ಯಾಕೆ !? ತಾಯಂದಿರ ದಿನದಂದು ಮಾತ್ರ ತಾಯಿಯ ಬಗ್ಗೆ ಭಾವನಾತ್ಮಕವಾಗಿ ಸೋಶಿಯಲ್ ಮೀಡಿಯಾಗಳಲ್ಲಿ, ಪತ್ರಿಕೆಗಳಲ್ಲಿ ಬರೆಯಬೇಕೇ ? ತನ್ನ ಹೃದಯದ ಮಂದಿರದಲ್ಲೇ ನಮ್ಮನ್ನು ಇಟ್ಟುಕೊಂಡಿರುವ ತಾಯಿಯ ಬಗ್ಗೆ ಪ್ರತಿದಿನವೂ ನೆನೆಸಿಕೊಳ್ಳುತ್ತಾ ಮೈ ಮರೆಯಬಾರದೇಕೆ ? ಅದಕ್ಕಾಗಿಯೇ ಇವತ್ತೊಂದು ತಾಯಿಯ ಬಗೆಗಿನ ಭಾವನಾತ್ಮಕ ಲೇಖನವನ್ನು ಓದಿ ;
ಸ್ವಾಭಿಮಾನ, ಧೈರ್ಯ, ಆತ್ಮ ವಿಶ್ವಾಸ, ಆತ್ಮಗೌರವವನ್ನು ನಾನು ಕಲಿಯಲಾರಂಬಿಸಿದ್ದು ನನ್ನಮ್ಮನನ್ನು ನೋಡಿ. ಅವಳು ನಿರೂಪಮಾಧ್ಬುತ. ಅವಳನುಭವಿಸಿದ ಕಷ್ಟಗಳು, ನೋವು, ಅವಮಾನಗಳು, ಅನುಮಾನಗಳು ಒಂದೇ ಎರಡೆ !..? ಆಕೆಯೊಡಲಾಳದಲ್ಲಿ ಅದೆಷ್ಟು ನೋವುಗಳಿದೆಯೋ ಅದೆಷ್ಟು ಪ್ರಶ್ನೆಗಳಿವೆಯೋ..? ಬಲ್ಲವರಾರು !. “ಹುಟ್ಟಿನಿಂದ ಸಾಯವವರೆಗೂ ಇದೆ ಹಣೆ ಬರಹ”. ಇದು ಅವಳ ಸರ್ವೇ ಸಾಮಾನ್ಯ ಮಾತು. ತನ್ನ ನೋವಿನಡುಗೆಯನ್ನ ತಾನೊಬ್ಬಳೇ ಉಂಡು ಅರಗಿಸಿಕೊಳ್ಳಲೂ ಆಗದೆ ಹಾಗೆ ಬಸಿರಲ್ಲೇ ಇಟ್ಟುಕೊಳ್ಳಲೂ ಆಗದೇ ಮರುಗುತಿಹಳು ನನ್ನಮ್ಮ.
ಕೂಡು ಕುಟುಂಬವೆಂಬ ಸಂಪಿಗೆ ಮರದಲ್ಲಿ ಅರಳಿದ ಮೊದಲ ಹೂವು ನನ್ನಮ್ಮ. ಅವಳು ತನ್ನ ಹದಿಮೂರನೇ ವಯಸ್ಸಿಗೇ ತಂದೆಯನ್ನು ಕಳೆದುಕೊಂಡಳು, ತಂದೆ ಹೊರಟ ಹಲವು ದಿನಗಳಲ್ಲೇ ಕೂಡು ಕುಟುಂಬ ಬೇಸಿಗೆಯಲ್ಲಿ ಗದ್ದೆ ಬಿರಿದಂತೆ ಬಿರಿಯಿತು. ಆಗ ಆಕೆಯ ಮೇಲೆ ಮೂವರು ತಂಗಿಯರು ಹಾಗೂ ಓರ್ವ ತಮ್ಮನ ಜವಾಬ್ದಾರಿ ಬಿತ್ತು. ಏನೂ ಅರಿಯದ ಮುಗ್ಧ ಮನದ ಅಮ್ಮ ಒಂದೆಡೆಯಾದರೆ ಇನ್ನೊಂದೆಡೆ ಅರಿಯದ ವಯಸ್ಸಿನಲ್ಲಿ ತಂದೆಯಿಂದ ತೆಗೆದುಕೊಂಡ ಭಾಷೆ, ದುಡಿಯಲೇಬೇಕಾದ ಅನಿವಾರ್ಯತೆ ಎದುರಾಗಿತ್ತು. ಇಂತಹ ಸಂದಿಗ್ಧ ಸಂದರ್ಭದಲ್ಲಿ ಊರಿನ ಬ್ರಾಹ್ಮಣರ ಮನೆಯಲ್ಲಿ ಕಾಯಕ ತೋರಿದಾಗ ಅವಳಿಗೆ ಬೆಲ್ಲ ತಿಂದಷ್ಟು ಖುಷಿ. ಯಾರದ್ದೋ ಮನೆಯ ಎಂಜಲ ಬಟ್ಟಲ ತೊಳೆದಳು. ಆದರೆ, ಒಂದು ದಿನವೂ ಕೂಡ ತನ್ನ ಕೆಲಸದ ಮೇಲೆ ಅಸೂಯೆ ಪಡಲಿಲ್ಲ ಆಕೆ.
“ಸ್ವಂತ ದುಡಿಮೆಯೇ ಜೀವನ” ಎಂಬುದೇ ಅಮ್ಮನ ಬಾಳ ಸೂಕ್ತಿ. ಕಷ್ಟಗಳ ಸಾಲು ಒಂದರಮೇಲೊಂದು ಬಂದರೂ ಎಂದಿಗೂ ಆತ್ಮ ವಿಶ್ವಾಸ ಕಳೆದುಕೊಳ್ಳದೇ ಗಟ್ಟಿ ಗೊಡೆಯಾಗಿ ನಿಂತಳು. ಮನೆಯನ್ನು ನಿಭಾಯಿಸಲು ಅಕ್ಕನಿಗೊಬ್ಬಳಿಗೆ ಕಷ್ಟ ಎಂದು ಸ್ವ – ಅರಿವು ಮೂಡಿಸಿಕೊಂಡ ತಂಗಿಯರು ಊರಲ್ಲಿದ್ದ ಶಾಲೆಯಲ್ಲಿ ಅಕ್ಷರ ಜ್ಞಾನವನ್ನು ಪಡೆದುಕೊಂಡರು. ಪ್ರೌಢ ಶಿಕ್ಷಣಕ್ಕಾಗಿ ದೂರದೂರಿಗೆ ನಡೆದೇ ಹೋಗಬೇಕಾದ್ದರಿಂದ ಮೊದಲು ಮತ್ತು ಕೊನೆಯ ತಂಗಿ – ತಮ್ಮಂದಿರು ವ್ಯಾಸಂಗವನ್ನು ಅಲ್ಲೇ ಅರ್ಧ ದಾರಿಗೇ ಮರೆತರು. ಆದರೆ ಕಲಿಕೆಯ ಹಸಿವು ಎರಡನೆ ತಂಗಿಯನ್ನು ಬಿಡಲೇ ಇಲ್ಲ, ಆಕೆ ಕೂಡ ತನಗೆ ಕೈಗೆಟಕಿದ ಕೆಲಸ ಮಾಡಿ ತನ್ನ ಓದನ್ನು ಮುಂದುವರಿಸಿದಳು. ಅದೆಷ್ಟೋ ದಿನದ ಉಪವಾಸ, ಅದೆಷ್ಟೋ ಗೋಳಾಟ, ಕಂಬನಿಗಳು, ಬಿಸಿಯುಸಿರು ನನ್ನಮ್ಮನ ದೇಹದ ಮಾಂಸ ಖಂಡಗಳಂತೆ….. ಇದರ ನಡುವೆಯೇ ಪುಟ್ಟ ತಮ್ಮನ ಆರೋಗ್ಯ ಕೈ ಮೀರಿದಾಗ ತಾನೊಬ್ಬಳೇ ಒಬ್ಬ ಪುರುಷನ ಸರಿ ಸಮನಾಗಿ ನಿಂತು ಯಮನೆದುರು ತಿಂಗಳುಗಟ್ಟಲೆ ಹೋರಾಡಿ ತಮ್ಮನನ್ನು ಉಳಿಸಿಕೊಂಡಳು ನನ್ನಮ್ಮ…. ತನ್ನ ಯವ್ವನ ಪೂರ್ತಿ ಬೇರೆಯವರಿಗಾಗಿಯೇ ತೆಯ್ದಳು ಅಮ್ಮ…..ಅವಳೇ ನನ್ನ ಅಮ್ಮ…..
ವಿವಾಹದ ವಯಸ್ಸಿಗೆ ಬಂದಾಗ ಆಕೆಯ ಬಾಳಿಗೇ ಇನ್ನೊಂದು ಅಚ್ಚರಿ ಕಾದಿತ್ತು. ಅದುವೇ ತಾಯಿ ಇಲ್ಲದ ಎರಡು ಮುಗ್ಧ ಮಕ್ಕಳ ಜವಾಬ್ದಾರಿ. ತಿರಸ್ಕರಿಸಲು ಅವಕಾಶವೇ ಇಲ್ಲದಂತಹ ಸಂದರ್ಭ ಒದಗಿದಾಗ ಆಕೆಯ ಇಷ್ಟ ಕಷ್ಟಗಳನ್ನು ಕೇಳಿದವರೇ ಇಲ್ಲ !. ನವ ಜೀವನದಲ್ಲೂ ನವ ತಿರುವುಗಳು, ಹೊಸ ಸಮಸ್ಯೆಗಳು. ಬೇರಾವುದೇ ದಾರಿ ಇಲ್ಲದೆ ಕಂಡಂತಹ ದಾರಿಯಲ್ಲಿ ನಡೆಯಬೇಕಾಯಿತು. ತವರು ಮನೆಯ ಸೊಬಗನ್ನು ತೊರೆಯಲೇಬೇಕಾದ ಆ ಕಷ್ಟದ ಅನುಭವವನ್ನು ಅನುಭವಿಸಿದವರಿಗೆ ಗೊತ್ತು. ಹೊಸ ಮನೆಯಲ್ಲಿ ನಾಲ್ಕು ಜನ ಕುಳಿತುಕೊಳ್ಳಲು ಕಷ್ಟವಾಗುವಂತಹ ಇಕ್ಕಟ್ಟಿನ ಜಾಗ….. ತರಕಾರಿ ಹೆಚ್ಚುವ ಕತ್ತಿಗೂ ಗತಿ ಇಲ್ಲದಂತಹ ಕ್ಲಿಷ್ಟ ಪರಿಸ್ಥಿತಿ, ಜೊತೆಗೆ ಅರಿಯದ ಎರಡು ಮುಗ್ಧ ಮಕ್ಕಳು ಬೇರೆ. ಇಂತಹ ವಿಷಮ ಪರಿಸ್ಥಿತಿಯಲ್ಲೂ ನನ್ನ ಅಮ್ಮನಿಗೆ ತಾನು ಸ್ವಂತ ಮನೆಯನ್ನ ಕಟ್ಟಲೇಬೇಕೆಂಬ ಛಲ, “ನನ್ನ ಕಣ್ಣೀರು, ನನ್ನ ನೋವುಗಳು ನನ್ನ ಮಕ್ಕಳಿಗೆ ಕಾಣಬಾರದು” ಎಂದು ಕೈಲಾದಷ್ಟು ದುಡಿದು ಸಂಪಾದಿಸಿದ ಹಣದಿಂದ ಮನೆಯ ಅಡಿಪಾಯವನ್ನಂತು ಮಾಡಿದಳು, ಆದ್ರೆ ಆ ಹೊತ್ತಿಗೆ ಗರ್ಭಿಣಿಯಾಗಿದ್ದ ನನ್ನಮ್ಮನಿಗೆ ಮತ್ತೊಂದು ಆಘಾತ ಕಾದಿತ್ತು.
ತುಂಬು ಗರ್ಭಿಣಿಯಾದ ಅವಳು ತಣ್ಣಗೆ ಬಾಗಿಲ ಬಳಿಯಲ್ಲಿ ದಣಿದು ಮಲಗಿದ್ದಾಗ ಆಡುವ ಮಕ್ಕಳೆರಡು ಬಂದು ಅರಿಯದೆ ಆಕೆಯ ಹೊಟ್ಟೆಯ ಮೇಲೆ ತಮ್ಮ ಕಾಲಿಟ್ಟು ಜಿಗಿದರು. ತೀವ್ರ ನೋವಲ್ಲಿ ಹೊಟ್ಟೆಯ ಒಳಗಡೆಯೇ ಒದ್ದಾಡಿ – ಒದ್ದಾಡಿ ಕಣ್ತೆರೆವ ಮೊದಲೇ ತನ್ನ ಕಣ್ಣನ್ನ ಗರ್ಭದಲ್ಲೇ ಮುಚ್ಚಿತು ಆ ಮಗು. ಒಂಭತ್ತು ತಿಂಗಳು ಹೊತ್ತ ಮಗು ಕೈಗೆ ಸಿಗದಂತಹ ಪರಿಸ್ಥಿತಿಯಲ್ಲೂ ಕುಗ್ಗದ ನನ್ನಮ್ಮ, ನಿಂದನೆಯ ಮಾತುಗಳನ್ನು ನುಂಗಿದ ನನ್ನಮ್ಮ ತನ್ನ ಮನೆಯ ಕೆಲಸಗಳನ್ನು ಮುಂದುವರಿಸಿದಳು. ಅಷ್ಟರಲ್ಲಿ ಮತ್ತೆ ಗರ್ಭಿಣಿಯಾದ ನನ್ನಮ್ಮ ನನ್ನನ್ನು ತನ್ನ ಗರ್ಭದಲ್ಲಿ ಹೊತ್ತಳು. ತಾಯಿ ಇಲ್ಲದ ಆ ಎರಡು ಮುಗ್ಧ ಮಕ್ಕಳನ್ನು ಎಂದಿಗೂ ಬೇರೆಯವರೆಂದು ಭಾವಿಸದೇ ತನ್ನ ಸ್ವಂತ ಮಕ್ಕಳಿಗಿಂತಲೂ ಹೆಚ್ಚು ಪ್ರೀತಿಯನ್ನು ಉಣಿಸಿ ಸಾಕಿದಳು. ನಾನು ಆಕೆಯ ಸ್ವಂತ ಮಗಳೇ ಆದರೂ ನನ್ನನ್ನು ಎಂದಿಗೂ ಕೂಡ ಅತಿಯಾಗಿ ಪ್ರೀತಿಸಲಿಲ್ಲ, ನನಗೆ ಕೆಲವೊಮ್ಮೆ ಅನುಮಾನವಾಗುತ್ತದೆ “ಈಕೆ ನಿಜವಾಗಿಯೂ ನನ್ನ ತಾಯಿಯೇ” ಎಂದು. ಇಂದಿಗೂ ಕೂಡ ನನಗೆಂದೇ ಪ್ರತ್ಯೇಕವಾಗಿ ಯಾವುದನ್ನೂ ಎತ್ತಿಟ್ಟವಳಲ್ಲ ನನ್ನಮ್ಮ, ಒಂದು ದಿನವೂ ನನ್ನನ್ನ ಮುದ್ದು ಮಾಡಿದವಳಲ್ಲ ನನ್ನಮ್ಮ, ಅಬ್ಬಾ….! ಅವಳಷ್ಟು ತಾಳ್ಮೆ ಯಾರಿಗೂ ಇಲ್ಲ. ನೋವಿನಲ್ಲಿ ತನ್ನ ಹೃದಯ ಜರ್ಜರಿತವಾಗಿದ್ದರು ಎಂದಿಗೂ ರಕ್ತದ ಕಲೆಯನ್ನು ತೋರಿದವಳಲ್ಲ ನನ್ನಮ್ಮ. ಅವಲಂಬನೆ ಎಂಬುದೊಂದು ಬಂಧನ ಎಂದು ಅರಿತ ಅವಳು ಮುಕ್ತ ಜೀವನವನ್ನೇ ನಡೆಸಿದಳು. ಆಕೆಯ ಪ್ರೀತಿಗೆ ಪಾಲುದಾರರಿದ್ದಾರಲ್ಲವೇ, ಅವರಿಗೂ ಕೂಡ ನ್ಯಾಯ ಒದಗಿಸಬೇಕಲ್ಲವೇ ?!. ಪುಣ್ಯ ಮಾಡಿರುವೆನು ಅವಳ ಮಡಿಲ ಮಗುವಾಗಿ ಬೆಳೆಯಲು, ಆಕೆಯ ಜೀವನವೇ ನನಗೆ ಕಲಿಸಿಕೊಟ್ಟ ಪಾಠವೆಂದರೆ ನಾವೆಂದಿಗೂ ಯಾವುದಕ್ಕೂ ಯಾರನ್ನೂ ಅವಲಂಬಿಸಬಾರದು ಅದು ಅನ್ನಕ್ಕೇ ಆಗಿರಲಿ, ಅರಿವಿಗೇ ಆಗಿರಲಿ ಅಥವಾ ಆಶ್ರಯಕ್ಕೇ ಆಗಿರಲಿ…….ಜಗತ್ತಿನ ಎಲ್ಲಾ ತಾಯಂದಿರಿಗೂ ಶತ ಶತ ನಮನಗಳು.
ಬರಹ : ಕವನ ಕೆ.ಓ,
ಪ್ರಥಮ ವರ್ಷದ ಬಿಎ ವಿದ್ಯಾರ್ಥಿನಿ,
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ
Comment (8)
Ganesh Rao Nadiger| December 1, 2023
ಬರಹ ಚೆನ್ನಾಗಿದೆ, ಪ್ರೌಢವಾಗಿದೆ, ಆತ್ಮೀಯವೂ ಆಗಿದೆ. ತಾಯಿಯ ಕುರಿತಾದ ನೆನಪು ಯಾವಾಗಲೂ ಭಾವುಕವೇ ಆಗಿರುತ್ತದೆ. ತಾಯಿಯ ತ್ಯಾಗಕ್ಕೆ, ಆಕೆಯ ಪ್ರೀತಿ -ವಾತ್ಸಲ್ಯಕ್ಕೆ, ಕಟ್ಟಿಕೊಟ್ಟ ಬಾಳಿನ ಬುತ್ತಿಗೆ ಬೆಲೆ ಕಟ್ಟಲಾಗದು. ಇಂತಹ ಒಳ್ಳೆಯ ಬರವಣಿಗೆಗೆ ಅಭಿನಂದನೆಗಳು
Nagendra| December 1, 2023
ತಾಯಿಯೆಂಬ ಒಂದು ಜೀವ ಎಷ್ಟೆಲ್ಲಾ ಕಷ್ಟಗಳನ್ನು ಅನುಭವಿಸಿಯೂ ತನ್ನ ಮಕ್ಕಳನ್ನು ಒಂದು ಗುರಿಯೆಡೆಗೆ ಸೇರಿಸಬೇಕೆಂದು ಸೆಣಸಾಡುತ್ತದೆ…… ಅಂತಹ ತಾಯ್ತನವನ್ನು ಅನುಭವಿಸುವ ಪ್ರತಿಯೊಂದು ಹೆಣ್ಣಿಗೂ ಶತಕೋಟಿ ನಮನಗಳು
Sangeeta budni| December 1, 2023
ನಿನ್ನ ಪ್ರತಿ ಪದದಲ್ಲಿ ನಿನ್ನ ತಾಯಿಯ ಅಂತರಾಳದ ಭಾವ ಅಡಗಿದೆ . ನಿಜಕ್ಕೂ ತಾಯಿ ಅನ್ನೊ ಪದವನ್ನು ಎಷ್ಟೇ ವರ್ಣಿಸದರೂ ಸಾಲದು. ಕ್ಷಣ ಕಂಬನಿ ತರಿಸಿದ ಲೇಖನ ಕವನಾ.
Jyothi| December 1, 2023
ತುಂಬಾ ಮುದ್ದಾದ ಬರವಣಿಗೆ ಕವನ…. ಪ್ರಭುದ್ಧವಾದ ಅರ್ಥಪೂರ್ಣ ಪದಗಳು…ಬರವಣಿಗೆಯನ್ನು ಮುಂದುವರಿಸಿಕೊಂಡು ಹೋಗು all the best for your future❤️❤️❤️
Jyothi| December 1, 2023
ತುಂಬಾ ಮುದ್ದಾದ ಬರವಣಿಗೆ ಕವನ…. ಪ್ರಭುದ್ಧವಾದ ಅರ್ಥಪೂರ್ಣ ಪದಗಳು…ಬರವಣಿಗೆಯನ್ನು ಮುಂದುವರಿಸಿಕೊಂಡು ಹೋಗು all the best for your future
Kavana k.o| October 14, 2024
Thank you so much akka
Jyothi| December 1, 2023
ತುಂಬಾ ಮುದ್ದಾದ ಬರವಣಿಗೆ ಕವನ…. ಪ್ರಭುದ್ಧವಾದ ಅರ್ಥಪೂರ್ಣ ಪದಗಳು…ಬರವಣಿಗೆಯನ್ನು ಮುಂದುವರಿಸಿಕೊಂಡು ಹೋಗು…ಒಳ್ಳೆಯದಾಗಲಿ ನಿನಗೆ, ಮತ್ತಷ್ಟು ಒಳ್ಳೆಯ ಬರವಣಿಗೆಯನ್ನು ಪ್ರಾರಂಭಿಸು
Sandhya| December 1, 2023
ಅದ್ಬುತವಾದ ಲೇಖನ ಕಂದ ❤️
ಅಮ್ಮ ಅನ್ನುವ ಪದವೇ ಅಂತಹದು ಅವಳ ಕರುಣೆ ಆಕಾಶದಷ್ಟು ,ಪ್ರೀತಿ ಕಡಲಾಳದಷ್ಟು…
ನಿಸ್ವಾರ್ಥದ ಪ್ರತಿರೂಪ ಅಮ್ಮ….❤️