ನಮ್ಮ ಹೆಮ್ಮೆಯ ಸಮಾಜಕಾರ್ಯ

ವಿಶ್ವ ಸಮಾಜಕಾರ್ಯ ದಿನವನ್ನು ಪ್ರತಿ ವರ್ಷ ಮಾರ್ಚ್ ತಿಂಗಳ ಮೂರನೇ ಮಂಗಳವಾರದಂದು ವಿಶ್ವದ್ಯಂತ ಆಚರಿಸಲಾಗುತ್ತದೆ. ಈ ದಿನದ ವಿಶೇಷತೆ ಏನೆಂದರೆ, ಸಮಾಜ ಸೇವಕರ ಸಾಧನೆಗಳನ್ನು ಸರ್ವರಿಗೂ ತಿಳಿಸಲು ಅವರ ಕಾರ್ಯಗಳನ್ನು ಹಾಗೂ ಅವರ ಕಾರ್ಯಗಳ ಉದ್ದೇಶ ವನ್ನು ಸಮಾಜಕ್ಕೆ ದರ್ಶಿಸಲು ಹಾಗೂ ನವ ಸಮಾಜ ನಿರ್ಮಾಣದಲ್ಲಿ ಸಮಾಜ ಕಾರ್ಯ ಸೇವೆಗಳ ಅರಿವನ್ನು ಸರ್ವರಿಗೂ ಮೂಡಿಸಲು ಮೀಸಲಾದ ದಿನವೆಂದು ಹೇಳಬಹುದು

ಸಮಾಜ ಕಾರ್ಯಕರ್ತರು ವ್ಯಕ್ತಿಗಳು, ಕುಟುಂಬ, ಸಮುದಾಯ ಮತ್ತು ವಿವಿಧ ಸಂಸ್ಥೆಗಳೊಂದಿಗೆ ಅವರ ಅಳಲನ್ನು ನಿವಾರಿಸಲು ಮತ್ತು ಸಾಮರ್ಥ್ಯವನ್ನು ವೃದ್ಧಿಸಲು ಕೆಲಸ ಮಾಡುತ್ತಾರೆ. ಅಷ್ಟೇ ಅಲ್ಲದೆ ಸಾಮಾಜಿಕ ಸೇರ್ಪಡೆ, ಸಮಾನತೆ, ಸುಸ್ಥಿರ ಅಭಿವೃದ್ಧಿ, ಮಾನವ ಹಕ್ಕುಗಳನ್ನು ಉತ್ತೇಜಿಸುವಲ್ಲಿ ಸಮಾಜ ಕಾರ್ಯಕರ್ತರು ಪ್ರಮುಖ ಪಾತ್ರ ವಹಿಸುತ್ತಾರೆ.

ವಿಶ್ವ ಸಮಾಜಕಾರ್ಯ ದಿನವೂ ಇನ್ನೊಬ್ಬರ ಬದುಕಿನಲ್ಲಿ ಬದಲಾವಣೆಯನ್ನು ಮಾಡುವ ಸಮಾಜ ಕಾರ್ಯಕರ್ತನನ್ನು ಸಮಾಜದಲ್ಲಿ ಗುರುತಿಸಿ ಅವರಿಗೆ ಉತ್ತೇಜನ ನೀಡುವ ದಿನವಾಗಿದೆ ಅಂತೆಯೇ ಸಮಾಜ ಸೇವೆಗಳ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ವ್ಯಕ್ತಿಗಳ ಕುಟುಂಬದ ಹಾಗೂ ಸಮುದಾಯಗಳ ಮೇಲೆ ಸಮಾಜ ಕಾರ್ಯದಿಂದ ಆಗುವ ಸಕಾರಾತ್ಮಕ ಪರಿಣಾಮವನ್ನು ಉತ್ತೇಜಿಸುವ ದಿನವಾಗಿದೆ.

ಇಂದಿನ ಯುವ ಸಮಾಜ ಕಾರ್ಯಕರ್ತರಿಗೆ ಪ್ರೇರಕರಾಗಿ ಇರುವಂತಹ ಪ್ರಮುಖ ಚಿಂತಕರನ್ನು ನೋಡೋಣ:

ಮೇಧಾ ಪಾಟ್ಕರ್ ಇವರು ಸಾಮಾಜಿಕ ಕಾರ್ಯಕರ್ತೆ ಹಾಗೂ ಪರಿಸರ ಹೋರಾಟಗಾರ್ತಿ ಎಂದೇ ಪ್ರಸಿದ್ದರು.

ಮದರ್ ತೆರೇಸಾ ಇವರು ಮಾನವೀಯತೆಗೆ ಸಹಾನುಭೂತಿ ಮತ್ತು ನಿಸ್ವಾರ್ಥ ಸೇವೆಗೆ ತಮ್ಮನ್ನು ಮುಡುಪಾಗಿಸಿದವರು.

 ರಾಜಾರಾಮ್ ಮೋಹನ್ ರಾಯ್ ಇವರು ಭಾರತದಲ್ಲಿ ಸಾಮಾಜಿಕ ಸುಧಾರಕರಾಗಿ ಸತಿ ಪದ್ಧತಿಯ ನಿರ್ಮೂಲನೆ ಹಾಗೂ ವಿಧವೆಯರ ಮರುವಿವಾಹಕ್ಕೆ ಉತ್ತೇಜನ ನೀಡಿದವರು.

ಮಹಾತ್ಮ ಗಾಂಧೀಜಿ ಇವರು ತಮ್ಮ ಜೀವನವನ್ನು ದೇಶ ಮತ್ತು ದೇಶದ ಜನರಿಗೆ ಸೇವೆ ಸಲ್ಲಿಸಲು ಮುಡಿಪಾಗಿಟ್ಟವರು ಇವರು ತಮ್ಮ ಮೌಲ್ಯಗಳೊಂದಿಗೆ ಮತ್ತು ತತ್ವಗಳೊಂದಿಗೆ ವಿಶ್ವಾದ್ಯಂತ ಯುವಜನರಿಗೆ ಸ್ಪೂರ್ತಿ ಮತ್ತು ಪ್ರೇರಣೆಯಾಗಿದ್ದಾರೆ.

ಅಣ್ಣ ಹಜಾರೆ ಇವರು ಭ್ರಷ್ಟಾಚಾರ ನಿರ್ಮೂಲನೆಗೆ ಶ್ರಮಿಸಿದವರು. ಸರಕಾರದ ಪಾರದರ್ಶಕತೆಯನ್ನು ಹೆಚ್ಚಿಸಲು  ಚಳುವಳಿಗಳನ್ನು ಮುನ್ನಡೆಸಿದವರು.

ಕೈಲಾಶ್ ಸತ್ಯರ್ತಿ ಇವರು ಭಾರತೀಯ ಸಮಾಜ ಸುಧಾರಕ, ಮಕ್ಕಳ ಹಕ್ಕುಗಳ ಕಾರ್ಯಕರ್ತರು ಎಂದು ಪ್ರಖ್ಯಾತರಾದವರು.

ಸುನೀತಾ ಕೃಷ್ಣನ್ ಇವರು ಮಾನವ ಹಕ್ಕುಗಳ ಕಾರ್ಯಕರ್ತೆ, ಪ್ರಜ್ವಲ ಸಂಸ್ಥೆಯನ್ನು ಹುಟ್ಟು ಹಾಕಿದವರು ಹಾಗೂ ಮಾನವ ಕಳ್ಳ ಸಾಗಾಣಿಕೆ ವಿರುದ್ಧ ಹೋರಾಡಿದವರು.

ಇವರೆಲ್ಲರನ್ನು ಮಾದರಿಯಾಗಿಟ್ಟುಕೊಂಡು ನವ ಸಮಾಜ ಕಾರ್ಯಕರ್ತರು ರೂಪುಗೊಳ್ಳಬೇಕಾಗಿದ್ದು ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿಗಳ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕಾಗಿದೆ, ಪ್ರಸ್ತುತ ಸಮಾಜದಲ್ಲಿ ಪರಿಸರವನ್ನು   ರಕ್ಷಣೆ ಮಾಡುವಲ್ಲಿ ನಾವು ಹೊಸ ಜವಾಬ್ದಾರಿಗಳನ್ನು ನಿರ್ವಹಿಸುತ್ತ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡೋಣ.

ಸಮಾಜ ಕಾರ್ಯವು ಒಂದು ವೃತ್ತಿಪರ ಶಿಕ್ಷಣವಾಗಿದ್ದು ನೀವು ಕೂಡ ಸಮಾಜದಲ್ಲಿ ಸಮಾಜ ಕಾರ್ಯಕರ್ತನೆಂದು ಗುರುತಿಸಿಕೊಳ್ಳಬೇಕಾದರೆ ಬಿ.ಎಸ್.ಡಬ್ಲ್ಯೂ, ಎಂ.ಎಸ್.ಡಬ್ಲ್ಯೂ ಕೋರ್ಸ್ಗೆ ಸೇರಲು ಪ್ರವೇಶಾತಿ ಪಡೆದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿ, ಉತ್ತಮ ಸಮಾಜ ರಚನೆಯಲ್ಲಿ  ನಮ್ಮ ಪಾಲು ನೀಡೋಣ.

 

ಬರಹ : ನ್ಯಾನ್ಸಿ ಲವಿನಾ ಪಿಂಟೊ,

ಸಹಾಯಕ ಪ್ರಾಧ್ಯಾಪಕರು,

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

ಪಿಯು ಆದಮೇಲೆ ವಿವಿಧ ಉದ್ಯೋಗವಕಾಶಗಳ ಪದವಿ ಕೋರ್ಸು BSW

ಪಿಯು ಆದಮೇಲೆ ವಿವಿಧ ಉದ್ಯೋಗವಕಾಶಗಳ ಪದವಿ ಕೋರ್ಸು BSW……….

 

ಮೊನ್ನೆ ಮೊನ್ನೆ ಇನ್ನೂ ದ್ವಿತೀಯ ಪಿಯುಸಿಯ ಫಲಿತಾಂಶ ಪ್ರಕಟವಾಗಿದೆ, ಈಗ ವಿದ್ಯಾರ್ಥಿಗಳಲ್ಲಿ ಮತ್ತು ಅನೇಕ ಪೋಷಕರಲ್ಲಿ ಕಾಡುತ್ತಿರುವ ಪ್ರಶ್ನೆ ಮುಂದೇನು ? ಮುಂದೆ ಯಾವ ಕೋರ್ಸು ಸುಲಭವಾಗಿರುತ್ತದೆ ? ಯಾವುದಕ್ಕೆ ಹೆಚ್ಚಿನ ಉದ್ಯೋಗವಕಾಶವಿದೆ ? ಯಾವುದರಲ್ಲಿ ಹೆಚ್ಚಿಗೆ ಕಲಿಯಬಹುದು ? ಹೀಗೆ ಹಲವಾರು ಪ್ರಶ್ನೆಗಳು ಮೂಡುತ್ತಿವೆ, ದ್ವಿತೀಯ ಪಿಯುಸಿ ಮುಗಿದ ಮೇಲೆ ಹಲವಾರು ದಾರಿಗಳಿವೆ ಅದರಲ್ಲಿ ಒಂದು ದಾರಿಯೇ ಸಮಾಜಕಾರ್ಯ ಶಿಕ್ಷಣ – BSW  (bachelor of social work) ಇದೊಂದು ವಿಪುಲ ಉದ್ಯೋಗವಕಾಶಗಳನ್ನು ಹೊಂದಿರುವ ಔದ್ಯೋಗಿಕ (professional) ಕೋರ್ಸ್ ಆಗಿದ್ದು BSW 3 ವರ್ಷ ಓದಿ ಡಿಗ್ರಿ ಮುಗಿಸಿದ ನಂತರದಲ್ಲಿ MSW ಮಾಸ್ಟರ್ ಡಿಗ್ರಿಯನ್ನೂ ಮಾಡಬಹುದು, ಇದೂ ಮುಗಿದ ನಂತರ Mphil ಅಥವಾ PhD ಸಹ ಮಾಡಬಹುದಾಗಿದೆ.

BSW / MSW ಅನ್ನುವುದು 4  ಗೋಡೆಗಳ ನಡುವೆ ಕಲಿಸುವ ಶಿಕ್ಷಣವಲ್ಲ ಇದರಲ್ಲಿ ವಾರದಲ್ಲಿ 4 ದಿನಗಳ ಕಾಲ ಕ್ಲಾಸ್ ರೂಮ್ ನಲ್ಲಿ ಪಾಠ ಮಾಡಿದರೆ ಇನ್ನುಳಿದ 2 ದಿನಗಳು ವಿದ್ಯಾರ್ಥಿಗಳಿಗೆ field work (ಕ್ಷೇತ್ರಕಾರ್ಯ ಅಧ್ಯಯನದ) ಮೂಲಕ ಕಲಿಸಲಾಗುತ್ತದೆ, ಇದರಿಂದ ಡಿಗ್ರಿ ಮುಗಿಸಿ ಬಂದ ವಿದ್ಯಾರ್ಥಿಗಳಿಗೆ ಹೊರಪ್ರಪಂಚದ ವ್ಯವಹಾರ ಜ್ಞಾನವೂ ಇರುವುದರಿಂದ ಜಗತ್ತಿನ ಯಾವುದೇ ಮೂಲೆಯಲ್ಲಿ ತಮ್ಮನ್ನು ಬಿಟ್ಟರೂ ಬದುಕಬಲ್ಲೆವು ಎಂಬ ಆತ್ಮವಿಶ್ವಾಸ ಮೂಡಿರುತ್ತದೆ, ಮತ್ತು ಈ field work ನಲ್ಲಿ ವಿದ್ಯಾರ್ಥಿಗಳಿಗೆ ಸಾಮಾಜಿಕ ಸಮಸ್ಯೆಗಳಾದ ಮಹಿಳೆಯರ ಮತ್ತು ಮಕ್ಕಳ ಸಾಗಾಟ, ಬಾಲ್ಯ ವಿವಾಹ, ಬಾಲಕಾರ್ಮಿಕ ಮಕ್ಕಳ ಸಮಸ್ಯೆ, ಹೀಗೆ ಹಲವಾರು ಸಮಸ್ಯೆಗಳ ವಿರುದ್ಧ ಹೇಗೆ ಹೋರಾಡಬೇಕು ಎಂಬುದನ್ನು ಪ್ರಯೋಗಾತ್ಮಕವಾಗಿ ಕಲಿಸಿಕೊಡಲಾಗುತ್ತದೆ, ಇದರಿಂದ ವಿದ್ಯಾರ್ಥಿಗಳು ತಮ್ಮನ್ನು, ತಮ್ಮ ಸಮಾಜವನ್ನು, ತಮ್ಮ ದೇಶವನ್ನು ಮುನ್ನಡೆಸಲು  ಸಿದ್ಧರಾಗುತ್ತಾರೆ.

BSW ಅಲ್ಲಿ ವಿದ್ಯಾರ್ಥಿಗಳು ಸಮಾಜಕಾರ್ಯ, ಸಮಾಜಶಾಸ್ತ್ರ, ಮಾನವಶಾಸ್ತ್ರ, ಅರ್ಥಶಾಸ್ತ್ರ, ಮಾನವನ ಅಭಿವೃದ್ಧಿ ಮತ್ತು ಬೆಳವಣಿಗೆ, ರಾಜ್ಯಶಾಸ್ತ್ರ, ಇತಿಹಾಸ, ಸಂಖ್ಯಾಶಾಸ್ತ್ರ, ವಿಜ್ಞಾನ, ಸಮಾಜ ವಿಜ್ಞಾನ, ಪರಿಸರ ವಿಜ್ಞಾನ, ಮಾನವ ಸಂಪನ್ಮೂಲ ನಿರ್ವಹಣೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ,ಭಾರತದ ಸಂವಿಧಾನ, ಜೀವನ ಕೌಶಲ್ಯ, ಸಂವಹನ ಕೌಶಲ್ಯ ಹೀಗೆ ಹತ್ತು ಹಲವು ಕ್ಷೇತ್ರಗಳ, ವಿಷಯಗಳ ಬಗ್ಗೆ ಕಲಿಯಬಹುದು ಇದರಿಂದ ಒಂದೇ ವಿಷಯಕ್ಕೆ ವಿದ್ಯಾರ್ಥಿಗಳು ಸೀಮಿತವಾಗದೆ ಅನೇಕ ವಿಚಾರಗಳನ್ನು ಕಲಿಯಬಹುದು, field work ನ ಮೂಲಕ ಅನೇಕ NGO ಗಳಿಗೆ ಭೇಟಿ ನೀಡಿ ಸಮಾಜದ ಸಮಸ್ಯೆಗಳ ಅಧ್ಯಯನವನ್ನು ಪ್ರಯೋಗಾತ್ಮಕವಾಗಿ ಮಾಡಬಹುದು ಮತ್ತು ಇಲ್ಲಿ ಬಹುಮುಖ್ಯವಾಗಿ ಹತ್ತಾರು ಜನರಿಂದ ಹಿಡಿದು ನೂರಾರು ಜನರ ಮುಂದೆ ಮಾತನಾಡಲು ನಮ್ಮ stage fear ಅನ್ನು ಹೋಗಲಾಡಿಸಲು ಅನೇಕ ಅವಕಾಶಗಳು ದೊರೆಯುತ್ತವೆ, ಮತ್ತು ನಾವೇ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದನ್ನು ಕಲಿಯಬಹುದಾಗಿದೆ, BSW ಅಲ್ಲಿ ಭಾಷಾ ವಿಷಯಗಳು ಮತ್ತು ಎಲ್ಲಾ ಕೋರ್ಸ್ ಗಳಿಗೂ ಅನ್ವಯವಾಗುವ ಕಡ್ಡಾಯ ವಿಷಯವನ್ನು ಬಿಟ್ಟು 2 ವಿಷಯಗಳು ಮಾತ್ರ ಲಿಖಿತ ರೂಪದ ಪರೀಕ್ಷೆ (written exam) ಮತ್ತು ಒಂದು ವಿಷಯ ಮಾತ್ರ ಮೌಖಿಕ ರೂಪದ ಪರೀಕ್ಷೆ (oral exam) ಬರೆಯಬೇಕಾಗುತ್ತದೆ, ಇದರಿಂದ ಓದಲು ಸಹ ಕಷ್ಟವೆನಿಸುವುದಿಲ್ಲ.

BSW / MSW ಓದಿದ ಮೇಲೆ ಖಾಸಗಿ ವಲಯ, ಸರ್ಕಾರಿ ವಲಯ, ಸರ್ಕಾರೇತರ ವಲಯ, ಆರೋಗ್ಯ ಮತ್ತು ಮನೋರೋಗದ ವಲಯ, ತಿದ್ದುಪಡಿ ವಲಯ, ಆಪ್ತಸಮಾಲೋಚನಾ ವಲಯ, ಯುವಕರ ಅಭಿವೃದ್ಧಿ ವಲಯ, ಸಮುದಾಯ ಅಭಿವೃದ್ಧಿ ವಲಯ, ಹಿಂದುಳಿದ ಮತ್ತು ದುರ್ಬಲ ವರ್ಗಗಳ ಅಭಿವೃದ್ಧಿ ವಲಯ, ಕುಟುಂಬ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಲಯ, ಸಮಾಜ ಕಲ್ಯಾಣದ ವಲಯ, ಉದ್ಯಮ ವಲಯ, ಶಾಲಾ-ಕಾಲೇಜು- ವಿಶ್ವವಿದ್ಯಾಲಯದ ಬೋಧನಾ ವಲಯ, ಸ್ವಯಂ ಉದ್ಯೋಗ ವಲಯ, ಪತ್ರಿಕೋದ್ಯಮ ವಲಯ ಹೀಗೆ ನೂರಾರು ವಲಯಗಳಲ್ಲಿ ಉದ್ಯೋಗಗಳು ಸಿಗುವುದು ಖಚಿತವಾಗಿರುತ್ತದೆ.

ದ್ವಿತೀಯ ಪಿಯುಸಿಯಲ್ಲಿ ಕಾಮರ್ಸ್, ಸೈನ್ಸ್, ಆರ್ಟ್ಸ್, ತೆಗೆದುಕೊಂಡ , ಐಟಿಐ, ಡಿಪ್ಲೋಮಾ ಮಾಡಿದ ಯಾವುದೇ ವಿದ್ಯಾರ್ಥಿಗಳು ಈ BSW ಕೋರ್ಸನ್ನು ಓದಬಹುದು, ಶಿವಮೊಗ್ಗದ ವಿದ್ಯಾರ್ಥಿಗಳಿಗಾಗಿ ದುರ್ಗಿಗುಡಿಯ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ವಿದ್ಯಾನಗರದ ಸಹ್ಯಾದ್ರಿ ಕಾಲೇಜು, NR ಪುರ, ಅಜ್ಜಂಪುರ, ಶಿಕಾರಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಈ BSW ಕೋರ್ಸ್ ಲಭ್ಯವಿದೆ ಮತ್ತು ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದಲ್ಲಿ MSW ಕೋರ್ಸ್ ಲಭ್ಯವಿದೆ, ಶಿವಮೊಗ್ಗದ ವಿದ್ಯಾರ್ಥಿಗಳು BSW ಕೋರ್ಸ್ ನ ಸದುಪಯೋಗ ಪಡೆದುಕೊಳ್ಳಿರಿ ಮತ್ತು ಸಮಾಜವನ್ನು ಕಟ್ಟುವ, ಮುನ್ನಡೆಸುವ ಸಮಾಜ ಕಾರ್ಯಕರ್ತರಾಗಿ.

 (ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳಲ್ಲೂ ಮತ್ತು ಅನೇಕ ಕಾಲೇಜುಗಳಲ್ಲೂ ಈ ಕೋರ್ಸ್ ಲಭ್ಯವಿದೆ)

ನಾಗೇಂದ್ರ,

ಪ್ರಥಮ ವರ್ಷದ BSW ವಿದ್ಯಾರ್ಥಿ,

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು,ಶಿವಮೊಗ್ಗ,