ಸಾಹಿತ್ಯದ ಓದು ಮತ್ತು ಚರ್ಚೆ ಮಾನವ ತನ್ನನ್ನು ಹಾಗೂ ತನ್ನ ಸಮಾಜವನ್ನು ಆತ್ಮಾವಲೋಕನಕ್ಕೊಳಪಡಿಸಲು ಸಹಾಯಮಾಡುತ್ತದೆ. ಈ ನಿಟ್ಟಿನಲ್ಲಿ ಶಿವಮೊಗ್ಗದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಆಯೋಜಿಸಿದ್ದ “ವಿಶ್ವ ಸಾಹಿತ್ಯದ ಪರಿಚಯ” ಎಂಬ ವಿಷಯದ ಮೇಲಿನ ಕಾರ್ಯಾಗಾರ ನಮ್ಮ ಸಮಾಜವನ್ನು ಮತ್ತಷ್ಟು ಅರಿತುಕೊಳ್ಳಲು ಸಹಾಯ ಮಾಡಿತು. ಈ ಕಾರ್ಯಗಾರದಲ್ಲಿ ಪಾಲ್ಗೊಂಡ ಸಂಪನ್ಮೂಲ ವ್ಯಕ್ತಿಗಳು ಜಗತ್ತಿನ ಶ್ರೇಷ್ಠ ಬರಹಗಾರರು ಹಾಗೂ ಕೃತಿಗಳನ್ನು ಪರಿಚಯ ಮಾಡುವ ಮೂಲಕ ನಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸಿದರು.
ಕನ್ನಡದ ಪ್ರಮುಖ ಬರಹಗಾರರಲ್ಲಿ ಒಬ್ಬರಾದ ಶ್ರೀ ಸೋಮನಹಳ್ಳಿ ದಿವಾಕರ್ ರವರು ಪಾಕಿಸ್ತಾನದ ಪ್ರಖ್ಯಾತ ಲೇಖಕ ಸಾಧತ್ ಹಸನ್ ಮಂಟೋರವರ ಜೀವನ ಹಾಗೂ ಕೃತಿಗಳ ಬಗ್ಗೆ ಬೆಳಕು ಚೆಲ್ಲುತ್ತಾ, ಮಂಟೋರವರ “ಕೋಲ್ ದೋ” ಹಾಗೂ “ಟೋಬಾ ಟೇಕ್ ಸಿಂಗ್” ಕೃತಿಗಳಲ್ಲಿ ಭಾರತ ಪಾಕಿಸ್ತಾನ ವಿಭಜನೆಯ ಸಂದರ್ಭದ ಮಕ್ಕಳು, ಮಹಿಳೆಯರು ಹಾಗೂ ಅನ್ಯಕೋಮಿನವರ ಮೇಲಾದ ದೌರ್ಜನ್ಯದ ವಿವರಣೆಯಂತೂ ಅವರು ವಿವರಿಸುವಾಗ ನಮ್ಮನ್ನು ದಿಗ್ಬ್ರಮೆಗೊಳಿಸಿತು. ಇನ್ನು ದಿವಾಕರ್ ಸರ್ ಅವರು ಪೋಲ್ಯಾಂಡಿನ ಲೇಖಕ ಹಾಗೂ ಪತ್ರಕರ್ತ ಟಡಾಯಿಸ್ ಬೋರೋಸ್ಕಿ ಅವರ “ದಿಸ್ ವೇ ಫಾರ್ ಗ್ಯಾಸ್ ಲೇಡೀಸ್ ಅಂಡ್ ಜೆಂಟಲ್ ಮೆನ್” ಕೃತಿಯನ್ನು ಪರಿಚಯಿಸುತ್ತಾ ಜರ್ಮನಿಯಲ್ಲಿ ಹಿಟ್ಲರ್ ನ ಕಾಲದಲ್ಲಿ ಯಹೂದ್ಯರ ಮೇಲಾದ ಆಕ್ರಮಣದ (ಹಾಲೋ ಕಾಸ್ಟ್) ವಿವರಣೆ ನಮ್ಮನ್ನು ಮೂಕ ವಿಸ್ಮಿತರನ್ನಾಗಿಸಿತು.
ಮತ್ತೊಬ್ಬ ಖ್ಯಾತ ಲೇಖಕ ಹಾಗೂ ಅನುವಾದಕರಾದ ಡಾ.ಮಾಧವ ಚಿಪ್ಪಲ್ಲಿ ಅವರು ರಷ್ಯಾದ ರಾಜಪ್ರಭುತ್ವ ಮತ್ತು ಸಮಾಜದ ವಿವರಣೆಯನ್ನು ನೀಡುತ್ತಾ, ರಾಜಮನೆತನಕ್ಕೆ ಸೇರಿದ್ದರೂ ದಿವಾಳಿತನವನ್ನು ಅನುಭವಿಸಿ ನಂತರ ತನ್ನ ಬರಹಗಳ ಮೂಲಕ ಬಡತನವನ್ನು ಗೆದ್ದ ರಷ್ಯಾದ ಖ್ಯಾತ ಲೇಖಕ ಲಿಯೋ ಟಾಲ್ ಸ್ಟಾಯ್ ಜೀವನವನ್ನು ಪರಿಚಯಿಸಿದರು. ಟಾಲ್ ಸ್ಟಾಯ್ ಅವರ ಗಮನಾರ್ಹ ಕೃತಿಗಳಾದ “ವಾರ್ ಅಂಡ್ ಪೀಸ್”, “ಹೌ ಮಚ್ ಲ್ಯಾಂಡ್ ಡಸ್ ಎ ಮ್ಯಾನ್ ನೀಡ್” ಬಗೆಗಿನ ವಿವರಣೆ ರಾಜ್ಯಾಡಳಿತದ ಬಗ್ಗೆ ವಿಭಿನ್ನ ದೃಷ್ಟಿಕೋನವನ್ನು ಒದಗಿಸಿತು.
ಸ್ತ್ರೀವಾದಿ ಲೇಖಕಿ ಶ್ರೀಮತಿ ಜಯಶ್ರೀ ಕಾಸರವಳ್ಳಿ ಅವರು ಜೆಂಡರ್ ಸ್ಟಡೀಸ್ ಅಧ್ಯಯನ ಮಾಡುವ ವಿಧಾನವನ್ನು ವಿವರಿಸುತ್ತಾ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಹೇಗೆ ದಬ್ಬಾಳಿಕೆಯ ಸಾಧನವಾಗಿದ್ದಾಳೆ ಎಂಬುದನ್ನು ಜಾನ್ ಹೂಸ್ಟನ್ ಅವರ “ರಿಫ್ಲೆಕ್ಷನ್ ಇನ್ ಎ ಗೋಲ್ಡನ್ ಐ” ಮತ್ತು ತೆಹೆಮಿನ ದುರೈನಿ ಅವರ “ಮೈ ಫ್ಯೂಡಲ್ ಲಾರ್ಡ್” ಕೃತಿಗಳ ಮೂಲಕ ವಿವರಿಸಿದರು.
ಶಿವಮೊಗ್ಗದ ಲೇಖಕ, ವಿಮರ್ಶಕ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರೊಫೆಸರ್ ಟಿ.ಪಿ.ಅಶೋಕ್ ಯುರೋಪಿನ ಹೆಸರಾಂತ ಬರಹಗಾರರಾದ ಫ್ರಾನ್ಸ್ ಕಾಫ್ಕ ಹಾಗೂ ಆಲ್ಬರ್ಟ್ ಕಮು ಅವರ “ದ ಟ್ರಯಲ್”, “ದ ಕ್ಯಾಸೆಲ್”, “ದಿ ಮೆಟಾಮಾರ್ಫಸಿಸ್” ಹಾಗೂ “ದಿ ಕಲಿಗುಲಾ” ಕೃತಿಗಳನ್ನು ವಿವರಿಸುತ್ತಾ ಸಾಹಿತ್ಯದ ವಿದ್ಯಾರ್ಥಿಗಳಿಗೆ ಸಾಹಿತ್ಯ ಜಗತ್ತಿನ ಆಳ ಅಗಲವನ್ನು ಅರಿಯಲು ಕನಿಷ್ಠ ಎರಡು ಭಾಷೆಗಳ ಸಾಹಿತ್ಯ ಪರಿಚಯ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು. ಕನ್ನಡದ ಮತೋರ್ವ ವಿಮರ್ಶಕ, ಲೇಖಕ ಡಾ.ರಾಜೇಂದ್ರ ಚೆನ್ನಿ ಅವರು ಪ್ರಸ್ತುತ ಸನ್ನಿವೇಶದಲ್ಲಿ ಸಾಹಿತ್ಯ ಮತ್ತು ಅದರ ಪ್ರಾಮುಖ್ಯತೆಯ ಸಂಕ್ಷಿಪ್ತ ದೃಷ್ಟಿಕೋನವನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಒಟ್ಟಿನಲ್ಲಿ ವಿಶ್ವ ಸಾಹಿತ್ಯದ ಪರಿಚಯ ಕಾರ್ಯಗಾರವನ್ನು ಬೇರೆ ಬೇರೆ ಕಾಲೇಜುಗಳ ಸಾಹಿತ್ಯದ ವಿದ್ಯಾರ್ಥಿಗಳನ್ನು ಸಹ ಒಳಗೂಡಿಸಿಕೊಂಡು ಹಲವು ಸಾಹಿತ್ಯದ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ನೆರವೇರಿಸಿದ್ದು ಬಹಳ ಉಪಯುಕ್ತವಾಯಿತು. ಇದರಿಂದ ನಮ್ಮ ಮುಂದಿನ ಸಾಹಿತ್ಯದ ಓದಿಗೆ ಹೆಚ್ಚಿನ ಸಹಕಾರ ದೊರೆತಂತಾಯಿತು. ಹೀಗೆ ಶಿವಮೊಗ್ಗದ ಸಾಹಿತ್ಯ ವಿಭಾಗ ಹೊಂದಿರುವ ಎಲ್ಲಾ ಕಾಲೇಜುಗಳು ಇದೇ ರೀತಿ ಹಲವು ಸಾಹಿತ್ಯದ ಕಾರ್ಯಕ್ರಮಗಳನ್ನು ಮಾಡುತ್ತಿರಲಿ, ಮತ್ತೆ ಮತ್ತೆ ಸಾಹಿತ್ಯದ ಕಾರ್ಯಕ್ರಮಗಳನ್ನು ಆಸ್ವಾದಿಸಲು ನಾವೆಲ್ಲರೂ ಒಟ್ಟಿಗೆ ಸೇರೋಣ ಎಂದು ಆಶಿಸುತ್ತೇವೆ.
ಶಿವಮೊಗ್ಗದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಇಂಗ್ಲೀಷ್ ವಿಭಾಗದಿಂದ ಆಯೋಜಿಸಲ್ಪಟ್ಟ ವಿಶ್ವಸಾಹಿತ್ಯದ ಪರಿಚಯ ಎಂಬ ಒಂದು ದಿನದ ಕಾರ್ಯಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರು ಬರೆದ ಲೇಖನ.
ಸಹನ & ವಿಸ್ಮಯ
ದ್ವಿತೀಯ ಬಿ ಎ (ಸಾಹಿತ್ಯದ ವಿದ್ಯಾರ್ಥಿನಿಯರು)
ಕಮಲ ನೆಹರು ರಾಷ್ಟ್ರೀಯ ಸ್ಮಾರಕ ಮಹಿಳಾ ಕಾಲೇಜು, ಶಿವಮೊಗ್ಗ.