ಅಶೋಕ ವನದೊಳು ಎರಡು ದಿನಗಳಿಂದ ನಿರಂತರ ಬೀಸಿದ “ಅಮೃತ” ಎಲರು(ಗಾಳಿ) ನೀವು.. ಪದ ಪುಂಜಗಳ ಬಲೆಯೊಳಗೆ ಸಿಲುಕಲಸಾಧ್ಯವಾದ ನಿಮ್ಮೀ ಆತ್ಮ ವಿಶ್ವಾಸವ ಹೇಗೆಂದು ವರ್ಣಿಸಲಿ!!!
ಭಾಸ್ಕರನ ಭವ್ಯ ತೇಜಸ್ಸು ಒಂದೆಡೆಯೇ ಕೇಂದ್ರೀಕೃತವಾಗಿ ಪ್ರಜ್ವಲಿಸುವಂತಿರುವ ನಿಮ್ಮ ವ್ಯಕ್ತಿತ್ವ ಸರಳತೆಯ ಆಡಂಬರವೇ ಆಗಿತ್ತು ನಮಗೆ……
ಅಂಬರದಂತೆ ತೆರೆದಿಟ್ಟುಕೊಂಡ ನಿಮ್ಮ ಮೆದುಳು ಅಂಬುದಿಯಂತೆ ಹಲವು ಅರಿವ ಹೊಳೆಯ ಸಂಗಮಿಸಿಕೊಂಡು ತುಂಬಿಕೊಳ್ಳದೇ ಇನ್ನಷ್ಟು ಅರಿವಿಗಾಗಿ ಹವಣಿಸುತ್ತಿದೆ.. ನಿಮ್ಮರಿವ ಛಾಯೆ ನಮ್ಮೆಲ್ಲರನಪ್ಪಿ ನದುಳಂತೆ ಹೊಳೆವಂತಿದೆ!.. “ದೇಶ ಮೊದಲು!” ಎಂದೆದೆಗೊಗೆದ ನಿಮ್ಮ ಮೊದಲ ಮಾತಿನ ಬೀಜ ಯುವಕ ಯುವತಿಯರಾದ ನಮ್ಮ ಮನಭೂಮಿಗೆ ಬಿದ್ದು ಹಸಿರೊಡೆದಿದೆ. ಮೊದಲ ದಿನದ ಹತ್ತು ಮಾತುಗಳಲ್ಲಿ ಎಲ್ಲರ ಮಸ್ತಕದಲ್ಲಿ ಅಚ್ಚಳಿಯದೇ ಉಳಿದ ಮಾತು ‘ನಾನ್ಯಾಕೆ ಹೀಗಿರುವೆ?’ ಹಾಗೂ ಸಾಧನೆಯ ಬಾಗಿಲ ತೆರೆಯಲು “ಮುಂದೆ ಗುರಿ – ಹಿಂದೆ ಉರಿ” ಇರಬೇಕು ಎಂದು ನಿಮ್ಮ ವಾಕ್ಯಗಳ ಹೆದೆಯಲ್ಲೇ ನೇರ ಬಾಣವ ಅಂತರಾಳಕ್ಕೆ ಗುರಿ ಇಟ್ಟು ಬೀಸಿದಿರಿ ,ನಮ್ಮೆಲ್ಲರನ್ನೂ ಖಾರವಾದ ನಿಂದನೆಯಲ್ಲಿ ಮೀಯಿಸಿ ಅದರ ಹಸಿ ಆವಿಯಾಗುವ ಮೊದಲೇ ಸಾಧನೆಯ
ಮಾರ್ಗವ ಭಾರ್ಗವ ಅರ್ಜುನನಿಗೆ ವಿವರಿಸಿದಂತೆ ವಿವರಿಸಿದಿರಿ..
ಸೈನಿಕನಾಗಿ ದೇಶದ ಜೀವಮಣಿಯ ಹೊಳಪಲ್ಲಿ ಪ್ರಜ್ವಲಿಸಿದವರು, ಕಷ್ಟ ಒದಗಿಸುವ ಪಾಠಗಳ ನಿಮ್ಮುದಾರಣೆ ಮೂಲಕವೇ ಅಚ್ಛರಿಯಂತೆ ಅರಿವಂತೆ ಮಾಡಿದಿರಿ. ಜ್ಞಾನಕ್ಕೂ ವಿದ್ಯೆಗೂ ಕಾಗದಕ್ಕೂ ಇರುವ ಅಂತರವ ಅರ್ಥೈಸಿದಿರಿ!, ಹದಿ ಹರೆಯದ ವಯಸ್ಸಿನ ಭಾವಕ್ಕಿರುವ ಮರ್ಕಟನ ಬುದ್ಧಿಯ ತಿಳಿಸಿದಿರಿ. ನಿನ್ನಿಂದಸಾಧ್ಯ, ನಿನ್ನಿಂದಸಾಧ್ಯ!! ಎಂಬ ಸಮಾಜದೊಳು ನಿನ್ನಿಂದ – “ಸಾಧ್ಯ” ಎನ್ನುವ ಅಕ್ಷರಾರ್ಥವನ್ನೂ ಜೀವಂತ ಉದಾಹರಣೆ ಮೂಲಕ ಮನದಾಳಕ್ಕಿದು ಚಿತ್ರಿಸಿದ್ದೀರಿ, ‘ಹಸಿವು’ ಪದದ ನಿಜಾರ್ಥವ ತಿಳಿಸಿದ ನಿಮಗೆ ಋಣಿ ನಾನು ನಿಮ್ಮಡಿದಾವರೆಗಳಿಗೆ♀…..
ಯಾವುದೊಂದೋ ಪಶ್ಚಾತಾಪದ ಅಗ್ನಿಯೊಳು ಬೇಯುತ್ತಿದ್ದ ಬಳಲುತ್ತಿದ್ದ ನನ್ನಾತ್ಮಕ್ಕೆ ಸಾಂತ್ವಾನ,ಸ್ಫೂರ್ತಿಯ ತುತ್ತ ನೀಡಿ ಮರಣದ ಮಡುವಿನಿಂದ ಹೊರತಂದ ನಿಮಗೆ… ಕೋಟಿ ಕೋಟಿ ಪ್ರಣಾಮಗಳು..
ತಂದೆಯ ಸ್ಥಾನದಲ್ಲಿರುವ ನಿಮಗೆ…
ಭಾವೋನ್ಮಾದದಿಂದ ಎರಗುವೆನು ನಾನು..
ಇದೊ ನಿಮಗಿದು ಭಾವಕ್ಷರಗಳ ಒಂದನೆ
ಕವನ ಕೆ. ಓ,
ಪ್ರಥಮ ಬಿಎ, ವಿದ್ಯಾರ್ಥಿನಿ
ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ