ಶೈಕ್ಷಣಿಕ ಪ್ರವಾಸದ ನೆನಪುಗಳು

ನೈಜ ಪ್ರಕೃತಿಯ ಪಾಠಗಳನ್ನು ಕಲಿಯಲು ಶೈಕ್ಷಣಿಕ ಪ್ರವಾಸವು ಒಂದು ಸದಾವಕಾಶ. ಇಂತಹ ಒಂದು ಅವಕಾಶ ಒದಗಿಸಿಕೊಟ್ಟದ್ದು ನಮ್ಮ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು.

ಅಂತಿಮ ವರ್ಷದ ಬಿ.ಎಸ್ಸಿ. ವಿದ್ಯಾರ್ಥಿಗಳಾದ ನಾವು ಗೋಕರ್ಣ-ಕಾರವಾರದ ಈ ಪ್ರವಾಸದಲ್ಲಿ ಭಾಗಿಯಾದೆವು. ಇಲ್ಲಿ ನಾವು ಆಹಾರ ತಯಾರಿಕಾ ಕಾರ್ಖಾನೆ ಹಾಗೂ ಸೆಂಟ್ರಲ್ ಮರೈನ್ ಫೀಶರೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (CMFRI) ಗೆ ಭೇಟಿ ನೀಡಿದೆವು. ಈ ಪ್ರವಾಸವು ಪ್ರಾಣಿಶಾಸ್ತ್ರ ಹಾಗೂ ರಾಸಾಯನಿಕಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಾದ ನಮಗೆ ಬಹು ಉಪಕಾರಿಯಾಗಿದ್ದು ಸುಳ್ಳಲ್ಲ. ಹಾಗೆಯೇ ಪ್ರಾಯೋಗಿಕ ಅನುಭವ ಪಡೆಯುವಲ್ಲಿ ಸಹಕಾರಿಯಾಗಿತ್ತು.

ನಮ್ಮ ಪ್ರವಾಸವು ನವೆಂಬರ್ ತಿಂಗಳಿನ 18ನೇಯ ತಾರೀಖಿನಂದು ಬೆಳಗಿನ ಜಾವ ಪ್ರಾರಂಭವಾಯಿತು. ಶಿವಮೊಗ್ಗದಿಂದ 6.30ಕ್ಕೆ ಉತ್ಸಾಹದಿಂದ ಹೊರಟೆವು. 10.30ರ ಸುಮಾರಿಗೆ ಬಂದಿತು ನಮ್ಮ ಮೊದಲ ನಿಲ್ದಾಣ- ಭೀಮೇಶ್ವರ ದೇವಸ್ಥಾನ. ಅಲ್ಲಿಯ ಆಧ್ಯಾತ್ಮಿಕತೆ ಮತ್ತು ಪ್ರಕೃತಿಯ ಸೌಂದರ್ಯ ಕಣ್ಮನ ಸೆಳೆಯುವಂತಿತ್ತು. ಶಾಂತಿಯುತ ವಾತಾವರಣದಲ್ಲಿ ನೆನೆದ ನಂತರ ನಾವು ಕುಮಟಾ ಕಡೆಗೆ ಪ್ರಯಾಣ ಬೆಳೆಸಿದೆವು. ಅಲ್ಲಿಗೆ ಮಧ್ಯಾಹ್ನ 1.00ರ ಹಾಗೆ ತಲುಪಿದ ನಾವು ಭೇಟಿ ನೀಡಿದ್ದು ಅಲ್ಲಿಯ ವಾತ್-ಜಾತ್ ಫಾರ್ಮಾ ಫುಡ್ಸ್ ಕಾರ್ಖಾನೆಗೆ (Vatjat Pharma Foods). ಅಲ್ಲಿ ರಾಸಾಯನಿಕ IP (Ingress Protection Grade) ದರ್ಜೆಯ ಉತ್ಪನ್ನ, ಆಹಾರ ಉತ್ಪನ್ನಗಳ ತಯಾರಿಕೆಯ ಬಗ್ಗೆ ಅರಿತುಕೊಂಡೆವು.

ಸಂಜೆ 4.00ರ ಹೊತ್ತಿಗೆ ನಾವು ಗೋಕರ್ಣ ತಲುಪಿದೆವು. ಅಲ್ಲಿ ಕರಾವಳಿಯ ಕಲರವವು ನಮ್ಮನ್ನು ಸ್ವಾಗತಿಸಿತ್ತು. ಹತ್ತಿರದಲ್ಲಿಯೇ ಇದ್ದ ಹೋಂ ಸ್ಟೇಯಲ್ಲಿ ನಮಗಾಗಿ ಕಾಯ್ದಿರಿಸಿದ್ದ ಕೋಣೆಗಳಿಗೆ ತೆರಳಿ ಸ್ವಲ್ಪ ಹೊತ್ತು ವಿಶ್ರಮಿಸಿ ಎದುರಿನಲ್ಲಿಯೇ ಇದ್ದ ಬೀಚ್ ಗೆ ವಾಯುವಿಹಾರಕ್ಕಾಗಿ ಹೊರಟೆವು. ಹಾಗೆಯೇ ನಮ್ಮ ಪ್ರಾಣಿಶಾಸ್ತ್ರ ವಿಭಾಗಕ್ಕೆ ಬೇಕಾಗುವ, ಅಲ್ಲಿ ಸಿಗುವ ಹಾಗೂ ನಾವು ಸಂಗ್ರಹಿಸಬಹುದಾದ ಮಾದರಿ(Specimen) ಗಳನ್ನು ಸಂಗ್ರಹಿಸಿ, ಸ್ನೇಹಿತರೊಡನೆ ಸಮುದ್ರದ ಅಲೆಗಳ ಇಂಪಾದ ದನಿಯನ್ನು ಸವಿಯುತ್ತಾ ಕಾಲ ಕಳೆದೆವು. ಸಂಜೆಯ ವೇಳೆಗೆ ಮಹಾಬಲೇಶ್ವರ ಸ್ವಾಮಿಯ ದರ್ಶನ ಪಡೆದು ಅಲ್ಲಿಯೇ ಪ್ರಸಾದ ಸ್ವೀಕರಿಸಿ ನಮ್ಮ ಕೋಣೆಗಳಿಗೆ ಮರಳಿ ವಿಶ್ರಾಂತಿ ಪಡೆದೆವು.

ಮರುದಿನ, ಗೋಕರ್ಣದಿಂದ ಕಾರವಾರದ ಕಡೆಗೆ ಬೆಳಗ್ಗೆ 8.00ಕ್ಕೆ ಹೊರಟು ಅಂದಿನ ನಮ್ಮ ಮೊದಲ ನಿಲ್ದಾಣವಾದ CMFRI (Central Marine Fisheries Research Institute) ತಲುಪಿದೆವು. ಇಲ್ಲಿ ನಮಗೆ ಸಮುದ್ರ ಜಗತ್ತಿನ ಅಚ್ಚರಿಯ ಪರಿಚಯವಾಯಿತು. ಇಲ್ಲಿ ನಾವು ಬ್ರೂಡರ್(Brooder) ಗಳನ್ನು ನೋಡಿ, ಅದರ ಗುಣಲಕ್ಷಣಗಳ ಬಗ್ಗೆ ಅರಿತೆವು.

ಮಧ್ಯಾಹ್ನ 2.15ರ ಹಾಗೆ ಕಾರವಾರದ ಮೀನು ಮಾರುಕಟ್ಟೆಗೆ ಹೋಗಿ, ನಮ್ಮ ಪ್ರಯೋಗಾಲಯಕ್ಕೆ ಬೇಕಾದ ಮಾದರಿಗಳನ್ನು ಖರೀದಿ ಮಾಡಿದೆವು. ನಂತರ 3.30ರ ಹಾಗೆ ರವೀಂದ್ರನಾಥ್ ಟಾಗೋರ್ ಬೀಚ್ ಗೆ ಹೋಗಿ ಅಲ್ಲಿ ಸೀಗಡಿ(Shrimp), ಏಡಿ ಹಾಗೂ ಇತರ ಮಾದರಿಗಳನ್ನು ಸಂಗ್ರಹಿಸಿದೆವು.

ಸಂಜೆ 5.30ಕ್ಕೆ ಹೊನ್ನಾವರದೆಡೆಗೆ ಹೊರಟು ಅಲ್ಲಿ ಬೋಟಿಂಗ್ ನ ಅನುಭವ ಪಡೆದೆವು. ಜೊತೆಗೆ ವಿಶೇಷ ಸಸ್ಯ ಬೇರುಗಳಾದ  ನ್ಯೂಮಾಟೋಫೋರ್ಗಳನ್ನು (pneumatophores) ನೋಡಿದೆವು. ಈ ಬೇರುಗಳು ಸಸ್ಯಗಳಿಗೆ ನೀರಿನಲ್ಲಿ ಉಸಿರಾಡಲು ಸಹಾಯ ಮಾಡುತ್ತವೆ ಎಂದು ತಿಳಿದೆವು. ನಂತರ ಅಲ್ಲಿಂದ ಸಂಜೆ 7.30ಕ್ಕೆ ಶಿವಮೊಗ್ಗದ ಕಡೆಗೆ ಮನದ ತುಂಬಾ ನೆನಪುಗಳ ಜೊತೆಗೆ ಶೈಕ್ಷಣಿಕ ಪ್ರವಾಸದ ಪ್ರಾಮುಖ್ಯತೆಯನ್ನು ಅರಿತು ನಮ್ಮ ಪ್ರಯಾಣವನ್ನು ಬೆಳೆಸಿದೆವು.

ಈ ಎರಡು ದಿನದ ಪ್ರವಾಸವು ಶಿಕ್ಷಣ, ಆಧ್ಯಾತ್ಮಿಕತೆ, ಸಂಸ್ಕೃತಿಯ ಪರಿಪೂರ್ಣ ಮಿಶ್ರಣವಾಗಿದ್ದು- ಎಂದೆಂದಿಗೂ ಮನದಲ್ಲಿ ಉಳಿಯುವ ಅನುಭವವಾಗಿದೆ. ಅಲ್ಲದೆ ಪುಸ್ತಕದಲ್ಲಿ ಓದಿದ ವಿಷಯಗಳನ್ನು ನೈಜ ಜಗತ್ತಿನಲ್ಲಿ ನೋಡುವ, ಅನುಭವಿಸುವ ಅವಕಾಶ ನಮ್ಮದಾಗಿಸಿಕೊಂಡೆವು. ನಾನು-ನೀನು ಎಂಬ ಅಂತಾರವಿಲ್ಲದೆ ಎಲ್ಲರೊಂದಿಗೆ ಬೆರೆತು ಕಳೆದ ಈ ಎರಡು ದಿನ ಅವಿಸ್ಮರಣೀಯ.

ಶ್ರೇಯಾ. ಪಿ

ಅಂತಿಮ ಬಿ. ಎಸ್ಸಿ. ವಿದ್ಯಾರ್ಥಿನಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

Leave a Reply

Your email address will not be published. Required fields are marked *