ಆಕೆ ಕೂಡು ಕುಟುಂಬದಲ್ಲಿ 3ನೇಯವಳಾಗಿ ಜನಿಸಿದವಳು. ಅಲ್ಲಿ ಕೂಡ ಬಡತನವೇ ಸೈ!, ಅದು ಹೆಣ್ಣು “ಭಾರ” ಎನ್ನುವಂತ ಕಾಲ. ಒಂದೇ ಜೊತೆ ಬಟ್ಟೆಯನ್ನು ಒಬ್ಬರಿಂದೊಬ್ಬರಿಗೆ ಬದಲಾಯಿಸಿ ಮತ್ತೊಮ್ಮೆ ಧರಿಸುವಂತ ಸಂದರ್ಭ,ಆದರೂ ಹೆಸರಿಗೆ ದೊಡ್ದ ಮನೆತನವದು. ಆ ಕುಟುಂಬದಲ್ಲಿ ನಾಲ್ವರು ಗಂಡು ಹಾಗೂ ಐವರು ಹೆಣ್ಣು ಮಕ್ಕಳು. ಒಂದು ಬಡ ಕುಟುಂಬದಲ್ಲಿ ಅವರ ಜೀವನ ಗುರಿಯೇ ಹೆಣ್ಣು ಮಕ್ಕಳ ಮದುವೆ ಮಾಡಿ ಕೈ ತೊಳೆದುಕೊಳ್ಳುವುದು, ಮನೆ ನಡಿಸುವುದು ಎಷ್ಟೇ ಕಷ್ಟವಾಗಿಯೇ ಇದ್ದರೂ ಮದುವೆ ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕಳುಹಿಸಿದರೆ ಸಾಕು ಎಂಬಂತ ಕಾಲ ,ಹಾಗೋ ಹೀಗೋ ಆಕೆಗೆ ಮದುವೆಯನ್ನಮಾಡಿದರು.
ಕಾಲಿಟ್ಟ ಮನೆಯಲ್ಲಿ ಕೂಡಾ ಅಷ್ಟೇ ತುಂಬು ಕುಟುಂಬ, ಬಡತನದ ಛಾಪು ಹೇರಳವಾಗೇ ಇತ್ತು!.ಹೇಗೊ ಇನ್ನು “ಅಂತರಪಟದಾಚೆ ನಿಂತ ನಲ್ಲನೇ ಜೀವನದ ಅರ್ಥ”, ಆತ ಕಪ್ಪಾಗಿರಲಿ, ಕಳ್ಳನಾಗಿರಲಿ,ಕುಬ್ಜನೇ ಆಗಿರಲಿ, ಮೃಗವೇ ಆಗಿರಲಿ ಆತನೇ ತನ್ನ ತನು ಮನದ ಅರ್ಧಾಂಗ ಎನ್ನುವುದನ್ನ ದೃಢವಾಗಿ ನಂಬಿದ್ದಳಾಕೆ. ಪ್ರತೀ ಹೆಣ್ಣಿಗೂ ಗಂಡನೊಂದಿಗೆ ಬೆಸೆದ ಬಾಂಧವ್ಯ ಎಷ್ಟೊಂದು ಅವಿನಾಭಾವವೆಂದರೆ!, ಆತನಾದರೂ ಆಕೆ ಸತ್ತರೆ ಇನ್ನೊಬ್ಬಳನ್ನ ಆರಾಮಾಗಿ ವರಿಸಬಲ್ಲ ಆದರೆ ಆಕೆಗೆ ಅದು ಸೂಜಿಗಳನ್ನು ನುಂಗುವಷ್ಟು ಕಷ್ಟ. ಈ ಕೂಡು ಕುಟುಂಬದಲ್ಲಿ ಹೊಂದಿಕೊಳ್ಳಲು ಆಕೆಗೆ ಅಂತೇನೂ ಕಷ್ಟವಾಗಲಿಲ್ಲ , ಆಕೆ ನೀಳವಾದ ಕೂದಲುಳ್ಳವಳು, ಸಲ್ಪ ಉಬ್ಬು ಹಲ್ಲು ಬಾಸಿಂಗದ ಸುಳಿ ಹೊತ್ತವಳು, ಅಂದದ ರಂಗೋಲಿ ಎಳೆವವಳು,ರೂಪಸಿ ಅಲ್ಲದಿದ್ದರೂ , ಚೆಂದವೇ ಇದ್ದವಳು,!..
ಈಗಿನಂಗೆ ಯಾವ ಫೋನೂ ಆಗ ಲಭ್ಯವಿರಲಿಲ್ಲ ಹಾಗಾಗಿ ಸಂಬಂಧಗಳ ಸಂತಸ ಅನು ದಿನ ಹೊಸತರಂತೆ ಇರುತ್ತಿತ್ತು!, ಅವಳು ಎಲ್ಲಾ ಕೆಲಸಗಳನ್ನೂ ಸಲೀಸಾಗಿ ಮಾಡುತ್ತಿದ್ದವಳು ಆದರೆ ಸಲ್ಪ ಕೋಪಿಷ್ಟೆ ಆದರೂ ಅಂತೇನೂ ತೊಂದರೆ ಇಲ್ಲ!.ಆಕೆಯ ದಿನಚರಿ ಪುಸ್ತಕ ಅವಳ ಗಂಡನೇ ಆಗಿರುತ್ತಿದ್ದ!. ಅದು ಎಷ್ಟು ಮುಗ್ಧ ಪ್ರೀತಿಯೆಂದರೆ ಆಕೆಯ ಎಲ್ಲಾ ಮಾತುಗಳಿಗೂ ಅವನು ಹೂ ಗೊಡುತ್ತಿದ್ದ, ನಳ ದಮಯಂತಿಯರಂತೆ ಅನ್ಯೋನ್ಯತೆ. ಅವನೂ ಕೂಡಾ ಅತೀ ಮುಗ್ಧ ಪ್ರೌಢ ದೇಹದಲ್ಲಿ ಮಗುವಿನ ಆತ್ಮ ಅಡಿಗಿದಂತೆ. ಗಂಡನಲ್ಲಿ ಎಂದೂ ಹಠ ಮಾಡಿದವಳಲ್ಲ. ಅದೋ ಕೂಡು ಕುಟುಂಬ ಬೇರೆ ಹಾಗಾಗಿ ಕೆಲಸಗಳು ಹಂಚಿಕೆಯಾಗಿರುತ್ತಿದ್ದವು!, ಮಾಡಲೇ ಬೇಕಾದ ಅನಿವಾರ್ಯತೆ ಇರುತ್ತಿತ್ತು. ಲಗ್ನವಾಗಿ ಒಂದು ವರ್ಷವಾಗುವಾಗಲೇ ಆ ದಂಪತಿಗಳಿಗೆ ಗಂಡು ಮಗುವನ್ನ ಮಡಿಲಿಗೆ ನೀಡಿದ ಪರಮಾತ್ಮ!..ಈ ಸಂತಸದ ಬೆನ್ನಲ್ಲೇ ಮತ್ತೊಂದು ಊಡುಗೊರೆಯಂತೆ ಹೆಣ್ಣು ಮಗುವೂ ಜನಿಸಿತು.
ಕಾಲ ನಡೆಯುತ್ತಿತ್ತು ಹೀಗೆ ಒಮ್ಮೆ ಒಂದು ದಿನ ಆಕೆ ಮಗುವಿಗೆ ಹಾಲುಣಿಸುತ್ತಾ ಇದ್ದಂತೆ ಜೋರು ಜೋರು ದನಿಯಲ್ಲಿನ ಮಾತುಕತೆ ಆಕೆಯ ಕಿವಿಗೆ ಬಿತ್ತು, ಏನೋ ಆಯಿತೆಂಬ ತರಾ ತುರಿಯಲ್ಲಿ ಮಗುವ ಮಲಗಿಸಿದ ಆಕೆ ಹಾಗೇ ಅಲ್ಲಿಗೆ ಹೋದಳು. ಸಲ್ಪ ದೂರದಲಿ ಬಾಗಿಲ ಬಳಿ ನಿಂತು ನೋಡುತ್ತಿದ್ದಳು, ಮಾತಿನ ಚಕಮಕಿಯಲ್ಲಿದ್ದ ಇಬ್ಬರಲ್ಲೊಬ್ಬರು ಬಾಗಿಲನ್ನ ತಿಳಿಯದೇ ತಳ್ಳಿದಾಗ ಮರುಕ್ಷಣ ಬಾಗಿಲು ಆಕೆಯ ಸ್ತನದ ಮೇಲೆ ರಬಸದಿ ಬಂದು ಬಡಿಯಿತು!, ಒಮ್ಮೆಲೇ ಜಲ್ಮ ಹೋದಂತಾಗಿ ಮನದಲ್ಲೇ ಅರಚಿದಳು.. ಮಾರನೇ ದಿನ ಸರಿಯಾದೀತೆಂದು ಸುಮ್ಮನಾಗಿಬಿಟ್ಟಳು, ಆದರೆ ಆಗಲೇ ಅದೇ ಭಾಗದಲ್ಲಿ ಹೆಪ್ಪುಗಟ್ಟಿದ ರಕ್ತ ತನ್ನ ಕೆಲಸ ಮಾಡಾಲಾರಂಭಿಸಿತ್ತು!.
ಹೀಗೆ ಆ ನೋವು ಆಕೆಯನ್ನು ಸೀಳುತ್ತಿತ್ತು, ಹೇಳಿಕೊಳ್ಳಲೂ ಆಗದೆ ಏನಾಗುತ್ತಿದೆ ಎಂದು ತಿಳಿಯದೇ ಆಕೆ ತನ್ನ ಓರಗಿತ್ತಿಯ ಬಳಿ ಒಮ್ಮೆ ಹೇಳಿಕೊಂಡಳು,”ಅಕ್ಕಮ್ಮ!, ಎದೆ ತುಂಬಾ ನೋವು ಒಮ್ಮೊಮ್ಮೆ, ಮಗುವಿಗೆ ಹಾಲನುಣಿಸಲೂ ಕಷ್ಟವಾದಂತೆ!”.. ಆದರೆ ಏನೂ ಅರಿಯದ ಅಕ್ಕ ಇಲ್ಲ ಈ ಸಮಯದಲ್ಲಿ ಹಾಗಾಗುತ್ತೆ ಬಾಣಂತಿ ಇದ್ದಾಗ ಇದೆಲ್ಲ ಸರ್ವೇ ಸಾಮಾನ್ಯ ಎಂದಳು. ಆಗಲೂ ಆಕೆ ಹೌದೇನೋ ಎಂದು ಸುಮ್ಮನಾದಳು ದಿನೇ ದಿನೇ ವಿಪರೀತವಾದಂತೆ, ಸ್ತನದಿಂದ ಮೊಸರಿನ ಅಂಶ ಹೊರಬರುವುದನ್ನ ಗಮನಿಸಿದಾಕೆ ಭಯಗೊಂಡು ಗಂಡನಲ್ಲಿ ಹೇಳಿಕೊಂಡಳು. ಮಾರನೇ ದಿನ ಆಸ್ಪತ್ರೆಗೆ ಹೋದಾಗಲೇ ಅವರಿಗೆ ತಿಳಿದದ್ದು “ಅರ್ಭುದವೀಗ ವ್ಯಾಘ್ರವಾಗಿದೆ ಎಂದು”..
ಅಂದರೆ ಸ್ತನದ ಕ್ಯಾನ್ಸರ್ ಈಗಾಗಲೇ ಆಕೆಯನ್ನ ಅರ್ಧ ತಿಂದಿತ್ತು. “ಕ್ಯಾನ್ಸರ್ ಬಂದವ ಸತ್ತ” ಎಂಬ ಮಾತಿದ್ದ ಕಾಲವದು, ವಿಷಯಾರಗಿಸಿಕೊಳ್ಳುವ ಮೊದಲೇ ಆಕೆಯ ಕೈಯಲ್ಲಿ ಎರಡು ಮಕ್ಕಳೂ ಒಬ್ಬ ಮುಗ್ಧ ಪತಿಯೂ ಇದ್ದ!.. ಹರಡುತ್ತಲೇ ಹೋದ ಕ್ಯಾನ್ಸರ್ ಮೊದಲು ಕೈ ಹಾಕಿದ್ದೆ ಆಕೆಯ ಕೇಶಕ್ಕೆ!.. ಬಡತನ ಬೇರೆ ಇನ್ನೊಂದೆಡೆ, ಮಕ್ಕಳಿಬ್ಬರೂ ಯಾರದ್ದೋ ಕೈ ಮೇಲೆ!,. ಕುಡಿದ ನೀರೂ ಕಂಬನಿಯಾಗುತ್ತಿರುವ ಸಂದರ್ಭ. ಅದರಲ್ಲೂ ವೈದ್ಯ ನಮ್ಮಿಂದಾಗದು ಇನ್ನು ನಿಮಗೆ ಮಣಿಪಾಲೆ ಸರಿ ಎಂದರು!, ಜನರು ಒಂದೆಡೆ ಅವಳೆದುರಲ್ಲೇ “ಮಣಿಪಾಲಿಗೆ ಹೋದವ ಮಣ್ಣುಪಾಲೇ” ಎಂದು ಮಾತುಗಳಲ್ಲೇ ಆಕೆಯನ್ನ ಕಿತ್ತು ತಿನ್ನುತ್ತಿದ್ದಾರೆ.. ಖಾಯಿಲೆಗಿಂತಲೂ ಆಕೆಯನ್ನ ಚಿಂತೆಯೇ ಚಿತೆಗೇರಿಸುತ್ತಿದೆ!
ತವರಿನವರು ಬಂದು ನೋಡುವಾಗ ಆಕೆ ಕೃಶವಾಗಿದ್ದಳು, ಕೆನ್ನೆ ಮೂಳೆಗಂಟಿ ಕಣ್ಣುಗಳ ಸುತ್ತಲೂ ಕಾರ್ಮೋಡ ಕವಿದಿತ್ತು!.. ಮಣಿಪಾಲ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾರಂಭಿಸಿದರು, ಏನಾದರೂ ಚೇತರಿಕೆಯ ಮಾತೇ ಇಲ್ಲ! ಆಕೆಯ ತೋಳುಗಳು ಮಕ್ಕಳನ್ನೇ ಬಯಸಿದರೂ ಆಕೆಯ ಖಾಯಿಲೆ ಆಗಲೇ ಅವರಿಂದ ದೂರವಾಗಿಸಿತ್ತು. ಪತಿಯೂ ಪ್ರತೀ ಕ್ಷಣವೂ ತನ್ನಿಂದಾದಷ್ಟು ಸಮಯವನ್ನು ಅವಳೊಡನೇ ಕಳೆಯುತ್ತಿದ್ದ,ಆಗಲೇ ಮೂರು ಸಂವತ್ಸರಗಳು ಸುಳಿವಿಲ್ಲದೇ ಕಳೆದರೂ ಆತನ ಎದೆಯಲ್ಲಿದ್ದ ಹೊಳಪು ಕಳೆಗುಂದಲೇ ಇಲ್ಲ. ನನ್ನಾಕೆ ಮತ್ತೊಮ್ಮೆ ನಗುತ್ತಾಳೆ ಎಲ್ಲವೂ ಮೊದಲಿನಂತೆ ಆದೀತೆಂಬ ಹಂಬಲ ಅವನಲ್ಲಿ, ಆತ ಮಾಡಿದ್ದ ಹರಕೆಗಳೆಷ್ಟೋ!, ಕೈ ಮುಗಿದ ಕಲ್ಹೃದಯದ ದೇವರುಗಳೆಷ್ಟೋ..
ಇನ್ನಾಕೆಯ ಜೀವ ದೇವರದ್ದು ಎಂದು ವೈದ್ಯರೂ ಕೈಚೆಲ್ಲಿ ಕುಳಿತಾಗ, ಮತ್ತೆ ಮರಳಿ ಆಕೆಯನ್ನು ತವರಿಗೆ ವೊಯ್ಯುವಂತೆ ಮಾತಾಯಿತು. ಇಲ್ಲಿ ಗಂಡನ ಮನೆಯಲ್ಲಿ ಕೂಡು ಕುಟುಂಬ ಬೇರೆಯಾಗಲೇ ಬೇಕೆಂಬ ವಿವಾದದ ಕಳ್ಳಿಗಿಡ ಬೇರೂರಿತ್ತು, ಆಕೆಯ ತವರಿನವರು ಬಂದು ಅಂಗಲಾಚಿದರು ಇನ್ನು ಕೇವಲ 6 ತಿಂಗಳಷ್ಟೇ ಆಕೆ ಹೊರಡುತ್ತಾಳೆ ದಯವಿಟ್ಟು ಇಂತಾ ಸಮಯದಲ್ಲಿ ಬೇರೆಯಾಗುವ ಮಾತುಬೇಡವೆಂದು. ಕಿವುಡರಂತೆ ಮಾನವೀಯತೆ ಕಳೆದುಕೊಂಡ ಮೃಗರು ಕೇಳಬೇಕಲ್ಲ!?..
ಇನ್ನೊಂದೆಡೆ ತವರಲ್ಲಿ ಗಂಡನನ್ನು ಮಕ್ಕಳನ್ನೂ ತೊರೆದು ದಿನವೂ ಸಾಯುತ್ತಿದ್ದಳು ಆಕೆ!, ಆತನೋ ಅಸಹಾಯಕ ಸ್ಥಿತಿಯಲ್ಲಿ ಇದ್ದವ ಅರ್ಧ ದೇಹವೇ ಕೊಳೆಯುತ್ತಿದೆ ಎಂಬ ತೀವ್ರ ನೋವು ಎದೆಯಲ್ಲಿ!, ಇನ್ನೊಂದೆಡೆ “ನೀನೇ ಸರಿ ಇಲ್ಲ” ಎಂದು ಸುತ್ತಿಗೆ ಏಟಿನಂತ ಮಾತುಗಳು ಬೇರೆ!. ಅನ್ಯಾಯದ ವಿರುದ್ಧ ಮಾತನಾಡಲೂ ಬಾರದಂತ ಮುಗ್ಧ ಅವನು, ಒಂದೇ ದೇಹವಾಗಿದ್ದ ಮಡದಿಯ ಮೊಗವ ನೋಡಲೂ ಅವಕಾಶವಿಲ್ಲ!,ಅಲ್ಲಿ ಹೋದರೆ ಅವರು ಇಲ್ಲಿ ಬಂದರೆ ಇವರು ನಿಂದಿಸುತ್ತಲೇ ಇದ್ದಾರೆ. ಆತನೀಗ ತನ್ನ ಯೋಚನೆಗಳನ್ನು ತಾನೇ ನೋಡಲಾಗದಂತಾಗಿದ್ದಾನೆ ಆತ ತಿರುಗಿ ಏನನ್ನೂ ಹೇಳದೇ ಸುಮ್ಮನೇ ಕೂತು ಬಿಡುತ್ತಿದ್ದ..
ಹೆಂಡತಿಯ ಮೊಗ ನೋಡಲು ಬೆಳಿಗ್ಗೆ ಹೊತ್ತು ಮೂಡುವ ಮೊದಲೇ ಎದ್ದು ಎಲ್ಲ ಕೆಲಸಗಳ ಪೂರೈಸಿ ಆ ನಲ್ವತ್ತು ಮೈಲಿ ನಡೆದು ಉಸಿರುತ್ತಾ ಅವರ ಮನೆ ಬಂದಮೇಲೆ ಆತ ನಿಲ್ಲುತ್ತಿದ್ದ. ಜಗುಲಿಯ ಮೇಲೆ ಕುಳಿತಾಗ ಅವನ ಕಂಗಳು ಆಕೆಯನ್ನೇ ಹುಡುಕುತ್ತಾ ಇರುತ್ತಿದ್ದಾಗ!, ಪೂರ್ತಿ ಸೊರಗಿ ಶಕ್ತಿ ಕಳೆದುಕೊಂಡ ಆಕೆ ಅವನ ದನಿಯ ಕೇಳಿ, ಚೈತನ್ಯ ತುಂಬಿಸಿಕೊಂಡು,ಕಣ್ದುಂಬಿಕೊಂಡು ತೆವಳುತ್ತಾ ತೆವಳುತ್ತಾ ಬಂದು ಆ ಬಾಗಿಲ ಬಳಿಯಲಿದ್ದ ಏಣಿ ಕಾಲಲ್ಲಿ ಕುಳಿತು ಆತನನ್ನೇ ದಿಟ್ಟಿಸಿ ನೋಡುತ್ತಾ ಕುಳಿತಾಗ ಅವಳ ಅನುಮತಿಯ ಕೇಳದೆ ಕಣ್ಹನಿಗಳು ಕಲ್ಲಾಗಿ ಗಲ್ಲದವರೆಗೂ ಇಳಿಯುತ್ತಿದ್ದವು!. ಇತ್ತ ಈತ ‘ಮನೆಗೆ ಬಂದು ಬಿಡೇ ಎನ್ನೋಣವೆಂದರೆ’ ನನ್ನ ಕೈಯಲ್ಲಿ ಬಿಡಿಗಾಸೂ ಇಲ್ಲವಲ್ಲ, ನಲ್ಲೇ! ದುರಾದೃಷ್ಟದ ಇನ್ನೊಂದು ಹೆಸರೇ ನಾನು ಎಂದು ಮನದಲ್ಲೇ ದುಃಖ್ಕಿಯಾಗಿದ್ದಾನೆ..!..ಇಬ್ಬರಲ್ಲೂ ತಬ್ಬಿ ಅಳುವಷ್ಟು ಆಳತೆ!, ಒಬ್ಬರೆದುರಲ್ಲಿ ಒಬ್ಬರು ಕುಳಿತು ತಲ್ಲೀನರಾಗುವಷ್ಟು ಮೌನತೆ ನೀಳವಾಗಿ ಅಡಗಿದೆ ಆದರೆ ಇಬ್ಬರೂ ಮೌನಿಗಳು!..
ಆಕೆಯ ಇಡೀ ದೇಹವನ್ನೇ ಆವರಿಸಿದ ಕ್ಯಾನ್ಸರ್ ಸಾವಿಗೂ ಆಮಂತ್ರಣ ನೀಡಿದೆ!. ಈಗ ಆಕೆ ಮತ್ತೆ ಮಗುವಾಗಿದ್ದಾಳೆ ,ಹಠ ಮಾಡುತ್ತಾಳೆ!, ಒಮ್ಮೆ ನಗುತ್ತಾಳೆ!, ಮತ್ತೊಮ್ಮೆ ಅಳುತ್ತಾಳೆ, ಮಗದೊಮ್ಮೆ ಮೌನಿಯಾಗಿ ಆಳ ಆಲೋಚನೆಯಲ್ಲಿ ಮುಳುಗುತ್ತಾಳೆ. ಅಷ್ಟೂ ದಿನದ ಸಂಸಾರದಲ್ಲಿ ಒಂದು ಮಲ್ಲಿಗೆ ಹೂವನ್ನೂ ಬಯಸದವಳು,” ರೀ!,ನಂಗೊಂದು ಸೀರೆ ಕೊಡ್ಸೀ”.. ಎಂದು ಅವನನ್ನು ದಿಟ್ಟಿಸಿ ಬೇಡುತ್ತಿದ್ದಳು!,ಆತ ಎಂದೂ ಕಣ್ಣಿಂದ ನೀರ ನೆಲಕ್ಕುರುಳಿಸದವ ಅಂದು ಪೂರ್ತಿ ನೇತ್ರಾವತಿಯನ್ನೇ ಹರಿಸಿದ್ದಿದೆ!. ಒಂದೆಡೆ ಔಷಧಿಗೆ ಹಣವೆಂಬ ಕಾಗದವನ್ನು ಬೇಡಲೇ ಇಲ್ಲ ಸೀರೆ ತರಲೇ ಎಂಬಾತನ ನೋವಿನ ಬಿಸಿಯುಸಿರು ಅವನನ್ನೇ ಸುಡುತ್ತಿದೆ..
ಆಕೆಯ ದೇಹ ದೀಪದ ಬತ್ತಿಯು ಉರಿದು ಉರಿದು ನಂದಲು ಇನ್ನೇನು ಕೆಲವು ದಿನಗಳಿರುವಾಗ ಆಕೆ ಮಗುವಂತೆ ನಾನು ನನ್ನ ಮನೆಗೆ ಹೋಗಲೇಬೇಕೆಂದು ಹಠ ಮಾಡಿದಳು, ಇರುವಷ್ಟು ದಿನವಾದರೂ ನೆಮ್ಮದಿಯಿಂದಿರಲಿ ಎಂದು ಆಕೆಯನ್ನು ಕರೆದೊಯ್ದ ಆತ, ಈಗಾಗಲೇ ಕೂಡು ಕುಟುಂಬ ಒಡೆದಿದೆ!.
ಅದು ಗದ್ದೆ ನಾಟಿ ಸಮಯ ಎಲ್ಲರೂ ಗದ್ದೆಯಿಂದ ಬಂದು ಉಂಡು ಮತ್ತೆ ಮರಳುವ ಹೊತ್ತು, ಈಕೆಯೂ ಕೂಡಾ ಸಲ್ಪೆ ಸಲ್ಪ ಅನ್ನ ನುಂಗಿದ್ದಳು ಹಾಗೂ ಬಾಗಿಲಲ್ಲೇ ಕುಳಿತು ತನ್ನ ದುರಾದೃಷ್ಟತೆಯನ್ನು ಅನುಭವಿಸುತ್ತಾ ಕುಳಿತಿದ್ದಳು, ಗಂಡನನ್ನು ನೋಡಿ “ರೀ, ನಾನೂ ಹೊರಗಡೆ ಹೋಗ್ಬೇಕು ಕರ್ಕೊಂಡು ಹೋಗಿ” ಎಂದಳಾಕೆ!. ಅವಳನ್ನು ಕೈಮೇಲೆ ತನ್ನ ಮಗುವಂತೆ ಎತ್ತಿಕೊಂಡು ಆತ ಕರೆದೊಯ್ದ!, ಆಕೆಗೆ ಕೂರಲೂ ಸಾಧ್ಯವಾಗುತ್ತಿಲ್ಲ ಆದರೆ ಆತನಿಗೀಗ ಅವಳೊಂದು ಮಗುವಂತೆ ಕಾಣುತ್ತಿದ್ದಾಳೆ. ಅವನಿಗೆ ಅವಳ ಮೇಲಿದ್ದ ಅನಂತ ಪ್ರೇಮ ಅವಳ ದೇಹದಮೇಲಲ್ಲ, ಆಕೆಯ ಮೌನದೊಳಗಿದ್ದ ಮಾತಿನ ಮೇಲೆ!.. ಆತ ಅವಳೊಂದಿಗಿದ್ದು ಆಕೆಯ ಮಲ ಮೂತ್ರವನ್ನೂ ತೊಳೆದು ಮತ್ತೊಮ್ಮೆ ಕೈ ಮೇಲೆ ಹೊತ್ತು ಹೊಸ್ತಿಲ ಬಳಿ ಬರುವಾಗಾಗಲೇ ಆಕೆ ಅವನ ಕಣ್ಣುಗಳನ್ನೇ ನೋಡುತ್ತಾ ಮೌನವಾಗಿದ್ದಾಳೆ ಆಕೆ!..
ಒಮ್ಮೆಲೇ ಆತನ ಆರ್ತ ಕೂಗು ಜವನನ್ನೂ ನಡುಗಿಸಿತು!, ಅಂದು ಅವಳೊಂದಿಗೆ ಹೊಸ್ತಿಲ ದಾಟಿದ ಆತ ಇಂದು ಆಕೆಯ ಪಾರ್ಥೀವ ಶರೀರವನ್ನು ಹಿಡಿದು ಹೊಸ್ತಿಲಲ್ಲೇ ನಿಂತಿದ್ದಾನೆ!. ಈಗ ಆತನ ತಲೆಯಲ್ಲಿ ಕೊನೆಗೂ ಅವಳು ಕೇಳಿದ್ದ ಸೀರೆ ಅವಳಿಗಾಗಲೇ ಇಲ್ಲವಲ್ಲ ಎನ್ನುವ ಆಳ ಗಾಯದ ನೋವು!,ಅವನ ಕಣ್ಣೀರು ಮೆಲ್ಲನೆ ಜಾರಿ ಆಕೆಯ ತುಟಿಗಳ ಮೇಲೆ ಬೀಳುತ್ತಿದೆ..ಇತ್ತ ಈಕೆ ಕರ್ಮ ಹರಿದುಕೊಂಡು, ದೇಹದಿಂದ ಹೊರಗೆ ನಿಂತು!. ರೀ ಇಲ್ನೋಡಿ ನನಗೆ ಈಗ ನೋವುಗಳೇ ಇಲ್ಲ, ನಾನು ಮನಸ್ಪೂರ್ತಿಯಾಗಿ ನಗುತ್ತಿದ್ದೇನೆ ಆದರೆ ನಿಮಗೇಕೆ ಇಷ್ಟು ನೋವು ಎಂದು ಪ್ರಶ್ನಿಸುತ್ತಾ ನಿಂತಿದ್ದಾಳೆ!..ಯಮನೂ ಭೀಕರ ಮೌನದ ಏಟಿಗೆ ಬಲಿಯಾಗಿ ನಿಂತಿದ್ದಾನೆ.. ಆಕೆ ತನ್ನ ಪತಿಯ ಕೈಯಲ್ಲೇ ಮುತ್ತೈದೆಯಾಗಿ ತೆರಳಿದ್ದರಿಂದ ಆನಂದವಾಗಿ ನಗುತ್ತಿದ್ದಾಳೆ…! ಈಗ ಎಲ್ಲವೂ ಧೋ! ಎಂದು ಸುರಿದ ಮಳೆ ನಿಂತಾಗ ಬರುವ ತಣಿವಿನ ಭಾವದಲ್ಲಿದೆ..ಎಲ್ಲವೂ ಮುಗಿದಿದೆ…
ನಾ ಕಂಡಂತೆ ನೈಜ ಪ್ರೇಮವೂ ಹೀಗೇ ದೇಹದಲ್ಲಿ ಅಡಗಿರದೇ ಆತ್ಮದಲ್ಲೇ ಅಡಗಿರುತ್ತದೆ.. ಮೆಸೇಜ್,ಫೋನ್ ನಲ್ಲೇ ಪ್ರೀತಿಯ ಹುಡುಕುವ ಈ ಕಾಲದಲ್ಲಿ ನನಗೆ ಕಂಡ ನಿತ್ಯ ಪ್ರೇಮವೇ ಇದು!..ನನ್ನ ಸುತ್ತಲಿನದ್ದೆ
ಕವನ ಕೆ. ಓ,
ದ್ವಿತೀಯ ಬಿ ಎ, ವಿದ್ಯಾರ್ಥಿನಿ,
ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ