ಅಂಬೇಡ್ಕರ್ ಕೂಡ ಅರ್ಧ ದೇಹದಲ್ಲಿ ನಾರಿಯನ್ನ ಹೊತ್ತವರು!

 

ಅಂಬೇಡ್ಕರ್ ಅಂದಾಕ್ಷಣ ನೆನಪಿಗೆ ಬರುವುದು,ಸ್ವಾಭಿಮಾನ ಗಟ್ಟಿತನ ದೃಢತೆ.. ಕೇವಲ ಜಾತಿ ಎಂಬ ಪದ ಅವರನ್ನ ಅವರ ಸಮುದಾಯವನ್ನು ನಡುಗಿಸಿದ್ದು ಎಲ್ಲರನ್ನೂ ಕೊರೆಯುವಂತ ಸಂಗತಿ. ಕಮಲ ಪಂಕದಲ್ಲಿ ಬೆಳೆದರೂ ಅದರ ಅರ್ಪಣೆ ದೇವರ ಪದಕ್ಕೆ ಎಂಬಂತೆ ಸಮಾಜ ಅವರನ್ನ ಎಷ್ಟೇ ಕೆಸರಿಗೆ ತಳ್ಳಿದರೂ ಅವರು ಕಮಲದಂತೆ ಮರಳಿ ಮರಳಿ ಅರಳಿದರು!.. ಅವರು ಖಡ್ಗಕ್ಕಿಂತ ಲೇಖನಿ ಹರಿತವಾದುದು ಎಂಬ ಮಾತಿನಲ್ಲಿ ನಂಬಿಕೆ ಇತ್ತವರು, ಓದೆಂಬುದು ಅವರ ತೀವ್ರ ಹಸಿವಾಗಿತ್ತು,ಅದರ ಮೂಲಕವೇ ಅವರು ಸಂವಿಧಾನವನ್ನೇ ಬರೆದು ಮೆರೆದರು.

ಸಾಹಿತ್ಯದಲ್ಲಿ ಸ್ವರ್ಣಾಕ್ಷರವಾಗಿ ಉಳಿದ ಅಂಬೇಡ್ಕರ್ ಅವರು ಮಹಿಳೆಯರನ್ನ ಸಬಲೆ ಎಂದು ಸಾರುವುದರಲ್ಲಿ ಮುಖ್ಯಾತಿಮುಖ್ಯ ಪಾತ್ರವಹಿಸಿದ್ದಾರೆ. ಹಾಗಾದರೆ ಸಬಲೀಕರಣ ಎಂದರೇನು?, ಹಾ! ಹೆಣ್ಣು ಎಂಬಾಕೆ ಪೂರ್ಣ ಸ್ವಾತಂತ್ರ ಹೊಂದುವ ಪರಿಯೇ ಸಬಲೀಕರಣ ಅಂದರೆ ತನ್ನ ಕಾಲ ಮೇಲೆ ತಾನೇ ನಿಲ್ಲುವ ಮೂಲಕ ತನ್ನ ತಾನು ಗುರುತಿಸಿಕೊಳ್ಳುವುದು. ಅವರು ಕಂಡಂತೆ ಹೆಣ್ಣು ಮಕ್ಕಳ ಪ್ರತೀ ಹೆಜ್ಜೆ ಕೂಡ ಅವರ ಮನೆಯಲ್ಲಿನ ಯಾವುದೇ ಗಂಡಿನ ಮೇಲೆ ನಿರ್ಧಾರವಾಗುತಿತ್ತು, ಬಾಲ್ಯದಲ್ಲೇ ವಿವಾಹ ಹಾಗೂ ನಾಲ್ಕು ಗೋಡೆಗಳ ಮಧ್ಯದ ಜೀವನ ದೌರ್ಜನ್ಯ ಅದೊಂದು ದೊಡ್ಡ ಕೊನೆಯೇ ಇಲ್ಲದ ಪಟ್ಟಿಯಾಗಿತ್ತು. ನಿಜವಾದ ಶಿಕ್ಷಣ ಪಡೆದ ವ್ಯಕ್ತಿ ಏನನ್ನ ಯೋಚಿಸಬೇಕೋ ಹಾಗೆ  ಯೋಚಿಸಿದ ಸರಿಕ ವ್ಯಕ್ತಿ ಅಂಬೇಡ್ಕರ್ ಎಂಬ ಮಾತಿನ ಮೇಲೆ ನಾನು ಬಲವಾಗಿ  ನಿಲ್ಲುತ್ತೇನೆ ಏಕೆಂದರೆ ಅವರು ಯೋಚಿಸಿದ್ದು ಕೊರತೆ ಇರುವುದು ಮಹಿಳಾ ಶಿಕ್ಷಣದಲ್ಲಿ ಎಂದು ಹಾಗೆ ಮಹಿಳಾ ಶಿಕ್ಷಣಕ್ಕೆ ಬಹಳ ಹೋರಾಡಿದರು. ದಲಿತ ಸಾಹಿತ್ಯ ಎಂಬ ಪುಟಗಳನ್ನು ತಿರುವಿದಾಗ ಅಲ್ಲಿ ನೆಂದ, ನೊಂದ ಪುಟಗಳೇ ಹೆಚ್ಚು ಅದರಲ್ಲೂ ಸ್ತ್ರೀ ವಾದಿ ಪುಟಗಳಂತೂ ಇನ್ನೂ ಒಣಗಿಲ್ಲ..

ಅಂಬೇಡ್ಕರ್ ಅವರೂ ಕೂಡ ಅರ್ಧ ದೇಹದಲ್ಲಿ ನಾರಿಯನ್ನೇ ಹೊತ್ತವರು ಹಾಗಾಗೇ ಅವರೂ ಮರುಗಿದ್ದು.. ಅವರು ಹೆಣ್ಣಿಗೆ ತನ್ನ ದೇಹದ ಮೇಲೆ ತನಗೆ ಮಾತ್ರ ಹಕ್ಕಿದೆ ಎಂಬ ಅರಿವು ಮೂಡಿಸುವ ಬಗೆಗೂ ಅವರ ಪಾತ್ರ ಮಂದರದಷ್ಟಿದೆ, ಏಕೆಂದರೆ ಸಾಹಿತ್ಯ ಇತಿಹಾಸ ತೆಗೆದು ನೋಡಿದಾಗ ದಲಿತ ಸಮುದಾಯದ ಮೇಲೆ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದ ಬಗೆಗೆ ಹಲವರಿಗೆ ತಿಳಿದಿದೆ ಅದರಲ್ಲೂ ಹೆಚ್ಚಾಗಿ ಆ ಸಮಯದಲ್ಲಿ , ಮೇಲೆ ಎಂಬ ಮನಸ್ಥಿತಿಯ ಗಂಡಸರು ದಲಿತ ಸಮುದಾಯದ ಹೆಣ್ಣು ಮಕ್ಕಳನ್ನು ಎಳೆದು ಅತ್ಯಾಚಾರ ಮಾಡುತ್ತಿದ್ದ ಬಗೆಗೆ ಎಷ್ಟು ಜನಕ್ಕೆ ಗೊತ್ತು? ಆದರೆ ಅದೇ ಮೇಲು ಮನಸ್ಥಿತಿಯವರು ಸಮಾಜದ ಎದುರು ದಲಿತರ ನೆರಳನ್ನೂ ಬೀಳಿಸಿಕೊಳ್ಳುತ್ತಿರಲಿಲ್ಲ. ಇದೆಲ್ಲದರ ತೀವ್ರ ಗಾಸಿಯನ್ನ ಹೊತ್ತು ಅಧಿಕಾರದ ಕುರ್ಚಿಯಲ್ಲಿ  ಕುಳಿತಿದ್ದರು ಅಂಬೇಡ್ಕರ್!.. ಅವರ ಧ್ವನಿ ಕೇವಲ ದಲಿತರೇ ಆಗಿಲ್ಲ ಎಲ್ಲಾ ಹೆಣ್ಣು ಮಕ್ಕಳಾಗಿದ್ದರು,..

ಸ್ಥಾನ ಅಧಿಕಾರ ಸಿಕ್ಕಾಕ್ಷಣ ಜಗತ್ತೇ ಮರೆವ ಕಾಲದಲ್ಲೂ ಅಂಬೇಡ್ಕರ್ ಅವರು ಕರ್ತವ್ಯಗಳ ಕವಲುಗಳನ್ನೇ ದಿಟ್ಟಿಸಿದರು. ಅವರಿಗೆ ತಿಳಿದಿತ್ತು ಕೆಲಸ ಮಾತಿನಲ್ಲಲ್ಲ ಕ್ರಿಯೆಯಲ್ಲಿ ಎಂದು.

ಭಾವನೆಗಳಿಗೆ ಅಂಬೇಡ್ಕರ್ ಎಷ್ಟು ಗೌರವ ನೀಡುತ್ತಿದ್ದರೆಂದರೆ ಮೊದಲು ಬಹುಪತ್ನಿತ್ವದ ವಿರುದ್ಧ ನಿಷೇಧ ಕಾಯ್ದೆಯನ್ನ ಜಾರಿಗೊಳಿಸಿದರು, ಹೆಣ್ಣು ಕುಲಕ್ಕೆ ಭಾರ ಎನ್ನುವಂತ ಕಾಲದಲ್ಲಿ ಆಕೆ ಎಂದೂ ಭಾರವಲ್ಲ ಎನ್ನುವುದನ್ನ ಸಾರುವ ಸಲುವಾಗಿ ಆಸ್ತಿಯಲ್ಲಿ ಅವಳ ಹಕ್ಕನ್ನು ಬಲ ಪಡಿಸುವ ಕಾಯ್ದೆ ಜಾರಿ ತಂದರು. ಹೀಗೆ  ಕಾಯ್ದೆಗಳ ಮೂಲಕವೇ ಅವರು ಅವರು ಕಟ್ಟುಪಾಡಿನ ಸಮಾಜಕ್ಕೆ ಕಡಿವಾಣ ಹಾಕಿದರು. ಇನ್ನೂ ಅನೇಕಾನೇಕ ವಿಷಯಗಳಲ್ಲಿ ಸಬಲೀಕರಣ ಎಂಬುದು ಮಹಿಳೆಯರ ಸ್ವತ್ತಾಗಿಲ್ಲವಾದರೂ, ಅಧಿಕಾರ ಎಂದು ಬಂದಾಗ ಅವಳದ್ದು ಅವಳಿಗೆ ತಲುಪುವಂತೆ ಮಾಡುವ ಪ್ರಯತ್ನವಂತೂ ಅಂಬೇಡ್ಕರ್ ಎಂಬ ಅಪರೂಪದ ಮುತ್ತಿಗಿತ್ತು!..

 

ಕವನ ಕೆ.

ದ್ವಿತೀಯ  ಬಿ ಎ, ವಿದ್ಯಾರ್ಥಿನಿ,

ಕಟೀಲ್ ಆಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

ಹೀಗೆಲ್ಲೋ ಕಲ್ಪನೆಯ ಸ್ವಪ್ನ!

Image Credit: Google.com

ನಿನ್ನೊಂದಿಗೆ ಕುಳಿತು
ನಿನ್ನೊಂದಿಗೆ ಕುಳಿತು

ಹುಣ್ಣಿಮೆಯ ಪೂರ್ಣ ಚಂದಿರನ ನೋಡಬೇಕು
ಅದ್ಯಾವುದೋ ಶೃಂಗರಿಸಿದ ಬೆಟ್ಟದ ತುದಿಯಲ್ಲೇ ಎಂಬ ಹಂಬಲವಿಲ್ಲ
ಮನೆಯ ತಾರಸಿಯಾದರೂ ಸಾಕು

ನೀ ತರುವ ಹೂ ಮುಡಿಯಬೇಕು
ಅದು ಮೈಸೂರು ಮಲ್ಲಿಗೆ ಆಗಬೇಕೆಂಬ ಆಸೆಯಿಲ್ಲ
ಹಿತ್ತಲಿನ ಬಿಳಿ ಜಾಜಿ ಮಲ್ಲಿಗೆ ಆದರೂ ಸರಿಯೇ

ನಾವಿಬ್ಬರೂ ಕೈ ಹಿಡಿದ ನಡೆಯಬೇಕು
ಅದ್ಯಾವುದೋ ಅರಮನೆಯ ಆವರಣವೇ ಆಗಬೇಕೆಂಬ ಆಸೆಯಿಲ್ಲ
ನಮ್ಮೂರ ಜಾತ್ರೆಯ ಕಿರಿದಾದ ಸಂಧಿಯಲ್ಲಾದರೂ ಸಾಕು.

ವೈಷ್ಣವಿ ಎಸ್ ಕೆ

ತೃತೀಯ ಬಿ ಎ, ವಿದ್ಯಾರ್ಥಿನಿ
ಕಟೀಲ್ ಆಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

ಡಿಜಿಟಲ್ ಸಂಪನ್ಮೂಲಗಳಿಂದ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳು -ಡಾ ಸಂತೋಷ್ ಕುಮಾರ್

ಶಿವಮೊಗ್ಗದ ಮಾನಸ ಟ್ರಸ್ಟ್ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಗ್ರಂಥಾಲಯಕ್ಕೆ ‘ಮನೋಲೋಕ’ ಎಂಬ ಹೆಸರನ್ನು ಜನವರಿ ೩೦ ರಂದು ಅನಾವರಣಗೊಳಿಸಿದ ಕುವೆಂಪು ವಿಶ್ವವಿದ್ಯಾಲಯದ ಲೈಬ್ರರಿ ಸೈನ್ಸ್ ವಿಭಾಗದ ಪ್ರಾಧ್ಯಾಪಕರಾದ ಡಾ ಸಂತೋಷ್ ಕುಮಾರ್‌ರವರು ಮಾತನಾಡುತ್ತಾ ಗ್ರಂಥಾಲಯಗಳು ಬೆಳೆದು ಬಂದ ದಾರಿಯನ್ನು ವಿವರಿಸಿದರು. ಪುಸ್ತಕಗಳನ್ನು ಸರಪಳಿಗಳಿಂದ ಭದ್ರ ಪಡಿಸಿ ಕಳುವಾಗದಂತೆ ನೋಡಿಕೊಳ್ಳುತ್ತಿದ್ದ ಉಲ್ಲೇಖಗಳಿವೆ ಎಂದು ಹೇಳುತ್ತಾ ಮಾಹಿತಿ ಹಾಗೂ ಜ್ಞಾನದ ಮುದ್ರಣವು ಒಂದು ಕ್ರಾಂತಿಯನ್ನೇ ಈ ಜಗತ್ತಿನಲ್ಲಿ ಮಾಡಿದೆ ಎಂದು ಹೇಳಿದರು. ಇಂದು ಗ್ರಂಥಾಲಯಗಳು ಪುಸ್ತಕಗಳನ್ನಷ್ಟೇ ಹೊಂದಿಲ್ಲ. ಸಾಕಷ್ಟು ಡಿಜಿಟಲ್ ಸಂಪನ್ಮೂಲಗಳನ್ನು ಕೂಡಾ ಹೊಂದಿವೆ. ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಗ್ರಂಥಾಲಯದಲ್ಲಿ ಡಿಜಿಟಲ್ ಲೈಬ್ರರಿಯನ್ನು ಪ್ರಾರಂಭಿಸಿರುವುದು ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳನ್ನು ಒದಗಿಸಿಲಿದೆ. ಇಂದು ಡಿಜಿಟಲ್ ಮಾಧ್ಯಮದ ಮೂಲಕ ವಿದ್ಯಾರ್ಥಿಗಳು ಹಲವಾರು ಕೋರ್ಸ್ಗಳನ್ನು ಮಾಡಬಹುದು. ದೇಶದ ಪ್ರತಿಷ್ಠಿತ ಯುನಿವರ್ಸಿಟಿಗಳು ಅತ್ಯುತ್ತಮ ಕೋರ್ಸ್ಗಳನ್ನು ನಡೆಸುತ್ತಿವೆ. ಇಂದು SWAYAM ಮೂಲಕ ದೊರೆಯುವ ಕೋರ್ಸ್ಗಳಿಗೆ ದಾಖಲಾದಲ್ಲಿ ಆ ವಿಷಯದಲ್ಲಿ ವಿಡಿಯೋ ಪಾಠ, ಪಠ್ಯಗಳು ಹಾಗೂ ಆಡಿಯೋ ಪಾಠವನ್ನು ಒದಗಿಸುತ್ತವೆ. ತಾನು ಓದುತ್ತಿರುವ ಪದವಿಯೊಂದಿಗೆ ಇನ್ನು ಹಲವು ಸರ್ಟಿಫಿಕೇಟ್ ಕೋರ್ಸ್ಗಳನ್ನು ಮಾಡಬಲ್ಲ ಅವಕಾಶ ವಿದ್ಯಾರ್ಥಿಗಳಿಗಿದೆ. ಅದಲ್ಲದೆ ಶೋಧಗಂಗಾ, ಶೋಧಗಂಗೋತ್ರಿಯAತಹ ಹಲವು ಪೋರ್ಟಲ್‌ಗಳು ಹಲವಾರು ಸಂಶೋಧಣಾ ಲೇಖನಗಳನ್ನು, ಪ್ರಕಟಪಡಿಸುತ್ತವೆ. ಇವುಗಳೆಲ್ಲ ಸಂಶೋಧನಾ ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಒಂದು ಬಹಳ ಮುಖ್ಯವಾದ ಆಕರಗಳಾಗಿವೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಇಂದಿನ ಈ ಡಿಜಿಟಲ್ ಯುಗದಲ್ಲಿ ಡಿಜಿಟಲ್ ಮಾಧ್ಯಮದ ಬಳಕೆ ಬಗ್ಗೆ ತಿಳಿದುಕೊಳ್ಳುವುದರೊಂದಿಗೆ, ಏನು ಮಾಡಬಾರದು ಎಂದು ತಿಳಿದುಕೊಳ್ಳುವುದು ಮುಖ್ಯ. ಕೃತಿಚೌರ್ಯಕ್ಕೆ ಎಷ್ಟು ಅವಕಾಶಗಳಿವೆಯೋ, ಅಷ್ಟೇ, ಅದನ್ನು ಗುರುತಿಸಲು ಹಾಗೂ ಕೃತಿಚೌರ್ಯ ಮಾಡಿದವರನ್ನು ಕಂಡುಹಿಡಿದು ಬ್ಲಾಕ್‌ಲಿಸ್ಟ್ನಲ್ಲಿ ಹಾಕಲೂ ಕೂಡಾ ಸಂಬಂಧ ಪಟ್ಟವರಿಗೆ ಅಧಿಕಾರವಿದೆ ಎಂದು ಮರೆಯಬೇಡಿರಿ. ನಿಮ್ಮ ಬೆರಳ ತುದಿಯಲ್ಲೇ ಮಾಹಿತಿ ಲಭ್ಯವಾಗುವ ಈ ಸಂದರ್ಭದಲ್ಲಿ ನಿಖರವಾದ ಹಾಗೂ ಸತ್ಯವಾದ ಮಾಹಿತಿಯನ್ನಷ್ಟೇ ಉಪಯೋಗಿಸುವುದು ಮುಖ್ಯ. ಆದುದರಿಂದ ನೈತಿಕವಾಗಿ ಗುರುತಿಸಲ್ಪಟ್ಟ ಪೋರ್ಟಲ್‌ಗಳನ್ನಷ್ಟೇ ಬಳಕೆ ಮಾಡಿರಿ ಹಾಗೂ ವಿದ್ಯಾರ್ಥಿಗಳು ಹಾಗೂ ಉಪನ್ಯಾಕರು ಸಂಶೋಧನಾ ಲೇಖನಗಳನ್ನು ಪ್ರಕಟಿಸುವಾಗ UGC ಯಿಂದ ಗುರುತಿಸಲ್ಪಟ್ಟ ಜರ್ನಲ್‌ಗಳಲ್ಲಷ್ಟೇ ಪ್ರಕಟಿಸಬೇಕು ಎಂದು ತಿಳಿಸಿದರು. ಮೊಬೈಲ್‌ಗೆ ದಾಸರಾಗುವ ಬದಲು, ಲೈಬ್ರರಿಯ ಮೂಲಕ ನಿಖರವಾದ ಹಾಗೂ ವೈಜ್ಞಾನಿಕ ಮಾಹಿತಿಯನ್ನು ಪಡೆಯಬೇಕು ಎಂದು ತಿಳಿಸಿದರು.

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿಗೆ ಡಿಜಿಟಲ್ ಲೈಬ್ರರಿಯನ್ನು ಸ್ಥಾಪಿಸಲು ಆಮೆರಿಕದಲ್ಲಿ ಉದ್ಯೋಗದಲ್ಲಿರುವ ಶ್ರೀ ಹೊಸಕೆರೆ ಶರತ್ ಕುಮಾರ್ ಹಾಗೂ ಶ್ರೀ ಹೊಸಕೆರೆ ಸುಮಂತ್ ಎಂಬ ಇಬ್ಬರು ಸಹೋದರರು, ತಮ್ಮ ತಂದೆಯಾದ ಶ್ರೀ ಹೊಸಕೆರೆ ರಾಮಸ್ವಾಮಿಯವರ ಹೆಸರಿನಲ್ಲಿ ದೇಣಿಗೆಯನ್ನು ಉದಾತ್ತವಾಗಿ ನೀಡಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ ಸಂಧ್ಯಾ ಕಾವೇರಿ ಕೆ ತಿಳಿಸಿದರು. ಕಾಲೇಜಿನ ಗ್ರಂಥಾಲಯಕ್ಕೆ ಮನೋಲೋಕ ಎಂದು ಹೆಸರಿಸಿದ್ದು ಅದು ದಿ|| ಡಾ ಅಶೋಕ್ ಪೈರವರು ಬರೆದ ಒಂದು ಪುಸ್ತಕದ ಶೀರ್ಷಿಕೆಯಾಗಿದೆ. ಅದೇ ರೀತಿ, ನೂತನವಾಗಿ ನಿರ್ಮಿಸಿದ ಡಿಜಿಟಲ್ ಲೈಬ್ರರಿಗೆ ‘ಹೊಸಕೆರೆ ರಾಮಸ್ವಾಮಿ ಮೆಮೋರಿಯಲ್ ಡಿಜಿಟಲ್ ಲೈಬ್ರರಿ’ ಎಂದು ಹೆಸರಿಡಲಾಗಿದೆ ಎಂದು ಗ್ರಂಥಪಾಲಕ ಶ್ರೀ ಗಣೇಶ್ ಹೆಚ್‌ರವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ತಿಳಿಸಿದರು. ಹೊಸಕೆರೆ ರಾಮಸ್ವಾಮಿ ಮೆಮೋರಿಯಲ್ ಡಿಜಿಟಲ್ ಲೈಬ್ರರಿಯನ್ನು ಶ್ರೀಮತಿ ಮೀನಾಕ್ಷಿ ರಾಮಸ್ವಾಮಿಯವರು ಉದ್ಘಾಟಿಸಿದರು. ಹೊಸಕೆರೆ ರಾಮಸ್ವಾಮಿಯವರು ಶಿವಮೊಗ್ಗದ ಅರಣ್ಯ ಇಲಾಖೆಯಲ್ಲಿ ಅತ್ಯಂತ ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಸೇವೆ ಸಲ್ಲಿಸಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ಮನ್ನಣೆಗೆ ಪಾತ್ರರಾಗಿದ್ದರು. ಅವರು ಕುಟುಂಬ ಹಾಗೂ ಉದ್ಯೋಗ ಎರಡರಲ್ಲೂ ಸತ್ಯ, ನಿಷ್ಠೆ, ಪ್ರೀತಿ ಹಾಗೂ ಸಹನೆಯಂತಹ ಮೌಲ್ಯಗಳನ್ನು ಅಳವಡಿಸಿ ಒಬ್ಬ ಮಾದರಿ ವ್ಯಕ್ತಿಯಾಗಿದ್ದರು. ಅವರ ಹೆಸರಿನಲ್ಲಿ ಅವರ ಮಕ್ಕಳು ಒಂದು ಉತ್ತಮ ಶಿಕ್ಷಣ ಸಂಸ್ಥೆಗೆ ದೇಣಿಗೆಯನ್ನು ನೀಡಿ, ಹಲವಾರು ವಿದ್ಯಾರ್ಥಿಗಳಿಗೆ ಹಲವಾರು ವರ್ಷಗಳವರೆಗೆ ಅನುಕೂಲವಾಗಬಲ್ಲ ಡಿಜಿಟಲ್ ಲೈಬ್ರರಿಯನ್ನು ಸ್ಥಾಪಿಸಿರುವುದು ಅಭಿನಂದನೀಯ ಎಂದು ಡಾ ಹೆಚ್ ಎಸ್ ನಾಗಭೂಷಣ್ ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹೊಸಕೆರೆ ಕುಟುಂಬದವರು, ಕಾಲೇಜನ್ನು ಪ್ರಾರಂಭಿಸಿ ಉತ್ತಮ ಶಿಕ್ಷಣವನ್ನು ನೀಡುತ್ತಿರುವ ಮಾನಸ ಟ್ರಸ್ಟ್ನ ನಿರ್ದೇಶಕರಾದ ಡಾ ರಜನಿ ಎ ಪೈರವರನ್ನು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಡಾ ರಜನಿ ಎ ಪೈ, ಡಾ ರಾಜೇಂದ್ರ ಚೆನ್ನಿ, ಆಡಳಿತಾಧಿಕಾರಿಗಳಾದ ಪ್ರೋ. ರಾಮಚಂದ್ರ ಬಾಳಿಗಾ, ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ ಅರ್ಚನಾ ಭಟ್, ಪ್ರಾಂಶುಪಾಲರಾದ ಡಾ ಸಂಧ್ಯಾ ಕಾವೇರಿ ಕೆ, ಗ್ರಂಥಪಾಲಕರಾದ ಶ್ರೀ ಗಣೇಶ್ ಎಚ್, ಶ್ರೀ ಯೋಗರಾಜ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕು. ಪ್ರತಿಭಾ ಕಾರ್ಯಕ್ರಮ ನಿರೂಪಿಸಿದರು. ಗ್ರಂಥಪಾಲಕ ಗಣೇಶ್ ಹೆಚ್ ಸ್ವಾಗತಿಸಿ, ಡಾ ಅರ್ಚನಾ ಭಟ್ ವಂದಿಸಿದರು. ಎಂ. ಎಸ್ಸಿ ವಿದ್ಯಾರ್ಥಿನಿಯರಾದ ಸುಜನ್ಯಾ ಮತ್ತು ತಂಡ ಪ್ರಾರ್ಥಿಸಿದರು. ಕು. ಅಂಕಿತಾ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು.

ಶೈಕ್ಷಣಿಕ ಪ್ರವಾಸದ ನೆನಪುಗಳು

ನೈಜ ಪ್ರಕೃತಿಯ ಪಾಠಗಳನ್ನು ಕಲಿಯಲು ಶೈಕ್ಷಣಿಕ ಪ್ರವಾಸವು ಒಂದು ಸದಾವಕಾಶ. ಇಂತಹ ಒಂದು ಅವಕಾಶ ಒದಗಿಸಿಕೊಟ್ಟದ್ದು ನಮ್ಮ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು.

ಅಂತಿಮ ವರ್ಷದ ಬಿ.ಎಸ್ಸಿ. ವಿದ್ಯಾರ್ಥಿಗಳಾದ ನಾವು ಗೋಕರ್ಣ-ಕಾರವಾರದ ಈ ಪ್ರವಾಸದಲ್ಲಿ ಭಾಗಿಯಾದೆವು. ಇಲ್ಲಿ ನಾವು ಆಹಾರ ತಯಾರಿಕಾ ಕಾರ್ಖಾನೆ ಹಾಗೂ ಸೆಂಟ್ರಲ್ ಮರೈನ್ ಫೀಶರೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (CMFRI) ಗೆ ಭೇಟಿ ನೀಡಿದೆವು. ಈ ಪ್ರವಾಸವು ಪ್ರಾಣಿಶಾಸ್ತ್ರ ಹಾಗೂ ರಾಸಾಯನಿಕಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಾದ ನಮಗೆ ಬಹು ಉಪಕಾರಿಯಾಗಿದ್ದು ಸುಳ್ಳಲ್ಲ. ಹಾಗೆಯೇ ಪ್ರಾಯೋಗಿಕ ಅನುಭವ ಪಡೆಯುವಲ್ಲಿ ಸಹಕಾರಿಯಾಗಿತ್ತು.

ನಮ್ಮ ಪ್ರವಾಸವು ನವೆಂಬರ್ ತಿಂಗಳಿನ 18ನೇಯ ತಾರೀಖಿನಂದು ಬೆಳಗಿನ ಜಾವ ಪ್ರಾರಂಭವಾಯಿತು. ಶಿವಮೊಗ್ಗದಿಂದ 6.30ಕ್ಕೆ ಉತ್ಸಾಹದಿಂದ ಹೊರಟೆವು. 10.30ರ ಸುಮಾರಿಗೆ ಬಂದಿತು ನಮ್ಮ ಮೊದಲ ನಿಲ್ದಾಣ- ಭೀಮೇಶ್ವರ ದೇವಸ್ಥಾನ. ಅಲ್ಲಿಯ ಆಧ್ಯಾತ್ಮಿಕತೆ ಮತ್ತು ಪ್ರಕೃತಿಯ ಸೌಂದರ್ಯ ಕಣ್ಮನ ಸೆಳೆಯುವಂತಿತ್ತು. ಶಾಂತಿಯುತ ವಾತಾವರಣದಲ್ಲಿ ನೆನೆದ ನಂತರ ನಾವು ಕುಮಟಾ ಕಡೆಗೆ ಪ್ರಯಾಣ ಬೆಳೆಸಿದೆವು. ಅಲ್ಲಿಗೆ ಮಧ್ಯಾಹ್ನ 1.00ರ ಹಾಗೆ ತಲುಪಿದ ನಾವು ಭೇಟಿ ನೀಡಿದ್ದು ಅಲ್ಲಿಯ ವಾತ್-ಜಾತ್ ಫಾರ್ಮಾ ಫುಡ್ಸ್ ಕಾರ್ಖಾನೆಗೆ (Vatjat Pharma Foods). ಅಲ್ಲಿ ರಾಸಾಯನಿಕ IP (Ingress Protection Grade) ದರ್ಜೆಯ ಉತ್ಪನ್ನ, ಆಹಾರ ಉತ್ಪನ್ನಗಳ ತಯಾರಿಕೆಯ ಬಗ್ಗೆ ಅರಿತುಕೊಂಡೆವು.

ಸಂಜೆ 4.00ರ ಹೊತ್ತಿಗೆ ನಾವು ಗೋಕರ್ಣ ತಲುಪಿದೆವು. ಅಲ್ಲಿ ಕರಾವಳಿಯ ಕಲರವವು ನಮ್ಮನ್ನು ಸ್ವಾಗತಿಸಿತ್ತು. ಹತ್ತಿರದಲ್ಲಿಯೇ ಇದ್ದ ಹೋಂ ಸ್ಟೇಯಲ್ಲಿ ನಮಗಾಗಿ ಕಾಯ್ದಿರಿಸಿದ್ದ ಕೋಣೆಗಳಿಗೆ ತೆರಳಿ ಸ್ವಲ್ಪ ಹೊತ್ತು ವಿಶ್ರಮಿಸಿ ಎದುರಿನಲ್ಲಿಯೇ ಇದ್ದ ಬೀಚ್ ಗೆ ವಾಯುವಿಹಾರಕ್ಕಾಗಿ ಹೊರಟೆವು. ಹಾಗೆಯೇ ನಮ್ಮ ಪ್ರಾಣಿಶಾಸ್ತ್ರ ವಿಭಾಗಕ್ಕೆ ಬೇಕಾಗುವ, ಅಲ್ಲಿ ಸಿಗುವ ಹಾಗೂ ನಾವು ಸಂಗ್ರಹಿಸಬಹುದಾದ ಮಾದರಿ(Specimen) ಗಳನ್ನು ಸಂಗ್ರಹಿಸಿ, ಸ್ನೇಹಿತರೊಡನೆ ಸಮುದ್ರದ ಅಲೆಗಳ ಇಂಪಾದ ದನಿಯನ್ನು ಸವಿಯುತ್ತಾ ಕಾಲ ಕಳೆದೆವು. ಸಂಜೆಯ ವೇಳೆಗೆ ಮಹಾಬಲೇಶ್ವರ ಸ್ವಾಮಿಯ ದರ್ಶನ ಪಡೆದು ಅಲ್ಲಿಯೇ ಪ್ರಸಾದ ಸ್ವೀಕರಿಸಿ ನಮ್ಮ ಕೋಣೆಗಳಿಗೆ ಮರಳಿ ವಿಶ್ರಾಂತಿ ಪಡೆದೆವು.

ಮರುದಿನ, ಗೋಕರ್ಣದಿಂದ ಕಾರವಾರದ ಕಡೆಗೆ ಬೆಳಗ್ಗೆ 8.00ಕ್ಕೆ ಹೊರಟು ಅಂದಿನ ನಮ್ಮ ಮೊದಲ ನಿಲ್ದಾಣವಾದ CMFRI (Central Marine Fisheries Research Institute) ತಲುಪಿದೆವು. ಇಲ್ಲಿ ನಮಗೆ ಸಮುದ್ರ ಜಗತ್ತಿನ ಅಚ್ಚರಿಯ ಪರಿಚಯವಾಯಿತು. ಇಲ್ಲಿ ನಾವು ಬ್ರೂಡರ್(Brooder) ಗಳನ್ನು ನೋಡಿ, ಅದರ ಗುಣಲಕ್ಷಣಗಳ ಬಗ್ಗೆ ಅರಿತೆವು.

ಮಧ್ಯಾಹ್ನ 2.15ರ ಹಾಗೆ ಕಾರವಾರದ ಮೀನು ಮಾರುಕಟ್ಟೆಗೆ ಹೋಗಿ, ನಮ್ಮ ಪ್ರಯೋಗಾಲಯಕ್ಕೆ ಬೇಕಾದ ಮಾದರಿಗಳನ್ನು ಖರೀದಿ ಮಾಡಿದೆವು. ನಂತರ 3.30ರ ಹಾಗೆ ರವೀಂದ್ರನಾಥ್ ಟಾಗೋರ್ ಬೀಚ್ ಗೆ ಹೋಗಿ ಅಲ್ಲಿ ಸೀಗಡಿ(Shrimp), ಏಡಿ ಹಾಗೂ ಇತರ ಮಾದರಿಗಳನ್ನು ಸಂಗ್ರಹಿಸಿದೆವು.

ಸಂಜೆ 5.30ಕ್ಕೆ ಹೊನ್ನಾವರದೆಡೆಗೆ ಹೊರಟು ಅಲ್ಲಿ ಬೋಟಿಂಗ್ ನ ಅನುಭವ ಪಡೆದೆವು. ಜೊತೆಗೆ ವಿಶೇಷ ಸಸ್ಯ ಬೇರುಗಳಾದ  ನ್ಯೂಮಾಟೋಫೋರ್ಗಳನ್ನು (pneumatophores) ನೋಡಿದೆವು. ಈ ಬೇರುಗಳು ಸಸ್ಯಗಳಿಗೆ ನೀರಿನಲ್ಲಿ ಉಸಿರಾಡಲು ಸಹಾಯ ಮಾಡುತ್ತವೆ ಎಂದು ತಿಳಿದೆವು. ನಂತರ ಅಲ್ಲಿಂದ ಸಂಜೆ 7.30ಕ್ಕೆ ಶಿವಮೊಗ್ಗದ ಕಡೆಗೆ ಮನದ ತುಂಬಾ ನೆನಪುಗಳ ಜೊತೆಗೆ ಶೈಕ್ಷಣಿಕ ಪ್ರವಾಸದ ಪ್ರಾಮುಖ್ಯತೆಯನ್ನು ಅರಿತು ನಮ್ಮ ಪ್ರಯಾಣವನ್ನು ಬೆಳೆಸಿದೆವು.

ಈ ಎರಡು ದಿನದ ಪ್ರವಾಸವು ಶಿಕ್ಷಣ, ಆಧ್ಯಾತ್ಮಿಕತೆ, ಸಂಸ್ಕೃತಿಯ ಪರಿಪೂರ್ಣ ಮಿಶ್ರಣವಾಗಿದ್ದು- ಎಂದೆಂದಿಗೂ ಮನದಲ್ಲಿ ಉಳಿಯುವ ಅನುಭವವಾಗಿದೆ. ಅಲ್ಲದೆ ಪುಸ್ತಕದಲ್ಲಿ ಓದಿದ ವಿಷಯಗಳನ್ನು ನೈಜ ಜಗತ್ತಿನಲ್ಲಿ ನೋಡುವ, ಅನುಭವಿಸುವ ಅವಕಾಶ ನಮ್ಮದಾಗಿಸಿಕೊಂಡೆವು. ನಾನು-ನೀನು ಎಂಬ ಅಂತಾರವಿಲ್ಲದೆ ಎಲ್ಲರೊಂದಿಗೆ ಬೆರೆತು ಕಳೆದ ಈ ಎರಡು ದಿನ ಅವಿಸ್ಮರಣೀಯ.

ಶ್ರೇಯಾ. ಪಿ

ಅಂತಿಮ ಬಿ. ಎಸ್ಸಿ. ವಿದ್ಯಾರ್ಥಿನಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ