ಬದುಕು

ಬದುಕು,
ಬದುಕೊಂದು ಮರ,
ಹುಟ್ಟಿನಿಂದ ಸಾಯುವವರೆಗೂ,
ಸತತವಾಗಿ ಬೆಳೆಯುವ ಹೆಮ್ಮರ.

ಬೆಳೆಸಬೇಕಾಗಿದೆ ಈ ಮರವನ್ನು ಜಾಗ್ರತೆಯಿಂದ,
ಎರೆಯಬೇಕಾಗಿದೆ ಪ್ರೀತಿ, ಮಮತೆ ತುಂಬಿದ ನೀರನ್ನು,
ಹಾಕಬೇಕಾಗಿದೆ ಕರುಣೆ, ವಾತ್ಸಲ್ಯವೆಂಬ ಗೊಬ್ಬರವನ್ನು,
ಸೇರಿಸಬೇಕಾಗಿದೆ ಭಾಂದವ್ಯ, ಭ್ರಾತೃತ್ವವೆಂಬ ಎರೆಹುಳುವನ್ನು,
ಆಗಲೇ ಮರ ಬಿಡುವುದು ಇದೆಲ್ಲದರ ಮಿಶ್ರಿತ ಫಲ-ಪುಷ್ಪಗಳನ್ನು,

ಬದುಕು, ಬದುಕೊಂದು ಮರ.

ಬದುಕಬೇಕು ಹೆಮ್ಮರವಾಗುವ ತನಕ,
ಹೆಮ್ಮರವಾಗಬೇಕು ನೆರಳು ನೀಡುವ ತನಕ,
ನೆರಳು ನೀಡುತಿರಬೇಕು ಸಾಧ್ಯವಾಗುವ ತನಕ,
ಕೊನೆಯ ತನಕ, ಸಾಯುವ ತನಕ………………

ಸಾಗಿಸಲೇ ಬೇಕು, ತೂಗಿಸಲೇ ಬೇಕು,
ಎಷ್ಟಾದರೂ ಖರ್ಚಿರಲಿ ನಡೆಸಲೇಬೇಕು,
ಭಾಗಬೇಕು, ಬೀಗಬೇಕು,
ಏಳಬೇಕು, ಬೀಳಬೇಕು,
ನಗಬೇಕು, ಅಳಬೇಕು,
ಬಂದವರಿಗೆ “ಬಾ” ಎನ್ನಬೇಕು,
ಹೋಗುವವರಿಗೆ “ದಾರಿ” ಬಿಡಬೇಕು,

ಬದುಕು,ಬದುಕೊಂದು ಮರ.

ಮಳೆಯಿರಲಿ-ಬಿಸಿಲಿರಲಿ ಧೃಢವಾಗಿ ನಿಲ್ಲಬೇಕು,
ಕಷ್ಟವಿರಲಿ-ಇಷ್ಟವಿರಲಿ ನಿರಂತರವಾಗಿ ಸಲುಹಬೇಕು,
ಏನಾದರೂ ಸರಿ, ಮುಂದೆಸಾಗುವೇ ಎಂಬ ಛಲವಿರಬೇಕು,
ಸಾಗಬೇಕು, ಸಾಗುತಲಿರಬೇಕು, ಸಾಗಿಸುತಲಿರಬೇಕು,
ನಿನ್ನದೇ ಈ ಬದುಕು, ನೀ ಬದುಕಲೇಬೇಕು,
ಬದುಕು,ಬದುಕೊಂದು ಮರ,

ಬದುಕೊಂದು ಅವಕಾಶ ದೇವರು ಕೊಡುವ ತನಕ,
ಬಳಸಿಕೋ ಮನುಷ್ಯ ನೀ ಇರುವ ತನಕ,
ಬೆಳೆಸಿಕೊ ನಿನ್ನ ತನುವನ್ನು ಎಲ್ಲರೂ ನೆನೆಸುವ ತನಕ,
ಬದುಕು ಮತ್ತೆ ಆ ದೇವರು ಕರೆಯುವ ತನಕ…………

ಬದುಕು,ಬದುಕೊಂದು ಮರ,ಬದುಕೊಂದು ಹೆಮ್ಮರ,
ಬದುಕೊಂದು ವೃಕ್ಷ, ಬದುಕೊಂದು ಕಲ್ಪವೃಕ್ಷ..!!

ಖುಷಿ. ವಿ. ಹಿರೇಮಠ.
ದ್ವಿತೀಯ ಬಿ. ಎ. ವಿದ್ಯಾರ್ಥಿನಿ
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ.