ಮಂಜಿನಲ್ಲಿ ಬರಿಯ ಮರಗಳು

ಮಂಜಿನಲ್ಲಿ ಬರಿಯ ಮರಗಳು (Bare Trees In The Mist- Nepal)

ಹಲವು ಉದ್ದೇಶ, ಗುರಿ, ಸಂತೋಷ, ನೆಮ್ಮದಿಗಳನ್ನು ಬಯಸುವ ವ್ಯಕ್ತಿ ಅದೇ ಗುರಿಯ ಕಡೆಗೆ ಸಾಗಲು ಹೊರಡುತ್ತಾನೆ. ಆದರೆ ಅದಕ್ಕೆ ಒಂದು ನಿರ್ದಿಷ್ಟ ಗುರಿ ಇರುತ್ತದೆ, ಆದರೆ ತನ್ನ ಗಂಡನ ಬರುವಿಕೆಯನ್ನೇ ಮುಖ್ಯಗುರಿ ಎಂದೆನಿಸಿಕೊಂಡ ಕಾಲಿ ಎಂಬ ಮಹಿಳೆಯ ಕುರಿತು ಚಿತ್ರಿಸಿರುವ ಕಿರುಚಿತ್ರವೇ ‘ಮಂಜಿನಲ್ಲಿ ಬರಿಯ ಮರಗಳು’ಎಂಬ ನೇಪಾಳಿ ಭಾಷೆಯ ಕಿರುಚಿತ್ರ.

ಪ್ರಜ್ವಲ್ ನಿರ್ಮಾಣದ ರಾಜನ್ ಕಾರ್ತೂನ್ ನಿರ್ದೇಶಿಸಿ ರಚಿಸಿರುವ ಕಿರುಚಿತ್ರ, ಒಬ್ಬ ಮಹಿಳೆಯ ಜವಾಬ್ದಾರಿಯಾದ ತಾಯಿ, ಹೆಂಡತಿ, ನೆರೆಹೊರೆಯ ಪಾತ್ರ ಕೆಲಸ ಇತ್ಯಾದಿಗಳ ಜೊತೆಜೊತೆಗೆ ತನ್ನ ಸಂವೇದನಶೀಲವಾದ ಪ್ರೀತಿ ಪ್ರೇಮ ನೋವು ಹತಾಶೆ ಇವುಗಳನ್ನು ಬಿಚ್ಚಿಡುತ್ತಾ ಸಾಗುತ್ತದೆ.  ಮೊದಲಾರ್ಧ ಭಾಗದಲ್ಲಿ ನೇಪಾಳದ ಹಿಮಾವೃತ ಚಿತ್ರಣವನ್ನು ಚಿತ್ರಿಸಿ ಜೀವನದ ಭಾರಹೊತ್ತ ತಾಯಿಯ ಜೊತೆಗೆ – ಮಗನ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗದ ಸ್ಥಿತಿಯಲ್ಲಿ ನಾವು ಕಾಲಿ ಎಂಬ ಮಹಿಳೆಯ ಪಾತ್ರವನ್ನು ನೋಡಬಹುದಾಗಿದೆ.

ಕಿರುಚಿತ್ರ, ಎರಡು ಸಂಸಾರದ ಚಿತ್ರಣವನ್ನು ಚಿತ್ರಿಸುತ್ತದೆ, ಒಂದು ಸಂಪದ್ಭರಿತ ಕೂಡುಕುಟುಂಬ ಅಂದರೆ ಚಾರ್ಲಿ, ಚಾರ್ಲಿಯ ತಂದೆ ಮತ್ತು ಚಾರ್ಲಿಯ ತಾಯಿ- ಮತ್ತೊಂದು ಕಾಲಿ ಮತ್ತು ಅವಳ ಮಗ, ಆದರೆ ಕಾಲಿಯ ಗಂಡ ವಿದೇಶದಲ್ಲಿ ಕೆಲಸಕ್ಕೆಂದು ದುಡಿಯಲು ಹೋಗಿದ್ದಾನೆ ಆದರೆ ವಿಪರ್ಯಾಸ ಎಂದರೆ ಕಾಲಿಯ ಮುಗ್ದತನ ಅರ್ಥವಾಗುವುದು ಚಾರ್ಲಿಯ ತಂದೆ ‘ನಿನ್ನ ಗಂಡ ಯಾವ ದೇಶಕ್ಕೆ ಹೋಗಿದ್ದಾನೆ ಎಂದು ಕೇಳಿದಾಗ ಅದಕ್ಕೆ ಉತ್ತರ “ಅರಬ್ ದೇಶ” ಎಂದು ಮಾತ್ರವಾಗಿತ್ತು. ಆದರೆ ಅರಬ್ ದೇಶದ ಯಾವ ಭಾಗದಲ್ಲಿ ಎಂದು ಕೇಳಿದಾಗ ಅವಳಲ್ಲಿ ಉತ್ತರ ಇರಲಿಲ್ಲ’. ಇಲ್ಲಿ ನಿರ್ದೇಶಕ ಕಾಲಿಯ ಜವಾಬ್ದಾರಿಯನ್ನು ಹೊಲ ಊಳಲು ಬಳಸುವ ನೊಗದಂತೆ ಚಿತ್ರಿಸಿದ್ದಾರೆ,ಅರ್ಥತ್ ‘ನೊಗ ಹೊತ್ತ ಮಹಿಳೆಯ ಮೂಕ ನಡಿಗೆಯು ವೀಕ್ಷಕರಿಗೆ ಸಾವಿರ ಭಾವನೆಯನ್ನು ಕಾಲಿಯ ನೋವು, ಹತಾಶೆ, ದಿಕ್ಕೇತೋಚದ ಸ್ಥಿತಿ – ಎಂತಹದ್ದು ಎಂದು ಅರಿವಾಗುತ್ತದೆ,

ಈ ಕಿರುಚಿತ್ರದಲ್ಲಿ ಸುಖೀ ಕುಟುಂಬ ಅಂದರೆ ಚಾರ್ಲಿಯ ಕುಟುಂಬ ಸುಖ ಸಂತೋಷದಿಂದ ಕೂಡಿದ್ದು ಕಾಲಿಯ ಸ್ಥಿತಿಗೆ ಅವಮಾನಿಸುವ ವ್ಯಕ್ತಿತ್ವ ಎಂಬಂತೆ ಭಾಸವಾಗುತ್ತದೆ. ಕೊನೆಯ ದೃಶ್ಯದಲ್ಲಿ ಚಾರ್ಲಿ ತನ್ನ ಕಾಲನ್ನು ಗೋಡೆಗೆ ಹೊಡೆಯುವ ದೃಶ್ಯದ ಶಬ್ದ, ಚಾರ್ಲಿ ತಾಯಿ ರುಬ್ಬುತ್ತಿರುವ ಶಬ್ದ, ಮತ್ತು ಚಾರ್ಲಿಯ ತಂದೆ ಕಟ್ಟಿಗೆಯನ್ನು ಇಬ್ಭಾಗ ಮಾಡುವಾಗ ಮೂಡಿದ ಶಬ್ದವನ್ನೇ – ‘ಕಾಲಿಯಾ ಎದೆಬಡಿತವನ್ನು ‘ಮತ್ತು ವೀಕ್ಷಕರಿಗೆ ಮುಂದೇನಾಗುತ್ತದೋ ಎಂಬ ಆಲೋಚನೆಯನ್ನು ಮೂಡಿಸುತ್ತಾರೆ ಧ್ವನಿ ಸಂಯೋಜಕರಾದ ಡಿಕೇಶ್ ಕಾಡ್ಗಿ ಶಾಹಿ ಮತ್ತು ಸಾರ ತಮಾಗ್ ರವರು.

ಚಿತ್ರದ ಛಾಯಾಗ್ರಹಣದ ವಿಷಯಕ್ಕೆ ಬಂದರೆ ಮಂಜು ಮುಸುಕಿನ ಪ್ರದೇಶದಲ್ಲಿ ಚಿತ್ರಿಸಿದ್ದಾರೆ, ಒಟ್ಟಾರೆ ಇಡೀ ಚಿತ್ರದಲ್ಲಿ ತಿಳಿ ಕಪ್ಪು ಬಣ್ಣದಲ್ಲಿ ಮೂಡಿ ಬಂದಿದ್ದು ವೀಕ್ಷಕರಿಗೆ ಮನಮುಟ್ಟುವಂತೆ ಸೆರೆಹಿಡಿದಿದ್ದಾರೆ ಛಾಯಾಗ್ರಾಹಕ. ಚಿತ್ರದ ಸಕಾರಾತ್ಮಕ ಅಂಶವೆಂದರೆ ಅಷ್ಟು ಪಾತ್ರದಾರಿಗಳ ಸ್ವಾಭಾವಿಕ ನಟನೆ, ಹಿನ್ನೆಲೆ ಧ್ವನಿಯಾದ ಹಕ್ಕಿಗಳ ಚಿಲಿಪಿಲಿ ಕಲರವ ಮತ್ತು ಸಾಕು ಪ್ರಾಣಿಗಳ ಶಬ್ದ,ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ಚಿತ್ರದ ಸಕಾರಾತ್ಮಕ ಅಂಶಗಳಲ್ಲೊಂದು, ಇನ್ನು ಚಿತ್ರದ ‘ಚಿಹ್ನೆ’ ವಿಷಯಕ್ಕೆ ಬಂದರೆ ಮೂಕನಡಿಗೆ,ಕಟ್ಟಿಗೆ, ಇವೆಲ್ಲವೂ ನೂರಾರು ಭಾವನೆಗಳನ್ನು ಮತ್ತು ನೇಪಾಳದ ಭಾಗದ ಜನರ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ.

ಪಾತ್ರಧಾರಿಗಳ ಮೆಲ್ಲು ಧ್ವನಿ -ವೀಕ್ಷಕರಿಗೆ ಅಸಮಾಧಾನ ಮೂಡಿಸುತ್ತದೆ, ಕೆಲವೊಂದು ಸಂಭಾಷಣೆ ಮತ್ತು ಸೆರೆಹಿಡಿದಿರುವ ದೃಶ್ಯ ಮೂಕ ನಡಿಗೆ ವೀಕ್ಷಕರಿಗೆ ತುಸು ಹೆಚ್ಚಾಯಿತು ಎಂದು ಭಾಸವಾಗುತ್ತದೆ.  ‘ಮಂಜಿನಲ್ಲಿ ಬರಿಯ ಗಿಡಗಳು’ ( Bare Trees In The Mist ) ಎಂಬ ಶೀರ್ಷಿಕೆ ನೇಪಾಳದ ಪ್ರಕೃತಿಸೌಂದರ್ಯದ ಜೊತೆಜೊತೆಗೆ ಕಾಲಿಯ ಸ್ಥಿತಿಯನ್ನು ಹೋಲುತ್ತದೆ.

ಒಟ್ಟಾರೆಯಾಗಿ ಈ ಚಿತ್ರವನ್ನು ವಿವಿಧ ಸಂಸ್ಕೃತಿ ಭಾಷೆ ಮತ್ತು ಪ್ರಕೃತಿಯನ್ನು ಅರಿಯುವ ಸಲುವಾಗಿ, ವ್ಯಕ್ತಿಗತ ಸಂಬಂಧ- ಪ್ರೀತಿಯ ಮಹಿಮೆ ಮತ್ತು ತನ್ನವರಿಂದ ದೂರವಾದ ವ್ಯಕ್ತಿಯ ನೋವು ಎಂತಹದ್ದು ಎಂದು ಅರಿಯುವ ಸಲುವಾಗಿ ಈ ಚಿತ್ರವನ್ನು ನೋಡಬಹುದಾಗಿದೆ.
ಒಟ್ಟಾರೆಯಾಗಿ ಈ ಚಿತ್ರಕ್ಕೆ ಐದು ಅಂಕದಲ್ಲಿ ವಿಮರ್ಶಿಸುವುದಾದರೆ 4:50 ಅಂಕವನ್ನು ಯಾವುದೇ ಪೂರ್ವಾಗ್ರಹವಿಲ್ಲದೆ ನೀಡಬಹುದು.

ಉಮರ್ ಫಾರೂಕ್

ತೃತೀಯ ಬಿ. ಎ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜ್, ಶಿವಮೊಗ್ಗ

ಹುಡುಕಾಟದ ಕತ್ತಲು

Image Credit : benstevens

ಹುಡುಕಾಟದ ಕತ್ತಲು

ಕತ್ತಲೆಂಬ ಗರ್ಭಗೂಡು..
ಕಣ್ಣ ತೆರೆದೆ ನವಮಾಸದ ಕೊನೆಯಲಿ
ಬೆಚ್ಚಗೆ ನೇವರಿಕೆ ಇತ್ತು ಭೂಮಿ ತಾಯಿ ಮಡಿಲಿಲಿ
ಪ್ರಾಣಿ-ಪಕ್ಷಿ ಗಿಡಗಂಟಿ
ಸಖರಂತೆ ಕೋಟಿ ಕೋಟಿ
ನಡುವೆ ಬೆಳೆದೆ ಅವುಗಳಂತೆಯೇ

ಕಂಡೆ ಜ್ವಾಲೆ ಕಿಡಿಯನು
ಕಂಡೆ ಭೂಮಿ ಕೊಡುವ ರುಚಿಯನು
ಮರ್ಕಟದಾ ಮೆದುಳಿಗೆ
ತೊಡಿಸ ಹೊರಟೆ ಮನುಜನೆಂಬ ಮುಖವಾಡ
ಅದು ಸ್ವಂತ ಸಮಾಧಿಗೆ ಮೊದಲ ಕುರುಹು ಗಾಢ
ಇನ್ನೂ ಬೆಳೆದೆ ಮಗುವಿನಂತೆ

ಹುಟ್ಟಿ ರಾಜ್ಯ ಸಾಮ್ರಾಜ್ಯದ ಕಲ್ಪನೆ
ಕ್ಷಣಕೆ ಸತ್ಯ..ಕ್ಷಣಕೆ ನಿತ್ಯ.. ಸಂಸ್ಕೃತಿಗಳ ಚಿಂತನೆ
ಸ್ವಾರ್ಥಪರತೆ ನಡೆಸೆ ಸಮರ ವಂಚನೆ
ಕುರುಡು ಮನಕೆ ಸಿಕ್ಕಿತು ಸ್ವಾತಂತ್ರದ ಘೋಷಣೆ
ಕತ್ತಲ ದಾರಿಯಲ್ಲೇ ಮೂಡಿತು ಹೊಸ ಕತ್ತಲ ಯೋಚನೆ..
ಇನ್ನೂ ಬೆಳೆದೆ ಕೊಬ್ಬಿನಿಂತೇ…

ತೃಪ್ತಿ ಇರದ ಮನದೊಳಗೆ ….
ಹೊಕ್ಕಿಬಂತು ಅಧಿಕಾರದ ಕರಿನೆರಳು
ಆ ನೆರಳು ತಾಕದಾಯಿತು ಅಹಂಕಾರದ ಮುಗಿಲು
ಪಾಪ-ಪುಣ್ಯ ಎಲ್ಲ ಮರೆಸಿ ಕುಣಿಸುತಿಹುದು  ಕಾಂಚಾಣ…
ಕುಣಿತ ಕುಣಿತ ಮರೆತೆನೀಗ ನನ್ನತನವ ನಾನೆನಾ?…
ಬೆಳೆದೆ ಹಮ್ಮ ಕೊಳೆಯಲಿ…

ಕಗ್ಗತ್ತಲ ಕತ್ತಲಲ್ಲಿ ಬೆಳಕ ಕಿಡಿಯ ಸಿಂಚನ
ನಮ್ಮ ನೆರಳು ಕತ್ತಲು, ನಮ್ಮತನವು ಕತ್ತಲು….
ಕತ್ತಲೆಯೆ ಹೇಳಿತು “ಬೆಳಕು ಬರಿಯ ಬೆತ್ತಲು”
ಕತ್ತಲಲಿ ಕಾಣದೇನೂ… ಬೆಳಕು ಬರಿಯ ಬೆತ್ತಲು..!
ಬೆಳೆದೆ ತಲ್ಲಣದ ಸುಳಿಯಲಿ…

ಕತ್ತಲ ಹುಚ್ಚು ನೆತ್ತಿಗ್ಹತ್ತಿ
ಬೆಳಕ ಸತ್ಯ ಕಣ್ಣಿಗೊತ್ತಿ
ಮನದ ಗೂಡಲವಿತು ಕೂತು
ಯೋಚಿಸಿದೆ… ಯೋಚಿಸಿದೆ..
ಬೆಳೆದೆ ಯೋಚನೆಯ ಜೊತೆಯಲಿ

ಬೆಳಕು – ಕತ್ತಲು ಎರಡು ಬೇಕು
ಸಮವಾಗಿ…ದೃಡವಾಗಿ
ಭೂಮಿ ಕರುಳ ಬಸಿಯ ಹೊರಟ “ಕತ್ತಲೆ”
ಕರಿ ಇರುಳ ಕಸಿಯ ಹೊರಟ  “ಬೆಳಕ ಬೆತ್ತಲೆ”
ಒಂದೇ ಎನಿಸಿದರೂ… ವಿರುದ್ಧ

ಬಂದಾಗಿದೆ ಸೊಕ್ಕಿನಿಂದ
ಉಂಟೆ ಒಂದು ಅವಕಾಶ
ಅಮ್ಮಾ…
ಕ್ಷಮಿಸುವೆಯಾ ಈ ಎಲ್ಲ ತಪ್ಪಿಗೆ?
ಇಲ್ಲ…
ಮರಳಬೇಕೆ… ನಾನೀಗ ಸ್ವರಚಿತ ಸಮಾಧಿಗೆ?

 

ಪ್ರಣಮ್ಯ ಬಿ.  ತೃತೀಯ ಬಿ.ಎ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು- ಶಿವಮೊಗ್ಗ

ಕಗ್ಗತ್ತಲ ಸಮಯದಲ್ಲಿ

ಕಗ್ಗತ್ತಲ ಸಮಯದಲ್ಲಿ

 

ಸಂತಸದಿ ತುಂಬಿತ್ತು ಈ ಜಗ
ಸಾವುನೋವಿನಲಿ ಮರುಗಿದೆ ಈಗ.
ಜೀವಿಗಳಿಗದು ಕತ್ತಲ ಕೂಪ
ಏನಿದೇನು ??… ಕರಿನೆರಳ ಕೋಪ?

ಜಗತ್ತೇ ಕತ್ತಲಿಂದ ಬಳಲುತ್ತಿದೆ
ನೋವಿಗೆ ಮಿತಿಯೇ ಇಲ್ಲದೆ?
ನಿನ್ನೆ ನೋಡಿದವರಿಂದಿಲ್ಲ ,
ಆಗು ಹೋಗುಗಳ ಅರಿವೇ ಇಲ್ಲ!

ಅಂದು ಆ ಮಲೆನಾಡು
ಇಂದು ಬಯಲುಸೀಮೆಯ ಬೀಡು
ಮನಸ್ಸಿಗೆ ಮುದ ನೀಡಿದ್ದ ತಂಗಾಳಿ
ಇಂದು ಮನಸ ಘಾಸಿಗೊಳಿಸುವ ಬಿರುಗಾಳಿ
ಅಯ್ಯೋ ಏನಿದು ಕರಾಳ ರಾತ್ರಿಯ ರೌದ್ರಾವತಾರ?

ಕತ್ತಲಾವರಿಸಿದೆ ಮನದಲ್ಲಿ
ಕರೋನ ಎಂಬ ಭಯದಲ್ಲಿ
ಹೊರ ಜಗಕ್ಕೆ ಪ್ರವೇಶವಿಲ್ಲ
ಒಳ ಜಗದಲ್ಲಿ ಮನಃಶಾಂತಿಯೇ ಇಲ್ಲ 😞..

ದುಡಿಮೆ ಇಲ್ಲದೆ ಕಾಸಿಲ್ಲ
ಕಾಸಿಲ್ಲದೆ ಕೂಳಿಲ್ಲ
ಕೂಳಿಲ್ಲದೆ ಜೀವವೇ ಇಲ್ಲಾ…
ಇರುವುದೊಂದೇ ಕಗ್ಗತ್ತಲು…

ಬೃಹದಾಕಾರದ ಕಟ್ಟಡಗಳ ನಿರ್ಮಾಣ,
ಅದೇ ಇಂದು ನಮ್ಮೆಲ್ಲರ ನಿರ್ವಾಣ,
ಹಾಕಿದೆವು ಪಕ್ಷಿಗಳ ಪಂಜರದಲ್ಲಿ,
ನೂಕಿದೇವು ಪ್ರಾಣಿಗಳ ಸರ್ಕಸಿನಲ್ಲಿ,
ಫಲವಾಗಿ ನಾವಿಂದು ಮನೆಯೆಂಬ ಸೆರೆಮನೆಯಲ್ಲಿ.

ಸಾಗಬೇಕಿದೆ ಜೀವನ ಸುಗಮವಾಗಿ.
ಬದಲಾಗಬೇಕಿದೆ ಕಗ್ಗತ್ತಲು ಬೆಳಕಾಗಿ.
ಜೀವನವನ್ನು ಪ್ರೀತಿಸುತ್ತಾ, ಮಗುವಂತೆ ನಗುತ್ತಾ, ಎಲ್ಲರನ್ನು ಗೌರವಿಸುತ್ತಾ , ಮೆರೆಯಬೇಕಿದೆ ಮಾನವೀಯತೆ.

ಮಧುಶ್ರಿ,

ಪ್ರಥಮ ಬಿ ಎ

ಕಟೀಲ್ ಅಶೋಕ್ ಪೈ ಸ್ಮಾರಕ ಸಂಸ್ಥೆ