ಮೊದಲ ದಿನ ನೀನಾಸಮ್ ಗೆ ಕಾಲಿಟ್ಟ ತಕ್ಷಣ ಮಳೆಯ ಹನಿಗಳ ಸ್ವಾಗತ ಕಂಡರಿಯದ ಸ್ವರ್ಗಕೇ ದಾರಿ ತೋರುವಂತಿತ್ತು….ಸುತ್ತಲು ಸಂಗೀತ ಮತ್ತು ನಾಟಕಗಳ ತಯಾರಿ ಕಣ್ಣ ಮಿನುಗಿಸಿ ನೋಡುವಂತೆ ಮಾಡಿತು…
ಮೊದಲ ದಿನದ ಮೊದಲನೇ ಪರಿಚಯ ಗೋಷ್ಠಿಯ ಪ್ರಾರಂಭದ “ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ” ಹಾಡೇ ಎಲ್ಲರ ಕರ್ಣಗಳ ಅರಳಿಸಿತು ಈ ಗೋಷ್ಠಿಯು ಅದ್ಭುತದ ಜೊತೆಗೆ ಆಶ್ಚರ್ಯವನ್ನು ನೀಡಿತ್ತು.. ಏಕೆಂದರೆ ಹೆಸರಾಂತ ಬರಹಗಾರರು, ವಿಮರ್ಶಕರು, ಡಾಕ್ಟರು, ಶಿಕ್ಷಕರು ,ನಿರ್ದೇಶಕರು ಹಾಗೂ ಕಲಾವಿದರು ಇನ್ನೂ ಅನೇಕ ವಿದ್ಯಾವಂತರು , ಜ್ಞಾನಿಗಳು ಕೂಡ ಈ ಶಿಬಿರದಲ್ಲಿದ್ದರು..ನಾವು ಮಾತ್ರ ಏನು ಅರಿಯದ ಡಿಗ್ರಿ ಎಂಬ ಬಲೆಗೆ ಸಿಲುಕಿ ಲೋಕಜ್ಞಾನದ ಸಣ್ಣ ಪರಿಚಯವಿಟ್ಟುಕೊಂಡು ಅಲ್ಲಿಗೆ ಹೋದವರು..
ದಶಾನನ ಸ್ವಪ್ನಸಿದ್ಧಿ ಕಿರುನಾಟಕ ಅಂತೂ ಪದಗಳಲಿ ವರ್ಣಿಸಲಾಗದ ಅನುಭವ, ಒಬ್ಬಳೇ ಹುಡುಗಿ ೫-೬ ಪಾತ್ರಗಳನ್ನು ಅಷ್ಟು ಕಡಿಮೆ ಸಮಯದಲ್ಲಿ ನಿಭಾಯಿಸಿದ್ದು ನಿಜಕ್ಕೂ ಅಚ್ಛರಿಯ ವಿಷಯ !!ಹೀಗೆ ಒಂದೊಂದು ಗೋಷ್ಠಿಗಳು ಒಂದೊಂದು ಲೋಕಕೇ ಕರೆದೊಯ್ಯುವ ದಾರಿಯಂತಿದ್ದವು. ನನ್ನ ಗುರುಗಳಾದ ಡಾ.ರಾಜೇಂದ್ರ ಚೆನ್ನಿ ಸರ್ ಅವರ ಗೋಷ್ಠಿಯಂತು ಮೂಡನಂಬಿಕೆಗಳ ಮೇಲೆ ಹೆಣ್ಣಿನ ಧನಿಯ ತೆರೆಯಲಾರದ ಪರದೆ ಸರಿಸಿದಂತಿತ್ತು. ನನ್ನ ಆತ್ಮಿಯರೇ ಆದ ತೇಜಶ್ರೀ ಮೇಡಂ ನಿಖರವಾದ ಮಾತುಗಳು ಪದ್ಯದ ಪೂರ್ಣ ಅರ್ಥವನ್ನು ನೀಡಿತು.
ಮಾಲತಿ-ಮಾಧವ ನಾಟಕ ಹಿಂದಿನ ಸಮಾಜದ ದೃಷ್ಟಿಕೋನದ ಜೊತೆಗೆ ಪ್ರೀತಿಯ ಬಲೆಯಲ್ಲಿ ಬಿದ್ದ ಇಬ್ಬರು ಪ್ರೇಮಿಗಳ ಲಜ್ಜೆಯ ಭಾವವಂತೂ ರಮಣೀಯ!!! ಪ್ರೀತಿಯನ್ನು ಪಡೆದುಕೊಳ್ಳಲು ಅವರು ಮಾಡಿದ ಸಾಹಸಗಳು ವಿಕ್ಷಕರನ್ನು ಅತ್ಯುನ್ನತ ಭಾವನೆಗೆ ಕರೆದೊಯ್ಯುತ್ತಿದ್ದವು..
ಮರುದಿನದ ಮುಂಜಾವು ನನ್ನನಾ ಅರಿಯುವ ತವಕ ಸೃಷ್ಟಿಸಿದಂತಿತ್ತು..ಆ ಮಂಜಿನ ಮುಸುಕಿನಲ್ಲಿ ಅರಳಿದ ಹೂಗಳು ನನ್ನ ಜೊತೆ ಸಂಭಾಷಣೆಗಿಳಿದಿದ್ದ ಭಾವ ಅದು…
ಗೋಷ್ಠಿಗಳ ಮೇಲೆ ಗೋಷ್ಠಿಗಳು ಲೋಕದ ಎಲ್ಲ ದೃಷ್ಟಿಕೋನಗಳನ್ನು ಕಣ್ಮುಂದೆ ತರುತ್ತಿದ್ದವು.. ಪ್ರಕೃತಿಗೆ ಸಹವೋ ವಿರುದ್ಧವೋ ಎಂಬ ಸಂದೇಹ ಹೊಂದಿರುವ ಒಂದೇ ಲಿಂಗಗಳ ಸಂಬಂಧದ ಕುರಿತು ಹೇಳುವ ಬಿ-ಲವೆಡ್ ನಾಟಕ ಸಮಾಜವೇ ಎಲ್ಲ ಸಂಬಂಧಗಳಿಗೂ ವೈರಿ ಎಂಬಂತೆ ಪ್ರಸ್ತುತ ಪಡಿಸಿತ್ತು.
ಅಂಕದ ಪರದೆ ಈ ನಾಟಕ ವೃದ್ಧರ ಕುರಿತಾಗಿದ್ದು ಅವರ ಮನಸ್ಸಿನ ತಲ್ಲಣಗಳು , ಮಕ್ಕಳ ನಿರಾಕರಣೆ ಪೋಷಕರ ಮೇಲೆ ಬೀರುವ ಪರಿಣಾಮ ಎಂತದ್ದು ಹಾಗೂ ನೋವಿನಲ್ಲೂ ಸದಾ ನಗುವ ಆ ಮುಗ್ಧ ಹೃದಯಗಳನ್ನು ಅವರ ಕೊನೆಯುಸಿರಿರೊವರೆಗೂ ನಮ್ಮ ಜೊತೆಯೇ ನೋಡಿಕೊಳ್ಳಬೇಕು ಎಂಬ ಮಹತ್ವಾಕಾಂಕ್ಷೆಯನ್ನು ಹೇಳುತಿರಲು ಕುಳಿತ ಪ್ರತಿಯೊಬ್ಬರ ಮನ ಪರಿವರ್ತಿಸಿತು…
ಟೆರ್ರಾಕೂಟಾಯಿಂದ ಹೊಳೆಯುತಿರುವ ನೀನಾಸಮ್ ಅನ್ನು ನೋಡುವುದೇ ಒಂದು ಖುಷಿ ,ದಿನಗಳು ಹೇಗೆ ಕಳೆಯುತ್ತಿವೆ ಎಂಬುವುದೇ ತಿಳಿಯುತ್ತಿರಲಿಲ್ಲ..
ಹಬ್ಬದ ಹನ್ನೆರಡನೇ ರಾತ್ರಿ ನಾಟಕ ಗಂಟೆಗಳಕಾಲ ಶೇಕ್ಸ್‌ಪಿಯರ್ ನ ಕಾಲಕ್ಕೆ ಕರೆದ್ಯೊದಿತ್ತು. ವೀಶೆಷವೆಂದರೆ ಈ ನಾಟಕದಲ್ಲಿ ನಟಿಸಿದ ಎಲ್ಲರೂ ಕಲಾವಿದರು ನೀನಾಸಮ್ ನ ಹವ್ಯಾಸಿ ರಂಗಭೂಮಿ ಕಲಾವಿದರು ಹಾಗೂ ಗ್ರಾಮಸ್ಥರೇ ಆಗಿದ್ದರು ….
ಟೀ ಬ್ರೇಕ್ ಗಳಿಗಾಗಿ ಕಾಯುತ್ತಿದ್ದ ನಮಗೆ ಸರಳ- ಸಜ್ಜನಿಕೆ ಜ್ಞಾನಿಗಳನ್ನು ಮಾತನಾಡಿಸಬೇಕೆಂಬ ಸಣ್ಣ ಹಂಬಲದಿಂದ ಭಯದ ಬಟ್ಟೆ ತೊಟ್ಟು ಧೈರ್ಯದ ಚಿಟ್ಟೆ ಹಿಡಿದು ಹೋಗಿ ಒಂದೆರಡು ಮಾತನಾಡಿ ಬಂದದ್ದು ಪದಪುಂಜಗಳಲ್ಲಿ ವರ್ಣಿಸಲಾಗದ ಸಂತಸ..
ಜೊತೆಗಿರುವನು ಚಂದಿರ ಜಯಂತ ಕಾಯ್ಕಿನಿ ಅವರು ಅನುವಾದ ಮಾಡಿದ ಈ ಅತ್ಯದ್ಬುತ ನಾಟಕ ಹುಲಗಪ್ಪ ಕಟ್ಟಿಮನಿ ಅವರ ಸಂಕಲ್ಪ ರಂಗ ತಂಡ ಮತ್ತು ಮಂಗಳಾ ಮೇಡಂ ನಿರ್ದೇಶನದಲ್ಲಿ ಮೂಡಿಬಂದ ಈ ಪ್ರದರ್ಶನ ಬಡತನದ ಬೇಗೆಯಲ್ಲೇ ಹುಟ್ಟಿ ಬೆಳೆದ ನನಗೆ ವೈಯಕ್ತಿಕವಾಗಿ ಈ ನಾಟಕ ಗಾಢವಾದ ಅನುಭವನ್ನೇ ನೀಡಿದೆ.
ದಿನವಿಡೀ ದುಡಿದು ದನಿದು ಮನೆಗೆ ಬಂದ ತಂದೆ, ತನ್ನ ಎತ್ತರಕ್ಕೆ ಬೆಳೆದ ಹೆಣ್ಣು ಮಕ್ಕಳ ಮೊಗದ ನಗು ನೋಡಿ ತನ್ನೆಲ್ಲ ದನಿವ ಮರೆಯುತ್ತಾನೆಂದರೇ ಈ ವಾತ್ಸಲ್ಯಕೇ ನಿಲುಕುವ ಬೇರೊಂದು ಅಂಶ ಸಿಗಲು ಸಾಧ್ಯವೇ ಜಗದಲಿ…
ತಮ್ಮ ಮೂರು ಹೆಣ್ಣು ಮಕ್ಕಳ ಮದುವೆ ಎಂಬ ಜವಾಬ್ದಾರಿಗಾಗಿ ಜೀವನವಿಡಿ ಶ್ರಮಿಸುವ ತಂದೆ-ತಾಯಿಗೆ ಎದುರಾಗುವ ಸಮಸ್ಯೆಗಳು ಸಾವಿರದಷ್ಟು..ಪ್ರೀತಿ ಎಂಬ ಹೆಸರು ಕೂಡ ಕೇಳಲು ಇಷ್ಟ ಪಡದ ಬಡ ಮುಸ್ಲಿಂ ಕುಟುಂಬವೊಂದು ತಮ್ಮ ಮೂರು ಹೆಣ್ಣು ಮಕ್ಕಳು ಅವರವರ ಮನಸ್ಸಿಚ್ಛೆಯಂತೆ ಮದುವೆಯಾದಾಗ ಆ ತಂದೆ-ತಾಯಿಗಳ ಮನಸ್ಸಿಗಾದ ಆಘಾತ ಹೇಳತೀರದು. ಆದರೂ ಕೊನೆಗೆ ತನ್ನ ಮಕ್ಕಳು ಅಪ್ಪಾ ಎಂದು ಕೂಗಿದಾಗ ಮನಸ್ಸಿನಲ್ಲಿದ್ದ ಎಲ್ಲ ಕೋಪ ತಣ್ಣಗಾಗಿ ಅಪ್ಪಿ- ಮುದ್ದಾಡುವ ಕ್ಷಣವಂತೂ ಬಯಕೆಗೂ ಮೀರಿದ ಭಾವಗೀತೆಯಂತಿತ್ತು!!! ಮುಂದೊಂದು ದಿನ ಧರ್ಮವೆಂಬ ಹೆಸರಿನಿಂದ ದಶಕಗಳ ಕಾಲ ಗಂಡ-ಮಕ್ಕಳ ಜೊತೆ ಬದುಕಿದ ಮನೆಯನ್ನ ಬಿಟ್ಟು ಹೋಗಬೇಕಾದರೇ ಆ ತಾಯಿಗೆ ಅದೇಷ್ಟು ಸಂಕಟವಾಗಿರಬೇಕು. ತಾಯಂದಿರಿಗೆ ತಮ್ಮ ಮನೆಯ ಮೇಲಿನ ಒಲವು ಎಷ್ಟಿರುತ್ತದೆಂದರೆ ಮನೆ ಬಿಟ್ಟು ಹೋಗುವ ಕೊನೆ ಕ್ಷಣದಲ್ಲೂ ಕೂಡ ಮನೆಯನ್ನು ಸ್ವಚ್ಛವಾಗಿ ಗುಡಿಸಿ ,ಕಿಟಕಿ ಬಾಗಿಲುಗಳನ್ನು ಸ್ಪರ್ಶಿಸಿ ಹೋರಡಬೇಕಾದರೇ ನಮಗೇ ತಿಳಿಯದೇ ನಮ್ಮನ್ನು ಅದು ಬೇರೆಯೇ ಲೋಕಕೇ ಕರೆದ್ಯೊದು ಪ್ರತಿ ಕ್ಷಣವನ್ನು ಎಂದಿಗೂ ಕಣ್ಣಿಗೆ ಕಟ್ಟುವಂತೆ ಮಾಡಿದೆ. ಆ ಬಡ ಕುಟುಂಬದ ವಾತ್ಸಲ್ಯ ಹೆಣ್ಣು ಮಕ್ಕಳ ಮದುವೆ ಎಂಬುವುದು ಬಡ ತಂದೆ-ತಾಯಿಗೆ ನೀಡುವ ಅಪಾರ ನೋವಿನ ಸರಮಾಲೆಯನ್ನು ನಿಮಿಷಗಳಲ್ಲೇ ತೋರಿಸಿ ಎಲ್ಲ ವೀಕ್ಷಕರ ಕಂಬನಿಗೆ ಪಾರವೇ ಇರದಂತೆ ಮಾಡಿದರು.
ನಾಟ್ಯ ಮಯೂರಿಯಾಗಿ ನರ್ತಿಸಿ ಪ್ರತಿಯೊಬ್ಬರ ಕಣ್ಣಂಚಲ್ಲಿ ನೀರೂರುವಂತೆ ಮಾಡಿದವರು ಅನುಪಮಾ ರಾಜೇಂದ್ರ ಅವರು!.. ದ್ರೌಪದಿ ವಸ್ತ್ರಾಪಹರಣದ ಒಂದು ಘೋರ ಘಟನೆಯನ್ನು ಮತ್ತೆ ನಮ್ಮುಂದೆ ಇಟ್ಟು ಅವರು ನರ್ತಿಸುವಾಗ ಪ್ರತೀ ಪ್ರೇಕ್ಷಕರೂ ಕೂಡ ಅಸಹಾಯಕ ಹಾಗೂ ದುಃಖಿತರಾಗಿದ್ದನ್ನು ನಾನು ಗಮನಿಸಿದ್ದೇನೆ.. ಅಬ್ಬಾ ಒಂದೊಮ್ಮೆ ಪಾಂಚಾಲಿಯೇ ಬಂದು ತನ್ನ ಸೆರಗೊಡ್ಡಿ ಕಾಪಾಡಿ ಎಂದು ಕೇಳಿದ ಹಾಗೆ ಮೈ ನವಿರೇಳಿಸಿದ ಕ್ಷಣವದು. ನಾಟ್ಯ ಶಾರದೆ ನಮಗಾಗಿ ಇಳಿದುಬಂದು ಹಳದಿ ಸೀರೆಯುಟ್ಟು ನಗುತ್ತಾ ನರ್ತಿಸುವಂತಿತ್ತು ಆ ಅಮೋಘ ದೃಶ್ಯ.. ಇಷ್ಟೇ ಅಲ್ಲದೆ ಅವರಲ್ಲಿದ್ದ ಆ ವಿನಯತೆಯೇ ಆವರ ಈ ಎಲ್ಲ ಸಾಧನೆಗಳ ಮೂಲವೆನಿಸುತ್ತದೆ, ಯಾವ ಪದಗಳಲ್ಲಿ ವರ್ಣಿಸಲಿ ಆ ನಯನ ಮನೋಹರ ದೃಶ್ಯವನ್ನ!?..
ಹೀಗೆ ಹೊಸ-ಹೊಸ ಅನುಭಗಳ ಸುರಿಮಳೆಯ ಸುರಿಸಿದ ಐದು ದಿನಗಳ ಕಲೆಗಳ ಸಂಗಡ ಮಾತುಕತೆ ಶಿಬಿರ ಸಾಹಿತ್ಯದ ಹುಚ್ಚಿರುವ ನನಗೆ ಇನ್ನಷ್ಟು ಕಿಚ್ಚೆರುವಂತೆ ಮಾಡಿದೆ..
ನಮ್ಮ ನಾಗರಾಜ ಸರ್ ಕೂಡ ಎಲ್ಲರನ್ನು ಮಾತಾಡ್ಸಿ ಪರಿಚಯ ಮಾಡ್ಕೊಳ್ಳಿ , ನೀವು ಹೀಗೆ ನೂರಾರು ಶಿಬಿರಗಳಲ್ಲಿ ಭಾಗವಹಿಸಬೇಕು ಭಯ ಬಿಡಿ ಆರಾಮಾಗಿ ಎಲ್ಲರ ಜೊತೆ ಬೇರೆಯಿರಿ ಎಂದೂ ಕ್ಷಣ-ಕ್ಷಣಕ್ಕೂ ಧೈರ್ಯ ತುಂಬುತಿದ್ದರು . ಅವರ ಈ ಮಾತುಗಳಿಂದಲೇ ಭಯವಿದ್ದರೂ ತೋರದಂತೆ ಜಯಂತ ಕಾಯ್ಕಿನಿ ಸರ್ ಅವರನ್ನು ಮಾತನಾಡಿಸಲು ಹೋಗಿ ಅವರ ಆಟೋಗ್ರಾಫ್ ತಗೊಂಡು,ಅವರು ನಗೆ ಬೀರುತ ಹೇಳಿದ ಮಾತು “ಶಿಬಿರದ ಕೊನೆಯಾದರೇನು ನಿನ್ನ ಜೀವನದ ಹೊಸದೊಂದು ದಾರಿ ಇಂದಿನಿಂದಲೇ ಪ್ರಾರಂಭವಾಗಲಿ” ನಾನು ಇದನ್ನೆ ಇಚ್ಛಿಸುವೆ..
ಇಂತಹ ಮಹೋನ್ನತ ಕಾರ್ಯವನ್ನು ಪ್ರತಿವರ್ಷವೂ ನಡೆಸಿಕೊಂಡು ಬರುತ್ತಿರುವ ಅಗಾಧ ಜ್ಞಾನ ಹೊಂದಿದ ಮಗು ಮನಸ್ಸಿನ ಕೆ.ವಿ. ಸುಬ್ಬಣ್ಣ ಅವರ ಮಗ ಅಕ್ಷರ ಸರ್ ಅವರಿಗೂ ಹಾಗೂ ಶಿಬಿರವನ್ನು ತಮ್ಮ ಮನೆಯ ಕಾರ್ಯಕ್ರಮದಂತೆ ನಡೆಸಿ ನಮ್ಮೆಲ್ಲರನ್ನು ಪ್ರೀತಿಯಿಂದ ನೋಡಿಕೊಂಡ ಮಾಧವ ಚಿಪ್ಪಳ್ಳಿ ಸರ್ ಅವರಿಗೆ ಮತ್ತು ನಮ್ಮಂತಹ ವಿದ್ಯಾರ್ಥಿಗಳಿಗೆ ಕಲೆ, ಸಾಹಿತ್ಯದ ಜೊತೆಗೆ ಲೋಕಜ್ಞಾನವನ್ನು ನೀಡುತ್ತಿರುವ ನೀನಾಸಮ್ ಗೆ ನಾನೆಂದಿಗೂ ಋಣಿ..!!!
ನನ್ನ ಜೀವನದ ಹೊಸ ದಾರಿಗೆ ಬೆಳಕಾಗಿರುವ ಡಾ.ಎಚ್.ಎಸ್.ಅನುಪಮಾ ಮೇಡಂಗೆ, ಅನೀರಿಕ್ಷಿತವಾಗಿ ದೊರೆತ ಈ ಅಮೋಘ ಅವಕಾಶವನ್ನು ನೀಡಿದ ಹಾಗೂ ವಿದ್ಯಾರ್ಥಿಗಳ ಏಳಿಗೆಗಾಗಿಯೇ ಶ್ರಮಿಸುವ ನಮ್ಮ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿ ಮೇಡಂಗೆ , ತನ್ನ ಅವಕಾಶವನ್ನು ನನಗಾಗಿ ಬಿಟ್ಟುಕೊಟ್ಟ ಪ್ರೀತಿಯ ಸ್ನೇಹಿತೆ ಸ್ಪೂರ್ತಿಗೂ ಹಾಗೂ ಶಿಬಿರದ ಬಗ್ಗೆ ಕೊಂಚ ಭಯವಿದ್ದಾಗ ಪ್ರೊತ್ಸಾಹ ನೀಡಿ ಕಳಿಸಿದ ನನ್ನ ರೇಷ್ಮಾ ಮೇಡಂ ಇವರೆಲ್ಲರಿಗೂ ನನ್ನ ಮನ ಪೂರ್ವಕ ಧನ್ಯವಾದಗಳು….
ಸಂಗೀತಾ ಆರ್. ಬುದ್ನಿ
ಎರಡನೇ ವರ್ಷದ ಬಿ.ಎ ವಿದ್ಯಾರ್ಥಿನಿ
ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ
Comment (1)
Sandhya| October 18, 2024
ಚಂದದ ಬರಹ