಬೆಳೆಯಲು, ಆಕೆಯ ಜೀವನವೇ ನನಗೆ ಕಲಿಸಿಕೊಟ್ಟ ಪಾಠವೆಂದರೆ ನಾವೆಂದಿಗೂ ಯಾವುದಕ್ಕೂ ಯಾರನ್ನೂ ಅವಲಂಬಿಸಬಾರದು ಅದು ಅನ್ನಕ್ಕೇ ಆಗಿರಲಿ, ಅರಿವಿಗೇ ಆಗಿರಲಿ ಅಥವಾ ಆಶ್ರಯಕ್ಕೇ ಆಗಿರಲಿ…….ಜಗತ್ತಿನ ಎಲ್ಲಾ ತಾಯಂದಿರಿಗೂ ಶತ ಶತ ನಮನಗಳು.

 

ಬರಹ : ಕವನ ಕೆ.,

ಪ್ರಥಮ ವರ್ಷದ ಬಿಎ ವಿದ್ಯಾರ್ಥಿನಿ,

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

 

 

ಪ್ರಜೆಗಳ ಹಬ್ಬ ಚುನಾವಣೆಯ ಹಬ್ಬ

“ನಾ ಭಾರತ, ನನ್ನಲ್ಲಿದೆ ಭಾರತ, ನಾನು ಶಕ್ತಿ, ನನ್ನಲ್ಲಡಗಿದೆ ಶಕ್ತಿ” ಎಂದು ಭಾರತದ ಪ್ರಜೆಗಳನ್ನು ಮತ ಚಲಾಯಿಸಲು ಹುರಿದುಂಬಿಸಿದ ಭಾರತದ ಚುನಾವಣಾ ಆಯೋಗದ ಹಾಡನ್ನು ಮೆಲುಕು ಹಾಕುತ್ತಾ ನಮ್ಮ ಮತದಾನದ ಹಕ್ಕನ್ನು ಚಲಾಯಿಸೋಣ,

ಚುನಾವಣೆ ಎನ್ನುವುದೇ ಒಂದು ಅಸ್ತ್ರ, ಪಕ್ಷ ಪಕ್ಷಗಳ ನಡುವೆ ಜನಪ್ರತಿನಿಧಿಗಳ ನಡುವೆ ಅಧಿಕಾರಕ್ಕಾಗಿ ಕಿತ್ತಾಟ ಹಾಗೂ ಪೈಪೋಟಿ ನಡೆಯುವಾಗ ಪರಿಹಾರವಾಗಿ ಬರುವುದೇ ಚುನಾವಣೆಯಾಗಿದೆ, ಚುನಾವಣೆ ಹಾಗೂ ಮತದಾನದ ನಡುವೆ ಅಪಾರವಾದ ಸಂಬಂಧವಿದೆ, ಚುನಾವಣೆ ಹಾಗೂ ಮತದಾನ ಒಂದು ನಾಣ್ಯದ ಎರಡು  ಮುಖಗಳಿದ್ದ ಹಾಗೆ, ಚುನಾವಣೆಯ ಪ್ರಕ್ರಿಯೆಯಲ್ಲಿ ಮತದಾನವೇ ಮುಖ್ಯವಾದ ಭಾಗ,

ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರ, ನಮ್ಮದು ಸಂವಿಧಾನಾತ್ಮಕ ಸರ್ಕಾರ, ಎಲ್ಲಾ ಪ್ರಜಾಪ್ರಭುತ್ವ ರಾಷ್ಟ್ರಗಳು ಪ್ರಜೆಗಳು ಆರಿಸುವ ಪ್ರಜಾ ಪ್ರತಿನಿಧಿಗೆ ರಾಜಕೀಯ ಹಕ್ಕನ್ನು ನೀಡಲು ಚುನಾವಣೆ ಎಂಬ ಕಾರ್ಯತಂತ್ರವನ್ನು ರೂಪಿಸಿದೆ, ಮತದಾನದ ಹಕ್ಕು ಇತರ ಹಕ್ಕುಗಳೊಡನೆ ನಾಗರಿಕರಿಗೆ ಸಂವಿಧಾನಾತ್ಮಕವಾಗಿ ನೀಡಿರುವ ಹಕ್ಕಾಗಿದೆ, ಆದ್ದರಿಂದ ಬನ್ನಿ ಎಲ್ಲಾ ಸೇರಿ ಯೋಗ್ಯವಾದ ಪ್ರಜಾ ಪ್ರತಿನಿಧಿಗೆ ಮತದಾನ ಮಾಡೋಣ, ನಮ್ಮ ಹಕ್ಕನ್ನು ಸರಿಯಾಗಿ ಉಪಯೋಗಿಸಕೊಳ್ಳೋಣ,

ಇತ್ತೀಚಿನ ವಿದ್ಯಮಾನಗಳಲ್ಲಿ ಒಂದು ಸಮೀಕ್ಷೆಯ ಪ್ರಕಾರ ಬಹುತೇಕ ಸುಶಿಕ್ಷಿತರು ಮತಗಟ್ಟೆಗೆ ಬರದೇ ತಮ್ಮ ಮತದಾನದ ಹಕ್ಕನ್ನು ಬಳಸಿಕೊಳ್ಳದೆ ಇರುವುದು ವಿಪರ್ಯಾಸದ ಸಂಗತಿ, 5 ನೇ ಕ್ಲಾಸಿಂದ 18 ವರ್ಷ ತುಂಬಿದವರೆಲ್ಲ ಮತದಾನ ಮಾಡಲೇಬೇಕು ಎಂದು ಪಾಠ ಮಾಡುತ್ತಾ ಬರುತ್ತಿದ್ದರೂ ಸಹ ಎಲ್ಲವನ್ನೂ ಓದಿಕೊಂಡಂತಹ ವಿದ್ಯಾವಂತರು ಚುನಾವಣೆಯ ದಿನ ಮತ ಚಲಾವಣೆ ಮಾಡುವುದನ್ನೇ ಮೈ ಮರೆತು ಮನೆಯಿಂದ ಹೊರಬರದೆ ಟಿವಿ ಮುಂದೆ ಕುಳಿತು ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ವೀಕ್ಷಿಸುತ್ತ ಕಾಲ ಕಳೆಯುವುದು. ಇನ್ನು ಕೆಲವರು ಮಕ್ಕಳ ಬೇಸಿಗೆ ರಜೆ ಇದೆ ಎಂದು ಪ್ರವಾಸ ಕೈಗೊಳ್ಳುವುದು, ಒಂದು (ದೂರದ) ಊರಿನಿಂದ ಇನ್ನೊಂದು ಊರಿಗೆ ಹೊಟ್ಟೆಪಾಡಿಗಾಗಿ ಅಥವಾ ಕೆಲಸದ ನಿಮಿತ್ತ ಬಂದ ಕೆಲಸಗಾರರು ಮತದಾನ ಮಾಡಲು ಒಂದು ದಿನಕೊಸ್ಕರ ತಮ್ಮ ಊರಿಗೆ ಹೋಗಲಾರದೆ ಇರುವ ಪರಿಸ್ಥಿಯಲ್ಲಿ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ನಿಜಕ್ಕೂ ದುರಾದೃಷ್ಟಕರ ಸಂಗತಿ, ಇಂದು ಭಾರತದ ಯಾವುದೇ ಭಾಗದಲ್ಲಿ ಮತದಾನವಾದರೂ  ಶೇಕಡಾ 100 ರಷ್ಟು ಮತದಾನ ನಡೆಯುತ್ತಿಲ್ಲ, ಇದಕ್ಕೆಲ್ಲ ಪ್ರಮುಖ ಕಾರಣ ನಾಗರಿಕರಲ್ಲಿ ಮತದಾನದ ಬಗ್ಗೆ ಇರುವ  ಅಲಕ್ಷ್ಯ ಮತ್ತು ಅವರಿಗೆ ತಮ್ಮ ಮತದಾನದ ಹಕ್ಕು ಹಾಗೂ ಜವಾಬ್ದಾರಿಯ ಬಗ್ಗೆ ಸರಿಯಾದ ಜ್ಞಾನ ಇಲ್ಲದೆ ಇರುವುದೇ ಆಗಿದೆ, ಹಾಗಾಗಿ ಮತದಾರರು ಪ್ರಜ್ಞಾವಂತರಾಗಿ ಸರಿಯಾದ ಪ್ರಜಾ ಪ್ರತಿನಿಧಿಗೆ ಮತದಾನ ಮಾಡಬೇಕು, ದೇಶದ ಭವಿಷ್ಯದ ಹಿತದೃಷ್ಟಿಯಿಂದ ನಾವು ಮಾಡುತ್ತಿರುವ ಕರ್ತವ್ಯ ಇದು ಎಂದು ಭಾವಿಸಿ ಮತದಾನದಲ್ಲಿ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಉತ್ತಮ ಪ್ರಜಾ ಪ್ರತಿನಿಧಿಗಳನ್ನು ಆರಿಸುವಲ್ಲಿ ತಮ್ಮ ಹಕ್ಕನ್ನು ಚಲಾಯಿಸಬೇಕು,

ಚುನಾವಣೆ ಹಾಗೂ ಮತದಾನ ಒಂದು ನಾಣ್ಯದ ಎರಡು ಮುಖಗಳಾಗಿದೆ, ಚುನಾವಣಾ ಪ್ರಕ್ರಿಯೆಯಲ್ಲಿ ಮತದಾನವೇ ಅತ್ಯಂತ ಮುಖ್ಯವಾದ ಘಟ್ಟ, ಮತ ಚಲಾಯಿಸುವವನೇ ಮತದಾರ, ಜಾತಿ, ಮತ, ಪಂಥ, ಧರ್ಮ, ಉನ್ನತ, ಕನಿಷ್ಠ, ಸ್ಥಾನಮಾನ ಮುಂತಾದವುಗಳ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡದೆ ಒಂದು ರಾಷ್ಟ್ರದ 18 ವರ್ಷ ತುಂಬಿದ ಪ್ರಜೆಯು ಮತ ಚಲಾಯಿಸುವ ಹಕ್ಕನ್ನು ಭಾರತೀಯ ಸಂವಿಧಾನವು ನಮಗೆ ನೀಡಿದೆ,

ಬನ್ನಿ ಎಲ್ಲಾ ಸೇರಿ ರಾಷ್ಟ್ರೀಯ ಹಬ್ಬದಂತೆ ಈ ಬಾರಿಯ ಚುನಾವಣೆಯ ಹಬ್ಬವನ್ನು ಆಚರಿಸೋಣ 10ನೇ ಮೇ 2023 ರಂದು ಯೋಗ್ಯವಾದ ಪ್ರಜಾಪ್ರತಿನಿಧಿಗೆ ನಮ್ಮ ಅಮೂಲ್ಯವಾದ ಮತವನ್ನು ಹಾಕುವುದರ ಮೂಲಕ ಕರ್ನಾಟಕದ ರಾಜ್ಯದ ಮುಂದಿನ 5 ವರ್ಷದ ಭವಿಷ್ಯಕ್ಕೆ ಮುನ್ನುಡಿ ಬರೆಯೋಣ, ರಾಜ್ಯದ ಮುಂದಿನ 5 ವರ್ಷದ ಭವಿಷ್ಯದ ಜೊತೆಗೆ ನಮ್ಮಂತಹ ಕೋಟ್ಯಂತರ ಪ್ರಜೆಗಳ 5 ವರ್ಷದ ಭವಿಷ್ಯವೂ ನಮ್ಮ ಕೈಯಲ್ಲೇ ಇದೆ, ಯೋಚಿಸಿ ಯೋಗ್ಯರಿಗೆ ಮತ ಚಲಾಯಿಸಿ……!

ಗೌಸ್ ಪೀರ್,
ಪ್ರಥಮ ವರ್ಷದ ಬಿಎ ವಿದ್ಯಾರ್ಥಿ,

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು,ಶಿವಮೊಗ್ಗ,