ನೀನಾಸಂನ ನೀಳ ನೆನಪುಗಳು

 

 

ಹೆಗ್ಗೋಡು ನನಗೆ ಚಿರಪರಿಚಿತ ಊರು!.. ಅಮ್ಮ ಆಗಲೇ ನನಗೆ ನೀನಾಸಂನ ಬಗ್ಗೆ ಸದಾ ಹೇಳುತ್ತಿದ್ದಳು ಏಕೆಂದರೆ ಅದು ಅವಳೂರು, ಒಂದೊಮ್ಮೆಯಾದರೂ ಅಲ್ಲಿಗೆ ಭೇಟಿ ನೀಡುವ ಆಸೆ ನನ್ನೊಳಗೆ ಯಾವಾಗಲೂ ಇರುತ್ತಿತ್ತು. ಎಲ್ಲದಕ್ಕೂ ಸಮಯ ಬೇಕೆಂಬಂತೆ!, ನನ್ನ ಕಾಲೇಜು ಈ ದೊಡ್ಡ ಅವಕಾಶದ ಬಾಗಿಲತ್ತ ನನ್ನ ಒಯ್ದು ಬಿಟ್ಟಾಗ ಬೆಲ್ಲ ತಿಂದಷ್ಟು ಕುಷಿ ನನಗಾಯ್ತು!!..

ನೀನಾಸಂ ಈ ಐದು ದಿನಗಳು ನಮಗೆ ಜ್ಞಾನದೌತಣ ನೀಡಿತು. ಖಾಲಿ ಮಸ್ತಕದ ಭೃಂಗದಂತೆ ಹೋದ ನಾವು!ಮರಳಿದ್ದು ವೈವಿದ್ಯಮಯ ಅನುಭವ ಹಾಗೂ ಅರಿವ ಕುಸುಮಗಳ ಮಕರಂದದೊಂದಿಗೆ. ಅಂದು ಸಂಜೆ ನೀನಾಸಂಗೆ ನಮ್ಮಡಿ ಸೋಕುತಿದ್ದಂತೆ ನನ್ನ ಮನಸ್ಸಿಗೆ ಉಲ್ಲಾಸವೆನಿಸಿದ ವಿಷಯವೆಂದರೆ ಸಾವಿರಾಕ್ಷರಗಳ ಸುಂದರ ಪುಸ್ತಕಗಳ ಚೀಲ! ಅಬ್ಭಾ ಅದಂತೂ ಅಧ್ಬುತ ಕ್ಷಣ.. ಆದರೂ ನನ್ನ ಮನದಲ್ಲಿ ಒಂದು ಸಣ್ಣ ಯೋಚನೆಯಿತ್ತು, ನೀನಾಸಂ ಆಧುನಿಕತೆಯ ಛಾಪನ್ನು ಪಡೆದು ಹಳೇತನ ಕಳೆದುಕೊಂಡಿರಬಹುದೇನೋ ಎಂದು!, ಆದರೆ ನನ್ನ ನಿರೀಕ್ಷೆಗೆ ಅಲ್ಲಿನ ಹಳೆತನದ ಸುವಾಸನೆ ಕಪಾಳಮೋಕ್ಷ ಮಾಡಿತು. ಅಲ್ಲಿನ ಹಳ್ಳಿಯ ಸೊಗಡೇ ಬೇರೆ ಆಧುನೀಕರಣದ ಭೂತ ಎಂದೂ ಆ ಹಳ್ಳಿಯ ದೈವೀಕತೆಯನ್ನು ಮುಟ್ಟಲಾರದು.

ನಮಗೆ ನೀಡಿದ್ದ ವಸತಿ ಸ್ಥಳ ಅದರ ಬಾಗಿಲಲ್ಲಿದ್ದ ಶೀರ್ಷಿಕೆಯೇ ನಮ್ಮನ್ನು ಸ್ವಾಗತಿಸುತ್ತಿತ್ತು. ನಾಳಿನ ಕೌತುಕಗಳ ಸಿಹಿ ಕ್ಷಣಗಳನ್ನು ನಿರೀಕ್ಷಿಸುತ್ತಾ ನಿದ್ರೆಗೆ ಜಾರಿದೆವು. ಮೊದಲ ದಿನವು ಹೊಂಬಣ್ಣದ ಅರುಣನಿಂದ ಅರಳಿ ನಿಂತಿತ್ತು. ಸುತ್ತಲೂ ನೋಡಿದಷ್ಟೂ ಅನುಭವೀ ಮೇಘಗಳು!, ನಮಗೆ ನಡೆದಾಡುವ ಪುಸ್ತಗಳಂತೆ ಎಲ್ಲರೂ ತೋರುತ್ತಿದ್ದರು. ಎಲ್ಲರನ್ನೂ ನೋಡಿ ಮನವು ಹೊಸದೊಂದು ಚೈತನ್ಯ ತುಂಬಿಸಿಕೊಂಡು ಸಭಾಂಗಣ ಹೊಕ್ಕಿತು!, ನೀನಾಸಂ ನಮ್ಮ ಮೇಲೆ ಐದೂ ದಿನ ಜ್ಞಾನ ದೀವಿಗೆಯ ಬೆಳಕೊಗೆಯಲು ತಮ್ಮ ಅರ್ಥಿಗಳ ಧನಿಯ ಮೂಲಕ “ಕಲ್ಪನಾ ವಿಲಾಸ” ಎಂಬ ಭಾವಗೀತೆಯ ಅಡಿಗಲ್ಲನ್ನು ಹಾಕಿತು. ಎಲ್ಲರ ಪರಿಚಯ ಮಾಡಿಸುವ ಮೂಲಕ ನಮಗೆ ಆಗಮಿಸಿದ್ದ ಪ್ರತಿ ವೈವಿಧ್ಯಮಯ ವೈಖರಿಯಲ್ಲಿ ಕಾಣುತ್ತಿದ್ದ ಎಲ್ಲ ಬದುಕುಗಳ ಶೀರ್ಷಿಕೆ ದರ್ಶನ ಮಾಡಿಸಿದ ನೀನಾಸಂಗೆ ನಾವು ಖಂಡಿತಾ ಋಣಿ. ಈ ಕಲೆಗಳ ಸಂಗಡ ಮಾತುಕತೆ ಆರಂಭವಾದದ್ದು ನಾಗೇಶ್ ಹೆಗ್ಗಡೆಯವರ ಮಾತಿಂದ ಅವರ ಮಾತುಗಳು ಎಷ್ಟು ಕತ್ತಿಯಂತೆ ನಮ್ಮನ್ನು ಹೊಡೆಯಿತೆಂದರೆ, ಅದು ನಾವೇ ಮಾಡುತ್ತಿರುವ ಪ್ರಕೃತಿ ನಾಶದ ಚಿತ್ರವನ್ನು ಕಲಾವಿದರು ತಮ್ಮ ಪ್ರತಿಭೆಗಳ ಮೂಲಕ ವ್ಯಕ್ತಪಡಿಸುವುದರ ಅಥವಾ ಬಿಡಿಸುವ ಪೂರ್ಣ ಚಿತ್ರಣವನ್ನು ಸ್ಥೂಲವಾಗಿ ವಿವರಿಸಿದರು. ಇದರ ಮಧ್ಯದಲ್ಲಿ ನಮಗಾಗಿ ಕಾದಿದ್ದ ಇನ್ನೊಂದು ಅಚ್ಚರಿಯೇ ನಮ್ಮ ನಾಗರಾಜ್ ಸರ್ ಕಂಡದ್ದು!..

ಎಲ್ಲದಕ್ಕಿಂತ ವೈವಿಧ್ಯಮಯತೆ ಎಂದರೆ ಆ ಗೋಡೆಗಳ ಮೇಲಿನ ಚಿತ್ರಗಳು ಅಬ್ಭಾ ಎನಿಸುವಂತವು. ಘಳಿ-ಘಳಿಗೆಯೂ ಸಿಹಿತ್ವ ಹೊಂದಿತ್ತು, ಅಲ್ಲಿಗೆ ಬಂದ ಪ್ರತಿಯೊಬ್ಬರ ಪ್ರಭೆ ಅವರ ಮಾತು ನಡುವಳಿಕೆಗಳೇ ವರ್ಣಿಸುತ್ತಿದ್ದವು. ಪ್ರತಿಯೊಬ್ಬರೂ ವೇದಿಕೆಯ ಮೇಲೆ ನಿಂತು ತಮ್ಮ ಜ್ಞಾನವನ್ನು ಹಂಚಿಕೊಳ್ಳುತ್ತಿದ್ದಂತೆ ಅವುಗಳ ಮೇಲಿನ ಪ್ರಶ್ನೆಗಳಂತೂ ಇನ್ನೂ ಹೊಸತೊಂದನ್ನು ಹೊತ್ತಿರುತ್ತಿದ್ದವು. ಅಬ್ಭಾ! ಮೊದಲ ದಿನದ ದಶಾನನ ಸ್ವಪ್ನಸಿದ್ದಿ  ನಾಟಕ ಪ್ರಸ್ತುತಿಯಂತೂ ಅಷ್ಟು ಪುಟ್ಟ ವೇದಿಕೆ ಮೇಲೆ ಮತ್ತೊಮ್ಮೆ ರಾಮಾಯಣ ದರ್ಶನವಾದಂತೆ ಕಣ್ಕಟ್ಟುವಂತಿತ್ತು, ಬಹುಶಃ ನನ್ನ ಪದ ಚೀಲದಲ್ಲಿ ಯಾವ ಪದಗಳೂ ವರ್ಣನೆಗಿಲ್ಲ.

ನನ್ನ ಮನಸ್ಸು ನವ ಚೇತನ ಭಾವದೊಳು ಹೊಸತರ ಅರಿವನ್ನು ಪಡಿದುಕೊಳ್ಳಲು ಬಾಗಿಲ ತೆರೆದು ಒಂದೊಂದನ್ನೇ ಹೀರುತ್ತಿತ್ತು. ಜಯಂತ್ ಕಾಯ್ಕಿಣಿ ಅವರು ಹೇಳಿದಂತೆ ನನ್ನ ಪಾಲಿಗೂ ನೀನಾಸಂ ಹೆರಿಗೆ ಆಸ್ಪತ್ರೆಯಂತೆ ಆಗಿತ್ತು. ‘ತುಂಬಿದ ಕೊಡ ತುಳುಕುವುದಿಲ್ಲ’ ಎಂಬ ಗಾದೆಯಂತೆ ಅಲ್ಲಿ ಬಂದ ಯಾರೊಬ್ಬರಲ್ಲೂ ಅಹಂಕಾರ, ಅಸೂಯೆ ಭಾವಗಳನ್ನು ನಾನು ಕಾಣಲಿಲ್ಲ. ಅರಿವ ಅಂಬುದಿಯ ದಂಡೆ ಮೇಲೆ ನಿಂತಂತೆ ಭಾಸವಾಗುತ್ತಿತ್ತು ದಿಗಂತದತ್ತ ನೋಡುತ್ತಿತ್ತು ಮನಸ್ಸು.

ಮಲ್ಲಪ್ಪ ಬಂಡಿ ಸರ್ ಅವರ ಮಾತುಗಳು ಕಣ್ಣಂಚಲ್ಲಿ ನೀರೂರುವಂತೆ ಮಾಡಿದವು, ಸಾಧನೆಗೆ ತನುವು ಎಂದಿಗೂ ಅಡ್ಡಲಾಗಲಾರದೆಂಬ ಸ್ಪೂರ್ತಿ ನನ್ನೊಳಚಿಮ್ಮಿತು. ಹೀಗೇ ಪ್ರತೀಯೊಂದನ್ನೂ ಹೇಳುತ್ತಾ ಹೋದರೆ ಪುಟಗಳೇ ಸಾಲದೆನಿಸುತ್ತದೆ. ಯಾರನ್ನೂ ಅಲ್ಲಗಳಿವಂತಿಲ್ಲ, ತೇಜಶ್ರೀಯವರ ಮಾತಿನಲ್ಲಿದ್ದ ನಿಖರತಾಭಾವ ಹಾಗೂ ನಾಟ್ಯ ಅಭಿಜಾತೆಯಾಗಿ ಬಂದ ನಿರುಪಮಾ ರಾಜೇಂದ್ರ ಅವರು ಹೇಳ ತೀರದ ವರ್ಣನೆಯಾಗಿದ್ದಾರೆ.  ಅಕ್ಷರರವರ ಸಾಮಾನ್ಯೀಕರಣದ ವಿವರಣೆ ತರ್ಕ ಬದ್ದವಾಗಿತ್ತು!,ಹಾಗೂ ಏನೊಂದೋ ಅರಿವಿನ ಅಲೆಯ ಹೊಂದಿತ್ತು. ಅಷ್ಟೇ ಅಲ್ಲದೇ ಹೆಚ್.ಎಸ್ ಶಿವಪ್ರಸಾದ್ ಅವರು ನನ್ನ ಅಕ್ಷಿಗಳೆದುರು ಆಸೀನರಾಗಿ ಶೇಕ್ಸ್ಪಿಯರ್ ಬಗೆಗಿನ ಉಪನ್ಯಾಸ ನೀಡುವಾಗ ನಮಗಿವರು ನಿಜವಾಗಿಯೂ ಶಿವ ಪ್ರಸಾದರೇ ಎನಿಸಿತು.. ಈ ಎಲ್ಲಾ ಅಭಿಜಾತರ ನಡುವೆ ಕುಳಿತ ನಾವು ಹಲವಾರು ಹೆಸರಾಂತ ಸವಿಭಾವಗಳ ಪರವಶರಾಗಿದ್ದೆವು. ಅಕ್ಷರ ಅವರ ಸಾಮಾನ್ಯನಂತೆ ನಾನು ಎಂಬ ಪದ್ಯದ ವಿಮರ್ಶೆಯಂತೂ ಇನ್ನೂ ಕಿವಿಯಲ್ಲಿ ಅನುರಣಿಸುವಂತಿದೆ..

ಹಾಗೂ ‘ಅಕ್ಷರ’ರ ‘ವಿದ್ಯೆ’ಯೊಂದಿಗೆ ಮಾತನಾಡಿದಾಗ ಅರಿತದ್ದು ಹೆಸರಿಗೆ ಉಸಿರು ಕೊಡುವ ಬಗೆಗೆ.. ಅಲ್ಲದೇ ರಾಜೇಂದ್ರ ಚೆನ್ನಿ ಸರ್ ಅವರ “ಇರುಮುಡಿ” ಹಾಗೂ “ಧನ್ಯವಾದಗಳು” ಪದ್ಯಗಳ ವಿಶ್ಲೇಷಣೆ, ಸ್ತ್ರೀಯರ ಸಂಪೂರ್ಣ ಜೀವನದ ಪರಿಯ ದರ್ಪಣವೇ ಆಗಿತ್ತು.. ರುದ್ರವೀಣೆಯ ನಾದ ತಂತಿ ನನ್ನ ಹೃದಯದೊಳಗೆ ಇಳಿದು ಮೀಟಿ ಅನುರಣಿಸುತ್ತಿರುವಾಗ ತಾಯಿ ವೀಣಾಪಾಣಿಯೇ ಕುಳಿತಂತ ಸಂಗೀತ ಭಾವ.. ಪ್ರಸ್ತುತ ಜಗತ್ತಿನ ಪ್ರಕೃತಿ ವಿರುದ್ಧದ ಮಾನವನ ಮೋಹದ ಬದುಕನ್ನ ಬಿ-ಲವೆಡ್ ನಾಟಕ ಬಿಚ್ಚಿಟ್ಟಾಗ ಸಮಾಜದ ಬಗೆಗೆ ಅಸೂಯೆ ಮೂಡಿತು..

ಇದೆಲ್ಲದರ ಬಗೆಗೆ ಹೇಳುತ್ತಿದ್ದಂತೆ ಮರೆಯಲಾಗದ ವಿಷಯವೆಂದರೆ ನೀನಾಸಂನಲ್ಲಿನ ಊಟೋಪಹಾರದ ವ್ಯವಸ್ಥೆ !, ಎಷ್ಟು ಸ್ವಚ್ಚ ಸುಂದರವಾದ ವ್ಯವಸ್ಥೆ ಅಲ್ಲಿತ್ತೆಂದರೆ ಆ ಬಾಳೆಎಲೆಯೇ ಎಲ್ಲ ಭಾವನೆಗಳನ್ನು ಹಸುರಾಗಿಟ್ಟಿತ್ತು..

ಹೇಳಲೇ ಬೇಕಾದ ವಿಷಯವೊಂದಿದೆ ಹಾಗೂ ಈಕೆಯ ಪರಿಚಯ ಖಂಡಿತಾ ಎಲ್ಲರಿಗೂ ಆಗಬೇಕು!, ಶಿಬಿರ ಮುಗಿದ ರಾತ್ರಿ ನಾವೆಲ್ಲರೂ ಮಾತಿನಲ್ಲಿ ಮುಳುಗಿಹೋಗಿದ್ದೆವು ಅನೇಕ ವಿಷಯಗಳು ಮಾತುಗಳಲ್ಲಿ ಹಾಡು ಹೋದವು ಹೀಗೆ ಮಾತನಾಡುತ್ತಿದ್ದಂತೆ ಪ್ರಜ್ಞಾ ಅವರ ಬಾಯಿಂದ ಹೊರಟ ಮಾತು ನನ್ನನ್ನು ಮೌನಿಯಾಗಿಸಿತು. ನಮ್ಮಂತೆ ಮೊದಲ ವರ್ಷದ ಶಿಬಿರಾರ್ಥಿಯಾಗಿ ಬಂದ ದಿಟ್ಟ ಹಾಗೂ ಗಟ್ಟಿ ಮಹಿಳೆಯಾದ ಪ್ರಜ್ಞಾ ಮೇಡಂ ಅವರೂ ಕೂಡ ಲೇಖಕಿಯೇ ,ಅವರು ಸ್ತ್ರೀಯರ ಬಗೆಗೆ ಬರೆದ ಅತ್ಯುತ್ತಮ ಸಾಲು ನನ್ನ ಅಂತರಂಗದಾಳವನ್ನೇ ಕಲುಕಿತು ಆ ಮಾತು ಹೀಗಿದೆ “ನಾನು ಜೀವಿಗಳ ಸೃಷ್ಟಿ ಕರ್ತೆಯಾಗಿದ್ದರೆ, ಪ್ರತೀ ಹೆಣ್ಣು ಮಕ್ಕಳ ಯೋನಿಯಲ್ಲಿ ಹರಿತವಾದ ಹಲ್ಲುಗಳನ್ನೂ ತುಟಿಗಳ ಮೇಲೆ ಉಗುರುಗಳನ್ನೂ ಸೃಷ್ಟಿಸುತ್ತಿದೆ” ಎಂಬುದು, ಬಹುಶಃ ಈ ಮಾತಿನ ವಿಮರ್ಶೆಯ ಅಗತ್ಯತೆ ಇಲ್ಲ ಎನಿಸುತ್ತದೆ…

ಒಟ್ಟಾರೆಯಾಗಿ ಹೇಳುವುದಾದರೆ ನೀನಾಸಂನಲ್ಲಿ ವಿನಯತೆ, ಸಂಸ್ಕೃತಿ,ಅರಿವು ಪ್ರೀತಿ ಜೀವನದ ಎಲ್ಲ ಮೌಲ್ಯಗಳು ಭಗವಂತ ಪಾರ್ಥಾನಿಗೆ ತಾಳ್ಮೆಯಿಂದ ಹೇಳಿದ ಗೀತದಂತೆ ನಮ್ಮ ಕರ್ಣ ಹೊಕ್ಕು ನೆತ್ತರು ಮಾಂಸ ನರಮಂಡಲಗಳ ಸೀಳಿ ಹೃದಯ ಹಾಗೂ ಮಸ್ತಕವನ್ನ ಸೇರಿದಂತಾಯಿತು. ಅಕ್ಷರ ಸರ್ ಹೇಳಿದಂತೆ “ಪ್ರತೀ ಅಂತ್ಯವೂ ಹೊಸತೊಂದು ಆರಂಭ” , ಮರಳುವಾಗ ಹಸ್ತಗಳ ತುಂಬ ಪುಸ್ತಕಗಳು ಮಸ್ತಕದ ತುಂಬಾ ಹೊಸತನ್ನು ತಂದ ಹೆಮ್ಮೆ ನಮಗಿದೆ

ಈಗ ನೀನಾಸಂನೊಂದಿಗೆ ಬೆಸೆದ ಈ ಹೊಸದಾದ ಅವಿನಾಭಾವ ಸಂಬಂಧ ಇನ್ನೂ ಮುಂದುವರಿಯಬೇಕು ಎಂಬ ಆಸೆಯೊಂದಿಗೆ ನಾನು ಅಲ್ಲಿಂದ ಹೊರಬಂದೆ!. ನೀನಾಸಂನಂತ ನಾಕದ ಬಾಗಿಲ ತೋರಿದ ನಮ್ಮ ಸಂಧ್ಯಾ ಕಾವೇರಿ ಮೇಡಂ ಹಾಗೂ ರೇಷ್ಮಾ ಮೇಡಂ ಗೆ ನಾನಂತೂ ಚಿರ ಋಣಿ!..

ಕವನ ಕೆ,

ದ್ವಿತೀಯ  ಬಿ ಎ, ವಿದ್ಯಾರ್ಥಿನಿ,

ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ