ಸ್ಲೀಪ್ ವೆಲ್ !!

Image Credit: google.com

ಸ್ಲೀಪ್ ವೆಲ್ !!

 

ಮಕ್ಕಳ ಸೃಜನಶೀಲತೆ, ಕೌಶಲ, ಬುದ್ಧಿಮತ್ತೆಗೆ ನಿದ್ದೆ ಅಗತ್ಯ…

  1. ನಿದ್ದೆ ಮಗುವಿನ ಬೆಳವಣಿಗೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಮಗುವಿನ ದೈಹಿಕ, ಮಾನಸಿಕ ಹಾಗೂ ಸರ್ವತೋಮುಖ ವಿಕಸನಕ್ಕೆ ನಿದ್ದೆ ಬಹಳ ಅಗತ್ಯ. ಹಸಿವು, ಬಾಯಾರಿಕೆ, ಪಚನ ಮುಂತಾದವು ಆರೋಗ್ಯಕ್ಕೆ ಹೇಗೆ ಪೂರಕವೋ ಹಾಗೆಯೇ ನಿದ್ದೆಯೂ ಬಹಳ ಮುಖ್ಯ, ಮಕ್ಕಳ ಬೆಳವಣಿಗೆಯಲ್ಲಿ ನಿದ್ದೆ ಬಹಳ ಪರಿಣಾಮ ಬೀರುತ್ತದೆ.

ಇದನ್ನು ಐದು ಅಂಶಗಳಲ್ಲಿ ವಿವರಿಸಬಹುದು.

  • ಗಮನ ಹಾಗೂ ಜಾಗರೂಕತೆ (Attention and alertness) : ನಿದ್ದೆ ಚೆನ್ನಾಗಿ ಮಾಡಿದ ಮಕ್ಕಳು ಕಲಿಕೆಯಲ್ಲಿ ಚುರುಕಾಗಿರುತ್ತಾರೆ. ವಿಷಯಗಳ ಗ್ರಹಿಕೆಯಲ್ಲಿ ಹೆಚ್ಚು ಆಸಕ್ತಿ ಹಾಗೂ ಮುಂದಿರುತ್ತಾರೆ. ಶಾಲೆಯಲ್ಲಿ ಹೊಸ ಹೊಸ ವಿಷಯಗಳನ್ನು ಕಲಿಯುವುದರಲ್ಲಿ ಗ್ರಹಿಸುವುದರಲ್ಲಿ ಹೆಚ್ಚು ಕುಶಲರಾಗಿರುತ್ತಾರೆ.
  • ಯೋಚನಾ ಶಕ್ತಿ (cognitive performance) : ಏನೇ ವಿಚಾರವನ್ನು ಕಲಿಯಬೇಕಾದರೂ ಯೋಚನಾ ಶಕ್ತಿ ಇರಬೇಕು, ಮನಸ್ಸು ತಿಳಿಯಾಗಿರಬೇಕು. ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಗಮನ ಇರಬೇಕು. ಇವೆಲ್ಲವೂ ನಿದ್ದೆ ಚೆನ್ನಾಗಿ ಆದರೆ ಮಾತ್ರ ಸಾಧ್ಯ.
  • ಭಾವನೆಗಳ ನಿಯಂತ್ರಣ (Emotional regulation) : ಮಗು ಚಿಕ್ಕದಿರುವಾಗ ಮನಸ್ಸಿಗೆ ಕಿರಿಕಿರಿ ಆಗಿದ್ದರೆ ರಂಪ ಮಾಡುತ್ತದೆ. ಬೆಳೆಯುತ್ತಾ ಹೋದಂತೆ ತನ್ನ ಭಾವನೆಗಳನ್ನು ಅಭಿವ್ಯಕ್ತಿಸುವುದನ್ನು ಕಲಿಯುತ್ತದೆ. ನಿದ್ದೆ ಚೆನ್ನಾಗಿ ಆದರೆ ಮಾತ್ರ ಭಾವನೆಗಳ ಅಭಿವ್ಯಕ್ತಿ ಸಾಧ್ಯ ಮನಸ್ಸು ಖುಷಿಯಾಗಿರಲು, ತೃಪ್ತಿಯಾಗಿರಲು ಸಾಧ್ಯ
  • ಒತ್ತಡ ನಿಭಾಯಿಸುವ ಕಲೆ (Relience) : ಮಗು ಬೆಳೆಯುತ್ತಿದ್ದ ಹಾಗೆ ಕಷ್ಟದ ಸಂದರ್ಭ ನಿಭಾಯಿಸಲು ಸಮರ್ಥವಾಗಬೇಕು. ಒತ್ತಡ ನಿರ್ವಹಣೆಗೆ ನಿದ್ರೆ ಅವಶ್ಯಕ. ನೆನಪಿನಶಕ್ತಿ ಹೆಚ್ಚಳಕ್ಕೆ ಉತ್ತಮ ನಿದ್ದೆ ಸಹಾಯ ಮಾಡುತ್ತದೆ. ನೆನಪಿನಶಕ್ತಿ ದೀರ್ಘ ಸಮಯದವರೆಗೆ ಉಳಿಯಲೂ ನಿದ್ದೆ ಬೇಕೇಬೇಕು.
  • ಸೃಜನಾತ್ಮಕ ಯೋಚನೆ (Creative thinking) : ಮಗುವಿನ ಸೃಜನಶೀಲತೆಯಲ್ಲಿ, ಕೌಶಲದಲ್ಲಿ, ಬುದ್ಧಿಮತ್ತೆ ಒರೆಗೆ ಹಚ್ಚುವಲ್ಲಿ ನಿದ್ದೆ ಬಹಳ ಮುಖ್ಯ.

2. ಮಕ್ಕಳ ಆರೋಗ್ಯಕರ ನಿದ್ದೆ ಹೇಗಿರಬೇಕು?

ಮಕ್ಕಳು ಆರೋಗ್ಯವಾಗಿರಬೇಕಾದರೆ ನಿದ್ದೆ ಮುಖ್ಯ. ಇದನ್ನು ‘ಹೆಲ್ತಿ ಸ್ಲಿಪ್’ ಎಂದು ಕರೆಯಲಾಗುತ್ತದೆ. ಮಕ್ಕಳು ಎಷ್ಟು ಹೊತ್ತು ನಿದ್ದೆ ಮಾಡ್ತಾರೆ ಎನ್ನುವುದು ಗಮನಿಸಬೇಕು. ಈ ನಿದ್ದೆಯೂ ಗುಣಮಟ್ಟದಿಂದ ಕೂಡಿರಬೇಕು (Good quality ship), ಮಲಗುವ ಕೊಠಡಿಯಲ್ಲಿ ಕತ್ತಲು ಇರಬೇಕು. ಜಾಗ ಹಿತವಾಗಿರಬೇಕು, ಶಬ್ದರಹಿತವಾಗಿರಬೇಕು. ಒಂದೇ ಸಮಯದಲ್ಲಿ ಮಲಗಿ, ದಿನಾ ಅದೇ ಸಮಯಕ್ಕೆ ಏಳುವುದು ಕೂಡ ಆರೋಗ್ಯಕ್ಕೆ ಒಳ್ಳೆಯದು.

3. ಕೊರೋನ ಹಾವಳಿ ಶುರುವಾದಾಗಿನಿಂದ ಮಕ್ಕಳು ಖಿನ್ನತೆ, ಏಕಾಗ್ರತೆ ಕೊರತೆ ಮುಂತಾದ ಮಾನಸಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆ ನಿದ್ದೆಯೂ ಪ್ರಮುಖ ಕಾರಣವಲ್ಲವೇ?

ಖಂಡಿತ,  ಕೊರೋನ ಶುರುವಾದಾಗಿನಿಂದ ಮಕ್ಕಳು ಅನಿವಾರ್ಯವಾಗಿ    ಆನ್ಲೈನ್ ಕ್ಲಾಸ್ ಗೆ ಹೊಂದಿಕೊಳ್ಳಬೇಕಾಯಿತು, ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್ ಬಳಕೆ ಹೆಚ್ಚಾಯಿತು. ಇದರಿಂದ ಮಕ್ಕಳು ಖಿನ್ನತೆ ಜಾರಿದ ಉದಾಹರಣೆಗಳಿವೆ.

ಮುಖ್ಯವಾಗಿ ಅಗತ್ಯವಿರುವಷ್ಟು ಗ್ಯಾಜೆಟ್ ಬಳಕೆ ಆದ ಮೇಲೆ ಅದರಿಂದ ದೂರವಿರುವುದು ಲೇಸು.  ಬಳಕೆ ಆದ ಮೇಲೆ ಗ್ಯಾಜೆಟ್ ಇಟ್ಟುಕೊಂಡು ಮಲಗಲೇಬಾರದು. ಚಾಟ್, ಗೇಮ್, ವಿಡಿಯೊ ನೋಡುವುದರಿಂದ ಮಕ್ಕಳ, ನಿದ್ದೆಯ ಸಮಯ ಕಡಿಮೆ ಆಗುತ್ತದೆ. ನಿದ್ದೆಯ ಕ್ವಾಲಿಟಿ ಕಡಿಮೆ ಆಗುತ್ತದೆ. ಇದರಿಂದ ನಿದ್ದೆಯಿಂದಾಗುವ ಒಳ್ಳೆಯ ಅಂಶಗಳೆಲ್ಲ ಹಾಳಾಗುತ್ತದೆ. ಮಲಗುವುದಕ್ಕಿಂತ ಎರಡು ಗಂಟೆ ಮೊದಲು ಎಲೆಕ್ಟ್ರಾನಿಕ್ ಗ್ಯಾಜೆಟ್ ನೋಡಲೇಬಾರದು.

ಯಾವ ವಯಸ್ಸಿಗೆ ಎಷ್ಟು ನಿದ್ದೆ ಬೇಕು?

ಆರೋಗ್ಯಕ್ಕೆ ನಿದ್ದೆ ಬಹಳ ಮುಖ್ಯ. ‘ಅಮೆರಿಕನ್ ಅಸೋಸಿಯೇಷನ್ ಆಫ್ ಪೀಡಿಯಾಟ್ರಿಕ್ಸ್’ ಸಂಸ್ಥೆ, ಯಾವ ವಯಸ್ಸಿನವರಿಗೆ ಎಷ್ಟು ನಿದ್ದೆ ಎನ್ನುವುದನ್ನು ಪಟ್ಟಿ ಮಾಡಿದೆ.

  • ನವಜಾತ ಶಿಶುಗಳಿಗೆ ದಿನಕ್ಕೆ 16 ಗಂಟೆ.
  • 1-2 ವರ್ಷದ ಮಕ್ಕಳಿಗೆ 11 ರಿಂದ 14 ಗಂಟೆ.
  • 3-5 ವರ್ಷದ ಮಕ್ಕಳಿಗೆ 10 ರಿಂದ 13 ಗಂಟೆ.
  • 6-12 ವರ್ಷದ ಮಕ್ಕಳಿಗೆ 9 ರಿಂದ 12 ಗಂಟೆ.
  • 13-18 ವರ್ಷದ ಹದಿಹರೆಯದವರಿಗೆ 8 ರಿಂದ 10 ಗಂಟೆ.
  • 20 ರಿಂದ 22 ವರ್ಷದ ಆಸುಪಾಸಿನವರಿಗೆ 7 ರಿಂದ 8 ಗಂಟೆ.
  • ವಯಸ್ಕರಿಗೆ ಹಾಗೂ ಎಲ್ಲರಿಗೆ ಸಾಮಾನ್ಯವಾಗಿ 6 ರಿಂದ 7 ಗಂಟೆ ನಿದ್ದೆ ಅವಶ್ಯಕ.

ಡಾ. ಪ್ರೀತಿ ಶ್ಯಾನಭಾಗ್ 

ಮನೋವೈದ್ಯ, ಶಿವಮೊಗ್ಗ

ಕೃಪೆ: ಈ ಮೂಲ ಲೇಖನ ಸುಧಾ ವಾರತ್ರಿಕೆಯ 2022 ರ ಫೆಬ್ರವರಿ ತಿಂಗಳ 2 ನೆ ಸಂಚಿಕೆಯಲ್ಲಿ  ಮೂಡಿಬಂದಿದೆ.

 

Leave a Reply

Your email address will not be published. Required fields are marked *