ಸ್ತ್ರೀವಾದವು ವಿಭಿನ್ನವಾದ ಜಾಗತಿಕ ಸಂದರ್ಭಗಳಲ್ಲಿ ತನ್ನದೆ ಸ್ವಂತದ ರೀತಿಯಲ್ಲಿ ಮರು ರೂಪತಾಳುತ್ತಾ ಇಂದಿನ ಜಗತ್ತಿನ ಪ್ರಭಾವಿ ಚಿಂತನಾ ಕ್ರಮ, ರಾಜಕಾರಣ, ಸಾಂಸ್ಕೃತಿಕ ಸಂವಾದ ಇವೆಲ್ಲವೂ ಆಗಿ ಬೆಳೆಯುತ್ತಿದೆ. ಅದು ಹುಟ್ಟಿದ ಕಾಲದಿಂದಲೂ ಮಹಿಳೆಯರ ಅಸ್ತಿತ್ವದ ವಾಸ್ತವಗಳನ್ನು ಎದುರು ಹಾಕಿಕೊಂಡು, ಬಹು ಜ್ಞಾನಗಳನ್ನು ಬಳಸಿಕೊಂಡು ಸಾಮಾಜಿಕವಾಗಿ ಕ್ರಿಯಾಶೀಲವೂ ಆಗಿದೆ. ಕನ್ನಡ ಸಾಹಿತ್ಯ ಸಂಸ್ಕೃತಿಗಳಲ್ಲಿ ಈಗ ಮಹಿಳಾ ಯುಗ, ಅಪೂರ್ವ ಸೃಜನಶೀಲತೆಯ ಕಾಲ. ಈ ಸಂದರ್ಭದಲ್ಲಿ ಅನೇಕ ಮುಖ್ಯ ಸ್ತ್ರೀವಾದಿ ಪಠ್ಯಗಳು ಕನ್ನಡಕ್ಕೆ ಅನುವಾದವಾಗಿ ಬಂದಿವೆ. ಸಿಮೋನ್ ದ ಬೋವ್ಹಾ, ಚಿಮಾಮಂಡಾ ಅಡಿಚಿ ಹೀಗೆ ಅನೇಕ ಬರಹಗಾರ್ತಿಯರು, ಚಿಂತಕಿಯರು ಕನ್ನಡದ ಕಳ್ಳುಬಳ್ಳಿಯನ್ನು ಸೇರಿಕೊಂಡಿದ್ದಾರೆ. ಅವರ ಪಠ್ಯಗಳೊಂದಿಗೆ ಸಂವಾದ ನಡೆಸಲು ನಾವು ಒಂದು ಸರಣಿ ಮಾತುಗಳ ಕಾರ್ಯಕ್ರಮ ಏರ್ಪಡಿಸುತ್ತಿದ್ದೇವೆ. ಈ ಸಂವಾದವು ಕೇವಲ ಈ ಪಠ್ಯಗಳಿಗೆ ಸೀಮಿತವಾಗಿರುವುದಿಲ್ಲ. ಸಮಕಾಲೀನ ಸ್ತ್ರೀವಾದದ ಯಾವುದೇ ಪ್ರಮುಖ ವಿಷಯದ ಬಗ್ಗೆ ಆಗಬಹುದು. ನಿಗದಿತ ದಿನಾಂಕದಂದು ನಮ್ಮ ಮುಖ್ಯ ಲೇಖಕ ಲೇಖಕಿಯರು ಈ ಪಠ್ಯಗಳ ಬಗ್ಗೆ ಮಾತನಾಡಿ ಚರ್ಚೆಯಲ್ಲಿ ಭಾಗವಹಿಸುತ್ತಾರೆ.