Teachers Day:2023

‘ಸಂಧ್ಯಾ’ ಕಾಲದಲಿ ‘ಅನರ್ಘ್ಯ’ ‘ಶ್ರೀಕರ’ನ ‘ರೇಷ್ಮೆ’ಯ
‘ಕಿರಣ’ಗಳು
‘ಅನು’ದಿನವು ‘ಶ್ವೇತ’ಪತ್ರಗಳ ಮೇಲೆ ‘ಮಂಜಿ’ನ
‘ಹನಿ’ಯ ಸುರಿಸುತ ‘ನೆನೆಸಿ’
‘ಸುನೀಲಾ’ಕಾಶದಲಿ ‘ರಜತ’ ಮೇಘಗಳ ‘ಅಂಜಿ’ಸಿ
ಹುತ’ವಹಾಬ’ನ ಹಿಂದಿಕ್ಕಿ ಹರಿಸುತ ‘ವಿಭಾ’ವಳಿಯ
‘ಚೆನ್ನ-ವಿಶ್ವ’ದಲಿ ಮುರುಳಿ ‘ರಾಯ’ನ ‘ಶೃತಿ’ಯ ‘ಮೋಹಿಸುತ’
‘ಜೇನ”ಸುವರ್ಚಲ’ ‘ಪ್ರಶಾಂತ’ ಮನಸಿನಲಿ
‘ಹುಚ್ಚ’ನ ಗುರು-‘ಪ್ರೇಮ’ ಕವಿತೆಗಳ
‘ನವೀನ’ ‘ಕಾವ್ಯದಿಂಚರ’ಗಳು ಕಡೆದು
‘ಅಶ್ವಿನಿ’ಯ ‘ರೂಪ’ವಿಹ ‘ವಜ್ರಕಾಯ’ನ
‘ಕೀರ್ತಿ’ಯ ಮಿತ್ರ,
ಉರದಿ ‘ನಾಗ’ವ ಧರಿಸಿಹ ಗುರು-‘ಗಣೇಶ’ನ ‘ಪೂಜೆ’ಯ
‘ವಿನಯ’ದಿ ‘ಅರ್ಚಿಸಿ’
ಹೆಸರ ಅರಿಯದ ಗುರುವ ಕ್ಷಮಿಸೆಂದು ಬೇಡುತ
ಸಹಸ್ರ ‘ಮನುಷ್ಯ’ ಜನುಮದಲಿ ‘ಸಂತೋಷ’ಕೆ ‘ಮೇರೆ’ಗಳಿಲ್ಲದೆ ನೀವು ಬದುಕಿ , ನಾವು ನಿಮ್ಮ ಪಾದದ
ಧೂಳಾಗಿರಲೆಂದು ‘ಶ್ರೀದೇವಿಗೆ’
‘ಅಶೋಕ’ವನದಡಿಗಿರುವ ಇವರೆಲ್ಲರಿಗೂ ‘ಶಿಕ್ಷಕರ-ದಿನಾಚರಣೆ’ಯ ದಿನ ಆಶೀರ್ವಾದಗಳ ‘ಅಕ್ಷಯ-ಪ್ರಸಾದವನು’ ನೀಡೆನುತ ಕೇಳುತಲಿ…..

 

ರಕ್ಷಿತ್.  ಹೆಚ್. ಆರ್

ತೃತೀಯ ಬಿ ಎ ,  ವಿಧ್ಯಾರ್ಥಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜುಶಿವಮೊಗ್ಗ

 

ಶಿಕ್ಷಕರ ದಿನಾಚರಣೆ ಪ್ರಯುಕ್ತ, ಕಾಲೇಜಿನ ಎಲ್ಲ ಅಧ್ಯಾಪಕರುಗಳ ಹೆಸರಿನಲ್ಲಿ ರಚಿಸಿರುವ ಕವನ,

ಸದ್ಯವಾದರೆ ! ಅವುಗಳನ್ನು ಗುರುತಿಸಿ ಕಮೆಂಟ್‌ ಮಾಡಿ. 

 

 

ಪುಸ್ತಕ ವಿಮರ್ಶೆ

ಕಾಲೇಜಿನಲ್ಲಿ ಗ್ರಂಥಾಲಯ ಇದ್ದರೂ, ಹೊರಗಡೆ ಪುಸ್ತಕ ಕೊಂಡುಕೊಂಡು ಓದುವುದು ನನ್ನ ರೂಢಿ.. ಹಾಗಾಗಿ ಏನಾದರೂ ಕೆಲಸವಿದ್ದರೆ ಮಾತ್ರ ಕಾಲೇಜು ಗ್ರಂಥಾಲಯದ ಕಡೆಗೆ ಪಯಣ.. ಹೀಗೆ ಮೊನ್ನೆ ಕಾಲೇಜು ಲೈಬ್ರರಿಗೆ ಭೇಟಿ ನೀಡಿದ್ದೆ, ಗಣೇಶ್ ಸರ್ ಯಾವುದೋ ಪುಸ್ತಕ ಹುಡುಕುವುದರಲ್ಲಿ ನಿರತರಾಗಿದ್ದರು.. ಯಾಕೋ ಗಂಭೀರವಾಗಿರುವಂತೆ ಕಂಡರು.. ಹೇಗೆ ಕೇಳುವುದು ತಿಳಿಯದೇ ಅಳುಕುತ್ತಲೇ, ಸರ್, ಇಲ್ಲಿರುವ ಪುಸ್ತಕಗಳು ವಿದ್ಯಾರ್ಥಿಗಳಿಗೆ ಅಷ್ಟೇನಾ ಅಥವಾ ಉಪನ್ಯಾಸಕರೂ ಓದಬಹುದಾ ? ಎಂದು ಕೇಳಿದೆ.. ತಕ್ಷಣಕ್ಕೆ ಉತ್ತರಿಸಿದ ಅವರು ಗ್ರಂಥಾಲಯ ಇರುವುದೇ ಓದುವವರಿಗಾಗಿ ಮೇಡಂ ಎಂದರು…

ಹಾಗೆಯೇ, ಕನ್ನಡ ಪುಸ್ತಕಗಳಿರುವ ವಿಭಾಗದಲ್ಲಿ ಪುಸ್ತಕಗಳನ್ನ ಹುಡುಕುವಾಗ ನನ್ನ ಕೈ ಗೆ ಸಿಕ್ಕಿದ್ದು, ಧಾರವಾಡದ ಪಡ್ಡೆ ದಿನಗಳು ಪುಸ್ತಕ.. ಈ ಪುಸ್ತಕವನ್ನು ಬರೆದವರು ಖ್ಯಾತ ವಿಮರ್ಶಕರು, ಕಥೆಗಾರರು,ಲೇಖಕರಾಗಿರುವ ರಾಜೇಂದ್ರ ಚೆನ್ನಿ… ಅವರನ್ನು ಪ್ರತಿದಿನವೂ ಹತ್ತಿರದಿಂದ ನೋಡುವುದರಿಂದ ಅವರ ಪುಸ್ತಕವನ್ನು ಒಮ್ಮೆ ಓದಬೇಕೆನಿಸಿತು. ಆ ಪುಸ್ತಕವನ್ನು ತೆಗೆದುಕೊಂಡು ಲೈಬ್ರರಿಯಿಂದ ಹೊರನಡೆದೆ.

ಲೇಖಕರು ಈ ಪುಸ್ತಕದಲ್ಲಿ ಕಾಲೇಜು ದಿನಗಳಲ್ಲಿದ್ದಾಗ ಅನುಭವಿಸಿದ ಪಡ್ಡೆ ದಿನಗಳನ್ನು 11 ಅಧ್ಯಾಯಗಳಲ್ಲಿ ಬರೆದಿದ್ದಾರೆ. ಪುಸ್ತಕದ ಪ್ರತೀ ಅಧ್ಯಾಯವೂ ಕೂಡ ವಿಭಿನ್ನವಾಗಿದೆ. ನಟಿ ಹೇಮಾ ಮಾಲಿನಿಯವರು ಗಿರೀಶ್ ಕಾರ್ನಾಡ್ ಅವರನ್ನ ಮದುವೆ ಆಗ್ತಾರೆ. ಅವರು ಧಾರವಾಡದ ಸೊಸೆಯಾಗ್ತಾರೆ ಎನ್ನುವ ಸುದ್ದಿಯನ್ನ ಪೇಪರ್ ನಲ್ಲಿ ಓದಿ, ಕುತೂಹಲದಿಂದ ಆ ದಿನಕ್ಕಾಗಿ ಕಾಯುವ ಸ್ನೇಹಿತರ ಬಳಗದ ಕುರಿತು ಮೊದಲ ಅಧ್ಯಾಯದಲ್ಲಿ ಬರೆಯಲಾಗಿದೆ.

ಆಮೇಲಿನ ಅಧ್ಯಾಯಗಳಲ್ಲಿ ಅವರು ತಮ್ಮ ಕರ್ನಾಟಕ ಕಾಲೇಜನ್ನು ಹುಲಗೂರು ಸಂತಿ ಎಂದಿದ್ದಾರೆ. ಆಗೆಲ್ಲಾ ಕಾಲೇಜು ಚುನಾವಣೆಗಳಿಗೆ ಎಷ್ಟೊಂದು ಮಹತ್ವ ಇತ್ತು ಎನ್ನುವುದನ್ನು ಕೂಡ ವಿವರಿಸಿದ್ದಾರೆ.

ಒಮ್ಮೆ ಅವರ ಕಾಲೇಜಿಗೆ ಲಂಕೇಶರು ಬಂದಿರುತ್ತಾರೆ. ಆ ಕಾರ್ಯಕ್ರಮಕ್ಕೆ ಪಡ್ಡೆಹುಡುಗರು ಹೋಗಿರುವುದಿಲ್ಲ. ಆಮೇಲೆ ಲಂಕೇಶರ ಪ್ರಸ್ತಾಪವನ್ನು ಕೇಳಲಾಗಲಿಲ್ಲವೆಂದು ತಮ್ಮ ಅದೃಷ್ಟವನ್ನು ಶಪಿಸಿಕೊಳ್ಳುವ ಪ್ರಸಂಗವನ್ನು ಇಲ್ಲಿ ಕಾಣಬಹುದಾಗಿದೆ.

ಇನ್ನೊಂದು ಸನ್ನಿವೇಶದಲ್ಲಿ ಡಾ. ರಾಜಕುಮಾರ್ ಅವರ ಪ್ರತಿ ಸಿನಿಮಾಗಳಲ್ಲಿಯೂ ಇರುತ್ತಿದ್ದ, ಖ್ಯಾತ ನಟ ನರಸಿಂಹರಾಜು ಅವರು ಸದಾರಮೆ ನಾಟಕ ಮಾಡಲು ಧಾರವಾಡಕ್ಕೆ ಬಂದಾಗ ಏನೆಲ್ಲಾ ಘಟನೆಗಳು ನಡೆದವು ಎನ್ನುವುದನ್ನು ಮನಸ್ಸಿಗೆ ನಾಟುವಂತೆ ಪ್ರಸ್ತುತ ಪಡಿಸಿದ್ದಾರೆ.

ಧಾರಾವಾಡದಲ್ಲಿದ್ದ ಜರ್ಮನ್ ಆಸ್ಪತ್ರೆ ಮತ್ತು ಅಲ್ಲಿನ ಕನ್ನಡ ಮಾತನಾಡುವ ವಿದೇಶಿ ಡಾಕ್ಟರ್ ಹಾಗೂ ಇಂಗ್ಲಿಷ್ ತುಂಬಾ ಚೆನ್ನಾಗಿ ಮಾತನಾಡುವ ಸುಂದರ ಹುಡುಗಿಯೊಬ್ಬಳ ಪಪ್ಪಿ ಲವ್ವಲ್ಲಿ ಬಿದ್ದು, ಅವಳಿಗೆ ಪ್ರೇಮ ಪ್ರಸ್ತಾಪ ಮಾಡಿದ ಸನ್ನಿವೇಶವನ್ನು ಅಚ್ಚು ಕಟ್ಟಾಗಿ ಹಾಸ್ಯದೊಂದಿಗೆ ಬರೆಯಲಾಗಿದೆ.

“ಕಾಲನೆನ್ನುವ ಪಾಪಿ ಕಡೆಗೂ ನಮ್ಮ ಪಡ್ಡೆದಿನಗಳನ್ನು ಕದ್ದು ನಡದೇಬಿಟ್ಟನು” ಎಂಬ ಬೇಸರದೊಂದಿಗೆ ಈ ಪುಸ್ತಕ ಮುಗಿಯುತ್ತದೆ.  ಹಾಗೆ ನೋಡಿದರೆ, ರಾಜೇಂದ್ರ ಚೆನ್ನಿಯವರು ಗಂಭೀರ ಚಿಂತಕರು…. ಹೀಗಿರುವಾಗ ತಾವು ಕಾಲೇಜು ದಿನಗಳಲ್ಲಿದ್ದಾಗ ಪಡ್ಡೆ ಹುಡುಗರಾಗಿದ್ದರು ಎನ್ನುವುದರ ಕೈ ಗನ್ನಡಿಯಾಗಿ, ತೆರೆದ ಪುಸ್ತಕದಂತೆ ಎಳೆ ಎಳೆಯಾಗಿ ಈ ಪುಸ್ತಕದಲ್ಲಿ ತಮ್ಮ ಅನುಭವಗಳನ್ನು ತೆರೆದಿಟ್ಟಿರುವುದು ವಿಶೇಷ.

ಎಲ್ಲರ ಕಾಲೇಜಿನ ಪಡ್ಡೆ ದಿನಗಳನ್ನೂ ನೆನಪಿಸುವಂತಹ ಪುಸ್ತಕ ಇದಾಗಿದೆ. ಹೆಚ್ಚು ಗಾಂಭೀರ್ಯತೆಯನ್ನು ಹೊಂದದ, ಲಘು ಹಾಸ್ಯ, ಹಾಗೂ ಸರಾಗವಾಗಿ ಓದಿಸಿಕೊಳ್ಳುವ ಒಳ್ಳೆಯ ಪುಟ್ಟ ಪುಸ್ತಕ ಇದಾಗಿದೆ.. ಸಾಧ್ಯವಾದರೆ ಒಮ್ಮೆ ಈ ಪುಸ್ತಕ ಓದಿ…

ಅಂಜುಮ್ ಬಿ.ಎಸ್.

ಉಪನ್ಯಾಸಕರು, ಪತ್ರಿಕೋದ್ಯಮ ವಿಭಾಗ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

ನನ್ನ ಕಾಲೇಜು ನನ್ನ ಹೆಮ್ಮೆ- 2

ಆ ದಿನ ಸಂಜೆ ಹೊಸನಗರದಿಂದ ಶಿವಮೊಗ್ಗಕ್ಕೆ ಬಂದು ಕಾಲಿಟ್ಟ ಆ ದಿನ ಕಳೆದು ಬಹಳ ಕಾಲವಾಯಿತು ಎಂದು ಅನಿಸುತ್ತಿಲ್ಲ..

ನೋಡು ನೋಡುತ್ತಲೇ ಎರಡು ವರ್ಷ ಅಲ್ಲ ಎರಡುವರೆ ವರ್ಷಗಳು ಕಳೆದು ಹೋಯಿತು.. ಯಾರೂ ಪರಿಚಯ ಇರದ ತರಗತಿ, ಬೆರಳೆಣಿಕೆ ದಿನಗಳಲ್ಲಿ ಪರಿಚಯವಾಗಿ ಕಳೆದು ಹೋದ ಆ ದಿನಗಳನ್ನು ನೆನೆಯುವುದು ಅನಿವಾರ್ಯ.

ಕ್ಲಾಸ್ ಇಲ್ಲದೆ ಇದ್ದಾಗ ಸ್ನೇಹಿತರೊಂದಿಗೆ ಹರಟೆ ಹೊಡೆದ  ಆ ಕ್ಷಣಗಳು, ಮಾಡಿದ ಮೋಜು ಮಸ್ತಿ, ನಮಗೆ ಫ್ರೆಷರ್ಸ್ ಪಾರ್ಟಿ ಕೊಟ್ಟ ಆ ಸೀನಿಯರ್ಸ್ ಗಳಿಗೆ ಬೀಳ್ಕೊಡುಗೆ ಸಮಾರಂಭ ಮಾಡಿದ ಆ ಕ್ಷಣಗಳು, ಕನ್ನಡ ತರಗತಿಯಲ್ಲಿ ಮಾಡಿದ ತರ್ಲೆಗಳು, ಇಂಗ್ಲಿಷ್ ತರಗತಿಯಲ್ಲಿ ಮಾಡಿದ ಕೀಟಲೆಗಳು,

ಆಪ್ಷನಲ್ ಇಂಗ್ಲಿಷ್ ತರಗತಿಯಲ್ಲಿ ನಿದ್ರೆ 😴 ಹೋದ ಆ ಕ್ಷಣಗಳು, ಸೈಕಾಲಜಿ ತರಗತಿಯಲ್ಲಿ ತಮಾಷೆ ಮಾಡಲು ಹೋಗಿ ಅಮಾವಾಸ್ಯೆಯಾದ ಆ ದಿನಗಳು😂🙌, ಆಕ್ಟಿವಿಟಿ ಗಾಗಿ ಕೂರುತ್ತಿದ್ದ  ಜರ್ನಲಿಸಂ ಕ್ಲಾಸ್ ಗಳು,🥳, ಅಟೆಂಡೆನ್ಸ್ ಬೇಕಲ್ಲ ಎಂದು ಕೂರುತಿದ್ದ ಐಸಿ ಮತ್ತು ಇವಿಎಸ್ ತರಗತಿಗಳು😁.

ಬೇಡ ಬೇಡವೆಂದರೂ ಬರುತ್ತಿದ್ದ ಎರಡು ಇಂಟರ್ನಲ್ಸ್ ಗಳು🥺🤦🏻‍♀️, ನಾನ್ ಏನ್ ಕಮ್ಮಿ ಇಲ್ಲ ಅಂತ ಅಪರೂಪಕ್ಕೊಮ್ಮೆ ಬರುತ್ತಿದ್ದ ಮಾಕ್ ಪ್ರಾಕ್ಟಿಕಲ್ಸ್ ಗಳು 🤦🏻‍♀️ಕ್ಲಾಸ್ ಟೆಸ್ಟ್ ಗಳು, ಇವೆಲ್ಲವೂ ಕೂಡ ಮೊನ್ನೆ ಮೊನ್ನೆ  ಅಷ್ಟೇ ನಡೆದಂತೆ ಅನಿಸುತ್ತಿದೆ..

ಕ್ಲಾಸ್ ಮುಗಿದ ಕೂಡಲೇ ಪಕ್ಕದಲ್ಲಿರುವ ಟೀ ಅಂಗಡಿಗೆ ಹೋಗಿ ಕುಡಿಯುತ್ತಿದ್ದ ಬಿಸಿ ಬಿಸಿ ಟೀ ☕ ಗಳು ಮತ್ತು 12 ರೂಪಾಯಿಯ ಪೇಪರ್ ಬೋಟ್ಗಳು 🧃, ಹೊರಗಡೆ ಊಟಕ್ಕೆ ಕಾಸಿಲ್ಲ💰 ಎಂದಾಗ ಕಾಲೇಜ್ ಕ್ಯಾಂಟೀನ್ ನಲ್ಲೇ ಅನ್ನ ಮತ್ತು ಸೊಪ್ಪಿನ ಹುಳಿ 🍚 ತಿನ್ನುತ್ತಿದ್ದ ಆ ದಿನಗಳು, ಕೆಲವರಿಗಂತು ಉಪ್ಪಿನಕಾಯಿಯೇ ಅನ್ನ 😂 ಹೋಗಿಬಂದು ಕುಡಿಯುತ್ತಿದ್ದ ಆ ಮಜ್ಜಿಗೆ ಮತ್ತು ತಿನ್ನುತ್ತಿದ್ದ 🍋 ನಿಂಬೆಕಾಯಿ ಉಪ್ಪಿನಕಾಯಿ.

ಕಾಲೇಜ್ ಕ್ಯಾಂಟೀನ್ ನಲ್ಲಿ ತಿಂದು ತಿಂದು ಬೇಸರವಾದಾಗ, ಸಾಲ ಮಾಡಿ ಹೋಗುತ್ತಿದ್ದ ಆ ತಿನಿಸು ಅಂಗಳ (ಫುಡ್ ಕೋರ್ಟ್) ದಲ್ಲಿ ತಿನ್ನುತ್ತಿದ್ದ ಆ ಪಲಾವ್, ಗೋಬಿ, ಮೊಸರನ್ನ, ದಿನ ಕಳೆದಂತೆ ಬದಲಾದ ಆ ಪಯಣದ ದಾರಿ ವೆಜ್ ಫುಡ್ ಕೋರ್ಟ್ ನಿಂದ ನಾನ್ ವೆಜ್ ಫುಡ್ ಕೋರ್ಟ್ ಕಡೆಗೆ.

ತರಗತಿ ಇದ್ದರೂ ಬಂಕ್ ಮಾಡಿ ಲೈಬ್ರರಿಯಲ್ಲಿ ಕೂತು ಕಂಪ್ಲೀಟ್ ಮಾಡಿದ ಅಸೈನ್ಮೆಂಟ್  ಮತ್ತು ರೆಕಾರ್ಡ ಗಳು  ಗಳು, ಮನಸ್ಸಿಲ್ಲದ ಮನಸ್ಸಿನಲ್ಲಿ ಮಾಡಿದ ಆ ಪಿಪಿಟಿ ಮತ್ತು  ಸೆಮಿನಾರ್ ಗಳು,  ಮಧ್ಯಾಹ್ನ ಕ್ಲಾಸ್ ಇಲ್ಲದೆ ಇದ್ದಾಗ ಮಾಡಿದ ಆ ಗಲಾಟೆಗಳು, ಅದಕ್ಕೆ ಪ್ರತಿಫಲವಾಗಿ ಸರಾಸರಿಯಾಗಿ ಪ್ರತಿಯೊಬ್ಬ ಶಿಕ್ಷಕರಿಂದ ಉಗಿಸಿಕೊಂಡ   ಆ ಮಧುರವಾದ ಕ್ಷಣಗಳು. 😁⭐

ಕಡೆ ಕಡೆಗೆ ಪರಿಚಯ ಆದ  ಜೂನಿಯರ್ಸ್ ಗಳು🦧 ಸೀನಿಯರ್ಸ್ ಅಂತ ಬಹಳ ಮರ್ಯಾದೆ  ಮರ್ಯಾದೆ ನೀಡುತ್ತಾ ನಮಗೆ ಹೆದರದೆ ಸಹೋದರ ಸಹೋದರಿಯರಂತೆ ಕೀಟಲೆ ಮಾಡಿ, ಕಾಳಜಿ ತೋರಿಸುತ್ತಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಕಲಿಯುತ್ತಿರುವ ಗೆಳೆಯರು.

ಇಂಟರ್ನಲ್ ಇದ್ದಾಗ ಮಾತ್ರ ಯೂಸ್ ಮಾಡಿಕೊಳ್ಳುತ್ತಿದ್ದ ಲೈಬ್ರರಿ ಕಾರ್ಡುಗಳು , ಲೈಬ್ರರಿಗೆ ಓದಲು 📖 ಎಂದು ಹೋಗಿ ಅಲ್ಲೇ ಮಲಗಿ ಬಿಡುತ್ತಿದ್ದ ಸಾಧಕರದ ನನ್ನ ಮಿತ್ರರು, ಸದಾಕಾಲ ಓದುತ್ತಲೇ ಇದ್ದು ಟಾಪರ್ ಟಾಪರ್ ಎಂದು ಕರೆಸಿ ಕೊಳ್ಳುತ್ತಿದ್ದಂತ ಮಹಾನ್ ಮೇಧಾವಿಗಳು, ಏನು ಓದದೆ ಪರೀಕ್ಷೆಯಲ್ಲಿ ಓದಿದವರಿಗಿಂತ ಹೆಚ್ಚು ಅಂಕಗಳನ್ನು ಗಳಿಸುತ್ತಿದ್ದ ಬುದ್ಧಿವಂತರು, ಏನನ್ನು ಓದಿಯೇ ಇಲ್ಲ ಓದಿಯೇ ಇಲ್ಲ ಎಂದು ಕಾಗೆ ಹಾರಿಸಿ ಪ್ರತಿ ಪರೀಕ್ಷೆಯಲ್ಲೂ  ಅತ್ಯುತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣರಾಗುತ್ತಿದ್ದ   ಆ ಮಿತ್ರದ್ರೋಹಿಗಳು.

ಸದಾಕಾಲ ಹೊಗಳಿಸಿಕೊಳ್ಳುವವರ ಮಧ್ಯೆ ಇಲ್ಲದ ಕೀಟಲೆಗಳನ್ನು ಮಾಡಿ ಬೈಸಿಕೊಳ್ಳುತ್ತಿದ್ದ ವೀರರು, ಪ್ರಾರಂಭದಲ್ಲಿ ಉಂಟಾದ ಅದೆಷ್ಟೋ ಗ್ಯಾಂಗ್ಗಳು,  ಕಾಲಾ ನಂತರ ಮುರಿದು ಬಿದ್ದ ಅದೇ ಗ್ಯಾಂಗಳು, ಉಂಟಾದ ಅದೆಷ್ಟೋ ಮನಸ್ತಾಪಗಳು , ಬಿಡು ಮಚ ಇದೆಲ್ಲ ಕಾಮನ್ ಅನ್ನುತ್ತಾ..

ಫ್ರೆಂಡ್ಶಿಪ್ ಅಲ್ಲಿ ಒಂದಿಷ್ಟು ಜಗಳ ಕಾಮನ್ ಅಲ್ಲವೇ,
ಕಂಪ್ರೋ ಮಾಡಿ  ಮತ್ತರಿತುಕೊ ಒಗಟ್ಟಲಿ ಬಲವಿದೆ..

ಎಂದು ಕಿರಿಕ್ ಪಾರ್ಟಿ ಸಿನೆಮಾದ ಹಾಡನ್ನು ನೆನೆಸುತ್ತ ಕೊನೆಗೂ ಒಂದಾದ ಅದೆಷ್ಟೋ ಸ್ನೇಹ ಸಂಬಂಧಗಳು.

ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಎಲ್ಲಾ ಕಾರ್ಯಕ್ರಮಗಳನ್ನು ಭಾಗವಹಿಸುತ್ತಿದ್ದ ಪ್ರತಿಭೆಗಳು⭐, ಪ್ರತಿಯೊಬ್ಬರೂ ಭಾಗವಹಿಸಲೇಬೇಕೆಂದು ಎಲ್ಲರಿಗೂ ಅವಕಾಶಗಳನ್ನು ಕೊಡುತ್ತಿದ್ದ ಕಟೀಲ್ ಅಶೋಕ್ ಪೈ ಕಾಲೇಜಿನ ಶಿಕ್ಷಕ ವೃಂದ, ಯಾವ ವಿದ್ಯಾರ್ಥಿಗಳನ್ನು ಅನಗತ್ಯವಾಗಿ ಹೊರಗಡೆ ಹೋಗದಂತೆ ಕಾವಲು ಕಾಯುತ್ತಿದ್ದ ಅಬ್ದುಲ್ ಅಣ್ಣ, 

ಇದೇ ನಮ್ಮೆಲ್ಲರ ಕಾಲೇಜ್ ,

ಇಷ್ಟೇ ಅಲ್ಲ ಹೇಳಕ್ ಹೋದ್ರೆ ಬೇಜಾನ್ ಇದೆ ಆದ್ರೆ ಓದೊರಿಲ್ಲ.. Anyway ಇನ್ನೇನ್ ಕಾಲೇಜ್ ಮುಗೀತಾ ಬಂತು … ನಗ್ತಾ ಇರೋಣ ನಾಗ್ಸ್ತಾ ಇರೋಣ..

ಇಷ್ಟು ಹೇಳಕ್ಕೆ ಇಷ್ಟಪಡ್ತೀನಿ ಓಕೆ ಫ್ರೆಂಡ್ಸ್ ಬಾಯ್.

ಮಧುಶ್ರೀ,

ತೃತೀಯ  ಬಿ. ಎ, ವಿದ್ಯಾರ್ಥಿನಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜುಶಿವಮೊಗ್ಗ

ಬದುಕು

ಬದುಕು,
ಬದುಕೊಂದು ಮರ,
ಹುಟ್ಟಿನಿಂದ ಸಾಯುವವರೆಗೂ,
ಸತತವಾಗಿ ಬೆಳೆಯುವ ಹೆಮ್ಮರ.

ಬೆಳೆಸಬೇಕಾಗಿದೆ ಈ ಮರವನ್ನು ಜಾಗ್ರತೆಯಿಂದ,
ಎರೆಯಬೇಕಾಗಿದೆ ಪ್ರೀತಿ, ಮಮತೆ ತುಂಬಿದ ನೀರನ್ನು,
ಹಾಕಬೇಕಾಗಿದೆ ಕರುಣೆ, ವಾತ್ಸಲ್ಯವೆಂಬ ಗೊಬ್ಬರವನ್ನು,
ಸೇರಿಸಬೇಕಾಗಿದೆ ಭಾಂದವ್ಯ, ಭ್ರಾತೃತ್ವವೆಂಬ ಎರೆಹುಳುವನ್ನು,
ಆಗಲೇ ಮರ ಬಿಡುವುದು ಇದೆಲ್ಲದರ ಮಿಶ್ರಿತ ಫಲ-ಪುಷ್ಪಗಳನ್ನು,

ಬದುಕು, ಬದುಕೊಂದು ಮರ.

ಬದುಕಬೇಕು ಹೆಮ್ಮರವಾಗುವ ತನಕ,
ಹೆಮ್ಮರವಾಗಬೇಕು ನೆರಳು ನೀಡುವ ತನಕ,
ನೆರಳು ನೀಡುತಿರಬೇಕು ಸಾಧ್ಯವಾಗುವ ತನಕ,
ಕೊನೆಯ ತನಕ, ಸಾಯುವ ತನಕ………………

ಸಾಗಿಸಲೇ ಬೇಕು, ತೂಗಿಸಲೇ ಬೇಕು,
ಎಷ್ಟಾದರೂ ಖರ್ಚಿರಲಿ ನಡೆಸಲೇಬೇಕು,
ಭಾಗಬೇಕು, ಬೀಗಬೇಕು,
ಏಳಬೇಕು, ಬೀಳಬೇಕು,
ನಗಬೇಕು, ಅಳಬೇಕು,
ಬಂದವರಿಗೆ “ಬಾ” ಎನ್ನಬೇಕು,
ಹೋಗುವವರಿಗೆ “ದಾರಿ” ಬಿಡಬೇಕು,

ಬದುಕು,ಬದುಕೊಂದು ಮರ.

ಮಳೆಯಿರಲಿ-ಬಿಸಿಲಿರಲಿ ಧೃಢವಾಗಿ ನಿಲ್ಲಬೇಕು,
ಕಷ್ಟವಿರಲಿ-ಇಷ್ಟವಿರಲಿ ನಿರಂತರವಾಗಿ ಸಲುಹಬೇಕು,
ಏನಾದರೂ ಸರಿ, ಮುಂದೆಸಾಗುವೇ ಎಂಬ ಛಲವಿರಬೇಕು,
ಸಾಗಬೇಕು, ಸಾಗುತಲಿರಬೇಕು, ಸಾಗಿಸುತಲಿರಬೇಕು,
ನಿನ್ನದೇ ಈ ಬದುಕು, ನೀ ಬದುಕಲೇಬೇಕು,
ಬದುಕು,ಬದುಕೊಂದು ಮರ,

ಬದುಕೊಂದು ಅವಕಾಶ ದೇವರು ಕೊಡುವ ತನಕ,
ಬಳಸಿಕೋ ಮನುಷ್ಯ ನೀ ಇರುವ ತನಕ,
ಬೆಳೆಸಿಕೊ ನಿನ್ನ ತನುವನ್ನು ಎಲ್ಲರೂ ನೆನೆಸುವ ತನಕ,
ಬದುಕು ಮತ್ತೆ ಆ ದೇವರು ಕರೆಯುವ ತನಕ…………

ಬದುಕು,ಬದುಕೊಂದು ಮರ,ಬದುಕೊಂದು ಹೆಮ್ಮರ,
ಬದುಕೊಂದು ವೃಕ್ಷ, ಬದುಕೊಂದು ಕಲ್ಪವೃಕ್ಷ..!!

ಖುಷಿ. ವಿ. ಹಿರೇಮಠ.
ದ್ವಿತೀಯ ಬಿ. ಎ. ವಿದ್ಯಾರ್ಥಿನಿ
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ.

ಕವಿವಾಣಿಯಂತೆ ‘ಸ್ತ್ರೀ’ ಅಂದರೆ ಅಷ್ಟೇ ಸಾಕೇ..?

ಏನೆಂದು ಹೇಳುವುದು, ಹೇಗೆ ವರ್ಣಿಸುವುದು, ಯಾವ ರೀತಿಯಲ್ಲಿ ಚಿತ್ರಿಸುವುದು? ಪ್ರತಿಯೊಬ್ಬರ ಬದುಕಿನಲ್ಲೂ ‘ಅವಳು’ ಇಲ್ಲದೆ ಪರಿಪೂರ್ಣವೇ ಅಲ್ಲ.

ನವಮಾಸ ಹೊತ್ತು ಜಗಕ್ಕೆ ಪರಿಚಯಿಸಿದ ತಾಯಿ. ಮೊದಲ ಬಾರಿಗೆ ಮಗುವ ಮುಖವ ಕಂಡು ಆರೈಕೆ ಮಾಡಿ, ತಾಯಿಯ ಮಡಿಲಲ್ಲಿ ಮಲಗಿಸಿದ ದಾದಿ. ಅಕ್ಕರೆಯಿಂದ ನೋಡಿಕೊಂಡ ವೈದ್ಯಕೀಯ ಸಿಬ್ಬಂದಿಗಳು. ನೀರುನಿಡಿ ಹೊಯ್ದು, ಚೆಂದದಿ ದೃಷ್ಟಿಬೊಟ್ಟು ಇಟ್ಟು, ಸಾಮ್ರಾಣಿಯ ಹೊಗೆಹಾಕಿ, ಜೋಲಿಯಲ್ಲಿಟ್ಟು ಜೋಗುಳವ ಹಾಡಿ ಮಲಗಿಸಿದ ಅಜ್ಜಿ. ಎತ್ತಿಕೊಳ್ಳಲು ಹಾತೊರೆಯುತ್ತಿದ್ದ ಅಕ್ಕಂದಿರು. ಹಗಲು-ಇರುಳು ನಿದ್ದೆ-ಎಚ್ಚರಗಳಲ್ಲಿ ಪಕ್ಕದಲ್ಲಿದ್ದು ಜೋಪಾನವಾಗಿ ಕಾಪಾಡಿದ, ಹೊತ್ತುಹೊತ್ತಿಗೂ ಅಮೃತ ಉಣಬಡಿಸಿದ ತಾಯಿಯ ಪ್ರೀತಿ. ಬೆಳೆಯುವಾಗ ಲಾಲನೆ-ಪಾಲನೆ ಮಾಡಿದ ಹಿರಿಯರು. ಕೈಯಬೆರಳು ಹಿಡಿದು ಅಕ್ಷರ ತಿದ್ದಿಸಿದ ಶಿಕ್ಷಕಿಯರು. ಮೊದಲ ಶಾಲಾದಿನಗಳಲ್ಲಿ ಸಿಕ್ಕ ಮುಗ್ದಮನಸ್ಸಿನ ಗೆಳತಿ, ಜೋಡಿಯಾಗಿ ನಿಂತು ಕುಣಿದು ಕುಪ್ಪಳಿಸಿದ ಬಾಲ್ಯದ ದಿನಗಳು, ‘ರಾಖಿ ಹಬ್ಬ’ಕ್ಕೆ ತಪ್ಪದೇ ಕಾದು ರಾಖಿಕಟ್ಟಿ, ಸಿಹಿ ತಿನ್ನಿಸಿ, ಒಂದಿಷ್ಟು ಹಣ ಬಿಡದೇ ಇಸ್ಕೊಂಡ ಸಹೋದರಿಯರು.

ಪರೀಕ್ಷೆಯ ಸಮಯದಲ್ಲಿ ಅಲ್ಪ-ಸ್ವಲ್ಪ ಉತ್ತರ ಹೇಳಿಕೊಟ್ಟ ಗೆಳತಿಯರು, ಕೇಳಿದರೂ ಹೇಳಿಕೊಡದ, ತಿರುಗಿಯೂ ನೋಡದ ಹುಡುಗಿಯರು. ಆಪ್ತವಾಗಿ ಹರಟಿದ ದಿನಗಳು, ಗೆಳೆಯ-ಗೆಳತಿಯರು ಸೇರಿ ಹೋದ ಕಿರುಪ್ರವಾಸಗಳು. ಮನಸ್ಸ ಕದ್ದ ಮನದನ್ನೆಯು, ಹೇಳಲಾಗದ ಭಾವನೆಗಳು, ಕೈಕೊಟ್ಟ ಪ್ರೇಯಸಿಯು, ಕಛೇರಿಯ ಕೆಲಸದಲ್ಲಿ ಜೊತೆಯಾದ ಸಹೋದ್ಯೋಗಿ, ಕೈಹಿಡಿದ ಸಹಧರ್ಮಿಣಿಯು, ಎಲ್ಲಾ ಕ್ಷಣಗಳಲ್ಲೂ ಜೊತೆಯಾಗುವ, ಸದಾ ಬೆನ್ನೆಲುಬಾಗಿ ಒಳಿತು-ಕೆಡಕಿನಲೂ ಕೈಬಿಡದೆ ಕೈಹಿಡಿದ ಹೆಂಡತಿಯು, ‘ಕೇಳಿದ್ದನ್ನೆಲ್ಲ ಮಾಡಿಕೊಡಲು ಸಮಯವಿಲ್ಲ’ವೆಂದು ಪ್ರೀತಿಯ ಬೆರೆಸಿ ಆಡುಗೆ ಮಾಡಿ ಉಣಬಡಿಸಿದ ಮಡದಿಯು, ಅಪ್ಪನೆಂಬ ಹೆಸರ ತಂದುಕೊಟ್ಟ ಮಗಳು. ಅಮ್ಮನ ಪ್ರತಿರೂಪದಂತೆ ಆಕೆ ನಗುವಳು, ನಮ್ಮೆಲ್ಲ ಕಷ್ಟಗಳ ಇಲ್ಲವಾಗಿಸುವಳು. ಕಠೋರತೆಯ ಮನಸ್ಸನ್ನು ಕ್ಷಣಮಾತ್ರದಲ್ಲೇ ನಗಿಸಿ ಎಲ್ಲ ನೋವುಗಳ ಮರೆಸುವವಳು. ಜವಾಬ್ದಾರಿಯನ್ನು ಕಲಿಸಿದವಳು, ಏನನ್ನೂ ಹೇಳದೇ ಎಲ್ಲವ ಕಲಿಸುವವಳು.

ಬೆಳೆದ ಮಗಳು ಉನ್ನತ ಶಿಕ್ಷಣಕ್ಕೆಂದು ಬೇರೆ ಊರಿಗೆ ತೆರಳುವಾಗ ಯಾರಿಗೂ ತಿಳಿಯದಂತೆ ಮಗುವಿನಂತೆ ಅತ್ತದ್ದು. ಅವಳಿಗೆ ಸನ್ಮಾನ ನಡೆದಾಗ ಖುಷಿಯಿಂದ ಚಪ್ಪಾಳೆ ತಟ್ಟಿದ್ದು, ಮದುವೆ ಮಾಡಿಕೊಡುವಾಗ ಏನೋ ಕಳೆದುಕೊಂಡಂತೆ ಅನಿಸಿದರೂ ಒಳ್ಳೆಯ ಮನೆಗೆ ಸೇರಿಸಿದೆವು ಎನ್ನುವ ಸಮಾಧಾನ. ಅವಳನ್ನು ಕಳಿಸಿಕೊಡುವಾಗ ಕಣ್ಣಂಚಲ್ಲಿ ತಿಳಿಯದೇ ಹನಿಗಳು ಮೂಡಿದ್ದು, ವಯಸ್ಸಾಗುತ್ತಾ ಹೋದಂತೆ ಅನಾರೋಗ್ಯಕ್ಕೆ ಸರಿಯಾದ ಸಮಯಕ್ಕೆ ಔಷಧಗಳನ್ನು ನೀಡಿ, ಪಥ್ಯವನ್ನು ತಾನೂ ಮಾಡಿ, ನನಗೂ ಮಾಡಿಸಲು ಹುರಿದುಂಬಿಸಿದ ಮಡದಿಯೇ ಮಮತೆ ತುಂಬಿದ ತಾಯಿಯಾಗಿದ್ದು. ಇಬ್ಬರೇ ಇದ್ದಾಗ ಕಿಚಾಯಿಸಿಕೊಂಡದ್ದು, ಹಾಸ್ಯಮಾಡಿದ್ದು, ಮಾತಿನ ಮೂಲಕ ಕಾಲು ಎಳೆದು ಮನಸಾರೆ ನಕ್ಕಿದ್ದು, ಏನೋ ನೆನಪಾಗಿ ಬಿಕ್ಕಿದ್ದು, ಒಲುವೆಯ ಕೈಗಳು ಕಣ್ಣೀರ ಒರೆಸಿ ಸಂತೈಸಿದ್ದು. ಕಣ್ಣಮುಂದೆ ಬೆಳೆದು ಮದುವೆಯಾಗಿ ಹೋದ ಮಗಳಿಗೆ ಪುಟ್ಟಮಗಳೊಬ್ಬಳು ಜನಿಸಿದ್ದು, ಅದರ ಲಾಲನೆ-ಪಾಲನೆಯಲ್ಲಿ ತೊಡಗಿಸಿಕೊಂಡದ್ದು, ಎತ್ತಿ ಆಡಿಸಿ ಬೆಳೆಸಿದ್ದು, ಬೆನ್ನಮೇಲೆ ಹೊತ್ತು ಆಟವಾಡಿಸಿ, ತಿರುಗಿಸಿ, ತಿನಿಸಿದ್ದು, ವಯಸ್ಸಾದವನು ಎಂಬುದನ್ನೇ ಮರೆಸಿದ್ದು. ಆಸ್ಪತ್ರೆಯಲ್ಲಿ ಮಲಗಿದಾಗ ‘ಎನೂ ಆಗಲ್ಲ ಭಯಪಡಬೇಡಿ ಸರ್’ ಎಂದ ಆ ಶುಶ್ರೂಷಕಿಯ ಭರವಸೆ ನೀಡುವ ಮಾತುಗಳು…

ಹೀಗೆ ಅದೆಷ್ಟು ನೆನಪಿನ ಬುತ್ತಿಗಳಲ್ಲಿ ವಿವಿಧ ರೂಪಗಳಲ್ಲಿ ‘ಅವಳು’ ತುಂಬಿರುವಳು. ಅವಳು ಪುರುಷನಿಗೆ ಸರಿಸಮಾನಳಲ್ಲ, ಅವನಿಗಿಂತಲೂ ಮಿಗಿಲಾದವಳು. ಆದರೆ ಆ ರೀತಿಯಲ್ಲಿ ಗೌರವ ಕೊಡುವ ನಮ್ಮ ಕರ್ತವ್ಯವನ್ನು ಮರೆತಿದ್ದೇವೆ. ಆಕೆಯೇ ಪ್ರಕೃತಿ, ಆಕೆಯೇ ಸೃಷ್ಠಿ, ಸಮಷ್ಠಿ ಎಲ್ಲವನ್ನೂ ಸರಿಯಾಗಿ ಅರಿತು ನಡೆದರೆ ಮಾತ್ರ ಬದುಕು ಸುಂದರ ನಮ್ಮಿಬ್ಬರಲ್ಲಿ ಯಾರು ಮೇಲು? ಎಂದು ತಿಳಿಯಹೊರಟರೆ ಯಾರಾದರೂ ಗೆಲ್ಲಬಹುದು, ಗೆಲುವಿನ ಭರದಲ್ಲಿ ಮೌಲ್ಯಗಳನ್ನೇ ಮರೆಯುತ್ತೇವೆ. ಗೆದ್ದರೂ ಸಂಭ್ರಮಿಸಲು ಜೊತೆಗಿರುವವರನ್ನೇ ಕಳೆದುಕೊಳ್ಳುತ್ತೇವೆ.

ಪ್ರತಿಯೊಬ್ಬರ  ಕೆಲಸ, ಸಾಧನೆ, ಸಂಶೋಧನೆ ಎಲ್ಲದರಲ್ಲೂ ಅವಳ ಪ್ರಭಾವವೋ, ಬೆಂಬಲವೋ ಇದ್ದೇ ಇರುತ್ತದೆ. ಮಹಿಳಾ ದಿನಾಚರಣೆ ಒಂದು ದಿನಕ್ಕೆ ಸೀಮಿತವಲ್ಲ, ದಿನನಿತ್ಯದಲ್ಲೂ ಅವರ ಮೇಲಿರುವ ಗೌರವ ಇಮ್ಮಡಿಯಾಗಲಿ, ಸದಾ ಕಾಲವೂ ಅದು ಹಾಗೆಯೇ ಇರಲಿ. ಎಲ್ಲಾ ರೀತಿಯ ಪಾತ್ರಗಳ ಮೂಲಕ ಎಲ್ಲಾ ರೀತಿಯ ಪ್ರೀತಿಯ ನೀಡಿದ ಅವಳಿಗೆ ಏನೆಂದು ಕರೆಯೋಣ? ಕವಿವಾಣಿಯಂತೆ ‘ಸ್ತ್ರೀ’ ಅಂದರೆ ಅಷ್ಟೇ ಸಾಕೇ..? ಬೇರೇನಾದರೂ ಹೇಳಬೇಕೆ..? ಹೇಳಿದರೂ ಆ ಪದಗಳು ಅವಳ ಮುಂದೆ ಗೌಣವೇ ಅಲ್ಲವೇ..?

ಮಹಿಳಾ ದಿನಾಚರಣೆಯ ಶುಭಾಶಯಗಳು🌱💐

 

ಚೇತನ್  ಸಿ ರಾಯನಹಳ್ಳಿ.

ಕನ್ನಡ ಶಿಕ್ಷಕರು ಮತ್ತು ರಂಗಕರ್ಮಿ. ಶಿವಮೊಗ್ಗ

 

ಭೂತಾಯಿಯ ಅಳಲು

Image Credit : Google / Share Chat

ಉಳಿಸಿರೋ ನನ್ನನ್ನು ನನಗಾಗಿ ಅಲ್ಲ ನಿಮಗಾಗಿ.
ಜೀವ ಸಂಕುಲದ ಒಳಿತಿಗಾಗಿ…

ಇಲ್ಲಿ ಹಾಳು ಮಾಡಿ ಭೂಮಿಯನ್ನು !
ಅನ್ಯ ಗ್ರಹ (ಮಂಗಳ ಮತ್ತು ಚಂದ್ರ)  ನೋಡುವಿರೇಕೊ??
ಇಲ್ಲಿ ಸಲ್ಲದ ನೀವು, ಅಲ್ಲಿ  ಸಲ್ಲುವೀರೇನೋ ಮೂರ್ಖರ?

ತಾಯಿಯನೆ  ಕೊಲ್ಲುತ ಹೊರಟ ನಿಮಗೆ ಬದುಕೆಲ್ಲಿ💔?
ಹಸಿರು ಕೊಂದ ಮೇಲೆ ಉಸಿರಾಡಲು ನಿಮಗೆ ಉಸಿರೆಲ್ಲಿ?!

ನನ್ನೊಡಲ ಬಗೆದರು  ನಾ ನಗುತ  ಸ್ವಾಗತಿಸುತಿದ್ದೆ.😊
ನನ್ನ ಮಾರಿದರು ಕೊಂಡವರ ಬಳಿ ನಗುತಲಿದ್ದೆ..🥺😁

ಹೆತ್ತ ತಾಯಿ ನಿಮ್ಮನ್ನು ಹಡೆದವಳು ನಿಜ  💯…
ಸತ್ತಾಗ ಹೆಣದ ವಾಸನೆ ಅವಳು ಸಹಿಸಿಕೊಳ್ಳದೆ ಮೂಗು ಮುಚ್ಚಿಕೊಳ್ಳುವ ಸಮಯದಲ್ಲಿ!
ನಿಮ್ಮ ಹೆಣವನ್ನು ಒಡಲಲ್ಲಿ ಬಚ್ಚಿಟ್ಟುಕೊಳ್ಳುವ
ಭೂತಾಯಿ ನಾ ಮನುಜ..

ಉಳಿಸಿರೋ ನನ್ನ ನನಗಾಗಿ ಅಲ್ಲ..
ನಿಮ್ಮ ಉಳಿವಿಗಾಗಿ 🥺💔
ನಾಳಿನ ಒಳಿತಿಗಾಗಿ…!!!!

ಮಧುಶ್ರೀ,

ತೃತೀಯ  ಬಿ. ಎ, ವಿದ್ಯಾರ್ಥಿನಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜುಶಿವಮೊಗ್ಗ

 

“ಕುವೆಂಪು” ಸಾಹಿತ್ಯ ನಮನ

Image Credit: Google-Star of Mysore

‘ಕಾನೂರು’ ಕಥೆಗೊಬ್ಬ ಹೂವಯ್ಯನ ಹುಟ್ಟು ಹಾಕಿ,

‘ಮದುಮಗಳು’ ಚಿನ್ನಮ್ಮನ

‘ಮಲೆಗಳಲ್ಲಿ’ ಕಟ್ಟಿಹಾಕಿ,

‘ಕಲಾ ಸುಂದರಿ’ ‘ದ್ರೌಪದಿ’ಯರ

‘ಶ್ರೀ ಮುಡಿಯ’ ಸೋಕಿ,

ಕುಪ್ಪಳ್ಳಿಯ ಕಂದ ನೀ

ರಸಿಕರೆಲ್ಲರೆದಯ ತಾಕಿ,

ಕಳೆದವಲ್ಲ ನೂರು ವಸಂತ

ಮತ್ತೆ ಹುಟ್ಟಿ ಬಾರೋ ಸಂತ….

 

ಪ್ರಕೃತಿ ಹೆಣ್ಣ ಬೆರಳುಗಳಿಂದ ಭಾವಗೀತೆಗಳ ಮಿಡಿಸಿ

ಮಲೆನಾಡ ಮಣ್ಣ ಗಂಧ ಸಾಲು ಸಾಲಿನಲ್ಲೂ ಸ್ಪರ್ಶಿಸಿ

ಮಾಧ್ಯಮ ಕನ್ನಡ ‘ಪಾಂಚಜನ್ಯ’ ಮೊಳಗಿಸಿ

‘ರಾಮಾಯಣದಿ’ ಕೈಕೆ, ಮಂಥರೆ, ಊರ್ಮಿಳೆಯಂ ಅಂತರಂಗ ‘ದರ್ಶಿಸಿ’

ನೀನಾದೆ ವಿಶ್ವಮಾನ್ಯ

ಹೇ ರಸ ಋಷಿ ನಿನ್ನ ಪ್ರತಿಭೆ ಅನನ್ಯ….

 

ನವೋದಯದ ನವಧಿ ‘ಚಂದ್ರಹಾಸ’ ಬೀರಿ

ಬೆಳಗಿ ಬೆಳೆದ ಭರದಿ ಭಾಷೆ ಬದುಕಮೀರಿ

ರಾಷ್ಟ್ರಕವಿಯಾಗಿ, ಪಂಪ, ಪದ್ಮ, ಜ್ಞಾನಪೀಠಗಳೆಲ್ಲ ನಿನ್ನಡಿಗೆರಗಿ

ಸಾಗಿ ಹೋದವೆಲ್ಲ ಧನ್ಯವಾದೆವೆಂದು ಬೀಗಿ

‘ಕರ್ನಾಟಕ ರತ್ನ’ ನಿನಗೆನ್ನ ಮನ

ಸಲ್ಲಿಸುತ್ತಿದೆ ಕೋಟಿ ಕೋಟಿ ನಮನ…..

 

ಮಹಾ ಛಂದಸ್ಸಿನ ಚಂದದ ಹರಹನೆಲ್ಲ ಬಳಸಿ

‘ಮಹಾರಾತ್ರಿ’, ‘ಸ್ಮಶಾನ ಕುರುಕ್ಷೇತ್ರದಲ್ಲಿ’ ಯಮನ ಸೋಲಿಸಿ

‘ಕೊಳಲನೂದುತ’  ‘ಅಗ್ನಿ ಹಂಸವೇರಿ’ ‘ಕಾವ್ಯ ವಿಹಾರ’ ನೆಡೆಸಿ

‘’ಚಕೋರಿ’ ವಾಗ್ದೇವಿಯ ಹೃದಯ ‘ಚಂದ್ರ ಮಂಚಕಿಳಿಸಿ’

 

ಕಳೆದವಲ್ಲ ನೂರು ವಸಂತ

ಮತ್ತೆ ಹುಟ್ಟಿ ಬಾರೋ ಸಂತ………

ಮಧುಶ್ರಿ,

ತೃತೀಯ  ಬಿ. ಎ, ವಿದ್ಯಾರ್ಥಿನಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜುಶಿವಮೊಗ್ಗ

 

ಗೆಳೆಯನಿಗೊಂದು ಮಾತು

ಗೆಳೆಯನಿಗೊಂದು ಮಾತು

ಬಂಧನಕ್ಕೆ ಮಿತಿ ಎಂಬುದು ಸುಳ್ಳು. ಅಂಟಿದರೆ ಪೂರ್ತಿಯಾಗಿ ಸೆಳೆದು ಬಿಡುತ್ತದೆ ವಿದ್ಯುತ್ ಶಾಕ್ನಂತೆ.  ಇಲ್ಲ, ಸ್ಪರ್ಶಕ್ಕೆ ಸಿಗದಷ್ಟು ದೂರವೇ ಇರಬೇಕು.ಈ ಜೀವನಚಕ್ರ ನದಿಯ ತೆರೆಗಳಂತೆ ಉರುಳಿ ಹೊರಳುತ್ತಲೇ ಇರುತ್ತದೆ. ಇದಕ್ಕೆ ಆರಂಭವಿಲ್ಲ, ಅಂತ್ಯವಿಲ್ಲ, ಸ್ಥಿರತೆ ಇಲ್ಲ.

ಜೀವದ ಗೆಳೆಯನಿರಲಿ ಗೆಳತಿಯಿರಲಿ ನಡುವೊಂದು ಲಕ್ಷ್ಮಣ ರೇಖೆಯ ಪಾವಿತ್ರ್ಯ ಕಾಯ್ದುಕ್ಕೊಳ್ಳೋಣ. ಆಗಲೇ ನಮ್ಮ ಅಕ್ಕರೆಯ ಆಚೆ ಈಚೆ ಇಬ್ಬರು ಬೆಳೆಯಬಲ್ಲೆವು. ಅಷ್ಟೇ ಅಲ್ಲದೆ ಪರಸ್ಪರರ ಹೊಸ ಅಗತ್ಯಗಳನ್ನು ಅರಿಯುತ್ತ ಸಂಬಧದಲ್ಲಿ ತಾಜಾತನ ಉಳಿಸಿಕ್ಕೊಳ್ಳಬಲ್ಲೆವು.

ನಿನ್ನ ಗೆಳೆತನದ ಸುವಿಶಾಲ ಆಲದಡಿ ಪಸರಿಸಿ ತಣ್ಣನೆಯ ತಂಪಿನಲಿ ತಂಗಿರುವೆನು. ಜೀವನದ ಅನಂತ ದುರ್ಭರ ಬವಣೆ ನೋವುಗಳ ಕಾವುಗಳ ಮೌನದಲಿ ತಂಗಿರುವೆನು. ಗೆಳೆತನವೆ ಇಹಲೋಕಕ್ಕಿರುವ ಅಮೃತ  ಅದನ್ನುಳಿಸಿಕೊಂಡರೆ ಅದುವೇ ಜೀವನಾಮೃತ.

ನೊಂದಾಗ ಸಮಾಧಾನ ಹೇಳಿ ಎಡವಿ ಬಿದ್ದಾಗ ಮೇಲಕ್ಕೆ ಎತ್ತಿ ಸುಖ ದುಃಖದಲ್ಲಿ ಭಾಗಿಯಾಗಿ ಜೊತೆ ಜೊತೆಯಾಗಿ ಸಾಗುವ ಪವಿತ್ರ ಸಂಬಂಧವೇ ನಿಜವಾದ “ಸ್ನೇಹ”.

ಇರಬೇಕು…….ಒಬ್ಬ ಗೆಳೆಯ/ಗೆಳತಿ,  

ನೋವುಗಳಿಗೆ ಸ್ಪಂದಿಸುತ್ತ, ತಪ್ಪುಗಳನ್ನು ತಿದ್ದುತ್ತ , 

ಖುಷಿಯನ್ನು ಹಂಚಿಕೊಳ್ಳುತ್ತಾ, ಪ್ರೇಮಿಗಿಂತ ಹೆಚ್ಚಾಗಿ ಪ್ರೀತಿಸುತ್ತಾ,

ಆಗಾಗ ರೆಗಿಸುತ್ತಾ, ಬದುಕಿಗೆ ಸ್ಪೂರ್ತಿ ತುಂಬುವಂತೆ,

ಇರಬೇಕು…….ಒಬ್ಬ ಗೆಳೆಯ/ಗೆಳತಿ ಇರಬೇಕು,

ಅದು ನಾನು ನಿಮ್ಮಲ್ಲಿ ಕಂಡೆ, ಏಷ್ಟೋ ಖುಷಿಯನ್ನುಪಟ್ಟೆ, ನನ್ನ ಎಲ್ಲಾ ನೋವುಗಳನ್ನು ನಿಮ್ಮೊಟ್ಟಿಗೆ ಸೇರಿದಾಗ ಮರೆತು ಸಂತೋಷದ ಕ್ಷಣಗಳನ್ನು ಅನುಭವಿಸಿದೆ.ಅತ್ತಾಗ ಕಣ್ಣೀರು ಒರೆಸಿದೆ ನನ್ನ ಸಂತೋಷದ ಕ್ಷಣಗಳನ್ನು ಹೇಳಿದಾಗ ನನಗಿಂತ ಹೆಚ್ಚು ಕುಷಿಪಟ್ಟವನು ನೀನು. ಗೊತ್ತಿಲ್ಲದವರ ಜೊತೆ ಸಲುಗೆ ಬೆಳಿಸಿ ಮೂವಿ, ಮಾಲು, ಎಂದು ಸುತ್ತಾಡುವಾಗ ಅದನ್ನು ಕಂಡು ಕೋಪಗೊಂಡವನು ನೀನು. ಆದಿನ ನೀನು ಇಲ್ಲಿ ಬಂದಿರುವ ಕೆಲಸ ಏನು ? ಇಲ್ಲಿ ಮಾಡುತ್ತಿರುವುದು ಏನು? ಎಂದು ಪ್ರಶ್ನಿಸಿದವನು ನೀನು. ನನ್ನ ಬದುಕಿನ ಗುರಿಯ ಬಗ್ಗೆ ತಿಳಿಸಿ ನನ್ನ ಬದುಕಿನ ಚಿಂತನೆಯ ದಿಕ್ಕನ್ನೇ ಬದಲಿಸುವಂತೆ ಮಾಡಿದವನು ನೀನು…

ಇವನು ತುಂಬಾ ಸ್ವಾಭಿಮಾನಿ,  ಒಮ್ಮೊಮ್ಮೆ ಕಡು ಕೋಪಿಷ್ಟ,

ಆದರೂ ನನಗೆ ತುಂಬಾ ಇಷ್ಟ, ಇನ್ನೂ ಹೇಳೋಕೆ ಕಷ್ಟ.

ನಿನ್ನ  ಬಳಿ ಯಾವುದೇ ವಿಷಯವಾದರೂ  ಮೊದಲು ನಿನ್ನ ಬಳಿ ಹೇಳಬೇಕೆಂದು ಹಪಿಹಪಿಸುವಳು ನಾನು. ನಿನ್ನ ಸ್ನೇಹದಿಂದ ಏಷ್ಟೋ ಪ್ರೀತಿಯನ್ನು ಗಳಿಸಿದ್ದೇನೆ, ಈ ಸ್ನೇಹ ಹೀಗೆ ಇರಲಿ ಎಂದು ಆಶಿಸುವೆನು ನಾನು….

ಪರಿಚಯವಾಗಿದ್ದು ಆಕಸ್ಮಿಕವಾದರು ಸ್ನೇಹ ಶಾಶ್ವತವಾಗಿರಲಿ.

ಜೀವನ ಕರೆದುಕೊಂಡು ಹೋಗುವ ಕಡೆ ನಾವು ಹೋಗದೆ, ನಾವು ಹೋಗುವ ಕಡೆ ಜೀವನ ಕರೆದುಕೊಂಡು ಹೋಗಬೇಕು ಇದುವೇ ಜಾಣತನ ಗೆಳೆಯ …. ಇದು ನಾವಗಬೇಕು ಎಂದು ಅಶಿಸುತ್ತ

ನಿನ್ನ ಮುಂದಿನ ವಿದ್ಯಾಭ್ಯಾಸದ ಪಯಣ ಉತ್ತಮ ಪ್ರಗತಿಶೀಲದ ನಿಟ್ಟಿನಲ್ಲಿ ಸಾಗಲಿ ಎಂದು ಶುಭಹಾರೈಸುವೆ ಗೆಳೆಯ….

ಇಂತ ಸುಂದರ ಸ್ನೇಹ ಸಿಕ್ಕಿದ್ದು ಈ ಕಾಲೇಜು ನನಗೆ ನೀಡಿದ ಸುಂದರ ಉಡುಗೊರೆಯಾಗಿದೆ… ಅದಕ್ಕಾಗಿ ನಾನು KAPMC ಗೆ ಧನ್ಯವಾದ ಅರ್ಪಿಸುತ್ತೇನೆ

“ಸ್ನೇಹಿತರ ದಿನದ ಶುಭಾಶಯಗಳು”

ಅರ್ಪಿತ. ಸಿ

ತೃತೀಯ  ಬಿ. ಎ, ವಿದ್ಯಾರ್ಥಿನಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜ್ಶಿವಮೊಗ್ಗ

ಯುಗಾದಿ ಎಂಬ ಹರುಷ 🌅

Image Credit: google.com

ಯುಗಾದಿ ಎಂಬ ಹರುಷ 🌅

     ತುಂಬಾ ದಿನದಿಂದ ಕಾಯ್ತಾ ಇದ್ದೆ. ಎಂತಕ್ ಅಂತನಾ? ನಮ್ ಹೊಸ ವರ್ಷ ಯಾವಾಗ್ ಬರತ್ತೋ ಅಂತ ಅಂದ್ರೆ ನಮ್ ಸಂತಸದ ಹಬ್ಬ ಅದೇ ಯುಗಾದಿ 💫.

     ಯುಗಾದಿ ಅಂದ್ರೆ ಖುಷಿ, ಎಲ್ಲಿಲ್ಲದ ಉತ್ಸಾಹ. ಹಾಗಾದ್ರೆ ಏನಕ್ಕೆ ಇಷ್ಟೊಂದು ಆತುರದಿಂದ ನಾನ್ ಈ ಹಬ್ಬಕ್ಕೆ ಕಾಯ್ತಿರದು ಅಂತನಾ? ಹೌದು “ಹಳೆ ನೆನಪುಗಳೊಂದಿಗೆ ಹೊಸ ಯುಗಾದಿ, ಹೊಸ ಯುಗಾದಿಯಲ್ಲಿ ನವ ನೆನಪನ್ನ ಮೂಡಿಸೋಣ ಅಂತ”.ಸಣ್ಣವರಿದ್ದಾಗ ಅಜ್ಜ ಅಜ್ಜಿ, ಆ ಹಳ್ಳಿ, ಹಳ್ಳಿಯ ಸ್ನೇಹಿತರು, ಏನೆಲ್ಲಾ ತರ್ಲೆ, ತುಂಟಾಟ, ಕಿತ್ತಾಟ, ಅಬ್ಬಬ್ಬಾ! ಹಂಗೆ ಸರ್ಯಾಗ್ ಹಬ್ಬದ್ ನಮ್ ಗಲಾಟೆ ಪ್ರಯುಕ್ತ ನಮ್ಮೆಲ್ಲರಿಗೂ ಬಿಸಿಬಿಸಿ ಕಜ್ಜಾಯ, ಕಡುಬು ಕೂಡ ಸಿಕ್ತಿತ್ತು.      

ಅದೇ ಈಗ ನಾವೆಲ್ಲ ಕಾಲೇಜ್ ಸ್ಟೂಡೆಂಟ್ಸ್ ಅಲ್ವಾ? ಅಪ್ಪ ಅಮ್ಮ ಬೈದ್ರೆ, ಬುದ್ದಿ ಹೇಳಿದ್ರೆ ನಾವೇನ್ ಮಕ್ಳ? ಅಂತ ಕೂಗಾಡೋ ನಾವು ಹಬ್ದಲ್ಲಿ ಹಳೆ ನೆನಪಲ್ಲಿ ಸಣ್ಣವ್ರಾಗ್ಬಿಡ್ತಿವಿ. ಹಬ್ಬಗಳಲ್ಲಿ ಮೊದಲ್ನೆ ಹಬ್ಬನೇ ಯುಗಾದಿ ಹಿಂದೂಗಳಿಗೆ ಹೊಸ ವರ್ಷ. ಗೊತ್ತಲ್ವಾ? ಬೇಸಿಗೆ ಕಾಲ ಕತ್ತಲೆಗೆ ಅವಕಾಶನೇ ಇಲ್ಲ. ಅದೇ ಕಂಡ್ರೀ ನಮ್ ಯುಗಾದಿ special.

ಅಷ್ಟಲ್ದೆ ನಮ್ ದ. ರಾ. ಬೇಂದ್ರೆ ಅವ್ರು ಹೇಳ್ತಾರಾ?

“ಯುಗಾ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ. 💕

ಹೊಸ ವರುಷಕೆ ಹೊಸ ಹರುಷವ

ಹೊಸತು ಹೊಸತು ತರುತಿದೆ”. 💫

ಅಬ್ಬಾ!! ಅಂತೂ ಯುಗಾದಿ ಬಂದೇ ಬಿಡ್ತು.. ಹೊಸ ಭರವಸೆಗಳನ್ನ ಹೊತ್ತು ತರ್ತಾ ಇದೆ. ಹಿಂದೆಲ್ಲಾ ಅಜ್ಜ ಅಜ್ಜಿ ಮುಂಜಾನೆ ನೇ ಎದ್ದೇಳಿ ಅಂತ ಬಂದ್ರೆ ಮತ್ತೆ bed sheet ಮುಚ್ ಹಕೊಂಡ್ ಮಲ್ಗ್ ತಿದ್ವಿ.. ಆದ್ರೂ ಎಬ್ಸಿ ಒಳ್ಳೆ ಎಣ್ಣೆ ಸ್ನಾನ ಮಾಡ್ಸಿ ಹೊಸ ಬಟ್ಟೆ ಅದು ಅಜ್ಜಿ ಸೀರೆಲಿ ಹೊಲ್ಸಿದ್ ಎಂತ ಕುಷಿ ನೆನಪಾದರೆ..ಆಮೇಲೆ ದೇವಸ್ಥಾನ ಹೋಗಿ ವಾವ್!! ಅದೆಲ್ಲ ಈಗ ಬರೀ ನೆನಪಾಗಿ ಇದೆ ಅಷ್ಟೇ😕.. ಈಗ ನಾವೇ ಎದ್ದು ಸ್ನಾನ ಮಾಡಿ ಒಟ್ರಾಶಿ ತಲೆ ಬಾಚ್ಕೊಂಡ್, ಬೇವು ಬೆಲ್ಲ ತಯಾರಿಸಿ, ದೇವಸ್ಥಾನ ಹೋಗ್ ಬಂದು , ಎಲ್ಲರ್ಗು ಬೇವು ಬೆಲ್ಲ ಕೊಟ್ಟು”ಬೇವು ಬೆಲ್ಲ ತಿಂದು ಒಳ್ಳೆ ಮಾತಾಡಿ”ಅನ್ನದು.. ಹಾಗಾದ್ರೆ ಬೇವು ಬೆಲ್ಲದ ಮೂಲಕ ಈ ಜೀವನದಲ್ಲಿ ಬೇವಿನ್ ತರ ಕಹಿ ಘಟನೆಗಳು, ಕಷ್ಟಗಳು ಇದ್ದೆ ಇರುತ್ತೆ, ಅಷ್ಟಕ್ಕೇ ಬೇಜಾರ 😁 ಅದ್ರು ಜೊತೇನೆ ಬೆಲ್ಲದ ತರ ಖುಷಿ, ನೆಮ್ಮದಿ, ಸುಖ, ಸಿಹಿ ನೆನಪುಗಳು ಇರ್ತಾವೆ ಅಲ್ವಾ 😁 ನಗ್ರಿ ಹಾಗಾದ್ರೆ ನಗ್ತಾ ಇರಿ… ಕಷ್ಟ ಬಂದಾಗ ಕುಗ್ದೆ ಸುಖ ಬಂದಾಗ ಹಿಗ್ದೆ ಕಷ್ಟ, ಸುಖ ಎರಡನ್ನೂ balance ಮಾಡ್ತಾ ನಗ್ತಾ ಇರಿ ನಗುಸ್ತ ಇರಿ 🪄.

ಒಹ್ ದೇವಸ್ಥಾನ ಇಂದ ಬಂದ್ದ್ಮೆಲ್ ಏನ್ ಮಾಡದು ಹೇಳಿಲ್ಲ ಅಲ್ವಾ? ಇದೆ ಅಲ್ವಾ snap, photos, ಅಯ್ಯೋ insta reels ಮಾಡಿ ಯುಗಾದಿ ನ ಧಾಮ್ ಧೂಮ್ ಅಂತ celebreate ಮಾಡಣ..

ಹೊಸ ವರ್ಷದ ಪ್ರಯುಕ್ತ ನಿಮ್ಮೆಲ್ಲಾ “ಹಳೆಯ ಕಹಿ ನೆನಪು , ತಪ್ಪು ತಿಳುವಳಿಕೆ, ನೋವು, ಕೋಪ, ಪಶ್ಚಾತಾಪ, ಭಯ, ತಿರಸ್ಕಾರ, ಸೋಲು, ಶತ್ರುತ್ವ, ತಪ್ಪುಗಳು, negative feelings, ಇದೆಲ್ಲ account ನ close ಮಾಡಿ “ಪ್ರೀತಿ, ನಂಬಿಕೆ, ಸಾಧನೆ, positive attitude, ಖುಷಿ ಎಂಬ account ನ open ಮಾಡಿ..

” ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.🪄. ಬೇವು ಬೆಲ್ಲ ತಿಂದು ಒಳ್ಳೆ ಮಾತಾಡಿ. ಹಳೆಯ ಕಹಿ ನೆನಪನ್ನ ಮರ್ತು ಖುಷಿಯಾಗಿರಿ”. ♥️.. ನಗ್ತಾ ಇರಿ ನಗುಸ್ತಾ ಇರಿ 🪄..

ಮಧುಶ್ರಿ,

ದ್ವೀತಿಯ ಬಿ ಎ ವಿಧ್ಯಾರ್ಥಿನಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

ಮರೆಯಾದ ಕರಿಯ

Image Credit: anime.desktopnexus.com

ಅವತ್ ಒಂದ್ ದಿನ ಹಿಂಗೆ ಏನೋ ಯೋಚ್ನೆ ಮಾಡ್ತಾ ರಸ್ತೇಲಿ ನೆಡ್ಕೊಂಡ್ ಹೋಗ್ತಾ ಇದ್ದೆ.. ಹಾಗೆ ಸೈಡ್ ಅಲ್ಲಿದ್ದ ಒಂದ್ ಕ್ಯಾಸೆಟ್ ಅಂಗಡಿ ಕಡೆ ನೋಡ್ದೆ.. ಅಲ್ಲೊಬ್ಬ ಕರಿಯ ನಿಂತಿದ್ದ.. ನೊಡಕೇನೋ ಡುಮ್ಮುಗೆ ಕರ್ರುಗೆ ಇದ್ದ, ಆದ್ರೂ ನಂಗ್ ಇಷ್ಟ ಆದ. ಅದೇ ಗುಂಗಲ್ಲಿ ಮನೆಗ್ ಹೋದೆ. ಸಂಜೆಯೆಲ್ಲ ಅವ್ನೆ ಆ ಕರಿಯನೇ ಕಣ್ಮುಂದೆ ಬರ್ತಾ ಇದ್ದ..

ಮಾರನೆ ದಿನ ಕಾಲೇಜ್ ಗೆ ಹೋಗ್ತಾ ಇದ್ದೆ ಮತ್ತೆ ಅದೆ ರಸ್ತೆ. ಒಂದ್ಸಲ ಕ್ಯಾಸೆಟ್ ಅಂಗಡಿ ಕಡೆ ತಿರುಗ್ ನೋಡ್ದೆ, ನಿನ್ನೆ ನೋಡಿದ ಆ ಕರಿ ಸುಂದ್ರ ಅಲ್ಲಿರ್ಲಿಲ್ಲ.. ಬಿಡು, ಏನ್ ದಿನ ಕಾಣ್ತಾನ? ಅನ್ಕೊಂಡು ನಿರಾಸೆ ಇಂದ ಕಾಲೇಜ್ ಗೆ ಬಂದೆ. ಕಾಲೇಜ್ ಮುಗೀತು ನನ್ ಫ್ರೆಂಡ್ ಜೊತೆ ಮನೆಗ್ ಹೊರಟೆ.. ಮತ್ತೆ ಅದೆ ರಸ್ತೆ ಈ ಸಲ ಕ್ಯಾಸೆಟ್ ಅಂಗಡಿ ಕಡೆ ನೋಡಕೇನು ಹೋಗಿಲ್ಲ, ಸ್ವಲ್ಪ ಮುಂದೆ ಹೋದೆ. ಕಣ್ಮುಂದೆ ಅದೇ ಚೆಲುವ ನಿಂತಿದ್ದ.. ಖುಷಿ ಆಗೋಯ್ತು. ಹಿಂಗೆ ದಿನ ಕಳೆಯಿತು.. ನಂಗೂ ನನ್ ಕರಿಯಂಗು ಒಳ್ಳೆ ಸ್ನೇಹ ಬೇಳಿತು ಆದ್ರೆ ಅದು ಬರೀ ಕಣ್ಣಿನ ನೋಟದಲ್ಲೇ ಇದ್ದಿದ್ದು. ಒಂದ್ ದಿನ ಸಂಜೆ ಕಾಲೇಜ್ ಇಂದ ಮನೆಗ್ ಹೋಗ್ತಾ ಇದ್ದೆ ನನ್ ಬಾಕ್ಸ್ ಲಿ ಇದಿದ್ ಮೊಸ್ರನ್ನ ನ ಅವ್ನ್ ಗೆ ಕೊಟ್ಟೆ.. ಖುಷಿಯಾಗಿ ತಿಂದ..

ಮಾರನೆ ದಿನ ಸಿಕ್ಕಾಪಟ್ಟೆ ಖುಷಿಲಿ ಕರಿಯನ್ ನೋಡೋಕೆ ಅಂತಾನೆ ಕಾಲೇಜ್ ಗೆ ಅಬ್ಸೆಂಟ್ ಆಗಿ ಹೋದ್ರೆ, ಆ ಕರಿಯ ಅಲ್ಲಿರ್ಲೆ ಇಲ್ಲ.. ಹಿಂಗೆ 4 ದಿನ ಕಳಿತು… ಆ ನನ್ ಸುಂದ್ರ ಸಿಗ್ಲೆ ಇಲ್ಲ.. 5 ನೆ ದಿನ ಏನಾದ್ರೂ ಆಗ್ಲಿ ಅಂತ ಕ್ಯಾಸೆಟ್ ಅಂಗಡಿ ಅಣ್ಣಗೆ ಕರಿಯ ಬಗ್ಗೆ ಕೇಳ್ದೆ.

“ರಸ್ತೇಲಿ ಒಂದ್ ಬೈಕ್ ಸ್ಪೀಡ್ ಆಗಿ ಬಂತು ಕರಿಯ ಅದುಕ್ ಸಿಕ್ಕಿ ನರಳಿ ನರಳಿ ಜೀವ ಬಿಟ್ಟ, ನಾನ್ 2 ವರ್ಷದಿಂದ ಆ ನಾಯಿ ಮರಿ ಸಾಕಿದ್ದೆ..”ಅಂತ ಹೇಳ್ತಾ ಆ ಅಣ್ಣ ಅವ್ರ ಕೆಲಸದಲ್ಲಿ ತೊಡಗಿದ್ರು. ಅವತ್ತಿಂದ ಯಾವ ಬೈಕ್, ಕಾರ್ ನೋಡಿದ್ರೂ ಕರಿಯಂದೆ ನೆನ್ಪು. ನಮ್ ಮನೆಲು ಒಬ್ಬ ಕೆಂಪ ಇದ್ದ, ಮನೆಬಿಟ್ ಹೋಗಿ ಒಂದ್ ತಿಂಗಳಾಯ್ತು.. ಕರಿಯ ನ ಹಾಗೆ ಸತ್ನ? ಜೀವಂತ ಇದಾನ? ಅವ್ನ್ Girlfriend ಜೊತೆ ಓಡಿ ಹೋದ್ನ? ಒಂದು ತಿಳಿತಿಲ್ಲ..

“ಅವ್ರು ನಮ್ ಹಾಗೆ ಜೀವಿಗಳು. ಎಲ್ಲಾ ಜೀವಕ್ಕೂ ಜೀವಿಸಕ್ಕೆ ಅವಕಾಶ ಮಾಡ್ಕೊಡಿ, ಜೀವಿಸಿ ಜೀವಿಸಲು ಬಿಡಿ ಈ ತರ ಕರಿಯ ಸಾಯುವಾಗ ಹೇಳಿರ್ ಬಹುದೇನೋ? ಆಲ್ವಾ? ಯೋಚ್ನೆ ಮಾಡಿ.. ನಾವೇನೋ ನಮ್ ಖುಷಿ ಗೆ ಸ್ಪೀಡ್ ಆಗಿ ಹೋಗ್ತೀವಿ, ನಮಗೂ ಕನಸುಗಳಿವೆ ಖುಷಿ ಪಡೋಕ್ ಏನೆಲ್ಲಾ ಮಾಡ್ತೀವಿ ಅಲ್ವಾ? ಹಾಗೇ ಆ ಮುಗ್ಧ ಜೀವಿಗಳಿಗೂ ಕನಸುಗಳಿವೆ, ಆಸೆಗಳಿವೆ, ಬದುಕುವ ಹಕ್ಕಿದೆ..

ನಾವ್ ಜಾಗರೂಕವಾಗಿ ಇರೋದ್ರಿಂದ ಸಮಾಜದಲ್ಲಿ ನಾವು ತಲೆ ತಗ್ಗಿಸೋ ಸಂದರ್ಭ ನೂ ಬರಲ್ಲ, ಮುಗ್ಧ ಜೀವಿಗಳ ಶಾಪಕ್ಕು ಒಳಗ್ ಆಗಲ್ಲ..

“ಇಷ್ಟೇ , ಇನ್ನೇನ್ ಇಲ್ಲ… ನೋಡಿ ಒಮ್ಮೆ ಈ ವಾಹನಗಳ ಚಾಲನೆ ಬಗ್ಗೆ ನೀವೇ ಯೋಚ್ನೆ ಮಾಡಿ.. ಯೋಚ್ನೆ ಮಾಡ್ತೀರಾ ಅಲ್ವಾ???

” ಮುಗ್ಧಜೀವಿಗಳನ್ನು ಉಳಿಸೋಣ..”.

ಮಧುಶ್ರಿ,

ದ್ವೀತಿಯ ಬಿ ಎ ,  ವಿಧ್ಯಾರ್ಥಿನಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ