“ಜ್ಞಾನ ಮತ್ತು ಅಹಂಕಾರ ಎರಡಕ್ಕೂ ನೇರ ಸಂಬಂಧ ಇರುತ್ತದೆ. ಜ್ಞಾನ ಕಡಿಮೆಯಾದಷ್ಟೂ ಅಹಂಕಾರ ಹೆಚ್ಚುತ್ತದೆ……”
ಆಲ್ಬರ್ಟ್ ಐನ್ಸ್ಟೈನ್…..
ಇರಬಹುದೇ? ಒಮ್ಮೆ ನಮ್ಮ ಸುತ್ತಮುತ್ತಲಿನ ಅವಲೋಕನ ಮತ್ತು ನಮ್ಮೊಳಗೆ ಆತ್ಮವಿಮರ್ಶೆ ಮಾಡಿಕೊಳ್ಳೋಣ……
ಸಾಮಾಜಿಕ ಜಾಲತಾಣಗಳ ಬೆಳವಣಿಗೆಯೊಂದಿಗೆ ಬಹುತೇಕ ಆಸಕ್ತಿಯ ಎಲ್ಲಾ ಜನರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ವೇದಿಕೆ ಮತ್ತು ಸ್ವಾತಂತ್ರ್ಯ ದೊರೆತಿದೆ. ಈ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಮನುಷ್ಯನಿಗೆ ಇರಬಹುದಾದ ಅಥವಾ ಬರಬಹುದಾದ ಅಹಂಕಾರ ಅಥವಾ ಅದಕ್ಕೂ ಮಿಗಿಲಾಗಿ ದುರಹಂಕಾರ ಯಾವ ಕಾರಣಗಳಿಗಾಗಿ ಅವನೊಳಗೆ ಪ್ರವೇಶಿಸುತ್ತದೆ ಎಂಬುದನ್ನು ಪರಿಶೀಲಿಸೋಣ…..
ಹಣದ ಅಹಂ, ಅಧಿಕಾರದ ಅಹಂ, ಆಸ್ತಿಯ ಅಹಂ, ಸೌಂದರ್ಯದ ಅಹಂ, ಅಕ್ಷರದ ಅಹಂ, ಜ್ಞಾನದ ಅಹಂ, ಪ್ರಶಸ್ತಿಯ ಅಹಂ, ಜನಪ್ರಿಯತೆಯ ಅಹಂ ಹೀಗೆ ನಾನಾ ಕಾರಣಗಳಿಂದಾಗಿ ಇದು ಹುಟ್ಟುತ್ತದೆ.
ಇಲ್ಲಿ ಅಹಂಕಾರ, ದುರಹಂಕಾರ, ಹೆಮ್ಮೆ ಇವುಗಳಿಗೆ ಇರುವ ವ್ಯತ್ಯಾಸ ಕೂಡ ಗಮನದಲ್ಲಿಟ್ಟುಕೊಂಡು ಚರ್ಚಿಸಬೇಕು. ಏಕೆಂದರೆ ಇತರರ ಬಳಿ ಇಲ್ಲದಿರುವುದು ನನ್ನ ಬಳಿ ಇದೆ ಎನ್ನುವ ತನ್ನ ಸ್ವ ಸಾಮರ್ಥ್ಯದ ಹೆಚ್ಚುಗಾರಿಕೆಯ ಆಂತರಿಕ ಹೆಮ್ಮೆ ಮತ್ತು ಅದರ ಭಾಗವಾಗಿ ಬಹಿರಂಗವಾಗಿ ವಿನಯದ ಪ್ರದರ್ಶನ, ತನ್ನ ಬಳಿ ಇರುವುದು ಅವರ ಬಳಿ ಇಲ್ಲ ಎನ್ನುವ ಕಾರಣಕ್ಕಾಗಿ ಇತರರನ್ನು ಕೀಳಾಗಿ ಕಾಣುವುದು ಅಥವಾ ಅವರಿಗೆ ಮುಜುಗರವಾಗುವಂತೆ ವರ್ತಿಸುವುದು ಅಹಂಕಾರ, ಇದೇ ಕಾರಣಕ್ಕಾಗಿ ಬೇರೆಯವರನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸುವುದು ದುರಹಂಕಾರ ಮತ್ತು ಅಪರಾಧ.
ಬಹುಶಃ ಐನ್ಸ್ಟೈನ್ ಅವರ ಮಾತಿನ ಅರ್ಥ ಅಜ್ಞಾನಿಗಳು ಹೆಚ್ಚು ಅಹಂಕಾರ ಹೊಂದಿರುತ್ತಾರೆ ಕಾರಣ ಅವರಿಗೆ ಸಮಗ್ರ ಚಿಂತನೆಯಾಗಲಿ, ವಿಶಾಲ ಮನೋಭಾವವಾಗಲಿ, ಒಳ್ಳೆಯತನವಾಗಲಿ ಇರುವುದಿಲ್ಲ. ಸಂಕುಚಿತ ದೃಷ್ಟಿಕೋನ ಮತ್ತು ನಾನು ನನ್ನದು ಎಂಬ ಸ್ವಾರ್ಥ ತುಸು ಹೆಚ್ಚಾಗಿಯೇ ಇರುತ್ತದೆ. ಆ ಅಜ್ಞಾನ ಅಹಂಕಾರವಾಗಿ ನಮಗರಿವಿಲ್ಲದೇ ಪರಿವರ್ತನೆ ಹೊಂದಿ ನಮ್ಮೊಳಗೆ ಅಡಕವಾಗಿ ನಮ್ಮ ನಡವಳಿಕೆಯಾಗಿ ಮಾರ್ಪಡುತ್ತದೆ ಎಂಬುದಾಗಿರಬಹುದು.
ಆಳದಲ್ಲಿ ಅಹಂಕಾರದ ಒಳ ಅರ್ಥ ಮತ್ತೇನೋ ಇರಬಹುದು ಅಥವಾ ಆ ರೀತಿಯಲ್ಲಿ ವ್ಯಾಖ್ಯಾನಿಸಬಹುದು. ಆದರೆ ವ್ಯಾವಹಾರಿಕವಾಗಿ ಐನ್ಸ್ಟೈನ್ ಹೇಳಿದ ನಡವಳಿಕೆ ನಮ್ಮ ಸುತ್ತಮುತ್ತಲಿನ ಜನರ ಒಡನಾಟದಿಂದ ನಮಗೆ ಅರಿವಾಗುತ್ತದೆ.
ಉದಾಹರಣೆಗೆ ನಮ್ಮ ನಿಮ್ಮ ನಡುವೆ ಸಾಮಾನ್ಯ ಪರಿಸ್ಥಿತಿಯಲ್ಲಿ ಆತ್ಮೀಯವಾಗಿ ಸ್ನೇಹದಿಂದ ಇರುವ ವ್ಯಕ್ತಿಗಳು ಅಥವಾ ಸಂಬಂಧಿಕರು ಯಾವುದೋ ಕಾರಣದಿಂದಾಗಿ ಅವರ ಒಟ್ಟು ಪರಿಸ್ಥಿತಿ ನಮಗಿಂತ ಉತ್ತಮವಾದಾಗ ಅವರ ವರ್ತನೆಯ ಬದಲಾವಣೆಗಳನ್ನು ಗಮನಿಸಬಹುದು.
ವಿದ್ಯೆಗೆ ವಿನಯವೇ ಭೂಷಣ ಎಂಬ ಮಾತೊಂದಿದೆ. ಜ್ಞಾನವಂತನ ಮನಸ್ಥಿತಿ ಹೆಚ್ಚು ಸಮತೋಲನದಿಂದ ಕೂಡಿರುತ್ತದೆ. ಪ್ರಬುದ್ದತೆಯ ಮಟ್ಟ ಉತ್ತಮ ಗುಣಮಟ್ಟ ಹೊಂದಿರುತ್ತದೆ. ಆಗ ವಿಷಯ ಯಾವುದೇ ಇರಲಿ ಸ್ಥಿತಪ್ರಜ್ಞತೆ ಕಾಪಾಡಿಕೊಳ್ಳಬಹುದು.
ಇದನ್ನು ಸರಿಯಾಗಿ ಅರ್ಥಮಾಡಿಕೊಂಡು ನಮ್ಮ ಮನೋಭಾವ ಮತ್ತು ನಡವಳಿಕೆಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡರೆ ಅಹಂಕಾರ ಮತ್ತು ದುರಹಂಕಾರ ಕಡಿಮೆಯಾಗುವ ಎಲ್ಲಾ ಸಾಧ್ಯತೆ ಇದೆ. ಆತ್ಮವಿಮರ್ಶೆ ಇದಕ್ಕಾಗಿ ಇರುವ ಅತ್ಯುತ್ತಮ ಮಾರ್ಗ.
ಮನುಷ್ಯ ಸಾವಿರಾರು ವರ್ಷಗಳಷ್ಟು ಬದುಕುವುದಿಲ್ಲ. ಸಾಮಾನ್ಯವಾಗಿ 60 ರಿಂದ 80 ಎಂದು ಒಂದು ಅಂದಾಜು. ಈ ಕಾಲದಷ್ಟು ಜೀವನದಲ್ಲಿ ಇತರರೊಂದಿಗೆ ನಾವು ಕೂಡ ಒಂದಷ್ಟು ನೆಮ್ಮದಿ – ಸಂತೋಷದಿಂದ ಜೀವನ ನಡೆಸಬೇಕೆಂದರೆ ಇಡೀ ಸಮಾಜದ ವಾತಾವರಣ ಮುಖ್ಯವಾಗಿ ನಮ್ಮ ಮತ್ತು ನಮ್ಮ ಸಹವರ್ತಿಗಳ ನಡವಳಿಕೆ ಉತ್ತಮವಾಗಿರಬೇಕು ಅಂದರೆ ಅಹಂಕಾರ ಅಥವಾ ದುರಹಂಕಾರಗಳ ಹೆಚ್ಚು ಪ್ರದರ್ಶನಕ್ಕೆ ಅವಕಾಶ ಇರಬಾರದು.
“ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡ” ಎಂದು ವಚನ ಸಾಹಿತ್ಯದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ನಾವೆಲ್ಲರೂ ಇನ್ನು ಮುಂದೆ ನಮ್ಮ ಸಾಮರ್ಥ್ಯ, ನಮ್ಮ ಅದೃಷ್ಟ, ನಮ್ಮ ಉತ್ತಮ ಜೀವನಮಟ್ಟ, ನಮ್ಮ ಸುಖ ಸಂತೋಷಕ್ಕಾಗಿ ಹೆಮ್ಮೆ ಪಡೋಣ. ಆದರೆ ಅಹಂಕಾರ ಅಥವಾ ದುರಹಂಕಾರ ಪಡುವುದು ಬೇಡ.
ನಮ್ಮಲ್ಲಿ ಇನ್ನೂ ದುರಹಂಕಾರ ಇದೆ ಎಂದಾದರೆ ನಾವು ಇನ್ನೂ ಅಜ್ಞಾನಿಗಳು ಎಂದು ನಮ್ಮನ್ನು ನಾವೇ ನಿರ್ಧರಿಸಿ ಮತ್ತೆ ನಾವು ಅಹಂಕಾರ ತ್ಯಜಿಸಿ ಜ್ಞಾನವಂತರಾಗಲು ಪ್ರಯತ್ನಿಸೋಣ. ಇದೊಂದು ನಿರಂತರ ಪ್ರಕ್ರಿಯೆ. ಇದು ಸ್ವಲ್ಪಮಟ್ಟಿಗೆ ಸಾಧ್ಯವಾದರೆ ಪ್ರಬುದ್ಧ ಮನಸ್ಸುಗಳ ಪ್ರಬುದ್ಧ ಸಮಾಜ ನಿರ್ಮಾಣದೆಡೆಗೆ ನಮ್ಮ ಹೆಜ್ಜೆಗಳು ಸಾಗುತ್ತಿವೆ ಎಂದು ಭಾವಿಸಬಹುದು.
ಸುಶ್ಮಿತಾ. ಆರ್
ಪ್ರಥಮ ವರ್ಷದ ಬಿಎಸ್ಸಿ ವಿದ್ಯಾರ್ಥಿನಿ,
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ