‘ನಾನು ನಾನದಾಗ’

Photo Credit: Google.com

ಅವು ಬೇಸಿಗೆ ರಜೆಯ ದಿನಗಳು. ಪರೀಕ್ಷೆ ಮುಗಿದು ಫಲಿತಾಂಶ ಬಿಡುಗಡೆಯಾಗಿತ್ತು, ನಾನು ಎಲ್ಲಾ ವಿಷಯದಲ್ಲೂ ಉತ್ತಮ ಅಂಕಗಳನ್ನು ಪಡೆದು ಆರನೇಯ ತರಗತಿಯಿಂದ ಏಳನೇಯ ತರಗತಿಗೆ ತೇರ್ಗಡೆ ಹೊಂದಿದ್ದೆ.  ನನ್ನಮ್ಮ ಬೇಗ ಏದ್ದು, ತಿಂಡಿ ಊಟ ಸಿದ್ದ ಮಾಡಿ ನನ್ನನ್ನು ಶಾಲೆಗೆ ಕಳುಹಿಸುವುದು  ಪ್ರತಿನಿತ್ಯದ ಕೆಲಸವಾಗಿತ್ತು. ಅವಳಿಗೆ ಅನಾರೋಗ್ಯ ಇದ್ದರು ಈ ಕೆಲಸಗಳಿಂದ ಮುಕ್ತಿ ಇರಲಿಲ್ಲ. ಆದರೆ, ನನಗೆ ಆಗ ಬೇಸಿಗೆ ರಜೆ ಇದ್ದುದರಿಂದ ನಾನು ಮತ್ತು ನನ್ನಮ್ಮ ಅಜ್ಜಿಯ ಊರಿಗೆ ಹೋಗಲು ನಿರ್ಧರಿಸಿ ಸಿದ್ದರಾದೆವು. ನನ್ನ ತಂದೆಯವರು ನಮ್ಮಿಬ್ಬರನ್ನು ಅಜ್ಜಿಯ ಮನೆಗೆ ಬಿಟ್ಟು ಬಂದರು.

ನನ್ನನ್ನೂ ಸೇರಿದಂತೆಯೇ ಎಲ್ಲಾ ಮೊಮ್ಮಕ್ಕಳಿಗೂ ಅಜ್ಜಿ ಮನೆಯಂದರೆ ಒಂದುರೀತಿಯ ಸ್ವತಂತ್ರ ಮತ್ತು ನೆಮ್ಮದಿಸಿಗುವ ಜಾಗವೇ ಸರಿ. ನನಗೆ ನನ್ನಜ್ಜಿ ಯಾವಾಗಲು ‘ಕಾಮದೇನು’ವಿನಂತೆ ಅನ್ನಿಸುತ್ತಿದ್ದಳು,ಯಾಕಂದರೆ ಕೇಳಿದ್ದೆಲ್ಲವನ್ನು ಕೊಡುವ, ಕೈತುತ್ತು ತಿನ್ನಿಸುವ, ಅಮ್ಮನ ಹೊಡೆತದಿಂದ ರಕ್ಷಿಸುವ ಒಂದು ರೀತಿಯ ಅನ್ನಪೂರ್ಣೇಶ್ವರಿ ಅವಳು. ಅವಳು ಬೆಳೆದು ಬಂದಿದೆಲ್ಲವೂ ಮಾಧ್ಯಮ ವರ್ಗದ ಕುಟುಂಬದಿಂದ. ಆದರೆ, ಮದುವೆಯ ನಂತರ ಬಂದು ಸೇರಿದ್ದು ಶ್ರೀಮಂತರ ಮನೆಗೆ. ಆದ್ದರಿಂದ ಅವಳಿಗೆ ಬಡತನ, ಶ್ರೀಮಂತಿಕೆ, ಜೀವನ ಇದರ ಅಗಾಧವಾದ ಅನುಭವ ಮತ್ತು ತಿಳುವಳಿಕೆ ಇತ್ತು.

ಅಜ್ಜಿಯ ಮನೆ ನಮ್ಮ ಮನಯಿಂದ ಹಲವಾರು ಮೈಲಿ ದೂರವಿದ್ದು ಅಮ್ಮ ಪ್ರಯಾಣದ ಆಯಾಸದಿಂದ ಊಟಾ ಮಾಡಿ ರಾತ್ರಿ ಬೇಗ ಮಲಗಿಕೊಂಡಳು,ಆದರೆ ನಾನು ದಿನವಿಡೀ ನನ್ನ ಚಿಕ್ಕಿಯ ಮಕ್ಕಳೊಂದಿಗೆ ಆಟವಾಡಿ, ರಾತ್ರಿ ಅಜ್ಜಿಯ ಕೈತುತ್ತು ತಿಂದು ಮಲಗುವ ಸಮಯದಲ್ಲಿ “ಅಜ್ಜಿ ಅಜ್ಜಿ ಕತೆ ಹೇಳು” ಎಂದು ಕೇಳಿದೆ. ಆಗ ಅವಳು ರಾಜ -ರಾಣಿ, ಸಿಂಹ -ಮೊಲ, ಇಂತಹ ಕತೆಯನ್ನು ಹೇಳದೆ, ತನ್ನ ಅನುಭವದ ಬುಟ್ಟಿಯನ್ನು ನನ್ನೆದುರಿಗೆ ಕತೆಯ ರೂಪದಲ್ಲಿ ಬಿಚ್ಚಿದಳು. ಮತ್ತು ನನಗೆ ಯಾವದೋ ಒಂದು ರೀತಿಯಲ್ಲಿ ಅರಿವಿಗೆ ಬರುವ ರೀತಿಯಲ್ಲಿ ತಿಳಿಸಿದಳು ಆದರೆ ಅವಳ ಯಾವ ಮಾತುಗಳು ಸಹ ಆ ಸಮಯದಲ್ಲಿ ತಿಳಿದಿರಲಿಲ್ಲ ಆದರೆ ಈಗ ಅರ್ಥವಾಗುತ್ತಿದೆ.

ಅವಳು ಹೇಳಿದ್ದಳು ಯಾರನ್ನೋ ನೆಚ್ಚಿಸಲು ನಿನಗೆ ಇಷ್ಟವಿಲ್ಲದಿದ್ದರೂ ಇಷ್ಟವಿರುವಂತೆ ನಟಿಸುತ್ತಾ ಬದುಕ ಬೇಕಾಗುತ್ತದೆ, ಆದರೆ ಅದಕ್ಕೆ ಅವಕಾಶ ಕೊಡಬೇಡ ಎಂದು. ಆದರೆ ನಾನು ಆಗ ಹುಮ್ಮಸ್ಸಿನಲ್ಲಿ ಯಾರನ್ನು ಯಾಕೆ ನೆಚ್ಚಿಸಲಿ? ಯಾರಿಗಾಗಿ ಯಾಕೆ ನಾನು ಬಾಳಲಿ? ನಾನು ನನಗೆ ಇಷ್ಟ ಬಂದ ರೀತಿ ಬದುಕುವೆ, ಬೇಕಾದರೆ ನನ್ನನ್ನು ಅನುಸರಿಸಿ ಇನ್ನೊಬ್ಬರು ಬದುಕಲಿ ಎಂದಿದ್ದೆ. ಆದರೆ ಈಗ ನಾನು ಬದುಕುತ್ತ ಇರುವುದು ನನ್ನಜ್ಜಿ ನನಗೆ ಹೇಳಿದಂತೆಯೇ.

ಯಾರನ್ನೋ ನೆಚ್ಚಿಸುವ ಸಲುವಾಗಿಯೋ ಅಥವಾ ಸಮಾಜಕ್ಕೆ ಬೆದರಿಯೋ ವಿದ್ಯಾಭ್ಯಾಸದಿಂದ ಹಿಡಿದು ಪೂರ್ತಿ ಜೀವನವನ್ನೇ ಬದಲಾಯಿಸಿಕೊಂಡು ಬದುಕುವಂತೆ ಆಗಿದೆ.  ನನ್ನೊಬ್ಬಳ ಜೇವನ ಹೀಗಿದೆಯೋ ಅಥವಾ ಎಲ್ಲಾ ಹೆಣ್ಣುಮಕ್ಕಳಿಗೂ ಹೀಗಿದೆಯೋ ಅಥವಾ ಪುರುಷರಿಗೂ ಇಂತಹ ಸವಾಲುಗಳೇ ಎದುರಾಗುತ್ತದೆಯೋ ತಿಳಿಯದು. ನನಗೆ ಬೇಕಾದಂತೆ ಬದುಕಲು ಜೀವನ ಕ್ರಮವನ್ನು ಬದಲಿಸಿದರೆ ಅಥವಾ ನಮಗೆ ಬೇಕಾದವುಗಳಿಗಾಗಿ ಅಥವಾ ನಮಗಾದ ಅನ್ಯಾಯಗಳ ವಿರುದ್ಧ ಧ್ವನಿಯನ್ನು ಎತ್ತಿದರೆ ನಮಗೆ ನೀಡುವ ಹೆಸರೇ ‘ಬಜಾರಿ’,’ಗಂಡುಬೀರಿ’ ಎಂದು. ಸಮಾಜಕ್ಕೆ ಹೆದರಿಕೊಂಡು ಬದುಕಿ ಎಂದು ನೇರವಾಗಿ ಪುರುಷರೇನು ಬಂದು ಹೇಳುವುದಿಲ್ಲ ಬದಲಾಗಿ ಮನೆಯಲ್ಲಿರುವ ಅಜ್ಜಿ, ಅಮ್ಮ, ಚಿಕ್ಕಮ್ಮ ಇಂತಹ ಹೆಣ್ಣುಮಕ್ಕಳೇ ಹೇಳಿ ಬೆಳೆಸುವುದು.ನನಗೆ ಇಷ್ಟೆಲ್ಲ ಅರಿವಾಗಿದ್ದೆ ನನಗೆ ಇಪ್ಪತ್ತು ವರ್ಷವಾದ ಬಳಿಕ. ಇನ್ನಾದರೂ ನಾನು ನನಗಾಗಿ ಬದುಕಬೇಕಾಗಿದೆ, ‘ನಾನು ನಾನಾಗ’ಬೇಕಿದೆ. ಇನ್ನು ಮುಂದಾದರು ನನ್ನ ಆಸೆಗಳನ್ನು, ಗುರಿಗಳನ್ನು ನನಸಾಗಿಸುವಲ್ಲಿ ಯಾವುದೇ ರಾಜಿಯನ್ನು ಮಾಡಿಕೊಳ್ಳದೆ ಬದುಕುತ್ತೇನೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಅದನ್ನು ಮಾಡಬೇಕಿತ್ತು, ಅಲ್ಲಿ ಸುತ್ತಬೇಕಿತ್ತು, ಇದನ್ನು ಓದಬೇಕಿತ್ತು, ಇಂತಹ ಬಟ್ಟೆ ಧರಿಸಬೇಕಿತ್ತು ಎಂಬ ಆಸೆಯ ಪಟ್ಟಿಗಳಿಗೆ ಅವಕಾಶವಿರುವುದಿಲ್ಲ.

ಸಂಜನಾ. ಜಿ. ಬೆಳ್ಳೂರ್

ತೃತೀಯ ಬಿ.ಏ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ.

The Story of Two

 

She shines bright as the stars above.

While he hides behind the dark

When he drowns in his turmoils

She is the one who becomes the calm to his storms.

She is the delusioed version to his practical world,

While he becomes the shield that breaks apart her and the accusing norms.

They both together are perfectly imperfect to the other.

They are poles apart yet bound with the string of love.

Maybe just maybe they could have completed their story, but that’s for some other time.

Somewhere in different time line, in another universe once again in their very own unique way.

 

Smruti, 

1st year BA,

Kateel Ashok Pai Memorial College, Shivamogga

ತೃಣ

ತೃಣ

ಸಾಗರದ ಮುಂದೊಂದು ಹನಿನೀರು ತೃಣವಂತೆ

ಶತಕೋಟಿ ಮಳೆಹನಿಯು ಸುರಿದಿಲ್ಲವೆ?

ಗಂಟೆಗಳ ಮುಂದೆ ಒಂದು ಕ್ಷಣ ತೃಣವಂತೆ

ಗಡಿಯಾರದಲಿ ಚಲಿಸೊ ಮುಳ್ಳಿಲ್ಲವೆ?

ಅರಣ್ಯಗಳ ಮುಂದೆ ಒಂದು ಸಸಿ ತೃಣವಂತೆ

ತಾ ಬೆಳೆದು ನೆರಳನ್ನು ನೀಡಿಲ್ಲವೆ?

ಇಷ್ಟು ಗಿಡವಿದ್ದರೂ ಗುಬ್ಬಿ ತಾ ಬಳಸುವುದು

ಗೂಡು ಕಟ್ಟಲು ಈ ತೃಣವಲ್ಲವೆ?

 ನೀನಾಗು

 ಕರಿಮೋಡ ಕರಗಿ ಧರೆಗಿಳಿವ ನೀರಾಗು

ಕವಿದಿಟ್ಟ ಗೂಡಿನಲಿ ಬೆಳಗೊ ಹೊಂಬೆಳಕಾಗು

ಗೊಂದಲದ ದಿನದಂದು ತಿಳಿನೀಲ ಬಾನಾಗು

ಅಲೆಯಾಗು ಕಡಲಿನೊಳು, ಹರಿವ  ತೊರೆಯಾಗು

ಸುಡು ಸುಡುವ ಸೆಕೆಯಲ್ಲಿ ತಣ್ಣಗಿನ ನೀರಾಗು

ಉರಿಬಿಸಿಲ ಬೇಗೆಯಲಿ ಹೆಮ್ಮರದ ನೆರಳಾಗು

ಮೈಕೊರೆವ ಚಳಿಯಲ್ಲಿ ಬೆಚ್ಚನೆಯ ಗೂಡಾಗು

ಗೋಳುಜಂಜಾಟದೊಳು ನೆಮ್ಮದಿಯ ಸೂರಾಗು

ಕಡು ಕಟುಕತನದೆದುರು ಜಯಜಯಿಸೊ ಹಠವಾಗು

ಬರಿದಾದ ಬಾನಿನಲಿ ಮಿಂಚಾಗಿ ಮಿನುಗು

Ms. Spoorthi N M

1st Year B.Sc

Kateel Ashok Pai Memorial College, Shivamogga

ಅಂಬೇಡ್ಕರ್ ಕೂಡ ಅರ್ಧ ದೇಹದಲ್ಲಿ ನಾರಿಯನ್ನ ಹೊತ್ತವರು!

 

ಅಂಬೇಡ್ಕರ್ ಅಂದಾಕ್ಷಣ ನೆನಪಿಗೆ ಬರುವುದು,ಸ್ವಾಭಿಮಾನ ಗಟ್ಟಿತನ ದೃಢತೆ.. ಕೇವಲ ಜಾತಿ ಎಂಬ ಪದ ಅವರನ್ನ ಅವರ ಸಮುದಾಯವನ್ನು ನಡುಗಿಸಿದ್ದು ಎಲ್ಲರನ್ನೂ ಕೊರೆಯುವಂತ ಸಂಗತಿ. ಕಮಲ ಪಂಕದಲ್ಲಿ ಬೆಳೆದರೂ ಅದರ ಅರ್ಪಣೆ ದೇವರ ಪದಕ್ಕೆ ಎಂಬಂತೆ ಸಮಾಜ ಅವರನ್ನ ಎಷ್ಟೇ ಕೆಸರಿಗೆ ತಳ್ಳಿದರೂ ಅವರು ಕಮಲದಂತೆ ಮರಳಿ ಮರಳಿ ಅರಳಿದರು!.. ಅವರು ಖಡ್ಗಕ್ಕಿಂತ ಲೇಖನಿ ಹರಿತವಾದುದು ಎಂಬ ಮಾತಿನಲ್ಲಿ ನಂಬಿಕೆ ಇತ್ತವರು, ಓದೆಂಬುದು ಅವರ ತೀವ್ರ ಹಸಿವಾಗಿತ್ತು,ಅದರ ಮೂಲಕವೇ ಅವರು ಸಂವಿಧಾನವನ್ನೇ ಬರೆದು ಮೆರೆದರು.

ಸಾಹಿತ್ಯದಲ್ಲಿ ಸ್ವರ್ಣಾಕ್ಷರವಾಗಿ ಉಳಿದ ಅಂಬೇಡ್ಕರ್ ಅವರು ಮಹಿಳೆಯರನ್ನ ಸಬಲೆ ಎಂದು ಸಾರುವುದರಲ್ಲಿ ಮುಖ್ಯಾತಿಮುಖ್ಯ ಪಾತ್ರವಹಿಸಿದ್ದಾರೆ. ಹಾಗಾದರೆ ಸಬಲೀಕರಣ ಎಂದರೇನು?, ಹಾ! ಹೆಣ್ಣು ಎಂಬಾಕೆ ಪೂರ್ಣ ಸ್ವಾತಂತ್ರ ಹೊಂದುವ ಪರಿಯೇ ಸಬಲೀಕರಣ ಅಂದರೆ ತನ್ನ ಕಾಲ ಮೇಲೆ ತಾನೇ ನಿಲ್ಲುವ ಮೂಲಕ ತನ್ನ ತಾನು ಗುರುತಿಸಿಕೊಳ್ಳುವುದು. ಅವರು ಕಂಡಂತೆ ಹೆಣ್ಣು ಮಕ್ಕಳ ಪ್ರತೀ ಹೆಜ್ಜೆ ಕೂಡ ಅವರ ಮನೆಯಲ್ಲಿನ ಯಾವುದೇ ಗಂಡಿನ ಮೇಲೆ ನಿರ್ಧಾರವಾಗುತಿತ್ತು, ಬಾಲ್ಯದಲ್ಲೇ ವಿವಾಹ ಹಾಗೂ ನಾಲ್ಕು ಗೋಡೆಗಳ ಮಧ್ಯದ ಜೀವನ ದೌರ್ಜನ್ಯ ಅದೊಂದು ದೊಡ್ಡ ಕೊನೆಯೇ ಇಲ್ಲದ ಪಟ್ಟಿಯಾಗಿತ್ತು. ನಿಜವಾದ ಶಿಕ್ಷಣ ಪಡೆದ ವ್ಯಕ್ತಿ ಏನನ್ನ ಯೋಚಿಸಬೇಕೋ ಹಾಗೆ  ಯೋಚಿಸಿದ ಸರಿಕ ವ್ಯಕ್ತಿ ಅಂಬೇಡ್ಕರ್ ಎಂಬ ಮಾತಿನ ಮೇಲೆ ನಾನು ಬಲವಾಗಿ  ನಿಲ್ಲುತ್ತೇನೆ ಏಕೆಂದರೆ ಅವರು ಯೋಚಿಸಿದ್ದು ಕೊರತೆ ಇರುವುದು ಮಹಿಳಾ ಶಿಕ್ಷಣದಲ್ಲಿ ಎಂದು ಹಾಗೆ ಮಹಿಳಾ ಶಿಕ್ಷಣಕ್ಕೆ ಬಹಳ ಹೋರಾಡಿದರು. ದಲಿತ ಸಾಹಿತ್ಯ ಎಂಬ ಪುಟಗಳನ್ನು ತಿರುವಿದಾಗ ಅಲ್ಲಿ ನೆಂದ, ನೊಂದ ಪುಟಗಳೇ ಹೆಚ್ಚು ಅದರಲ್ಲೂ ಸ್ತ್ರೀ ವಾದಿ ಪುಟಗಳಂತೂ ಇನ್ನೂ ಒಣಗಿಲ್ಲ..

ಅಂಬೇಡ್ಕರ್ ಅವರೂ ಕೂಡ ಅರ್ಧ ದೇಹದಲ್ಲಿ ನಾರಿಯನ್ನೇ ಹೊತ್ತವರು ಹಾಗಾಗೇ ಅವರೂ ಮರುಗಿದ್ದು.. ಅವರು ಹೆಣ್ಣಿಗೆ ತನ್ನ ದೇಹದ ಮೇಲೆ ತನಗೆ ಮಾತ್ರ ಹಕ್ಕಿದೆ ಎಂಬ ಅರಿವು ಮೂಡಿಸುವ ಬಗೆಗೂ ಅವರ ಪಾತ್ರ ಮಂದರದಷ್ಟಿದೆ, ಏಕೆಂದರೆ ಸಾಹಿತ್ಯ ಇತಿಹಾಸ ತೆಗೆದು ನೋಡಿದಾಗ ದಲಿತ ಸಮುದಾಯದ ಮೇಲೆ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದ ಬಗೆಗೆ ಹಲವರಿಗೆ ತಿಳಿದಿದೆ ಅದರಲ್ಲೂ ಹೆಚ್ಚಾಗಿ ಆ ಸಮಯದಲ್ಲಿ , ಮೇಲೆ ಎಂಬ ಮನಸ್ಥಿತಿಯ ಗಂಡಸರು ದಲಿತ ಸಮುದಾಯದ ಹೆಣ್ಣು ಮಕ್ಕಳನ್ನು ಎಳೆದು ಅತ್ಯಾಚಾರ ಮಾಡುತ್ತಿದ್ದ ಬಗೆಗೆ ಎಷ್ಟು ಜನಕ್ಕೆ ಗೊತ್ತು? ಆದರೆ ಅದೇ ಮೇಲು ಮನಸ್ಥಿತಿಯವರು ಸಮಾಜದ ಎದುರು ದಲಿತರ ನೆರಳನ್ನೂ ಬೀಳಿಸಿಕೊಳ್ಳುತ್ತಿರಲಿಲ್ಲ. ಇದೆಲ್ಲದರ ತೀವ್ರ ಗಾಸಿಯನ್ನ ಹೊತ್ತು ಅಧಿಕಾರದ ಕುರ್ಚಿಯಲ್ಲಿ  ಕುಳಿತಿದ್ದರು ಅಂಬೇಡ್ಕರ್!.. ಅವರ ಧ್ವನಿ ಕೇವಲ ದಲಿತರೇ ಆಗಿಲ್ಲ ಎಲ್ಲಾ ಹೆಣ್ಣು ಮಕ್ಕಳಾಗಿದ್ದರು,..

ಸ್ಥಾನ ಅಧಿಕಾರ ಸಿಕ್ಕಾಕ್ಷಣ ಜಗತ್ತೇ ಮರೆವ ಕಾಲದಲ್ಲೂ ಅಂಬೇಡ್ಕರ್ ಅವರು ಕರ್ತವ್ಯಗಳ ಕವಲುಗಳನ್ನೇ ದಿಟ್ಟಿಸಿದರು. ಅವರಿಗೆ ತಿಳಿದಿತ್ತು ಕೆಲಸ ಮಾತಿನಲ್ಲಲ್ಲ ಕ್ರಿಯೆಯಲ್ಲಿ ಎಂದು.

ಭಾವನೆಗಳಿಗೆ ಅಂಬೇಡ್ಕರ್ ಎಷ್ಟು ಗೌರವ ನೀಡುತ್ತಿದ್ದರೆಂದರೆ ಮೊದಲು ಬಹುಪತ್ನಿತ್ವದ ವಿರುದ್ಧ ನಿಷೇಧ ಕಾಯ್ದೆಯನ್ನ ಜಾರಿಗೊಳಿಸಿದರು, ಹೆಣ್ಣು ಕುಲಕ್ಕೆ ಭಾರ ಎನ್ನುವಂತ ಕಾಲದಲ್ಲಿ ಆಕೆ ಎಂದೂ ಭಾರವಲ್ಲ ಎನ್ನುವುದನ್ನ ಸಾರುವ ಸಲುವಾಗಿ ಆಸ್ತಿಯಲ್ಲಿ ಅವಳ ಹಕ್ಕನ್ನು ಬಲ ಪಡಿಸುವ ಕಾಯ್ದೆ ಜಾರಿ ತಂದರು. ಹೀಗೆ  ಕಾಯ್ದೆಗಳ ಮೂಲಕವೇ ಅವರು ಅವರು ಕಟ್ಟುಪಾಡಿನ ಸಮಾಜಕ್ಕೆ ಕಡಿವಾಣ ಹಾಕಿದರು. ಇನ್ನೂ ಅನೇಕಾನೇಕ ವಿಷಯಗಳಲ್ಲಿ ಸಬಲೀಕರಣ ಎಂಬುದು ಮಹಿಳೆಯರ ಸ್ವತ್ತಾಗಿಲ್ಲವಾದರೂ, ಅಧಿಕಾರ ಎಂದು ಬಂದಾಗ ಅವಳದ್ದು ಅವಳಿಗೆ ತಲುಪುವಂತೆ ಮಾಡುವ ಪ್ರಯತ್ನವಂತೂ ಅಂಬೇಡ್ಕರ್ ಎಂಬ ಅಪರೂಪದ ಮುತ್ತಿಗಿತ್ತು!..

 

ಕವನ ಕೆ.

ದ್ವಿತೀಯ  ಬಿ ಎ, ವಿದ್ಯಾರ್ಥಿನಿ,

ಕಟೀಲ್ ಆಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

ಹೀಗೆಲ್ಲೋ ಕಲ್ಪನೆಯ ಸ್ವಪ್ನ!

Image Credit: Google.com

ನಿನ್ನೊಂದಿಗೆ ಕುಳಿತು
ನಿನ್ನೊಂದಿಗೆ ಕುಳಿತು

ಹುಣ್ಣಿಮೆಯ ಪೂರ್ಣ ಚಂದಿರನ ನೋಡಬೇಕು
ಅದ್ಯಾವುದೋ ಶೃಂಗರಿಸಿದ ಬೆಟ್ಟದ ತುದಿಯಲ್ಲೇ ಎಂಬ ಹಂಬಲವಿಲ್ಲ
ಮನೆಯ ತಾರಸಿಯಾದರೂ ಸಾಕು

ನೀ ತರುವ ಹೂ ಮುಡಿಯಬೇಕು
ಅದು ಮೈಸೂರು ಮಲ್ಲಿಗೆ ಆಗಬೇಕೆಂಬ ಆಸೆಯಿಲ್ಲ
ಹಿತ್ತಲಿನ ಬಿಳಿ ಜಾಜಿ ಮಲ್ಲಿಗೆ ಆದರೂ ಸರಿಯೇ

ನಾವಿಬ್ಬರೂ ಕೈ ಹಿಡಿದ ನಡೆಯಬೇಕು
ಅದ್ಯಾವುದೋ ಅರಮನೆಯ ಆವರಣವೇ ಆಗಬೇಕೆಂಬ ಆಸೆಯಿಲ್ಲ
ನಮ್ಮೂರ ಜಾತ್ರೆಯ ಕಿರಿದಾದ ಸಂಧಿಯಲ್ಲಾದರೂ ಸಾಕು.

ವೈಷ್ಣವಿ ಎಸ್ ಕೆ

ತೃತೀಯ ಬಿ ಎ, ವಿದ್ಯಾರ್ಥಿನಿ
ಕಟೀಲ್ ಆಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

ಡಿಜಿಟಲ್ ಸಂಪನ್ಮೂಲಗಳಿಂದ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳು -ಡಾ ಸಂತೋಷ್ ಕುಮಾರ್

ಶಿವಮೊಗ್ಗದ ಮಾನಸ ಟ್ರಸ್ಟ್ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಗ್ರಂಥಾಲಯಕ್ಕೆ ‘ಮನೋಲೋಕ’ ಎಂಬ ಹೆಸರನ್ನು ಜನವರಿ ೩೦ ರಂದು ಅನಾವರಣಗೊಳಿಸಿದ ಕುವೆಂಪು ವಿಶ್ವವಿದ್ಯಾಲಯದ ಲೈಬ್ರರಿ ಸೈನ್ಸ್ ವಿಭಾಗದ ಪ್ರಾಧ್ಯಾಪಕರಾದ ಡಾ ಸಂತೋಷ್ ಕುಮಾರ್‌ರವರು ಮಾತನಾಡುತ್ತಾ ಗ್ರಂಥಾಲಯಗಳು ಬೆಳೆದು ಬಂದ ದಾರಿಯನ್ನು ವಿವರಿಸಿದರು. ಪುಸ್ತಕಗಳನ್ನು ಸರಪಳಿಗಳಿಂದ ಭದ್ರ ಪಡಿಸಿ ಕಳುವಾಗದಂತೆ ನೋಡಿಕೊಳ್ಳುತ್ತಿದ್ದ ಉಲ್ಲೇಖಗಳಿವೆ ಎಂದು ಹೇಳುತ್ತಾ ಮಾಹಿತಿ ಹಾಗೂ ಜ್ಞಾನದ ಮುದ್ರಣವು ಒಂದು ಕ್ರಾಂತಿಯನ್ನೇ ಈ ಜಗತ್ತಿನಲ್ಲಿ ಮಾಡಿದೆ ಎಂದು ಹೇಳಿದರು. ಇಂದು ಗ್ರಂಥಾಲಯಗಳು ಪುಸ್ತಕಗಳನ್ನಷ್ಟೇ ಹೊಂದಿಲ್ಲ. ಸಾಕಷ್ಟು ಡಿಜಿಟಲ್ ಸಂಪನ್ಮೂಲಗಳನ್ನು ಕೂಡಾ ಹೊಂದಿವೆ. ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಗ್ರಂಥಾಲಯದಲ್ಲಿ ಡಿಜಿಟಲ್ ಲೈಬ್ರರಿಯನ್ನು ಪ್ರಾರಂಭಿಸಿರುವುದು ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳನ್ನು ಒದಗಿಸಿಲಿದೆ. ಇಂದು ಡಿಜಿಟಲ್ ಮಾಧ್ಯಮದ ಮೂಲಕ ವಿದ್ಯಾರ್ಥಿಗಳು ಹಲವಾರು ಕೋರ್ಸ್ಗಳನ್ನು ಮಾಡಬಹುದು. ದೇಶದ ಪ್ರತಿಷ್ಠಿತ ಯುನಿವರ್ಸಿಟಿಗಳು ಅತ್ಯುತ್ತಮ ಕೋರ್ಸ್ಗಳನ್ನು ನಡೆಸುತ್ತಿವೆ. ಇಂದು SWAYAM ಮೂಲಕ ದೊರೆಯುವ ಕೋರ್ಸ್ಗಳಿಗೆ ದಾಖಲಾದಲ್ಲಿ ಆ ವಿಷಯದಲ್ಲಿ ವಿಡಿಯೋ ಪಾಠ, ಪಠ್ಯಗಳು ಹಾಗೂ ಆಡಿಯೋ ಪಾಠವನ್ನು ಒದಗಿಸುತ್ತವೆ. ತಾನು ಓದುತ್ತಿರುವ ಪದವಿಯೊಂದಿಗೆ ಇನ್ನು ಹಲವು ಸರ್ಟಿಫಿಕೇಟ್ ಕೋರ್ಸ್ಗಳನ್ನು ಮಾಡಬಲ್ಲ ಅವಕಾಶ ವಿದ್ಯಾರ್ಥಿಗಳಿಗಿದೆ. ಅದಲ್ಲದೆ ಶೋಧಗಂಗಾ, ಶೋಧಗಂಗೋತ್ರಿಯAತಹ ಹಲವು ಪೋರ್ಟಲ್‌ಗಳು ಹಲವಾರು ಸಂಶೋಧಣಾ ಲೇಖನಗಳನ್ನು, ಪ್ರಕಟಪಡಿಸುತ್ತವೆ. ಇವುಗಳೆಲ್ಲ ಸಂಶೋಧನಾ ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಒಂದು ಬಹಳ ಮುಖ್ಯವಾದ ಆಕರಗಳಾಗಿವೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಇಂದಿನ ಈ ಡಿಜಿಟಲ್ ಯುಗದಲ್ಲಿ ಡಿಜಿಟಲ್ ಮಾಧ್ಯಮದ ಬಳಕೆ ಬಗ್ಗೆ ತಿಳಿದುಕೊಳ್ಳುವುದರೊಂದಿಗೆ, ಏನು ಮಾಡಬಾರದು ಎಂದು ತಿಳಿದುಕೊಳ್ಳುವುದು ಮುಖ್ಯ. ಕೃತಿಚೌರ್ಯಕ್ಕೆ ಎಷ್ಟು ಅವಕಾಶಗಳಿವೆಯೋ, ಅಷ್ಟೇ, ಅದನ್ನು ಗುರುತಿಸಲು ಹಾಗೂ ಕೃತಿಚೌರ್ಯ ಮಾಡಿದವರನ್ನು ಕಂಡುಹಿಡಿದು ಬ್ಲಾಕ್‌ಲಿಸ್ಟ್ನಲ್ಲಿ ಹಾಕಲೂ ಕೂಡಾ ಸಂಬಂಧ ಪಟ್ಟವರಿಗೆ ಅಧಿಕಾರವಿದೆ ಎಂದು ಮರೆಯಬೇಡಿರಿ. ನಿಮ್ಮ ಬೆರಳ ತುದಿಯಲ್ಲೇ ಮಾಹಿತಿ ಲಭ್ಯವಾಗುವ ಈ ಸಂದರ್ಭದಲ್ಲಿ ನಿಖರವಾದ ಹಾಗೂ ಸತ್ಯವಾದ ಮಾಹಿತಿಯನ್ನಷ್ಟೇ ಉಪಯೋಗಿಸುವುದು ಮುಖ್ಯ. ಆದುದರಿಂದ ನೈತಿಕವಾಗಿ ಗುರುತಿಸಲ್ಪಟ್ಟ ಪೋರ್ಟಲ್‌ಗಳನ್ನಷ್ಟೇ ಬಳಕೆ ಮಾಡಿರಿ ಹಾಗೂ ವಿದ್ಯಾರ್ಥಿಗಳು ಹಾಗೂ ಉಪನ್ಯಾಕರು ಸಂಶೋಧನಾ ಲೇಖನಗಳನ್ನು ಪ್ರಕಟಿಸುವಾಗ UGC ಯಿಂದ ಗುರುತಿಸಲ್ಪಟ್ಟ ಜರ್ನಲ್‌ಗಳಲ್ಲಷ್ಟೇ ಪ್ರಕಟಿಸಬೇಕು ಎಂದು ತಿಳಿಸಿದರು. ಮೊಬೈಲ್‌ಗೆ ದಾಸರಾಗುವ ಬದಲು, ಲೈಬ್ರರಿಯ ಮೂಲಕ ನಿಖರವಾದ ಹಾಗೂ ವೈಜ್ಞಾನಿಕ ಮಾಹಿತಿಯನ್ನು ಪಡೆಯಬೇಕು ಎಂದು ತಿಳಿಸಿದರು.

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿಗೆ ಡಿಜಿಟಲ್ ಲೈಬ್ರರಿಯನ್ನು ಸ್ಥಾಪಿಸಲು ಆಮೆರಿಕದಲ್ಲಿ ಉದ್ಯೋಗದಲ್ಲಿರುವ ಶ್ರೀ ಹೊಸಕೆರೆ ಶರತ್ ಕುಮಾರ್ ಹಾಗೂ ಶ್ರೀ ಹೊಸಕೆರೆ ಸುಮಂತ್ ಎಂಬ ಇಬ್ಬರು ಸಹೋದರರು, ತಮ್ಮ ತಂದೆಯಾದ ಶ್ರೀ ಹೊಸಕೆರೆ ರಾಮಸ್ವಾಮಿಯವರ ಹೆಸರಿನಲ್ಲಿ ದೇಣಿಗೆಯನ್ನು ಉದಾತ್ತವಾಗಿ ನೀಡಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ ಸಂಧ್ಯಾ ಕಾವೇರಿ ಕೆ ತಿಳಿಸಿದರು. ಕಾಲೇಜಿನ ಗ್ರಂಥಾಲಯಕ್ಕೆ ಮನೋಲೋಕ ಎಂದು ಹೆಸರಿಸಿದ್ದು ಅದು ದಿ|| ಡಾ ಅಶೋಕ್ ಪೈರವರು ಬರೆದ ಒಂದು ಪುಸ್ತಕದ ಶೀರ್ಷಿಕೆಯಾಗಿದೆ. ಅದೇ ರೀತಿ, ನೂತನವಾಗಿ ನಿರ್ಮಿಸಿದ ಡಿಜಿಟಲ್ ಲೈಬ್ರರಿಗೆ ‘ಹೊಸಕೆರೆ ರಾಮಸ್ವಾಮಿ ಮೆಮೋರಿಯಲ್ ಡಿಜಿಟಲ್ ಲೈಬ್ರರಿ’ ಎಂದು ಹೆಸರಿಡಲಾಗಿದೆ ಎಂದು ಗ್ರಂಥಪಾಲಕ ಶ್ರೀ ಗಣೇಶ್ ಹೆಚ್‌ರವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ತಿಳಿಸಿದರು. ಹೊಸಕೆರೆ ರಾಮಸ್ವಾಮಿ ಮೆಮೋರಿಯಲ್ ಡಿಜಿಟಲ್ ಲೈಬ್ರರಿಯನ್ನು ಶ್ರೀಮತಿ ಮೀನಾಕ್ಷಿ ರಾಮಸ್ವಾಮಿಯವರು ಉದ್ಘಾಟಿಸಿದರು. ಹೊಸಕೆರೆ ರಾಮಸ್ವಾಮಿಯವರು ಶಿವಮೊಗ್ಗದ ಅರಣ್ಯ ಇಲಾಖೆಯಲ್ಲಿ ಅತ್ಯಂತ ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಸೇವೆ ಸಲ್ಲಿಸಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ಮನ್ನಣೆಗೆ ಪಾತ್ರರಾಗಿದ್ದರು. ಅವರು ಕುಟುಂಬ ಹಾಗೂ ಉದ್ಯೋಗ ಎರಡರಲ್ಲೂ ಸತ್ಯ, ನಿಷ್ಠೆ, ಪ್ರೀತಿ ಹಾಗೂ ಸಹನೆಯಂತಹ ಮೌಲ್ಯಗಳನ್ನು ಅಳವಡಿಸಿ ಒಬ್ಬ ಮಾದರಿ ವ್ಯಕ್ತಿಯಾಗಿದ್ದರು. ಅವರ ಹೆಸರಿನಲ್ಲಿ ಅವರ ಮಕ್ಕಳು ಒಂದು ಉತ್ತಮ ಶಿಕ್ಷಣ ಸಂಸ್ಥೆಗೆ ದೇಣಿಗೆಯನ್ನು ನೀಡಿ, ಹಲವಾರು ವಿದ್ಯಾರ್ಥಿಗಳಿಗೆ ಹಲವಾರು ವರ್ಷಗಳವರೆಗೆ ಅನುಕೂಲವಾಗಬಲ್ಲ ಡಿಜಿಟಲ್ ಲೈಬ್ರರಿಯನ್ನು ಸ್ಥಾಪಿಸಿರುವುದು ಅಭಿನಂದನೀಯ ಎಂದು ಡಾ ಹೆಚ್ ಎಸ್ ನಾಗಭೂಷಣ್ ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹೊಸಕೆರೆ ಕುಟುಂಬದವರು, ಕಾಲೇಜನ್ನು ಪ್ರಾರಂಭಿಸಿ ಉತ್ತಮ ಶಿಕ್ಷಣವನ್ನು ನೀಡುತ್ತಿರುವ ಮಾನಸ ಟ್ರಸ್ಟ್ನ ನಿರ್ದೇಶಕರಾದ ಡಾ ರಜನಿ ಎ ಪೈರವರನ್ನು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಡಾ ರಜನಿ ಎ ಪೈ, ಡಾ ರಾಜೇಂದ್ರ ಚೆನ್ನಿ, ಆಡಳಿತಾಧಿಕಾರಿಗಳಾದ ಪ್ರೋ. ರಾಮಚಂದ್ರ ಬಾಳಿಗಾ, ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ ಅರ್ಚನಾ ಭಟ್, ಪ್ರಾಂಶುಪಾಲರಾದ ಡಾ ಸಂಧ್ಯಾ ಕಾವೇರಿ ಕೆ, ಗ್ರಂಥಪಾಲಕರಾದ ಶ್ರೀ ಗಣೇಶ್ ಎಚ್, ಶ್ರೀ ಯೋಗರಾಜ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕು. ಪ್ರತಿಭಾ ಕಾರ್ಯಕ್ರಮ ನಿರೂಪಿಸಿದರು. ಗ್ರಂಥಪಾಲಕ ಗಣೇಶ್ ಹೆಚ್ ಸ್ವಾಗತಿಸಿ, ಡಾ ಅರ್ಚನಾ ಭಟ್ ವಂದಿಸಿದರು. ಎಂ. ಎಸ್ಸಿ ವಿದ್ಯಾರ್ಥಿನಿಯರಾದ ಸುಜನ್ಯಾ ಮತ್ತು ತಂಡ ಪ್ರಾರ್ಥಿಸಿದರು. ಕು. ಅಂಕಿತಾ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು.

ಶೈಕ್ಷಣಿಕ ಪ್ರವಾಸದ ನೆನಪುಗಳು

ನೈಜ ಪ್ರಕೃತಿಯ ಪಾಠಗಳನ್ನು ಕಲಿಯಲು ಶೈಕ್ಷಣಿಕ ಪ್ರವಾಸವು ಒಂದು ಸದಾವಕಾಶ. ಇಂತಹ ಒಂದು ಅವಕಾಶ ಒದಗಿಸಿಕೊಟ್ಟದ್ದು ನಮ್ಮ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು.

ಅಂತಿಮ ವರ್ಷದ ಬಿ.ಎಸ್ಸಿ. ವಿದ್ಯಾರ್ಥಿಗಳಾದ ನಾವು ಗೋಕರ್ಣ-ಕಾರವಾರದ ಈ ಪ್ರವಾಸದಲ್ಲಿ ಭಾಗಿಯಾದೆವು. ಇಲ್ಲಿ ನಾವು ಆಹಾರ ತಯಾರಿಕಾ ಕಾರ್ಖಾನೆ ಹಾಗೂ ಸೆಂಟ್ರಲ್ ಮರೈನ್ ಫೀಶರೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (CMFRI) ಗೆ ಭೇಟಿ ನೀಡಿದೆವು. ಈ ಪ್ರವಾಸವು ಪ್ರಾಣಿಶಾಸ್ತ್ರ ಹಾಗೂ ರಾಸಾಯನಿಕಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಾದ ನಮಗೆ ಬಹು ಉಪಕಾರಿಯಾಗಿದ್ದು ಸುಳ್ಳಲ್ಲ. ಹಾಗೆಯೇ ಪ್ರಾಯೋಗಿಕ ಅನುಭವ ಪಡೆಯುವಲ್ಲಿ ಸಹಕಾರಿಯಾಗಿತ್ತು.

ನಮ್ಮ ಪ್ರವಾಸವು ನವೆಂಬರ್ ತಿಂಗಳಿನ 18ನೇಯ ತಾರೀಖಿನಂದು ಬೆಳಗಿನ ಜಾವ ಪ್ರಾರಂಭವಾಯಿತು. ಶಿವಮೊಗ್ಗದಿಂದ 6.30ಕ್ಕೆ ಉತ್ಸಾಹದಿಂದ ಹೊರಟೆವು. 10.30ರ ಸುಮಾರಿಗೆ ಬಂದಿತು ನಮ್ಮ ಮೊದಲ ನಿಲ್ದಾಣ- ಭೀಮೇಶ್ವರ ದೇವಸ್ಥಾನ. ಅಲ್ಲಿಯ ಆಧ್ಯಾತ್ಮಿಕತೆ ಮತ್ತು ಪ್ರಕೃತಿಯ ಸೌಂದರ್ಯ ಕಣ್ಮನ ಸೆಳೆಯುವಂತಿತ್ತು. ಶಾಂತಿಯುತ ವಾತಾವರಣದಲ್ಲಿ ನೆನೆದ ನಂತರ ನಾವು ಕುಮಟಾ ಕಡೆಗೆ ಪ್ರಯಾಣ ಬೆಳೆಸಿದೆವು. ಅಲ್ಲಿಗೆ ಮಧ್ಯಾಹ್ನ 1.00ರ ಹಾಗೆ ತಲುಪಿದ ನಾವು ಭೇಟಿ ನೀಡಿದ್ದು ಅಲ್ಲಿಯ ವಾತ್-ಜಾತ್ ಫಾರ್ಮಾ ಫುಡ್ಸ್ ಕಾರ್ಖಾನೆಗೆ (Vatjat Pharma Foods). ಅಲ್ಲಿ ರಾಸಾಯನಿಕ IP (Ingress Protection Grade) ದರ್ಜೆಯ ಉತ್ಪನ್ನ, ಆಹಾರ ಉತ್ಪನ್ನಗಳ ತಯಾರಿಕೆಯ ಬಗ್ಗೆ ಅರಿತುಕೊಂಡೆವು.

ಸಂಜೆ 4.00ರ ಹೊತ್ತಿಗೆ ನಾವು ಗೋಕರ್ಣ ತಲುಪಿದೆವು. ಅಲ್ಲಿ ಕರಾವಳಿಯ ಕಲರವವು ನಮ್ಮನ್ನು ಸ್ವಾಗತಿಸಿತ್ತು. ಹತ್ತಿರದಲ್ಲಿಯೇ ಇದ್ದ ಹೋಂ ಸ್ಟೇಯಲ್ಲಿ ನಮಗಾಗಿ ಕಾಯ್ದಿರಿಸಿದ್ದ ಕೋಣೆಗಳಿಗೆ ತೆರಳಿ ಸ್ವಲ್ಪ ಹೊತ್ತು ವಿಶ್ರಮಿಸಿ ಎದುರಿನಲ್ಲಿಯೇ ಇದ್ದ ಬೀಚ್ ಗೆ ವಾಯುವಿಹಾರಕ್ಕಾಗಿ ಹೊರಟೆವು. ಹಾಗೆಯೇ ನಮ್ಮ ಪ್ರಾಣಿಶಾಸ್ತ್ರ ವಿಭಾಗಕ್ಕೆ ಬೇಕಾಗುವ, ಅಲ್ಲಿ ಸಿಗುವ ಹಾಗೂ ನಾವು ಸಂಗ್ರಹಿಸಬಹುದಾದ ಮಾದರಿ(Specimen) ಗಳನ್ನು ಸಂಗ್ರಹಿಸಿ, ಸ್ನೇಹಿತರೊಡನೆ ಸಮುದ್ರದ ಅಲೆಗಳ ಇಂಪಾದ ದನಿಯನ್ನು ಸವಿಯುತ್ತಾ ಕಾಲ ಕಳೆದೆವು. ಸಂಜೆಯ ವೇಳೆಗೆ ಮಹಾಬಲೇಶ್ವರ ಸ್ವಾಮಿಯ ದರ್ಶನ ಪಡೆದು ಅಲ್ಲಿಯೇ ಪ್ರಸಾದ ಸ್ವೀಕರಿಸಿ ನಮ್ಮ ಕೋಣೆಗಳಿಗೆ ಮರಳಿ ವಿಶ್ರಾಂತಿ ಪಡೆದೆವು.

ಮರುದಿನ, ಗೋಕರ್ಣದಿಂದ ಕಾರವಾರದ ಕಡೆಗೆ ಬೆಳಗ್ಗೆ 8.00ಕ್ಕೆ ಹೊರಟು ಅಂದಿನ ನಮ್ಮ ಮೊದಲ ನಿಲ್ದಾಣವಾದ CMFRI (Central Marine Fisheries Research Institute) ತಲುಪಿದೆವು. ಇಲ್ಲಿ ನಮಗೆ ಸಮುದ್ರ ಜಗತ್ತಿನ ಅಚ್ಚರಿಯ ಪರಿಚಯವಾಯಿತು. ಇಲ್ಲಿ ನಾವು ಬ್ರೂಡರ್(Brooder) ಗಳನ್ನು ನೋಡಿ, ಅದರ ಗುಣಲಕ್ಷಣಗಳ ಬಗ್ಗೆ ಅರಿತೆವು.

ಮಧ್ಯಾಹ್ನ 2.15ರ ಹಾಗೆ ಕಾರವಾರದ ಮೀನು ಮಾರುಕಟ್ಟೆಗೆ ಹೋಗಿ, ನಮ್ಮ ಪ್ರಯೋಗಾಲಯಕ್ಕೆ ಬೇಕಾದ ಮಾದರಿಗಳನ್ನು ಖರೀದಿ ಮಾಡಿದೆವು. ನಂತರ 3.30ರ ಹಾಗೆ ರವೀಂದ್ರನಾಥ್ ಟಾಗೋರ್ ಬೀಚ್ ಗೆ ಹೋಗಿ ಅಲ್ಲಿ ಸೀಗಡಿ(Shrimp), ಏಡಿ ಹಾಗೂ ಇತರ ಮಾದರಿಗಳನ್ನು ಸಂಗ್ರಹಿಸಿದೆವು.

ಸಂಜೆ 5.30ಕ್ಕೆ ಹೊನ್ನಾವರದೆಡೆಗೆ ಹೊರಟು ಅಲ್ಲಿ ಬೋಟಿಂಗ್ ನ ಅನುಭವ ಪಡೆದೆವು. ಜೊತೆಗೆ ವಿಶೇಷ ಸಸ್ಯ ಬೇರುಗಳಾದ  ನ್ಯೂಮಾಟೋಫೋರ್ಗಳನ್ನು (pneumatophores) ನೋಡಿದೆವು. ಈ ಬೇರುಗಳು ಸಸ್ಯಗಳಿಗೆ ನೀರಿನಲ್ಲಿ ಉಸಿರಾಡಲು ಸಹಾಯ ಮಾಡುತ್ತವೆ ಎಂದು ತಿಳಿದೆವು. ನಂತರ ಅಲ್ಲಿಂದ ಸಂಜೆ 7.30ಕ್ಕೆ ಶಿವಮೊಗ್ಗದ ಕಡೆಗೆ ಮನದ ತುಂಬಾ ನೆನಪುಗಳ ಜೊತೆಗೆ ಶೈಕ್ಷಣಿಕ ಪ್ರವಾಸದ ಪ್ರಾಮುಖ್ಯತೆಯನ್ನು ಅರಿತು ನಮ್ಮ ಪ್ರಯಾಣವನ್ನು ಬೆಳೆಸಿದೆವು.

ಈ ಎರಡು ದಿನದ ಪ್ರವಾಸವು ಶಿಕ್ಷಣ, ಆಧ್ಯಾತ್ಮಿಕತೆ, ಸಂಸ್ಕೃತಿಯ ಪರಿಪೂರ್ಣ ಮಿಶ್ರಣವಾಗಿದ್ದು- ಎಂದೆಂದಿಗೂ ಮನದಲ್ಲಿ ಉಳಿಯುವ ಅನುಭವವಾಗಿದೆ. ಅಲ್ಲದೆ ಪುಸ್ತಕದಲ್ಲಿ ಓದಿದ ವಿಷಯಗಳನ್ನು ನೈಜ ಜಗತ್ತಿನಲ್ಲಿ ನೋಡುವ, ಅನುಭವಿಸುವ ಅವಕಾಶ ನಮ್ಮದಾಗಿಸಿಕೊಂಡೆವು. ನಾನು-ನೀನು ಎಂಬ ಅಂತಾರವಿಲ್ಲದೆ ಎಲ್ಲರೊಂದಿಗೆ ಬೆರೆತು ಕಳೆದ ಈ ಎರಡು ದಿನ ಅವಿಸ್ಮರಣೀಯ.

ಶ್ರೇಯಾ. ಪಿ

ಅಂತಿಮ ಬಿ. ಎಸ್ಸಿ. ವಿದ್ಯಾರ್ಥಿನಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

NATURE BY THE VIEW

Image Credit: Google.com

NATURE BY THE VIEW,

Nature is both question and answer.

It is teacher and child, touches to sight of eye and its mystery. It has many unknown things in itself, but man always tries to reveal them. It’s beauty is always enjoyable. Every creature on Earth needs nature to live.

Nature has given life as a gift of colourful and joyfulness for many living organisms. A very precious organism in coverage of nature is human being, by biological word is ‘HOMOSEPIENS’. For human being’s nature gifted many self –requirement action through which they take use of it for their livelihood.

Nature keeps changes for itself for the weather of itself.

Nature is wholestic word for anything the writer is going to write.

From the nature, the throw of birth of life for human being is a gift as we learn from itself, growth by itself and the eyes closed to something.

Nature’s nature is unknown. Nobody knows when it was born exactly. Its sight gives pleasure to eyes. Everyone needs it it – living or non-living depend on it.

 

“Nature is limited or unlimited nobody knows, but humans are more curious to know about it”

 Pritam B. Patil

III BSW Student

Kateel Ashok Pai Memorial College, Shivamogga

ಅಂತರಪಟದಾಚೆ ವಿಧಿ ತಂದ ವರ ನೀನು!

Image Credit: KAPMC Library

ಆಕೆ ಕೂಡು ಕುಟುಂಬದಲ್ಲಿ 3ನೇಯವಳಾಗಿ ಜನಿಸಿದವಳು. ಅಲ್ಲಿ ಕೂಡ ಬಡತನವೇ ಸೈ!, ಅದು ಹೆಣ್ಣು “ಭಾರ” ಎನ್ನುವಂತ ಕಾಲ. ಒಂದೇ ಜೊತೆ ಬಟ್ಟೆಯನ್ನು ಒಬ್ಬರಿಂದೊಬ್ಬರಿಗೆ ಬದಲಾಯಿಸಿ ಮತ್ತೊಮ್ಮೆ ಧರಿಸುವಂತ ಸಂದರ್ಭ,ಆದರೂ ಹೆಸರಿಗೆ ದೊಡ್ದ ಮನೆತನವದು. ಆ ಕುಟುಂಬದಲ್ಲಿ ನಾಲ್ವರು ಗಂಡು ಹಾಗೂ ಐವರು ಹೆಣ್ಣು ಮಕ್ಕಳು. ಒಂದು ಬಡ ಕುಟುಂಬದಲ್ಲಿ ಅವರ ಜೀವನ ಗುರಿಯೇ ಹೆಣ್ಣು ಮಕ್ಕಳ ಮದುವೆ ಮಾಡಿ ಕೈ ತೊಳೆದುಕೊಳ್ಳುವುದು, ಮನೆ ನಡಿಸುವುದು ಎಷ್ಟೇ ಕಷ್ಟವಾಗಿಯೇ ಇದ್ದರೂ ಮದುವೆ ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕಳುಹಿಸಿದರೆ ಸಾಕು ಎಂಬಂತ ಕಾಲ ,ಹಾಗೋ ಹೀಗೋ ಆಕೆಗೆ ಮದುವೆಯನ್ನಮಾಡಿದರು.

ಕಾಲಿಟ್ಟ ಮನೆಯಲ್ಲಿ ಕೂಡಾ ಅಷ್ಟೇ ತುಂಬು ಕುಟುಂಬ, ಬಡತನದ ಛಾಪು ಹೇರಳವಾಗೇ ಇತ್ತು!.ಹೇಗೊ ಇನ್ನು “ಅಂತರಪಟದಾಚೆ ನಿಂತ ನಲ್ಲನೇ ಜೀವನದ ಅರ್ಥ”, ಆತ ಕಪ್ಪಾಗಿರಲಿ, ಕಳ್ಳನಾಗಿರಲಿ,ಕುಬ್ಜನೇ ಆಗಿರಲಿ, ಮೃಗವೇ ಆಗಿರಲಿ ಆತನೇ ತನ್ನ ತನು ಮನದ ಅರ್ಧಾಂಗ ಎನ್ನುವುದನ್ನ ದೃಢವಾಗಿ ನಂಬಿದ್ದಳಾಕೆ. ಪ್ರತೀ ಹೆಣ್ಣಿಗೂ ಗಂಡನೊಂದಿಗೆ ಬೆಸೆದ ಬಾಂಧವ್ಯ ಎಷ್ಟೊಂದು ಅವಿನಾಭಾವವೆಂದರೆ!, ಆತನಾದರೂ ಆಕೆ ಸತ್ತರೆ ಇನ್ನೊಬ್ಬಳನ್ನ ಆರಾಮಾಗಿ ವರಿಸಬಲ್ಲ ಆದರೆ ಆಕೆಗೆ ಅದು ಸೂಜಿಗಳನ್ನು ನುಂಗುವಷ್ಟು ಕಷ್ಟ. ಈ ಕೂಡು ಕುಟುಂಬದಲ್ಲಿ ಹೊಂದಿಕೊಳ್ಳಲು ಆಕೆಗೆ ಅಂತೇನೂ ಕಷ್ಟವಾಗಲಿಲ್ಲ , ಆಕೆ ನೀಳವಾದ ಕೂದಲುಳ್ಳವಳು, ಸಲ್ಪ ಉಬ್ಬು ಹಲ್ಲು ಬಾಸಿಂಗದ ಸುಳಿ ಹೊತ್ತವಳು, ಅಂದದ ರಂಗೋಲಿ ಎಳೆವವಳು,ರೂಪಸಿ ಅಲ್ಲದಿದ್ದರೂ , ಚೆಂದವೇ ಇದ್ದವಳು,!..

ಈಗಿನಂಗೆ ಯಾವ ಫೋನೂ ಆಗ ಲಭ್ಯವಿರಲಿಲ್ಲ ಹಾಗಾಗಿ ಸಂಬಂಧಗಳ ಸಂತಸ ಅನು ದಿನ ಹೊಸತರಂತೆ ಇರುತ್ತಿತ್ತು!, ಅವಳು ಎಲ್ಲಾ ಕೆಲಸಗಳನ್ನೂ ಸಲೀಸಾಗಿ ಮಾಡುತ್ತಿದ್ದವಳು ಆದರೆ ಸಲ್ಪ ಕೋಪಿಷ್ಟೆ ಆದರೂ ಅಂತೇನೂ ತೊಂದರೆ ಇಲ್ಲ!.ಆಕೆಯ ದಿನಚರಿ ಪುಸ್ತಕ ಅವಳ ಗಂಡನೇ ಆಗಿರುತ್ತಿದ್ದ!. ಅದು ಎಷ್ಟು ಮುಗ್ಧ ಪ್ರೀತಿಯೆಂದರೆ ಆಕೆಯ ಎಲ್ಲಾ ಮಾತುಗಳಿಗೂ ಅವನು ಹೂ ಗೊಡುತ್ತಿದ್ದ, ನಳ ದಮಯಂತಿಯರಂತೆ ಅನ್ಯೋನ್ಯತೆ. ಅವನೂ ಕೂಡಾ ಅತೀ ಮುಗ್ಧ ಪ್ರೌಢ ದೇಹದಲ್ಲಿ ಮಗುವಿನ ಆತ್ಮ ಅಡಿಗಿದಂತೆ. ಗಂಡನಲ್ಲಿ ಎಂದೂ ಹಠ ಮಾಡಿದವಳಲ್ಲ. ಅದೋ ಕೂಡು ಕುಟುಂಬ ಬೇರೆ ಹಾಗಾಗಿ ಕೆಲಸಗಳು ಹಂಚಿಕೆಯಾಗಿರುತ್ತಿದ್ದವು!, ಮಾಡಲೇ ಬೇಕಾದ ಅನಿವಾರ್ಯತೆ ಇರುತ್ತಿತ್ತು. ಲಗ್ನವಾಗಿ ಒಂದು ವರ್ಷವಾಗುವಾಗಲೇ ಆ ದಂಪತಿಗಳಿಗೆ ಗಂಡು ಮಗುವನ್ನ ಮಡಿಲಿಗೆ ನೀಡಿದ ಪರಮಾತ್ಮ!..ಈ ಸಂತಸದ ಬೆನ್ನಲ್ಲೇ ಮತ್ತೊಂದು ಊಡುಗೊರೆಯಂತೆ ಹೆಣ್ಣು ಮಗುವೂ ಜನಿಸಿತು.

ಕಾಲ ನಡೆಯುತ್ತಿತ್ತು ಹೀಗೆ ಒಮ್ಮೆ ಒಂದು ದಿನ ಆಕೆ ಮಗುವಿಗೆ ಹಾಲುಣಿಸುತ್ತಾ ಇದ್ದಂತೆ ಜೋರು ಜೋರು ದನಿಯಲ್ಲಿನ ಮಾತುಕತೆ ಆಕೆಯ ಕಿವಿಗೆ ಬಿತ್ತು, ಏನೋ ಆಯಿತೆಂಬ ತರಾ ತುರಿಯಲ್ಲಿ ಮಗುವ ಮಲಗಿಸಿದ ಆಕೆ ಹಾಗೇ ಅಲ್ಲಿಗೆ ಹೋದಳು. ಸಲ್ಪ ದೂರದಲಿ ಬಾಗಿಲ ಬಳಿ ನಿಂತು ನೋಡುತ್ತಿದ್ದಳು, ಮಾತಿನ ಚಕಮಕಿಯಲ್ಲಿದ್ದ ಇಬ್ಬರಲ್ಲೊಬ್ಬರು ಬಾಗಿಲನ್ನ ತಿಳಿಯದೇ ತಳ್ಳಿದಾಗ ಮರುಕ್ಷಣ ಬಾಗಿಲು ಆಕೆಯ ಸ್ತನದ ಮೇಲೆ ರಬಸದಿ ಬಂದು ಬಡಿಯಿತು!, ಒಮ್ಮೆಲೇ ಜಲ್ಮ ಹೋದಂತಾಗಿ ಮನದಲ್ಲೇ ಅರಚಿದಳು.. ಮಾರನೇ ದಿನ ಸರಿಯಾದೀತೆಂದು ಸುಮ್ಮನಾಗಿಬಿಟ್ಟಳು, ಆದರೆ ಆಗಲೇ ಅದೇ ಭಾಗದಲ್ಲಿ ಹೆಪ್ಪುಗಟ್ಟಿದ ರಕ್ತ ತನ್ನ ಕೆಲಸ ಮಾಡಾಲಾರಂಭಿಸಿತ್ತು!.

ಹೀಗೆ ಆ ನೋವು ಆಕೆಯನ್ನು ಸೀಳುತ್ತಿತ್ತು, ಹೇಳಿಕೊಳ್ಳಲೂ ಆಗದೆ ಏನಾಗುತ್ತಿದೆ ಎಂದು ತಿಳಿಯದೇ ಆಕೆ ತನ್ನ ಓರಗಿತ್ತಿಯ ಬಳಿ ಒಮ್ಮೆ ಹೇಳಿಕೊಂಡಳು,”ಅಕ್ಕಮ್ಮ!, ಎದೆ ತುಂಬಾ ನೋವು ಒಮ್ಮೊಮ್ಮೆ, ಮಗುವಿಗೆ ಹಾಲನುಣಿಸಲೂ ಕಷ್ಟವಾದಂತೆ!”.. ಆದರೆ ಏನೂ ಅರಿಯದ ಅಕ್ಕ ಇಲ್ಲ ಈ ಸಮಯದಲ್ಲಿ ಹಾಗಾಗುತ್ತೆ ಬಾಣಂತಿ ಇದ್ದಾಗ ಇದೆಲ್ಲ ಸರ್ವೇ ಸಾಮಾನ್ಯ ಎಂದಳು. ಆಗಲೂ ಆಕೆ ಹೌದೇನೋ ಎಂದು ಸುಮ್ಮನಾದಳು ದಿನೇ ದಿನೇ ವಿಪರೀತವಾದಂತೆ, ಸ್ತನದಿಂದ ಮೊಸರಿನ ಅಂಶ ಹೊರಬರುವುದನ್ನ ಗಮನಿಸಿದಾಕೆ ಭಯಗೊಂಡು ಗಂಡನಲ್ಲಿ ಹೇಳಿಕೊಂಡಳು. ಮಾರನೇ ದಿನ ಆಸ್ಪತ್ರೆಗೆ ಹೋದಾಗಲೇ ಅವರಿಗೆ ತಿಳಿದದ್ದು “ಅರ್ಭುದವೀಗ ವ್ಯಾಘ್ರವಾಗಿದೆ ಎಂದು”..

ಅಂದರೆ ಸ್ತನದ ಕ್ಯಾನ್ಸರ್ ಈಗಾಗಲೇ ಆಕೆಯನ್ನ ಅರ್ಧ ತಿಂದಿತ್ತು. “ಕ್ಯಾನ್ಸರ್ ಬಂದವ ಸತ್ತ” ಎಂಬ ಮಾತಿದ್ದ ಕಾಲವದು, ವಿಷಯಾರಗಿಸಿಕೊಳ್ಳುವ ಮೊದಲೇ ಆಕೆಯ ಕೈಯಲ್ಲಿ ಎರಡು ಮಕ್ಕಳೂ ಒಬ್ಬ ಮುಗ್ಧ ಪತಿಯೂ ಇದ್ದ!.. ಹರಡುತ್ತಲೇ ಹೋದ ಕ್ಯಾನ್ಸರ್ ಮೊದಲು ಕೈ ಹಾಕಿದ್ದೆ ಆಕೆಯ ಕೇಶಕ್ಕೆ!.. ಬಡತನ ಬೇರೆ ಇನ್ನೊಂದೆಡೆ, ಮಕ್ಕಳಿಬ್ಬರೂ ಯಾರದ್ದೋ ಕೈ ಮೇಲೆ!,. ಕುಡಿದ ನೀರೂ ಕಂಬನಿಯಾಗುತ್ತಿರುವ ಸಂದರ್ಭ. ಅದರಲ್ಲೂ ವೈದ್ಯ ನಮ್ಮಿಂದಾಗದು ಇನ್ನು ನಿಮಗೆ ಮಣಿಪಾಲೆ ಸರಿ ಎಂದರು!, ಜನರು ಒಂದೆಡೆ ಅವಳೆದುರಲ್ಲೇ “ಮಣಿಪಾಲಿಗೆ ಹೋದವ ಮಣ್ಣುಪಾಲೇ” ಎಂದು ಮಾತುಗಳಲ್ಲೇ ಆಕೆಯನ್ನ ಕಿತ್ತು ತಿನ್ನುತ್ತಿದ್ದಾರೆ.. ಖಾಯಿಲೆಗಿಂತಲೂ ಆಕೆಯನ್ನ ಚಿಂತೆಯೇ ಚಿತೆಗೇರಿಸುತ್ತಿದೆ!

ತವರಿನವರು ಬಂದು ನೋಡುವಾಗ ಆಕೆ ಕೃಶವಾಗಿದ್ದಳು, ಕೆನ್ನೆ ಮೂಳೆಗಂಟಿ ಕಣ್ಣುಗಳ ಸುತ್ತಲೂ ಕಾರ್ಮೋಡ ಕವಿದಿತ್ತು!.. ಮಣಿಪಾಲ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾರಂಭಿಸಿದರು, ಏನಾದರೂ ಚೇತರಿಕೆಯ ಮಾತೇ ಇಲ್ಲ! ಆಕೆಯ ತೋಳುಗಳು ಮಕ್ಕಳನ್ನೇ ಬಯಸಿದರೂ ಆಕೆಯ ಖಾಯಿಲೆ ಆಗಲೇ ಅವರಿಂದ ದೂರವಾಗಿಸಿತ್ತು. ಪತಿಯೂ ಪ್ರತೀ ಕ್ಷಣವೂ ತನ್ನಿಂದಾದಷ್ಟು ಸಮಯವನ್ನು ಅವಳೊಡನೇ ಕಳೆಯುತ್ತಿದ್ದ,ಆಗಲೇ ಮೂರು ಸಂವತ್ಸರಗಳು  ಸುಳಿವಿಲ್ಲದೇ ಕಳೆದರೂ ಆತನ ಎದೆಯಲ್ಲಿದ್ದ ಹೊಳಪು ಕಳೆಗುಂದಲೇ ಇಲ್ಲ. ನನ್ನಾಕೆ ಮತ್ತೊಮ್ಮೆ ನಗುತ್ತಾಳೆ ಎಲ್ಲವೂ ಮೊದಲಿನಂತೆ ಆದೀತೆಂಬ ಹಂಬಲ ಅವನಲ್ಲಿ, ಆತ ಮಾಡಿದ್ದ ಹರಕೆಗಳೆಷ್ಟೋ!, ಕೈ ಮುಗಿದ ಕಲ್ಹೃದಯದ ದೇವರುಗಳೆಷ್ಟೋ..

ಇನ್ನಾಕೆಯ ಜೀವ ದೇವರದ್ದು ಎಂದು ವೈದ್ಯರೂ ಕೈಚೆಲ್ಲಿ ಕುಳಿತಾಗ, ಮತ್ತೆ ಮರಳಿ ಆಕೆಯನ್ನು ತವರಿಗೆ ವೊಯ್ಯುವಂತೆ ಮಾತಾಯಿತು. ಇಲ್ಲಿ ಗಂಡನ ಮನೆಯಲ್ಲಿ ಕೂಡು ಕುಟುಂಬ ಬೇರೆಯಾಗಲೇ ಬೇಕೆಂಬ ವಿವಾದದ ಕಳ್ಳಿಗಿಡ ಬೇರೂರಿತ್ತು, ಆಕೆಯ ತವರಿನವರು ಬಂದು ಅಂಗಲಾಚಿದರು ಇನ್ನು ಕೇವಲ 6 ತಿಂಗಳಷ್ಟೇ ಆಕೆ ಹೊರಡುತ್ತಾಳೆ ದಯವಿಟ್ಟು ಇಂತಾ ಸಮಯದಲ್ಲಿ ಬೇರೆಯಾಗುವ  ಮಾತುಬೇಡವೆಂದು. ಕಿವುಡರಂತೆ ಮಾನವೀಯತೆ ಕಳೆದುಕೊಂಡ ಮೃಗರು ಕೇಳಬೇಕಲ್ಲ!?..

ಇನ್ನೊಂದೆಡೆ ತವರಲ್ಲಿ ಗಂಡನನ್ನು ಮಕ್ಕಳನ್ನೂ ತೊರೆದು ದಿನವೂ ಸಾಯುತ್ತಿದ್ದಳು ಆಕೆ!, ಆತನೋ ಅಸಹಾಯಕ ಸ್ಥಿತಿಯಲ್ಲಿ ಇದ್ದವ ಅರ್ಧ ದೇಹವೇ ಕೊಳೆಯುತ್ತಿದೆ ಎಂಬ ತೀವ್ರ ನೋವು ಎದೆಯಲ್ಲಿ!, ಇನ್ನೊಂದೆಡೆ “ನೀನೇ ಸರಿ ಇಲ್ಲ” ಎಂದು ಸುತ್ತಿಗೆ ಏಟಿನಂತ ಮಾತುಗಳು ಬೇರೆ!. ಅನ್ಯಾಯದ ವಿರುದ್ಧ ಮಾತನಾಡಲೂ ಬಾರದಂತ ಮುಗ್ಧ ಅವನು, ಒಂದೇ ದೇಹವಾಗಿದ್ದ ಮಡದಿಯ ಮೊಗವ ನೋಡಲೂ ಅವಕಾಶವಿಲ್ಲ!,ಅಲ್ಲಿ ಹೋದರೆ ಅವರು ಇಲ್ಲಿ ಬಂದರೆ ಇವರು ನಿಂದಿಸುತ್ತಲೇ ಇದ್ದಾರೆ. ಆತನೀಗ ತನ್ನ ಯೋಚನೆಗಳನ್ನು ತಾನೇ ನೋಡಲಾಗದಂತಾಗಿದ್ದಾನೆ ಆತ ತಿರುಗಿ ಏನನ್ನೂ ಹೇಳದೇ ಸುಮ್ಮನೇ ಕೂತು ಬಿಡುತ್ತಿದ್ದ..

ಹೆಂಡತಿಯ ಮೊಗ ನೋಡಲು ಬೆಳಿಗ್ಗೆ ಹೊತ್ತು ಮೂಡುವ ಮೊದಲೇ ಎದ್ದು ಎಲ್ಲ ಕೆಲಸಗಳ ಪೂರೈಸಿ ಆ ನಲ್ವತ್ತು ಮೈಲಿ ನಡೆದು ಉಸಿರುತ್ತಾ ಅವರ ಮನೆ ಬಂದಮೇಲೆ ಆತ ನಿಲ್ಲುತ್ತಿದ್ದ. ಜಗುಲಿಯ ಮೇಲೆ ಕುಳಿತಾಗ ಅವನ ಕಂಗಳು ಆಕೆಯನ್ನೇ ಹುಡುಕುತ್ತಾ ಇರುತ್ತಿದ್ದಾಗ!, ಪೂರ್ತಿ ಸೊರಗಿ ಶಕ್ತಿ ಕಳೆದುಕೊಂಡ ಆಕೆ ಅವನ ದನಿಯ ಕೇಳಿ, ಚೈತನ್ಯ ತುಂಬಿಸಿಕೊಂಡು,ಕಣ್ದುಂಬಿಕೊಂಡು ತೆವಳುತ್ತಾ ತೆವಳುತ್ತಾ ಬಂದು ಆ ಬಾಗಿಲ ಬಳಿಯಲಿದ್ದ ಏಣಿ ಕಾಲಲ್ಲಿ ಕುಳಿತು ಆತನನ್ನೇ ದಿಟ್ಟಿಸಿ ನೋಡುತ್ತಾ ಕುಳಿತಾಗ ಅವಳ ಅನುಮತಿಯ ಕೇಳದೆ ಕಣ್ಹನಿಗಳು ಕಲ್ಲಾಗಿ ಗಲ್ಲದವರೆಗೂ ಇಳಿಯುತ್ತಿದ್ದವು!.  ಇತ್ತ ಈತ ‘ಮನೆಗೆ ಬಂದು ಬಿಡೇ ಎನ್ನೋಣವೆಂದರೆ’ ನನ್ನ ಕೈಯಲ್ಲಿ ಬಿಡಿಗಾಸೂ ಇಲ್ಲವಲ್ಲ, ನಲ್ಲೇ! ದುರಾದೃಷ್ಟದ ಇನ್ನೊಂದು ಹೆಸರೇ ನಾನು ಎಂದು ಮನದಲ್ಲೇ ದುಃಖ್ಕಿಯಾಗಿದ್ದಾನೆ..!..ಇಬ್ಬರಲ್ಲೂ ತಬ್ಬಿ ಅಳುವಷ್ಟು ಆಳತೆ!, ಒಬ್ಬರೆದುರಲ್ಲಿ ಒಬ್ಬರು ಕುಳಿತು ತಲ್ಲೀನರಾಗುವಷ್ಟು ಮೌನತೆ ನೀಳವಾಗಿ ಅಡಗಿದೆ ಆದರೆ ಇಬ್ಬರೂ ಮೌನಿಗಳು!..

ಆಕೆಯ ಇಡೀ ದೇಹವನ್ನೇ ಆವರಿಸಿದ ಕ್ಯಾನ್ಸರ್ ಸಾವಿಗೂ ಆಮಂತ್ರಣ ನೀಡಿದೆ!. ಈಗ ಆಕೆ ಮತ್ತೆ ಮಗುವಾಗಿದ್ದಾಳೆ ,ಹಠ ಮಾಡುತ್ತಾಳೆ!, ಒಮ್ಮೆ ನಗುತ್ತಾಳೆ!, ಮತ್ತೊಮ್ಮೆ ಅಳುತ್ತಾಳೆ, ಮಗದೊಮ್ಮೆ ಮೌನಿಯಾಗಿ ಆಳ ಆಲೋಚನೆಯಲ್ಲಿ ಮುಳುಗುತ್ತಾಳೆ. ಅಷ್ಟೂ ದಿನದ ಸಂಸಾರದಲ್ಲಿ ಒಂದು ಮಲ್ಲಿಗೆ ಹೂವನ್ನೂ ಬಯಸದವಳು,” ರೀ!,ನಂಗೊಂದು ಸೀರೆ ಕೊಡ್ಸೀ”.. ಎಂದು ಅವನನ್ನು ದಿಟ್ಟಿಸಿ ಬೇಡುತ್ತಿದ್ದಳು!,ಆತ ಎಂದೂ ಕಣ್ಣಿಂದ ನೀರ ನೆಲಕ್ಕುರುಳಿಸದವ ಅಂದು ಪೂರ್ತಿ ನೇತ್ರಾವತಿಯನ್ನೇ ಹರಿಸಿದ್ದಿದೆ!. ಒಂದೆಡೆ ಔಷಧಿಗೆ ಹಣವೆಂಬ ಕಾಗದವನ್ನು ಬೇಡಲೇ ಇಲ್ಲ ಸೀರೆ ತರಲೇ ಎಂಬಾತನ ನೋವಿನ ಬಿಸಿಯುಸಿರು ಅವನನ್ನೇ ಸುಡುತ್ತಿದೆ..

ಆಕೆಯ ದೇಹ ದೀಪದ ಬತ್ತಿಯು ಉರಿದು ಉರಿದು ನಂದಲು ಇನ್ನೇನು ಕೆಲವು ದಿನಗಳಿರುವಾಗ ಆಕೆ ಮಗುವಂತೆ ನಾನು ನನ್ನ ಮನೆಗೆ ಹೋಗಲೇಬೇಕೆಂದು ಹಠ ಮಾಡಿದಳು, ಇರುವಷ್ಟು ದಿನವಾದರೂ ನೆಮ್ಮದಿಯಿಂದಿರಲಿ ಎಂದು ಆಕೆಯನ್ನು ಕರೆದೊಯ್ದ ಆತ, ಈಗಾಗಲೇ ಕೂಡು ಕುಟುಂಬ ಒಡೆದಿದೆ!.

ಅದು ಗದ್ದೆ ನಾಟಿ ಸಮಯ ಎಲ್ಲರೂ ಗದ್ದೆಯಿಂದ ಬಂದು ಉಂಡು ಮತ್ತೆ ಮರಳುವ ಹೊತ್ತು, ಈಕೆಯೂ ಕೂಡಾ ಸಲ್ಪೆ ಸಲ್ಪ ಅನ್ನ ನುಂಗಿದ್ದಳು ಹಾಗೂ ಬಾಗಿಲಲ್ಲೇ ಕುಳಿತು ತನ್ನ ದುರಾದೃಷ್ಟತೆಯನ್ನು ಅನುಭವಿಸುತ್ತಾ ಕುಳಿತಿದ್ದಳು, ಗಂಡನನ್ನು ನೋಡಿ “ರೀ, ನಾನೂ ಹೊರಗಡೆ ಹೋಗ್ಬೇಕು ಕರ್ಕೊಂಡು ಹೋಗಿ” ಎಂದಳಾಕೆ!. ಅವಳನ್ನು ಕೈಮೇಲೆ ತನ್ನ ಮಗುವಂತೆ ಎತ್ತಿಕೊಂಡು ಆತ ಕರೆದೊಯ್ದ!, ಆಕೆಗೆ ಕೂರಲೂ ಸಾಧ್ಯವಾಗುತ್ತಿಲ್ಲ ಆದರೆ ಆತನಿಗೀಗ ಅವಳೊಂದು ಮಗುವಂತೆ ಕಾಣುತ್ತಿದ್ದಾಳೆ. ಅವನಿಗೆ ಅವಳ ಮೇಲಿದ್ದ ಅನಂತ ಪ್ರೇಮ ಅವಳ ದೇಹದಮೇಲಲ್ಲ, ಆಕೆಯ ಮೌನದೊಳಗಿದ್ದ ಮಾತಿನ ಮೇಲೆ!.. ಆತ ಅವಳೊಂದಿಗಿದ್ದು ಆಕೆಯ ಮಲ ಮೂತ್ರವನ್ನೂ ತೊಳೆದು ಮತ್ತೊಮ್ಮೆ ಕೈ ಮೇಲೆ ಹೊತ್ತು ಹೊಸ್ತಿಲ ಬಳಿ ಬರುವಾಗಾಗಲೇ ಆಕೆ ಅವನ ಕಣ್ಣುಗಳನ್ನೇ ನೋಡುತ್ತಾ ಮೌನವಾಗಿದ್ದಾಳೆ ಆಕೆ!..

ಒಮ್ಮೆಲೇ ಆತನ ಆರ್ತ ಕೂಗು ಜವನನ್ನೂ ನಡುಗಿಸಿತು!, ಅಂದು ಅವಳೊಂದಿಗೆ ಹೊಸ್ತಿಲ ದಾಟಿದ ಆತ ಇಂದು ಆಕೆಯ ಪಾರ್ಥೀವ ಶರೀರವನ್ನು ಹಿಡಿದು ಹೊಸ್ತಿಲಲ್ಲೇ ನಿಂತಿದ್ದಾನೆ!. ಈಗ ಆತನ ತಲೆಯಲ್ಲಿ ಕೊನೆಗೂ ಅವಳು ಕೇಳಿದ್ದ ಸೀರೆ ಅವಳಿಗಾಗಲೇ ಇಲ್ಲವಲ್ಲ ಎನ್ನುವ ಆಳ ಗಾಯದ ನೋವು!,ಅವನ ಕಣ್ಣೀರು ಮೆಲ್ಲನೆ ಜಾರಿ ಆಕೆಯ ತುಟಿಗಳ ಮೇಲೆ ಬೀಳುತ್ತಿದೆ..ಇತ್ತ ಈಕೆ ಕರ್ಮ ಹರಿದುಕೊಂಡು, ದೇಹದಿಂದ ಹೊರಗೆ ನಿಂತು!. ರೀ ಇಲ್ನೋಡಿ ನನಗೆ ಈಗ ನೋವುಗಳೇ ಇಲ್ಲ, ನಾನು ಮನಸ್ಪೂರ್ತಿಯಾಗಿ ನಗುತ್ತಿದ್ದೇನೆ ಆದರೆ ನಿಮಗೇಕೆ ಇಷ್ಟು ನೋವು ಎಂದು ಪ್ರಶ್ನಿಸುತ್ತಾ ನಿಂತಿದ್ದಾಳೆ!..ಯಮನೂ ಭೀಕರ ಮೌನದ ಏಟಿಗೆ ಬಲಿಯಾಗಿ ನಿಂತಿದ್ದಾನೆ.. ಆಕೆ ತನ್ನ ಪತಿಯ ಕೈಯಲ್ಲೇ ಮುತ್ತೈದೆಯಾಗಿ ತೆರಳಿದ್ದರಿಂದ ಆನಂದವಾಗಿ ನಗುತ್ತಿದ್ದಾಳೆ…! ಈಗ ಎಲ್ಲವೂ ಧೋ! ಎಂದು ಸುರಿದ ಮಳೆ ನಿಂತಾಗ ಬರುವ ತಣಿವಿನ ಭಾವದಲ್ಲಿದೆ..ಎಲ್ಲವೂ ಮುಗಿದಿದೆ…

ನಾ ಕಂಡಂತೆ ನೈಜ ಪ್ರೇಮವೂ ಹೀಗೇ ದೇಹದಲ್ಲಿ ಅಡಗಿರದೇ ಆತ್ಮದಲ್ಲೇ ಅಡಗಿರುತ್ತದೆ.. ಮೆಸೇಜ್,ಫೋನ್ ನಲ್ಲೇ ಪ್ರೀತಿಯ ಹುಡುಕುವ ಈ ಕಾಲದಲ್ಲಿ ನನಗೆ ಕಂಡ ನಿತ್ಯ ಪ್ರೇಮವೇ ಇದು!..ನನ್ನ ಸುತ್ತಲಿನದ್ದೆ

ಕವನ ಕೆ,

ದ್ವಿತೀಯ  ಬಿ ಎ, ವಿದ್ಯಾರ್ಥಿನಿ,

ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜುಶಿವಮೊಗ್ಗ

ಅಂಕೆಯಿಲ್ಲದ ಲಂಕೇಶನ ಕದಡಿದ ಮನಸು

ನೀನಾಸಂ ನಮ್ಮ ಕೈ ಗಿತ್ತ ಬ್ಯಾಗ್ ನಲ್ಲಿದ್ದ ಎಲ್ಲವನ್ನು ನೋಡುತ್ತಾ ಬಂದ ನಮಗೆ ಸಿಕ್ಕಿದ್ದೆ “ದಶಾನನ ಸ್ವಪ್ನ ಸಿದ್ಧಿ” ಎಂಬ ಶೀರ್ಷಿಕೆಯ ಹಸ್ತಪ್ರತಿ (ಭ್ರೋಚರ್). ದಶಾನನ ಸ್ವಪ್ನಿಸಿದ್ದಿ ಕುವೆಂಪು ರಚಿತಾ ರಾಮಾಯಣ ದರ್ಶನ೦

ಕೃತಿಯಿಂದ ಆಯ್ದ ರಂಗ ಪ್ರಯೋಗ. ಅದನ್ನು ನೋಡಿದ ನಮ್ಮ ಮೊದಲ ಅನಿಸಿಕೆ “ಅದು ಸರಳ ರಗಳೆಯಲ್ಲಿರುವ ಕೃತಿ ನಮಗೆ ಅರ್ಥವಾಗುವುದು ಸ್ವಲ್ಪ ಕಷ್ಟವೇ!! ಎಂದು. ಆದರೆ ಅದರ ರಂಗ ಪ್ರಯೋಗವನ್ನು ನೋಡುತ್ತಾ ಹೋದ ನಮಗೆ ಕೊನೆಗೆ ಆದ ಅನುಭವವೇ ಬೇರೆ!!.

ಆಧುನಿಕ ಕನ್ನಡ ಸಾಹಿತ್ಯದ ಮಹೋನ್ನತ ಕೃತಿ.

ಮಹಾಕಾವ್ಯಗಳ ರಚನೆಯ ಯುಗ ಮುಗಿದೆ ಹೋಯಿತು ಎನ್ನುವಾಗಲೇ ಸೃಷ್ಟಿಯಾದ ಆಧುನಿಕ ಮಹಾಕಾವ್ಯ “ಶ್ರೀ ರಾಮಾಯಣ ದರ್ಶನ0”. ಕುವೆಂಪುರವರ ಕಿರೀಟಕ್ಕೆ ಜ್ಞಾನಪೀಠವೆಂಬ ವಜ್ರವನ್ನು ಕೊಟ್ಟ ಕೃತಿ ಇದು.

“ದಶಾನನ ಸ್ವಪ್ನ ಸಿದ್ಧಿ” ಇಲ್ಲಿ ರಾವಣನು ನಮಗೆ ತೋರುವ ಬಗ್ಗೆ ಅದ್ಭುತ. ಅವನ ಮನಸ್ಸಿನ ಲಾಗುವ  ವಿಭಿನ್ನ ಮಾರ್ಪಾಡುಗಳನ್ನು ಜಗದ ಮುಂದೆ ಇಡುವ ಪ್ರಯತ್ನ ಕವಿಯದ್ದಾದರೆ ಅದನ್ನು ರಂಗ ಪ್ರಯೋಗ ಮಾಡಿ ಎಲ್ಲರ ಕಣ್ಣುಗಳಿಗೆ ಕಟ್ಟುವಂತೆ ಮಾಡಿದ್ದು ನಿರ್ದೇಶಕರಾದ ಮಂಜು ಕೊಡಗು, ಮತ್ತು ತಂಡ.

ಕಥೆ ಹೀಗಿದೆ: ರಾಮನ ಸೈನ್ಯವು ಲಂಕಾಧಿನಾಥನ ಸೈನ್ಯವನ್ನು ಸಂಪೂರ್ಣ ನಾಶ ಮಾಡಿದೆ ಕೋಪಗೊಂಡ ರಾವಣನು ಸಂಕಲ್ಪ ಸಿದ್ಧಿಯಾಗಿ ಕಾಳಿಕಾದೇವಿಯನ್ನು ಪೂಜಿಸುತ್ತಾನೆ ವರ ನೀಡಲು ತಡ ಮಾಡಿದ ಕಾಳಿಕಾ ದೇವಿಗೆ  ತನ್ನ ತಲೆಯನ್ನೇ ಅರ್ಪಿಸಲು ಸಿದ್ಧನಾಗುತ್ತಾನೆ ಆಗ ಪ್ರಕೃತಿ ಒಂದೊಮ್ಮೆ ನಡಗುತ್ತದೆ. ಅವನು ಸ್ವಪ್ನ ಸಮಾಧಿಗೆ ಉರುಳುತ್ತಾನೆ. ಆಗ ಲಂಕಾಲಕ್ಷ್ಮೀಯು ಗೋಚರಳಾಗುತ್ತಾಳೆ, ಅವಳ ಪಾಡನ್ನು ನೋಡಿದ ರಾವಣ ಯುದ್ಧದಲ್ಲಿ ತಾನೊಬ್ಬನೇ ಸಮರಕ್ಕಿಳಿಯುವೆ ಎಂದು ಭಾಷೆ ಕೊಡುತ್ತಾನೆ. ನಂತರ ಅಲ್ಲಿ ಕೆಲವು ಮಾರ್ಪಾಡುಗಳಗೊಂಡು ದುರ್ಗೆ ಕಾಣಿ ಸುತ್ತಾಳೆ ಮಗುವಿನಂತೆ ಅಳುತ್ತಾ ಕಾಲಿಗೆರಗುತ್ತಾನೆ. ರಾಮ ಸೋಲುವಂತೆ ಸೀತೆವಶವಾಗುವಂತೆ  ಮಾಡೆ೦ದು ಕೋರುತ್ತಾನೆ. “ಸೀತೆ ಆಲಂಗಿಸುವಳು ಮತ್ತು ರಾಮನ ಸೋಲಿಸುವೆ -ಪುನರ್ಜನ್ಮದಲ್ಲಿ” ಅಂಥ ವರವಿತ್ತು ಮಾಯವಾಗುತ್ತಾಳೆ. ನಂತರ ಅವನಿಗೆ ದೇವತಾ ವಿಗ್ರಹದ ಬದಲು ಕೆನೆವ ಕುದುರೆಯೊಂದು ರೂಪತಾಳಿ ರಾವಣನ  ಬೆನ್ನಟ್ಟಿ ಬರುತ್ತದೆ. ರಾವಣನಿಗೆ ಸೀತೆಯ ಮೇಲಿದ್ದ ಅಧಮ್ಯವಾದ ಕಾಮ ರುಚಿ ಸಂಪೂರ್ಣವಾಗಿ ವಿನಾಶವಾಗುತ್ತದೆ. ಹೀಗೆ ಮುಂದುವರೆಯುತ್ತಾ ನದಿಜಲವೆಲ್ಲ  ನೆತ್ತರಾಗಿ, ಅವನು ಏರಿದ ದೋಣಿ ತಲೆ ಕೆಳಗಾಗಿ , ಅವನು ತನ್ನ ತಮ್ಮನಾದ ಕುಂಭಕರ್ಣನನ್ನು ಕಂಡು ಕೂಗುತ್ತಾನೆ ಇಬ್ಬರೂ ಹೊಳೆಯೊಡನೆ ಹೋರಾಡಿ ದಡವನ್ನು ಸೇರುತ್ತಾರೆ, ಇದ್ದಕ್ಕಿದ್ದ ಹಾಗೆ ತಾವಿಬ್ಬರು ಶಿಶುಗಳಂತಾಗಿದ್ದಾರೆ, ಅವರಿಬ್ಬರೂ ಆಗ ತಾನೆ ಹುಟ್ಟಿದ ಮಕ್ಕಳಂತೆ ಅಳತೊಡಗಿದಾಗ ಸೀತೆ ಅಲ್ಲಿಗೆ ಬಂದು ಮಕ್ಕಳನ್ನು ಎತ್ತಿ ಮುದ್ದಾಡುತ್ತಾಳೆ. ಇಲ್ಲಿ ರಾವಣನ ಮನಸ್ಸು ಸೀತೆಯ ಬಗೆಗಿನ ಮಾತೃ ಭಾವದಲ್ಲಿ ಉದಾತ್ತವಾಗುತ್ತದೆ.

ಈ ಸ್ವಪ್ನ ವಿಸ್ಮಯದಿಂದ ಹೊರಬಂದ ರಾವಣನು ಮಂಡೋದರಿಯನ್ನ ಕರೆಯುತ್ತಾನೆ ಆಗ ಬದಲಾದ ರಾವಣನು ಮಂಡೋದರಿಗೆ ಕಾಣುತ್ತಾನೆ. ತನಗಾದ ಅನುಭವವನ್ನು ಮಂಡೋದರಿಯ ಮುಂದೆ ವ್ಯಕ್ತಪಡಿಸುತ್ತಾನೆ. ಸೀತೆಯಲ್ಲಿ ತನಗಿರುವ ಈಗಿನ ಭಾವವನ್ನು ತಿಳಿಸುತ್ತಾನೆ. ಅವನ ಆತ್ಮ ಮನಸ್ಸು ದೈವಿಕ ನೆಲೆಯಲ್ಲಿ ನಿಲ್ಲುತ್ತದೆ.” ನನಗೆ ರಾಮನ ಕೊಲ್ಲುವುದಲ್ಲ ಗುರಿ ಸೀತಾಶುಭೋದಯಕೆ ಗೆಲ್ಲುವುದಲ್ಲದೆ ಕೊಲ್ಲುವುದಲ್ಲ”. ಮಂಡೋದರಿಯನ್ನ ಬೀಳ್ಕೊಡುತ್ತಾನೆ ಅಂದಿನ ಬೆಳಗು ರಾವಣನ ಪಾಲಿಗೆ ಜೇನಿನ ಮಳೆ ಸುರಿದಂತೆ, ಸೊಬಗಾಗಿ ಕಾಣುತ್ತದೆ. ನಾಳ ನಾಳದಲ್ಲಿ ಅಮೃತತ್ವ ಪಸರಿಸುತ್ತದೆ.

ಕಥೆ ಹೀಗಿದ್ದರೆ ಇದರ ರಂಗ ಪ್ರಯೋಗ ನೋಡುಗರನ್ನು ಒಂದೊಮ್ಮೆ ಚಕಿತವು , ಮೂಕವಿಸ್ಮಿತವು ಮಾಡುವುದರಲ್ಲಿ ಎರಡು ಮಾತಿಲ್ಲ. ಇದರ ವಿನ್ಯಾಸ ನಿರ್ದೇಶನ ಮಂಜು ಕೊಡಗುರವರದ್ದು ಇದರ ಪ್ರಯೋಗವನ್ನು ಇಬ್ಬರು ವೃತ್ತಿಪರ ನಟ ಅವಿನಾಶ್ ರೈ ಮತ್ತು ನಟಿ ಶ್ವೇತಾ ಅರೆಹೊಳೆಯವರದ್ದು. ಅವರು ಮಾಡಿದ ಅಭಿನಯ ನನ್ನ ಕಣ್ಣುಗಳಲ್ಲಿ ಇನ್ನು ಕಟ್ಟಿದ ಹಾಗೆ ಇದೆ. ಎಲ್ಲಾ ಪಾತ್ರಗಳು ಇವರಿಬ್ಬರೇ ಅತ್ಯಂತ ನಾಜೂಕಾಗಿ ಮತ್ತು ಆಕರ್ಷಕವಾಗಿ ಮಾಡಿ ಎಲ್ಲರ ಗಮನವನ್ನು ಸೆಳೆಯುತ್ತಾರೆ.

 

ರಾವಣನ ಮನಸ್ಸಿನಲ್ಲಾಗುವ ವಿಭಿನ್ನ ರೀತಿಯ ಮಾರ್ಪಾಡುಗಳನ್ನು  ಒಮ್ಮೆ ಕೋಪ, ಒಮ್ಮೆ ಅಪಾರಭಕ್ತಿ, ಒಮ್ಮೆ ಮಗು ಹೀಗೆ ಹಲವಾರು ರೀತಿಯ ಭಾವಗಳನ್ನು , ಪ್ರತಿ ವ್ಯಕ್ತಿಯು ಬೆಳೆಯಬಲ್ಲ ಬದಲಾಗಬಲ್ಲ ಎಂಬ ಕುವೆಂಪುರವರ ಆಶಯವನ್ನು ತಮ್ಮ ಅಭಿನಯದ ಮೂಲಕ ಮತ್ತು ಕಂಠದ ಮಾರ್ಪಾಡುಗಳ ಮೂಲಕ ನಮ್ಮೆದುರಿಗೆ ಇರಿಸಿದ ರೀತಿ ಅದ್ಭುತ.

 

ಇನ್ನು ಕಾಳಿಕಾದೇವಿ, ಲಂಕಾಲಕ್ಷ್ಮೀ, ಸೀತೆ ,ದುರ್ಗೆ, ಮಂಡೋದರಿ ಈ ಎಲ್ಲಾ ಪಾತ್ರಗಳನ್ನು ನೋಡುಗರು ಕುಳಿತಲ್ಲೇ ಅಚ್ಚರಿಯಾಗುವಂತೆ ಮಾಡಿದ ಕೀರ್ತಿ ಶ್ವೇತಾ ಅರಹೊಳೆಯರವರದ್ದು. ನನಗೆ ರೆಡಿಯಾಗೋಕೆ ಒಂದು ಗಂಟೆ ಬೇಕಪ್ಪ ಅನ್ನು ಈಗಿನ ಕಾಲದ ಹುಡುಗಿಯರಿಗೆ ಕಪಾಳ ಮೋಕ್ಷ ಮಾಡುವಂತಿದ್ದದ್ದು ಅವರು ತಯಾರಾಗಲು ತೆಗೆದುಕೊಳ್ಳುತ್ತಿದ್ದ ಸಮಯ. ನಾಟಕದಲ್ಲಿ ತಮಗೆ ನೀಡಿದ ಎಲ್ಲಾ ಪಾತ್ರಗಳನ್ನು ನಿರ್ವಹಿಸುತ್ತಾ ಒಂದೊಂದು ಪಾತ್ರಕ್ಕೂ ವಿಭಿನ್ನ ಮತ್ತು ವಿಜೃಂಭಣೆಯ ವೇಷ ಭೂಷಣಗಳನ್ನ ತೊಡಲು ಅವರು ತೆಗೆದುಕೊಳ್ಳುತ್ತಿದ್ದ ಸಮಯ ನಿಮಿಷಗಳಷ್ಟೇ!! ನಾಟಕದಲ್ಲಿ ಎಲ್ಲೂ ಕೂಡ ಲೋಪಭಾರದಂತೆ ಸಮಯಪ್ರಜ್ಞೆಯಿಂದ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ಮತ್ತು ಬಹು ಆಕರ್ಷಣೀಯವಾಗಿ ತೆರೆಯ ಮೇಲೆ ವ್ಯಕ್ತಪಡಿಸಿದರು. ಸೀತೆಯ ಪಾತ್ರವನ್ನು ಕೂಡಿಯಾಟ್ಟಮ್ ಪ್ರಕಾರದಲ್ಲಿ ವಿನ್ಯಾಸ ಮಾಡಿದ ರೀತಿ ಬಹಳ ಆಕರ್ಷಣೀಯವಾಗಿತ್ತು.

ಇದೆಲ್ಲದರ ಸೂತ್ರಧಾರಿಗಳಾದ ಮಂಜು ಕೊಡಗು ಅವರಿಗೆ ಒಂದು ಚಪ್ಪಾಳೆ ಸಲ್ಲಲೇ ಬೇಕು, ಕುವೆಂಪುರವರ ಕಾವ್ಯಗಳನ್ನು ನಾಟಕ ರೂಪದಲ್ಲಿ ತೆರೆ ಮೇಲೆ ತರುವುದು ಕಷ್ಟ ಎಂಬ ಪದಕ್ಕೆ ವಿರುದ್ಧವಾಗಿ ನಾಟಕವನ್ನು ವಿನ್ಯಾಸಗೊಳಿಸಿ , ನೋಡುಗರ ಕಣ್ಮನ ಸೆಳೆದ ಕೀರ್ತಿ ನಿರ್ದೇಶಕರುದ್ದು.

ಒಟ್ಟಿನಲ್ಲಿ ನಾಟಕವು ರಂಗಾಸಕ್ತರ ಮನಸ್ಸನ್ನು ಸೆಳೆಯುವುದರಲ್ಲಿ ಬೇರೆ ಮಾತೇ ಇಲ್ಲ!!!

ಚಿತ್ರಗಳು: ಶ್ವೇತಾ ಅರೆಹೊಳೆ ಮತ್ತು ತಂಡ

ಸಂಧ್ಯಾ ಕೆ.ಕೆ

ತೃತೀಯ ಬಿ. ಎ

ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ