
“ನಾ ಭಾರತ, ನನ್ನಲ್ಲಿದೆ ಭಾರತ, ನಾನು ಶಕ್ತಿ, ನನ್ನಲ್ಲಡಗಿದೆ ಶಕ್ತಿ” ಎಂದು ಭಾರತದ ಪ್ರಜೆಗಳನ್ನು ಮತ ಚಲಾಯಿಸಲು ಹುರಿದುಂಬಿಸಿದ ಭಾರತದ ಚುನಾವಣಾ ಆಯೋಗದ ಹಾಡನ್ನು ಮೆಲುಕು ಹಾಕುತ್ತಾ ನಮ್ಮ ಮತದಾನದ ಹಕ್ಕನ್ನು ಚಲಾಯಿಸೋಣ,
ಚುನಾವಣೆ ಎನ್ನುವುದೇ ಒಂದು ಅಸ್ತ್ರ, ಪಕ್ಷ ಪಕ್ಷಗಳ ನಡುವೆ ಜನಪ್ರತಿನಿಧಿಗಳ ನಡುವೆ ಅಧಿಕಾರಕ್ಕಾಗಿ ಕಿತ್ತಾಟ ಹಾಗೂ ಪೈಪೋಟಿ ನಡೆಯುವಾಗ ಪರಿಹಾರವಾಗಿ ಬರುವುದೇ ಚುನಾವಣೆಯಾಗಿದೆ, ಚುನಾವಣೆ ಹಾಗೂ ಮತದಾನದ ನಡುವೆ ಅಪಾರವಾದ ಸಂಬಂಧವಿದೆ, ಚುನಾವಣೆ ಹಾಗೂ ಮತದಾನ ಒಂದು ನಾಣ್ಯದ ಎರಡು ಮುಖಗಳಿದ್ದ ಹಾಗೆ, ಚುನಾವಣೆಯ ಪ್ರಕ್ರಿಯೆಯಲ್ಲಿ ಮತದಾನವೇ ಮುಖ್ಯವಾದ ಭಾಗ,
ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರ, ನಮ್ಮದು ಸಂವಿಧಾನಾತ್ಮಕ ಸರ್ಕಾರ, ಎಲ್ಲಾ ಪ್ರಜಾಪ್ರಭುತ್ವ ರಾಷ್ಟ್ರಗಳು ಪ್ರಜೆಗಳು ಆರಿಸುವ ಪ್ರಜಾ ಪ್ರತಿನಿಧಿಗೆ ರಾಜಕೀಯ ಹಕ್ಕನ್ನು ನೀಡಲು ಚುನಾವಣೆ ಎಂಬ ಕಾರ್ಯತಂತ್ರವನ್ನು ರೂಪಿಸಿದೆ, ಮತದಾನದ ಹಕ್ಕು ಇತರ ಹಕ್ಕುಗಳೊಡನೆ ನಾಗರಿಕರಿಗೆ ಸಂವಿಧಾನಾತ್ಮಕವಾಗಿ ನೀಡಿರುವ ಹಕ್ಕಾಗಿದೆ, ಆದ್ದರಿಂದ ಬನ್ನಿ ಎಲ್ಲಾ ಸೇರಿ ಯೋಗ್ಯವಾದ ಪ್ರಜಾ ಪ್ರತಿನಿಧಿಗೆ ಮತದಾನ ಮಾಡೋಣ, ನಮ್ಮ ಹಕ್ಕನ್ನು ಸರಿಯಾಗಿ ಉಪಯೋಗಿಸಕೊಳ್ಳೋಣ,
ಇತ್ತೀಚಿನ ವಿದ್ಯಮಾನಗಳಲ್ಲಿ ಒಂದು ಸಮೀಕ್ಷೆಯ ಪ್ರಕಾರ ಬಹುತೇಕ ಸುಶಿಕ್ಷಿತರು ಮತಗಟ್ಟೆಗೆ ಬರದೇ ತಮ್ಮ ಮತದಾನದ ಹಕ್ಕನ್ನು ಬಳಸಿಕೊಳ್ಳದೆ ಇರುವುದು ವಿಪರ್ಯಾಸದ ಸಂಗತಿ, 5 ನೇ ಕ್ಲಾಸಿಂದ 18 ವರ್ಷ ತುಂಬಿದವರೆಲ್ಲ ಮತದಾನ ಮಾಡಲೇಬೇಕು ಎಂದು ಪಾಠ ಮಾಡುತ್ತಾ ಬರುತ್ತಿದ್ದರೂ ಸಹ ಎಲ್ಲವನ್ನೂ ಓದಿಕೊಂಡಂತಹ ವಿದ್ಯಾವಂತರು ಚುನಾವಣೆಯ ದಿನ ಮತ ಚಲಾವಣೆ ಮಾಡುವುದನ್ನೇ ಮೈ ಮರೆತು ಮನೆಯಿಂದ ಹೊರಬರದೆ ಟಿವಿ ಮುಂದೆ ಕುಳಿತು ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ವೀಕ್ಷಿಸುತ್ತ ಕಾಲ ಕಳೆಯುವುದು. ಇನ್ನು ಕೆಲವರು ಮಕ್ಕಳ ಬೇಸಿಗೆ ರಜೆ ಇದೆ ಎಂದು ಪ್ರವಾಸ ಕೈಗೊಳ್ಳುವುದು, ಒಂದು (ದೂರದ) ಊರಿನಿಂದ ಇನ್ನೊಂದು ಊರಿಗೆ ಹೊಟ್ಟೆಪಾಡಿಗಾಗಿ ಅಥವಾ ಕೆಲಸದ ನಿಮಿತ್ತ ಬಂದ ಕೆಲಸಗಾರರು ಮತದಾನ ಮಾಡಲು ಒಂದು ದಿನಕೊಸ್ಕರ ತಮ್ಮ ಊರಿಗೆ ಹೋಗಲಾರದೆ ಇರುವ ಪರಿಸ್ಥಿಯಲ್ಲಿ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ನಿಜಕ್ಕೂ ದುರಾದೃಷ್ಟಕರ ಸಂಗತಿ, ಇಂದು ಭಾರತದ ಯಾವುದೇ ಭಾಗದಲ್ಲಿ ಮತದಾನವಾದರೂ ಶೇಕಡಾ 100 ರಷ್ಟು ಮತದಾನ ನಡೆಯುತ್ತಿಲ್ಲ, ಇದಕ್ಕೆಲ್ಲ ಪ್ರಮುಖ ಕಾರಣ ನಾಗರಿಕರಲ್ಲಿ ಮತದಾನದ ಬಗ್ಗೆ ಇರುವ ಅಲಕ್ಷ್ಯ ಮತ್ತು ಅವರಿಗೆ ತಮ್ಮ ಮತದಾನದ ಹಕ್ಕು ಹಾಗೂ ಜವಾಬ್ದಾರಿಯ ಬಗ್ಗೆ ಸರಿಯಾದ ಜ್ಞಾನ ಇಲ್ಲದೆ ಇರುವುದೇ ಆಗಿದೆ, ಹಾಗಾಗಿ ಮತದಾರರು ಪ್ರಜ್ಞಾವಂತರಾಗಿ ಸರಿಯಾದ ಪ್ರಜಾ ಪ್ರತಿನಿಧಿಗೆ ಮತದಾನ ಮಾಡಬೇಕು, ದೇಶದ ಭವಿಷ್ಯದ ಹಿತದೃಷ್ಟಿಯಿಂದ ನಾವು ಮಾಡುತ್ತಿರುವ ಕರ್ತವ್ಯ ಇದು ಎಂದು ಭಾವಿಸಿ ಮತದಾನದಲ್ಲಿ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಉತ್ತಮ ಪ್ರಜಾ ಪ್ರತಿನಿಧಿಗಳನ್ನು ಆರಿಸುವಲ್ಲಿ ತಮ್ಮ ಹಕ್ಕನ್ನು ಚಲಾಯಿಸಬೇಕು,
ಚುನಾವಣೆ ಹಾಗೂ ಮತದಾನ ಒಂದು ನಾಣ್ಯದ ಎರಡು ಮುಖಗಳಾಗಿದೆ, ಚುನಾವಣಾ ಪ್ರಕ್ರಿಯೆಯಲ್ಲಿ ಮತದಾನವೇ ಅತ್ಯಂತ ಮುಖ್ಯವಾದ ಘಟ್ಟ, ಮತ ಚಲಾಯಿಸುವವನೇ ಮತದಾರ, ಜಾತಿ, ಮತ, ಪಂಥ, ಧರ್ಮ, ಉನ್ನತ, ಕನಿಷ್ಠ, ಸ್ಥಾನಮಾನ ಮುಂತಾದವುಗಳ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡದೆ ಒಂದು ರಾಷ್ಟ್ರದ 18 ವರ್ಷ ತುಂಬಿದ ಪ್ರಜೆಯು ಮತ ಚಲಾಯಿಸುವ ಹಕ್ಕನ್ನು ಭಾರತೀಯ ಸಂವಿಧಾನವು ನಮಗೆ ನೀಡಿದೆ,
ಬನ್ನಿ ಎಲ್ಲಾ ಸೇರಿ ರಾಷ್ಟ್ರೀಯ ಹಬ್ಬದಂತೆ ಈ ಬಾರಿಯ ಚುನಾವಣೆಯ ಹಬ್ಬವನ್ನು ಆಚರಿಸೋಣ 10ನೇ ಮೇ 2023 ರಂದು ಯೋಗ್ಯವಾದ ಪ್ರಜಾಪ್ರತಿನಿಧಿಗೆ ನಮ್ಮ ಅಮೂಲ್ಯವಾದ ಮತವನ್ನು ಹಾಕುವುದರ ಮೂಲಕ ಕರ್ನಾಟಕದ ರಾಜ್ಯದ ಮುಂದಿನ 5 ವರ್ಷದ ಭವಿಷ್ಯಕ್ಕೆ ಮುನ್ನುಡಿ ಬರೆಯೋಣ, ರಾಜ್ಯದ ಮುಂದಿನ 5 ವರ್ಷದ ಭವಿಷ್ಯದ ಜೊತೆಗೆ ನಮ್ಮಂತಹ ಕೋಟ್ಯಂತರ ಪ್ರಜೆಗಳ 5 ವರ್ಷದ ಭವಿಷ್ಯವೂ ನಮ್ಮ ಕೈಯಲ್ಲೇ ಇದೆ, ಯೋಚಿಸಿ ಯೋಗ್ಯರಿಗೆ ಮತ ಚಲಾಯಿಸಿ……!