ಸ್ವಾಭಿಮಾನದ ಸಾಧ್ವಿಗೆ ‘ಘನತೆ’ಯೆಂಬ ಗದ್ದುಗೆ!

ಸ್ವಾಭಿಮಾನದ ಸಾಧ್ವಿಗೆಘನತೆಯೆಂಬ ಗದ್ದುಗೆ!

ಮನುಷ್ಯ ಜಗತ್ತಿಗೆ ಸ್ವಾವಲಂಬನೆಯೆಂಬ ಹಂದರವನ್ನು ಇಳೆಯ ಮೇಲೆ ಹಾಕಿರುವವಳೇ ಮಹಿಳೆ. ಮಹಿಳೆ ಎಂದರೆ ಇನ್ನೊಬ್ಬರ ಹಾದಿಯಲ್ಲಿ ಸಾಗುವ ಬದಲು ತನ್ನದೇ ಆದ ದಿಟ್ಟ ಹೆಜ್ಜೆಯಲ್ಲಿ ನಡೆಯುವವಳು ಎಂದರ್ಥ. ವ್ಯಂಜನಕ್ಕೆ ಸ್ವರವು ಆಧಾರವಾಗುವಂತೆ ಅವಳ ಅಸ್ತಿತ್ವ ರೂಪಿಸಿಕೊಳ್ಳಲು ‘ಸ್ವಾವಲಂಬನೆ’ ಎಂಬ ಖಡ್ಗವನ್ನು ಹಿಡಿದವಳು ಮಹಿಳೆ. ಸಿಕ್ಕಿ ರೋವ್ ರವರು “ಮಹಿಳೆಯಾದರೆ ಆತ್ಮವಿಶ್ವಾಸ ಮತ್ತು ಸ್ವಾಭಿಮಾನ ಹೊಂದಿರುವ  ಮಹಿಳೆಯಾಗಬೇಕು, ಆಗ ಗಂಡಿಗೆ ಹೋರಾಡಲು ಒಂದು ಯೋಗ್ಯವಾದ ಕಾರಣ ಸಿಗುತ್ತದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಪುರುಷ ‘ಶಕ್ತಿ’ಯೇ ಮೇಲೆಂದು ಬೀಗುತ್ತಿದ್ದ ಇಂತಹ ಜಗತ್ತಿಗೆ ಸ್ತ್ರೀ ‘ಶಕ್ತಿ’ ಏನೆಂದು ತೋರಿಸಿಕೊಟ್ಟದ್ದು ‘ಶಕ್ತಿ’ ಯೋಜನೆಯು ಜಾರಿಯಾದಂತಹ ಈ ವರ್ಷ. ಈ ಯೋಜನೆಯಲ್ಲಿ ‘ಶಕ್ತಿ’ಯ ಪ್ರದರ್ಶನವೇನೋ  ಆಯಿತು ಎಂದು ನಾವು ದೂರದರ್ಶನ, ಸುದ್ದಿಪತ್ರಿಕೆ, ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ ಹಾಗೂ ಕೇಳಿದ್ದೇವೆ,  ಆದರೆ ‘ಶಕ್ತಿ’ಯಲ್ಲಿ ಪ್ರದರ್ಶನಗೊಂಡ ಮಹಿಳಾ ಶಕ್ತಿಯು ಶಾಶ್ವತವೋ ಅಥವಾ ತಾತ್ಕಾಲಿಕವೋ ನಾನರಿಯೇ..!!

ಜಾಗತಿಕವಾಗಿ 3.905 ದಶಕೋಟಿಗಳಷ್ಟು ಮಹಿಳಾ ಜನಸಂಖ್ಯೆ ಇದ್ದು, ಡಬ್ಲ್ಯೂ. ಈ.ಐ.ಯ ವರದಿಯ ಪ್ರಕಾರ 60 ಪ್ರತಿಶತದಷ್ಟು  ಮಹಿಳೆಯರು ಸ್ವಾವಲಂಬನೆ ಸಾಧಿಸಿದ್ದಾರೆ, ಅಂದರೆ ಪ್ರಮುಖ ಮಾನವ ಅಭಿವೃದ್ಧಿ ಆಯಾಮಗಳಲ್ಲಿ ಪುರುಷರು ಸಾಧಿಸುವ ಸರಾಸರಿ 72ರಷ್ಟು ಪ್ರತಿಶತವನ್ನು ಅವರು ಸಾಧಿಸಿದ್ದಾರೆ. ಇದನ್ನು ಜೆಪಿಪಿಐನಿಂದ ಅಳೆಯಲಾಗುತ್ತದೆ, ಇದು 28 ಪ್ರತಿಶತ ಲಿಂಗವನ್ನು ಪ್ರತಿಬಿಂಬಿಸುತ್ತದೆ .ಭಾರತದಲ್ಲಿ 48 ಪ್ರತಿಶತದಷ್ಟು ಮಹಿಳೆಯರು ಸ್ವಾವಲಂಬಿ ಜೀವನವನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ.

ಹೊನ್ನುಂಗಾರದಲ್ಲಿ ಹೆಣ್ಣಿನ ಕತ್ತು ಹಿಸುಕಿದ್ದರೂ, ಕತ್ತಲ ಕೋಣೆಗಳು ಕನಸ ಕೊಂದರೂ ಕೂಡ ಬಿಸಿಯ  ಮರಳ ಪದೇ ಪದೇ ನೆನೆಸುವ ಅಬ್ಧಿಯ ಅಲೆಯ ತೆರದಿ ತನ್ನ ಘನತೆಯ ಬದುಕಿಗೆ ಸ್ವಾವಲಂಬನೆ ಎಂಬ ಸ್ವಾಭಿಮಾನದ ಹಣತೆಯನ್ನ ಹೊತ್ತಿಸಿದವಳು ಮಹಿಳೆ!. ವಿಪರ್ಯಾಸವೆಂದರೆ ಬರಿಯ ಮಾತಲ್ಲೇ ಹಿಡಿದುಕೊಂದು, ನಗುನಗುತ್ತಲೆ ಹಂಗಿನೂಟವ ಉಣಿಸಿ, ಅವಳ ಸ್ವಾವಲಂಬನೆಯನ್ನು ಕಿತ್ತುಕೊಳ್ಳುವ ಕ್ರೂರ ಮನಸ್ಸಿನ ಮನುಷ್ಯ ಮುಖವಾಡವನ್ನು ಹಾಕಿಕೊಂಡಿರುವ ಮೃಗಗಳು ನಮ್ಮ ನಡುವೆ ಇದ್ದಾರೆ. “ಎಲ್ಲಿ ಅವಳು ಸ್ವಾವಲಂಬನೆಯಿಂದ ಪ್ರಗತಿಯ ಪತದತ್ತ ಸಾಗಿ ಬಿಡುವಳೋ!”  ಎಂದು ಅವಳಿಗೆ ವಂಚನೆಯನ್ನು ಮಾಡುತ್ತಿದ್ದಾರೆ. ಪುಸ್ತಕ- ಪೆನ್ನು ಹಿಡಿಯಬೇಕಾದ ಕೈಗೆ ಕಸ- ಮುಸುರೆ ಪಾತ್ರೆ ಕೊಟ್ಟು ಕೂರಿಸುವ ಕುಕೃತ್ಯ ನಡೆಸಿದ್ದಾರೆ. ಇದು ತಪ್ಪಲ್ಲವೇ? ಹೆಣ್ಣು ಗಂಡು  ಒಂದೇ ನಾಣ್ಯದ  ಎರಡು ಮುಖಗಳು. ಗಂಡು ಸ್ವಾವಲಂಬನೆಯಿಂದ ಬದುಕಬಹುದಾದರೆ ಹೆಣ್ಣು ಏಕೆ ಬದುಕಬಾರದು??

ತಾಳ್ಮೆಯ ಪ್ರತೀಕವಾದ ಹೆಣ್ಣು ಕೆಲವೊಮ್ಮೆ ಬದುಕಬಂಡಿಯ ಸಾಗಿಸುವ ಆಸೆ ಹೊತ್ತು ಸ್ವಾವಲಂಬನೆಯನ್ನು ಕಟ್ಟಿಕೊಳ್ಳಹೊರಟರೆ, ಇತ್ತ ತಾಳ್ಮೆಗೆ ತರ್ಪಣ ಕೊಟ್ಟು ರಕ್ತದ ಹಾದಿಯನ್ನು  ಹಿಡಿದದ್ದೂ  ಉಂಟು. ಸ್ವಾವಲಂಬನೆಯ ಬದುಕಿಗೆ ತಾಳ್ಮೆಯು ಅವಶ್ಯಕ, ಆದರೆ ತಾಳ್ಮೆಯೇ ನೇಣು ಕುಣಿಕೆಯಾದರೆ ಹೇಗೆ? ತಾಳ್ಮೆ ಎಷ್ಟು ದಿನ ಇರಲು ಸಾಧ್ಯ! ತಾಳ್ಮೆಯಿಂದಿರುವ ಹೆಣ್ಣನ್ನು ಸಮಾಜ ಹೇಗೆ ದೂಷಿಸುತ್ತದೆ, ಸ್ವಾವಲಂಬನೆಯನ್ನು ಕಟ್ಟಿಕೊಳ್ಳ ಹೊರಟ ಆಕೆಗೆ ಜನರೇನು ಹೇಳುತ್ತಾರೆ, ತಾಳ್ಮೆ ಕೆಟ್ಟರೆ ಹೇಗೆ ಹೆಣ್ಣು ಸ್ಫೋಟಗೊಳ್ಳುತ್ತಾಳೆ, ಅವಳನ್ನು ಸಮಾಜ ಯಾವ ದೃಷ್ಟಿಯಿಂದ ನೋಡಬಹುದು ಎಂಬುವುದನ್ನು ಒಂದು ಸ್ವಅನುಭವದ ಮೂಲಕ ನಾನು ತಿಳಿಸುತ್ತೇನೆ.

ಅವರದ್ದು ಗಂಡ-ಹೆಂಡತಿ, ಮಗಳು ಮತ್ತು ಮಗನಿರುವ ಸಾಮಾನ್ಯ ಕುಟುಂಬ. ಬಿತ್ತಿಬೆಳೆದು ಉಣ್ಣಲು ಮನೆ ಹಿತ್ತಲಿನ ಬರಡು ಜಾಗವೊಂದನ್ನು ಬಿಟ್ಟರೆ ಬಿಡಿಕಾಸಿನ ಭೂಮಿ ಸಹ ಇರಲಿಲ್ಲ. ಮನೆಯ ಯಜಮಾನ ಮಂಜುನಾಥ! ಹಳ್ಳಿಯಲ್ಲಿ ಆತನನ್ನು ‘ಬುಚ್ಚ’ ಅಥವಾ ‘ಬುಚ್ಚಣ್ಣ’ ಎಂದು ಕರೆದೇ ಅಭ್ಯಾಸ. ಹೆಸರಿಗೆ ದೇವರ ಹೆಸರನ್ನು ಇಟ್ಟುಕೊಂಡಿದ್ದರೂ ಸಹ ಸ್ವಭಾವದಲ್ಲಿ ತೀರಾ ತದ್ವಿರುದ್ಧ. ಇದರ ಜೊತೆಗೆ ಅವನಿಗೆ ಅಂಟಿಕೊಂಡು ಬಂದಿರುವ ಚರಾಸ್ತಿಯೆಂದರೆ ಕೃಷಿಜೀತ, ಸ್ತಿರಾಸ್ತಿಯೆಂದರೆ ಒಂದೆರಡು ಪಾತ್ರೆಪಗಾಡಿಗಳು. ಅಸಾಧ್ಯ ಹುಟ್ಟು ಕುಡುಕನೆಂದು ಊರಿಗೇ ಕುಖ್ಯಾತನಾಗಿದ್ದ ಇವನ ಹೆಂಡತಿ ಮಕ್ಕಳ ಒಡನಾಟ ಒಂದು ರೀತಿಯಾಗಿ ನಾಯಿ-ಬೆಕ್ಕಿನ ಸಂಬಂಧ! ದಿನಬೆಳಗೂ ಹೆಂಡತಿಗೆ  ಹೊಡೆಯುವುದು, ಬಡಿಯುವುದು ಮಾಡುತ್ತಾ ಬರುತ್ತಲಿದ್ದ ಅವನಿಗೆ ಊರಿನಲ್ಲಿ ಅವನದೇ ಕುಡುಕ ಸ್ವಭಾವದ ಮೂರ್ನಾಲ್ಕು ಜನ ಸ್ನೇಹಿತರು ಅನ್ನೋನ್ಯ ಸಂಬಂಧಿಗಳಾಗಿದ್ದರು ಎನ್ನಬಹುದು.

ಬುಚ್ಚಣ್ಣನಿಗೆ ಮಗಳಾದ ನಂತರ ಮಗನಾಗುವವರೆಗೂ ಬುಚ್ಚಣ್ಣನ ಎಲ್ಲಾ ಅರ್ಭಟಗಳನ್ನು ಸಹಿಸಿಕೊಂಡಿದ್ದು ಇನ್ನೂ ತಾಳಲಾಗದೆ ‘ಗೌರಿ’ ರೋಸಿಹೋದಳು. ತನ್ನದೇ ಜಮೀನಿನಲ್ಲಿ ದುಡಿಯುವ ಭಾಗ್ಯ ಹೊಂದಿರದ ಅಕೆಯು ಕಂಡ ಕಂಡವರ ಮನೆಯವರಿಗೆಲ್ಲ ಅತ್ತೂ ಕರೆದು,ಕಾಲಿಗೆ ಬಿದ್ದು ಕೆಲಸ ಮಾಡಿ ಬಂದದ್ದೂ ಉಂಟು. ಬೆಳಿಗ್ಗೆ ತನ್ನ ಮಗ ಹಾಗೂ ಮಗಳಿಗೆ ಮನೆಯ ನಿತ್ಯದ ಕೆಲಸವನ್ನು ವಹಿಸಿ ಮುಂಜಾನೆ ಜೀತದ ಕೆಲಸಕ್ಕೆ ಹೊರಟ ಆಕೆ ಬರುವುದು ತಿಳಿಸಂಜೆಯೇ. ಬಿಸಿಲು, ಮಳೆ, ಚಳಿ, ಗಾಳಿಗಳನ್ನು ಲೆಕ್ಕಿಸದೆ ಸೊಂಟ ಬಗ್ಗಿಸಿ ಭೂಮಿಗೆ ಕೈಹಾಕಿದಳೆಂದರೆ ಮತ್ತೆ ಏಳುವುದು ಮದ್ಯಾಹ್ನದ ಊಟದ ಸಮಯಕ್ಕೇ! ಮನೆಗೆ ಬಂದ ನಂತರ ಉಳಿದ ಮನೆಕೆಲಸಗಳನ್ನು ಮುಗಿಸಿ ಅಡಿಕೆ ಸುಲಿಯಲು ಹೊರಟು ಮನೆಗೆ ವಾಪಸ್ಸಾಗುವಷ್ಟರಲ್ಲಿ ಅರ್ಧರಾತ್ರಿಯಾಗುತ್ತಿತ್ತು.

ಗಂಡನ ನಿರ್ದಾರುಣ್ಯ ಹಿಂಸೆ, ಬಡಕಲಾದ ದೇಹ, ಹೊತ್ತಿನ ಊಟಕ್ಕಾಗಿ ಪಡುತ್ತಿರುವ ಕಷ್ಟವನ್ನು ನೋಡಿ ಕನಿಕರಪಡದೆ ಇರುವ ಮನುಜರೇ ಇರಲಿಲ್ಲ. ಆದರೂ ಈಕೆಯ ಕೆಲಸದ ಅಗ್ಗಕ್ಕೆ ಬಿದ್ದವರು ಗೌರಿ ಊರ ಗೌಡನ ಜೊತೆಯಲ್ಲಿ ಮಲಗಿದ್ದಾಳೆಂದು ಕುಟುಕು ಮಾತಾಡಲು ಅವರ ಎಲುಬಿಲ್ಲದ ನಾಲಿಗೆ ಸಾಹಸವನ್ನೇನೋ ಪಡುತ್ತಿರಲಿಲ್ಲ.

ಮೈಮುರಿದು ದುಡಿಯುವ ಕೆಲಸಕ್ಕೆ ವ್ಯಾಯಾಮವೋ ಎಂಬಂತೆ ವಾರಕ್ಕೊಮ್ಮೆ ಗಂಡನ ಹೊಡೆತಗಳು ತಪ್ಪದೇ ಇರುತ್ತಿದ್ದವು. ಕೆಲವೊಮ್ಮೆ ಬುಚ್ಚಣ್ಣನು ಆಸ್ಪತ್ರೆಗೆ ದಾಖಲಾದಾಗ ಗಂಡನಿಗಾಗಿ ಅವಳ ಬಿಕ್ಕಳಿಸುವ ಅಳು ಮುಗಿಲುಮುಟ್ಟುವಂತಹವುಗಳು.

ಮಕ್ಕಳು ಬೆಳೆದು ದೊಡ್ಡವರಾಗುತ್ತಿದ್ದಂತೆ ಜಗಳ ಗಲಾಟೆಗಳು ತಾರಕವನ್ನೇರತೊಡಗಿದವು. ಬುಚ್ಚಣ್ಣನೂ ಸಹ ಮಧ್ಯಾದೇವಿಯ ದಾಸನಾಗಿ ಗೌರಿಯಂತೆ ಬಡಕಲು ಪೇತನಾಗುವುದರಲ್ಲಿದ್ದನು. ಗೌರಿಯ ಮಗನಂತೂ ಯಾವುದಕ್ಕೂ ಹಿಂದೆ ಮುಂದೆ ನೋಡುವವನಲ್ಲ! ಒಂದೆರಡು ಬಾರಿ ಪಿತೃವಿಗೆ ಸೌದೆಯಿಂದಲೋ, ತುರೇಮಣೆ ಕತ್ತಿಯಿಂದಲೋ ಹೊಡೆತಗಳ ತರ್ಪಣವನ್ನು ಕೊಟ್ಟದ್ದೂ ಉಂಟು. ಅಂತೂ ಗೌರಿಯು ಮಕ್ಕಳ ಪರವಾಗಿಯೂ ನಿಲ್ಲಲಾಗದೆ, ಪಾತಿವ್ರತ ಧರ್ಮವನ್ನೂ ಮೀರಲಾಗದೆ ಕಕ್ಕಾಬಿಕ್ಕಿಯಾಗಿದ್ದಳು. ಹೀಗೆ ಸಾಗುತ್ತಿತ್ತು ಗೌರಿಯ ಹಾಗೂ ಆಕೆಯ ಮನೆಯ ದಿನಚರಿ!

ಒಂದು ದಿನ ಊರ ತುಂಬೆಲ್ಲಾ ವಿನೂತನ ಸುದ್ದಿಯೊಂದು ಕೇಕೆಹಾಕತೊಡಗಿತು. ಮನೆಯ ಜಗಲಿ ತುಂಬೆಲ್ಲಾ ರಕ್ತದ ಮಡು. ಗೌರಿಯ ತವರುಮನೆಯವರು, ಊರ ಮುಖ್ಯಸ್ಥರು, ಜನಗಳು ಓಡೋಡಿ ಗೌರಿಯ ಮನೆಯ ಕಡೆಗೆ ಧಾವಿಸುತ್ತಿದ್ದರು. ಕಂಡವರೆಲ್ಲ “ಅಯ್ಯೋ, ದೇವ್ರೆ ಎಂತ ಕಾಲ ಬಂತಪ್ಪಾ!”ಅಂದವರೇ. . ಬುಚ್ಚಣ್ಣನ ತಮ್ಮನ ಹೆಂಡತಿ ಎಲೆ, ಅಡಕೆ ಹಾಕಿ ತುಪ್ಪುತ್ತ- ಕ್ಯಾಕರಿಸುತ್ತ ಆಕಾಶ-ಭೂಮಿ ನಡುಗುವಂತೆ ಬೊಂಬಾಯಿ ತೆರೆದು, “ ಅವಳ ಕುಲನಾಶ ಅಗೋಗ,ಅವ್ಳ್ ಕಾಲಿಗೆ ಹುಳಾ ಬೀಳಾ, ನೀನು ಹಾಳಾಗಿ ಹೋಯ್ತಿಯಾ ” ಎಂದು ಬೈಯುತ್ತ ಅರ್ಭಟಿಸುತ್ತಿದ್ದಳು! ಅಲ್ಲಿಂದ ಮರಳಿ ಬಂದವರ ಬಾಯಲ್ಲಿ ಬಂದದ್ದು ಒಂದೇ ಮಾತು –‘ಅಯ್ಯೋ, ಏನ್ ಕಾಲ ಬಂತಪ್ಪಾ, ಹಾಳಾದ್  ಗೌರಿ ಗಂಡನ್ನೇ ತಿಂದ್ಳಲ್ಲಪ್ಪಾ!”

ಈ ರೀತಿಯಾದರೆ ಯಾವ ಹೆಣ್ಣು ತಾನೇ ಸ್ವಾವಲಂಬನೆಯ ಬದುಕನ್ನ ಕಟ್ಟಿಕೊಳ್ಳಲು ಸಾಧ್ಯ? ಸ್ವಾವಲಂಬನೆಗೆ ಅಡ್ಡಲಾಗಿ ಸಮಾಜವೆಂಬ ನಾಣ್ಯದ ಇನ್ನೊಂದು ಮುಖವಾದ ಪುರುಷ ಪ್ರಧಾನ ಅಂಶಗಳು  ಮುಳ್ಳಿನ ಹಾದಿಗಳಾಗುತ್ತವೆ.  ಈ ರೀತಿಯಾಗಿ ಮಹಿಳೆಯ ತಾಳ್ಮೆಗೆ ಕತ್ತಲು ಕವಿದಾಗ ಅವಳ ಘನತೆಯು ವೃದ್ಧಿಸುವುದಾದರೂ ಹೇಗೆ?

ಹೆಣ್ಣಾಗಿ ಜೀವನ ನಡೆಸುವುದು ಸುಲಭದ ಆಟವಲ್ಲ. ಪ್ರತಿದಿನ ಸೂರ್ಯನಾಗಿ ಹುಟ್ಟಬೇಕಾಗುತ್ತದೆ, ಎದುರಿಗೆ ಘನವಾದ ಕತ್ತಲೆ ಇದ್ದರೂ ಎಲ್ಲರ ಜೀವನದಲ್ಲಿ ಬೆಳಕನ್ನು ಕೊಡಬೇಕಾಗುತ್ತದೆ. ಅಂತಹ ಹೆಣ್ಣೆಂಬ ಶಕ್ತಿಯ ಪ್ರಗತಿಗೆ ಪೂರಕವಾದ ಅಂಶಗಳಲ್ಲಿ ಸ್ವಾವಲಂಬನೆಯಿದ ಸಿಗುವ ‘ಘನತೆಯು’ ಮೊದಲನೆಯದಾಗಿ ನಿಲ್ಲುವ ಅಂಶವಾಗಿದೆ. ಘನತೆಯ ಬದುಕಿಗೆ ಸ್ವಾವಲಂಬನೆಯ ಅಂಶ ಹೇಗೆಲ್ಲಾ ಅವಶ್ಯಕತೆಯಾಗಿದೆ ಎಂಬುವುದನ್ನು ನೋಡುವುದಾದರೆ, ಸ್ವಾವಲಂಬನೆಯಿಂದಾಗಿ ಮಹಿಳೆಯರು ಶಿಕ್ಷಣ ಪಡೆಯುವಂತಾಗಿ, ಮಹಿಳಾ ಅನಕ್ಷರಸ್ಥರು ಕಡಿಮೆಯಾಗಿ ಅಕ್ಷರಸ್ಥರು ಹೆಚ್ಚಾಗುತ್ತಾರೆ.  ನೇಮಿಚಂದ್ರ, ಡಾ. ಅನುಪಮ ನಿರಂಜನ. ಸಾರಾ ಅಬೂಬಕ್ಕರ್ ಮುಂತಾದವರು ನಮ್ಮ ನಡುವೆಯೇ ಶೈಕ್ಷಣಿಕವಾಗಿ ಸಾಧನೆ ಮಾಡಿರುವ ಹಲವಾರು ಮಹಿಳೆಯರು, ಇವರೆಲ್ಲರು ಸರ್ವರಿಗೂ ಮಾದರಿಯಾಗಿದ್ದಾರೆ.

ಸ್ವಾವಲಂಬನೆಯಿಂದಾಗಿ ಆರ್ಥಿಕವಾಗಿ ಮಹಿಳೆಯರು ಬಲಗೊಳ್ಳುತ್ತಾರೆ, ಇದರಿಂದ ತನ್ನನ್ನು ಮತ್ತು ತನ್ನ ಕುಟುಂಬದ ಆರ್ಥಿಕತೆಗೆ ಸಹಾಯವಾಗುತ್ತದೆ. ಮಹಿಳೆ ಎಷ್ಟೋ ಬಾರಿ ಪುರುಷರಿಗೂ ಸಹ ಆರ್ಥಿಕವಾಗಿ ಸಹಾಯ ಮಾಡಿರುವುದುಂಟು.

ಸುಧಾ ಮೂರ್ತಿ, ಕಿರಣ್ ಮಜುಂದಾರ್ ಶಾ ,ಇಂದ್ರನೋಹಿ, ವಂದನಾ ಲುತ್ರ ಇವರುಗಳು ಆರ್ಥಿಕವಾಗಿ ತನ್ನ ಸಂಸ್ಥೆಗೂ , ದೇಶಕ್ಕೂ ಹಲವು ಕೊಡುಗೆಗಳನ್ನು ನೀಡಿದ್ದಾರೆ.

ಸ್ವಾವಲಂಬನೆಯಿಂದ ಸಾಮಾಜಿಕವಾಗಿ ಸಮಾನತೆಯ ಹಾದಿಯಲ್ಲಿ ಗಂಡನ ಜೊತೆ ಪಯಣ ಸಹಾಯಕವಾಗುತ್ತದೆ. ಹೇಗೆ ಒಂದು ಬಂಡಿಯ ಎರಡು ಚಕ್ರಗಳು ಸಮಾನವಾಗಿ ಒಂದೇ ರೀತಿಯಲ್ಲಿ ಸಾಗುತ್ತದೆಯೋ ಹಾಗೆ ಸ್ವಾವಲಂಬನೆಯಿಂದ ಪುರುಷ ಮಹಿಳೆ ಒಟ್ಟಿಗೆ ಸಾಗಿದರೆ ಅದರ ಮಾತೇ ಬೇರೆ ಅಲ್ಲವೇ?   ಕಿರಣ್ ಬೇಡಿ, ಕಮಲಾ ದಾಸ್ ಮುಂತಾದವರನ್ನು ನೋಡಿ ನಾವು ಕಲಿತುಕೊಳ್ಳಲೇಬೇಕು ಎಂದನಿಸುವುದಂತೂ ನಿಜ!

ರಾಜಕೀಯವಾಗಿ ಸ್ವಾವಲಂಬನೆ ಆಗುವ ಮೂಲಕ ತನ್ನ ಸುತ್ತಲಿನ ಮತ್ತು ರಾಜ್ಯದ ದೇಶದ ಪ್ರಗತಿಯ ಪಥದತ್ತ ಕರೆದುಕೊಂಡು ಹೋಗಲು ಸ್ವಾವಲಂಬನೆಯಿಂದ ಕೂಡಿದ ಮಹಿಳೆಯ ಘನತೆಯು ಸಹಾಯ ಮಾಡುತ್ತದೆ. ರಾಜಕೀಯವಾಗಿ ರಾಣಿಯ ತೆರದಿ ಬದುಕಿರುವುದನ್ನು , ಬದುಕುತ್ತಿರುವುದನ್ನು ಸಹ ನಾವು ನೋಡಬಹುದು. ಉದಾಹರಣೆಗೆ ಸರೋಜಿನಿ ನಾಯ್ಡು, ಇಂದಿರಾಗಾಂಧಿ, ನಿರ್ಮಲಾ ಸೀತಾರಾಮನ್, ದ್ರೌಪದಿ ಮುರ್ಮು, ಇವರುಗಳು ರಾಜಕೀಯವಾಗಿ ಸ್ತ್ರೀಶಕ್ತಿಯಾಗಿ ಹೊರಹೊಮ್ಮಿದರು.

ಸ್ವಾವಲಂಬನೆಯಿಂದ ಕ್ರೀಡೆಯಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿರುವ ಧೀರ ಮಹಿಳೆಯರನ್ನು ಸಹ ನಾವು ನೋಡಿದ್ದೇವೆ. ಚಿನ್ನ ಬೆಳ್ಳಿ ಕಂಚನ್ನು ಭಾರತಮಾತೆಯ ಕೊರಳಿಗೆ ಹಾಕಿದ ಎಷ್ಟೋ ಮಹಿಳೆಯರು ನಮಗೆ ಸರಿಸಾಟಿ ಇಲ್ಲವೆಂದು ತೋರಿಸಿಕೊಟ್ಟರು. ಉದಾಹರಣೆಗೆ ಪಿವಿ ಸಿಂಧು ,ಸೈನಾ ನೆಹ್ವಾಲ್, ಮಮತಾ ಪೂಜಾರಿಯಂತಹ ಮಹಾನ್ ಮಹಿಳೆಯರು ಪ್ರತೀ ಹೆಣ್ಣು ಕುವರಿಯರ ಪ್ರೇರಣೆ.

ಲತಾ ಮಂಗೇಶ್ಕರ್  (ಸಂಗೀತ), ರುಕ್ಮಿಣಿ  ದೇವಿ ( ಭರತನಾಟ್ಯ) ಮುತಾದವರು ಸ್ವಾವಲಂಬನೆಯ ಮೂಲಕ ಸಾಂಸ್ಕೃತಿಕ ಕ್ಷೇತ್ರವನ್ನು ರಾರಾಜಿಸುವಂತೆ ಮಾಡಿ ಘನತೆಯ ಸಂಕೇತವನ್ನು ಮಿಂಚಿಸಿದಂತಹ  ಮಹಿಳೆಯರು ನಮ್ಮ ನಡುವೆ ಇದ್ದಾರೆ

ಒಟ್ಟಿನಲ್ಲಿ ಆಕೆಗಿರುವ ಧೈರ್ಯ, ಸ್ಥೈರ್ಯ ಜೊತೆಗೆ ಸ್ವಾವಲಂಬನೆಯು ಸೇರಿದಾಗ ಮಗಳಾಗಿ, ಮಡದಿಯಾಗಿ, ತಾಯಿಯಾಗಿ, ಶ್ರೇಷ್ಠ ಮಹಿಳೆಯಾಗಿ ಹತ್ತು ಹಲವು ಕಾರ್ಯಗಳನ್ನು ಮಾಡುತ್ತಾಳೆ.ಆಕೆಯ ಸಾಮರ್ಥ್ಯಕ್ಕೆ ಆಕೆಯೇ ಸರಿಸಾಟಿಯಾಗುತ್ತಾಳೆ.

ಹೆಣ್ಣಿನ ಪೂರಕ ಶಕ್ತಿಯಾಗಿರುವ ಸ್ವಾವಲಂಬನೆ ಇಲ್ಲದಿದ್ದರೆ ಅವಳ ಸ್ಥಿತಿ ಏನಾಗುತ್ತದೆ ಎಂದು ಒಮ್ಮೆ ಅವಲೋಕನ ಮಾಡಿದರೆ, ಅವಳಿಗಾಗುವ ತೊಂದರೆಯಿಂದ ಇಡೀ ಪ್ರಪಂಚಕ್ಕೆ ಬಾರುಕೋಲಿನ ಹೊಡೆತ ಬಿದ್ದಂತಾಗುತ್ತದೆ. ಸ್ವಾವಲಂಬನೆ ಇಲ್ಲದಿದ್ದರೆ ಅಂದಿನ ಅನಿಷ್ಠ ಪದ್ಧತಿಗಳಾದ ವರದಕ್ಷಿಣೆ, ಸತಿ ಪದ್ಧತಿ ಇನ್ನೂ ಕೂಡ ತನ್ನ ಅಟ್ಟಹಾಸವನ್ನು ಮೆರೆಸುತ್ತಿತ್ತು. ಸ್ವಾವಲಂಬನೆ ಇಲ್ಲದಿದ್ದರೆ ನಾಲ್ಕು ಗೋಡೆಯ ಮಧ್ಯೆಯೇ ಕೀಲಿ ಹಾಕಿಕೊಂಡು ಕೂರಬೇಕಾಗುತ್ತಿತ್ತು. ಹಾರುವ ರೆಕ್ಕೆಗಳಿದ್ದರೂ ಗಗನದೆತ್ತರಕ್ಕೆ ಹಾರುವ ಸಾಮರ್ಥ್ಯವಿದ್ದರೂ ಕೂಡ ಪಂಜರದ ಹಕ್ಕಿಗಳಾಗಿ ಜೀವನ ನಡೆಸಬೇಕಾಗುತ್ತಿತ್ತು.

‘ಸ್ವಾವಲಂಬಿ ಜೀವನ ಸಾರ್ಥಕತೆಯ ಸಂಕೇತ’ ಎನ್ನುವ ಮಾತಿನ ಪ್ರಕಾರ ಸ್ವಾವಲಂಬನೆ ಇಲ್ಲದಿದ್ದರೆ ಮಹಿಳೆಯ ಬದುಕಿಗೆ ಮತ್ತು ದೇಶದ ಸರ್ವತೋಮುಖ ಬದುಕಿಗೂ ಅಡ್ಡಿಯಾಗಿ ನಿಲ್ಲುವ ಮೊದಲ ಅಂಶ ಅವಲಂಬನೆಯಾಗಲಿದೆ. ಹಾರುವ ಹಕ್ಕಿಗೆ ರೆಕ್ಕೆ ಇಲ್ಲದಂತಾಗುತ್ತದೆ. ಕನಸುಗಳನ್ನು ಕಣ್ಣೊಳಗೇ ಕೊಂದುಕೊಳ್ಳಬೇಕಾಗುತ್ತದೆ. ಚಿಗುರಿದ ಆಸೆಗಳನ್ನು ಮನದೊಳಗೆ ಚಿವುಟಬೇಕಾಗುತ್ತದೆ. ಒಲ್ಲದ ಮನಸ್ಸು ಇದ್ದರೂ ಒಲ್ಲೆನೆಂದು ಹೇಳಲಾರದೆ ‘ಬದುಕು  ಜಟಕಾಬಂಡಿ ಗಂಡು ಅದರ ಸಾಹೇಬ’ ಎಂದು ಜೀವನವನ್ನು ಕಳೆಯಬೇಕಾಗುತ್ತದೆ ಎಚ್ಚರ!!

 

ಸಂಧ್ಯಾ ಕೆ ಕೆ  &  ರಕ್ಷಿತ್ಹೆಚ್. ಆರ್

ವಿದ್ಯಾರ್ಥಿಗಳು

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು – ಶಿವಮೊಗ್ಗ

Leave a Reply

Your email address will not be published. Required fields are marked *