• ಅವರೊಬ್ಬರು ಜನಪ್ರಿಯ ಮನೋವೈದ್ಯರು.
• ಶಿವಮೊಗ್ಗೆಯಲ್ಲಿ ಬೇರುಬಿಟ್ಟು ಲಕ್ಷಾಂತರ ಮಾನಸಿಕ ಅಸ್ವಸ್ಥರ ಮನಸ್ಸಿಗೆ ನೆಮ್ಮದಿ, ಆರೋಗ್ಯವನ್ನು ತಂದವರು.
• ಉತ್ತಮ/ಸದಭಿರುಚಿಯ ಹಾಸ್ಯಪ್ರಜ್ಞೆ ಇದ್ದ ನಗುಮೊಗದ ವಾಗ್ಮಿ, ಸಂವಹನಕಾರ.
• ಕಾಡಿನ ಬೆಂಕಿ, ಪ್ರಥಮ ಉಷಾಕಿರಣ ಮತ್ತು ಆಘಾತ ಎಂಬ ಮೂರು ಮನೋವಿಜ್ಞಾನದ ಕಥೆಯುಳ್ಳ ಪ್ರಶಸ್ತಿ ವಿಜೇತ ಚಲನಚಿತ್ರಗಳ ನಿರ್ಮಾಪಕ.
• ಉಷಾಕಿರಣ, ಚಿತ್ತವಿಚಿತ್ರ, ಆಘಾತ, ಮಕ್ಕಳ ಮನಸ್ಸು, ಹಾಸ್ಯರಶ್ಮಿ, ಮನೋಲೋಕ, ಚಿತ್ತಚೇತನ ಇತ್ಯಾದಿ 12 ಪುಸ್ತಕಗಳನ್ನು ರಚಿಸಿದ ವೈದ್ಯ ಸಾಹಿತಿ.
• ಸದಾ ರೋಗಿಗಳಿಂದ ತುಂಬಿರುವ 100 ಕ್ಕೂ ಹೆಚ್ಚಿನ ಹಾಸಿಗೆಗಳುಳ್ಳ ಮಾನಸಿಕ ಆಸ್ಪತ್ರೆಯ ಮಾಲೀಕ.
• ಬುದ್ಧಿಮಾಂದ್ಯ ಮಕ್ಕಳ ಆರೈಕೆಗೆ “ಆಶಾಕಿರಣ”, ಮನೋರೋಗಿಗಳ ಪುನರ್ವಸತಿಗೆ “ಮಾನಸಾಧಾರಾ” ವನ್ನು ಪ್ರಾರಂಭಿಸಿದಾತ.
• ಆಪ್ತಸಮಾಲೋಚನೆ-ಕೌನ್ಸೆಲಿಂಗ್ನಲ್ಲಿ ‘ಎಂ.ಎಸ್’ ಪದವಿ ನೀಡುವ ದೂರ ಶಿಕ್ಷಣವನ್ನು ಪ್ರಾರಂಭೀಸಿದ ‘ಮಾನಸ ಎಜುಕೇಶನಲ್ ಫೌಂಡೇಶನ್’ನ ಸ್ಥಾಪಕ.
• ದೆವ್ವ, ಭೂತ, ಮಾಟ ಮಂತ್ರ, ಮದ್ದೀಡು, ದೈವೀ ಶಾಪ ಇತ್ಯಾದಿ ನಂಬಿಕೆಗಳ ವಿರುದ್ಧ ಪ್ರಬಲ ಹೋರಾಟ ಮಾಡಿದ ವಿಚಾರವಾದಿ.
• ಭಾಷಣ, ಉಪನ್ಯಾಸ, ಸಂವಾದಗಳ ಮೂಲಕ ಜನ ಮಾನಸದಲ್ಲಿ ‘ಮಾನಸಿಕ ಆರೋಗ್ಯ ಶಿಕ್ಷಣ’ದ ಬೀಜ ಬಿತ್ತಿ ಬೆಳೆ ತೆಗೆದ ಕೃಷಿಕ.
• ನಾಡಿನ ಬುದ್ಧಿಜೀವಿಗಳನ್ನು, ಪ್ರಾಜ್ಞರನ್ನು ಮಾನಸಿಕ ‘ಮಾನಸಿಕ ಆರೋಗ್ಯ ಶಿಕ್ಷಣ’ದ ಬೀಜ ಬಿತ್ತಿ ಬೆಳೆ ತೆಗೆದ ಕೃಷಿಕ.
• ನಾಡಿನ ಬುದ್ಧಿಜೀವಿಗಳನ್ನು, ಪ್ರಾಜ್ಞರನ್ನು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ದುಡಿಯಲು ಪ್ರೇರೇಪಿಸಿದಾತ.
• ಕರ್ನಾಟಕ ರಾಜ್ಯ ಸರ್ಕಾರದ ವೈದ್ಯ- ಆರೋಗ್ಯ ಇಲಾಖೆಯಲ್ಲಿ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನದ ಟಾಸ್ಕ್ ಫೋರ್ಸ್ ಅಧ್ಯಕ್ಷರಾಗಿ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರತಿ ಮಂಗಳವಾರ ಮನೋಚೇತನ ಎಂಬ ಮಾನಸಿಕ ಚಿಕಿತ್ಸಾ ಕೇಂದ್ರಗಳನ್ನು ತೆರೆದು, ಪ್ರತಿ ಜಿಲ್ಲಾ ಕೇಂದ್ರದಲ್ಲಿ ಮಾನಸಸಾಧನ ಎಂಬ ಪುನರ್ವಸತಿ ಕೇಂದ್ರಗಳನ್ನು ತೆರೆಯಲು ಪ್ರೇರಕ ಶಕ್ತಿಯಾಗಿ ನಿಂತವರು ಇತ್ಯಾದಿ.
ದಿನಾಂಕ 30-12-1946 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟೀಲು ಅಪ್ಪುಪೈ ಮತ್ತು ವಿನೋದಿನಿಯವರ ಕೊನೆಯ ಮಗನಾಗಿ ಜನಿಸಿದ ಕರ್ನಾಟಕ, ಭಾರತ ಮತ್ತು ಇಡೀ ವಿಶ್ವದಲ್ಲಿ ಎಲ್ಲರೂ ಗಮನಿಸಬಹುದಾದಂಥ ಸಾಧನೆಯನ್ನು ಮಾಡಿದ ಅಶೋಕ ಪೈ ನೃತ್ಯ, ಅಭಿನಯ, ಬರವಣಿಗೆ ಸಂಘಟನೆಗಳಲ್ಲೂ ತಮ್ಮ ನೈಪುಣ್ಯತೆಯನ್ನು ಪ್ರದರ್ಶಿಸಿದವರು. ಪ್ರಸಿದ್ಧ ರಂಗಕರ್ಮಿ ಶ್ರೀ ಡಿ.ಜಿ. ಶರ್ಮ ಮತ್ತು ಶ್ರೀ ಓಂಕಾರ್ ಅವರ ಗರಡಿಯಲ್ಲಿ ಪಳಗಿದ ಡಾ|| ಅಶೋಕ್ 1962-63ರಲ್ಲಿ ಮೆಡಿಕಲ್ ಕಾಲೇಜಿನಲ್ಲಿ ಸೀಟು ಗಿಟ್ಟಿಸಿದ ಇಬ್ಬರೇ ವಿದ್ಯಾರ್ಥಿಗಳಲ್ಲಿ ಒಬ್ಬರಾದರು. ಬೆಳಗಾವಿಯ ಜವಾಹರ್ಲಾಲ್ ನೆಹರೂ ಮೆಡಿಕಲ್ ಕಾಲೇಜಿನಲ್ಲಿ ವೈದ್ಯ ಪದವಿಯನ್ನು ಪಡೆದರು. ಫೈನಲ್ ಪರೀಕ್ಷೆಯಲ್ಲಿ ಇಡೀ ತಂಡಕ್ಕೆ ಪ್ರಥಮರಾದರು, ಗೈನಕಾಲಜಿಯಲ್ಲಿ ಇಡೀ ವಿಶ್ವವಿದ್ಯಾಲಯಕ್ಕೇ ಗರಿಷ್ಠ ಅಂಕಗಳನ್ನು ಪಡೆದರು.
ಮರಾಠಿಗರ ಕಿರಿಕಿರಿಯ ನಡುವೆ ಧೃತಿಗೆಡದೆ ‘ಬೆಳಗಾವಿಯ ಕನ್ನಡ ಬಳಗ’ ದ ಸಕ್ರಿಯ ಸದಸ್ಯರಾದರು. ಬಸವ ಜಯಂತಿಯನ್ನು ಪ್ರಥಮ ಬಾರಿಗೆ ಆಚರಿಸಿ ಕನ್ನಡಿಗರ ಸ್ವಾಭಿಮಾನವನ್ನು ಬಡಿದೆಬ್ಬಿಸಿದರು. 1971ರಲ್ಲಿ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಕನ್ನಡ ವೈದ್ಯಸಾಹಿತ್ಯ ಸಮ್ಮೇಳನವನ್ನು ಬೆಳಗಾವಿಯಲ್ಲಿ ಸಂಘಟಿಸಿದರು. ಕಡಲತೀರದ ಭಾರ್ಗವ ಶಿವರಾಮ ಕಾರಂತರು ಸಮ್ಮೇಳನವನ್ನು ಉದ್ಘಾಟಿಸಿದರೆ, ವೈದ್ಯ ಸಾಹಿತ್ಯದ ದಿಗ್ಗಜರುಗಳಾದ ಡಾ|| ಅನುಪಮಾ ನಿರಂಜನ, ಡಾ||ಡಿ. ಎಸ್. ಶಿವಪ್ಪ, ಡಾ||ಸ.ಜ. ನಾಗಲೋಟಿಮಠ, ಡಾ|| ಪಿ.ಎಸ್. ಶಂಕರ್, ಡಾ|| ಎಚ್. ಖ. ಚಂದ್ರಪ್ಪಗೌಡರು ಪಾಲ್ಗೊಂಡು ಇತಿಹಾಸವನ್ನು ಸೃಷ್ಟಿಸಿದರು. ಕನ್ನಡದ ಅತ್ಯಂತ ಜನಪ್ರಿಯ ಕಾದಂಬರಿಗಾರ್ತಿ, ಮನೋ ವೈಜ್ಞಾನಿಕ ಹಿನ್ನೆಲೆಯ ಪಾತ್ರಗಳನ್ನು ಸೃಷ್ಟಿಸಿದ ಶ್ರೀಮತಿ ತ್ರಿವೇಣಿಯವರ ಕಾದಂಬರಿಗಳಿಂದ ಪ್ರೇರಿತರಾಗಿ ಡಾ|| ಅಶೋಕ ಪೈ ಬೆಂಗಳೂರಿನ ಅಖಿಲ ಭಾರತ ಮಾನಸಿಕ ಆರೋಗ್ಯ ಸಂಸ್ಥೆಗೆ ಮನೋ ಬಹುತೇಕ ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದ ಕಾಲದಲ್ಲಿ ಮನೋವೈದ್ಯರಾಗಿ ಕೆಲಸ ಮಾಡಲು ಡಾ|| ಅಶೋಕ್ ನಿರ್ಧರಿಸಿ 1974 ರಲ್ಲಿ ಮನೋವೈದ್ಯ ಪದವಿಯನ್ನು ಪಡೆದರು. ನಾಡಿನ ಪ್ರತಿಷ್ಠಿತ ಮಣಿಪಾಲದ ವೈದ್ಯ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ನಾಡಿನ ಪ್ರಪ್ರಥಮ ಸಮುದಾಯ ಮನೋವೈದ್ಯರೆನಿಸಿಕೊಂಡ (Community Psychiatrist) ಡಾ||ಆರ್. ಎಲ್. ಕಪೂರ್ (ಇವರು ಡಾ|| ಕೆ. ಶಿವರಾಮ ಕಾರಂತರ ಅಳಿಯ) ಅವರ ಪ್ರಭಾವಕ್ಕೆ ಒಳಗಾದರು. ತತ್ಫಲವಾಗಿ ಮಲೆನಾಡಿನ ಸೆರಗಿನ ಊರು ಶಿವಮೊಗ್ಗೆಗೆ ಬಂದು ಮೆಗಾನ್ ಆಸ್ಪತ್ರೆಯಲ್ಲಿ ಮನೋವೈದ್ಯರಾಗಿ ದುಡಿಯತೊಡಗಿದರು. ಸರ್ಕಾರದ ಆದೇಶದಂತೆ ಮೈಸೂರಿಗೆ ಪುರಸಭಾ ವೈದ್ಯರಾಗಿ ಹೋಗಲು ಒಪ್ಪದೇ ರಾಜಿನಾಮೆ ನೀಡಿದರು. ತಮ್ಮದೇ ಆದ ಮಾನಸ ನರ್ಸಿಂಗ್ ಹೋಂ ಅನ್ನು 1979ರಲ್ಲಿ ತೆರೆದರು. ಕೇವಲ 13 ಹಾಸಿಗೆಗಳ ಆಸ್ಪತ್ರೆಯಿಂದ 100+ ಹಾಸಿಗೆಗಳ ಆಸ್ಪತ್ರೆಯನ್ನಾಗಿ ಬೆಳೆಸಿದರು. ಮಾನಸಿಕ ರೋಗ ಚಿಕಿತ್ಸೆಗೆ ರಾಜ್ಯದ ಜನ ಶಿವಮೊಗ್ಗೆಗೆ ಬರುವಂತೆ ಮಾಡಿದರು.
ಸ್ವಪ್ರತಿಭೆ, ಸಪ್ರಯತ್ನದಿಂದ ಅಮೆರಿಕ ಕೊಲರಾಡೊ ವಿಶ್ವವಿದ್ಯಾಲಯದಿಂದ ‘ಡಿಪ್ಲೊಮೇಟ್ ಇನ್ ಬಿಹೇವಿಯರಲ್ ಮೆಡಿಸಿನ್ ಮತ್ತು ಡಿಪ್ಲೊಮೇಟ್ ಇನ್ ಕೌನ್ಸಿಲಿಂಗ್ ಮತ್ತು ಸೈಕೋಥೆರಪಿ’ ಪದವಿಯನ್ನು ಗಳಿಸಿದರು. ಜನ ಮೆಚ್ಚುವ ಮನೋವೈದ್ಯವಾದ್ಯರಾದರು.
ಕಲೆ ಮತ್ತು ಸಂಸ್ಕøತಿಯಲ್ಲಿ ಶಿವಮೊಗ್ಗ ಜಿಲ್ಲೆಯ ಕೊಡುಗೆ ಅನುಪಮ. ನಾಡಿಗೆ ಇಬ್ಬರು ಜ್ಞಾನಪೀಠ ಪ್ರಶಸ್ತಿ ವಿಜೇತರನ್ನು ಕೊಟ್ಟ ಜಿಲ್ಲೆ. ಆದರೆ ದೆವ್ವ, ಭೂತ, ಮಾಟ ಮಂತ್ರದಲ್ಲಿ ಜನರಿಗೆ ಅತೀವ ನಂಬಿಕೆ. ಮನೋರೋಗವೆಂದರೆ ಸಾಕು ಜನ ದೇವಸ್ಥಾನ, ಮಂತ್ರವಾದಿಗಳು, ಕೈಮದ್ದು ತೆಗೆಯುವವರಲ್ಲಿಗೆ ಓಡುತ್ತಿದ್ದರು. ಮಾನಸಿಕ ಖಾಯಿಲೆಗಳಿಗೆ ಔಷಧಗಳಿವೆ, ಆಪ್ತಸಮಾಲೋಚನೆ, ಮನೋಚಿಕಿತ್ಸೆ ಇದೆ, ನಮ್ಮಲ್ಲಿಗೆ ಬನ್ನಿ ಎಂದು ಒಪ್ಪಿಸುವುದು ಹೇಗೆ? ಈ ಸವಾಲನ್ನು ಬಹು ಸಮರ್ಥವಾಗಿ ಡಾ|| ಪೈ ನಿಭಾಯಿಸಿದರು. ಅವರ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಜನ ಸಾಲುಗಟ್ಟಿ ನಿಂತರು. ಒಳರೋಗಿಗಳಾಗಿ ಚಿಕಿತ್ಸೆ ಪಡೆಯಲು ಒಪ್ಪಿದರು. ಮಾನಸ ಆಸ್ಪತ್ರೆಯಲ್ಲಿ ನಿತ್ಯ ಜಾತ್ರೆ. ಈ ಸಾಧನೆ ಮಾಡಲು ನೆರವಾದದ್ದು ಡಾ|| ಅಶೋಕ್ ಪೈ ಅವರ ಮಾತು, ವ್ಯಕ್ತಿತ್ವ ಮತ್ತು ರೋಗಿಗಳ ಬಗ್ಗೆ ಅವರಿಗಿದ್ದ ಪ್ರಾಮಾಣಿಕ ಕಳಕಳಿ. ನಾಟಕ, ಸಿನೆಮಾ, ಲೇಖನಗಳು, ಪುಸ್ತಕಗಳು, ಭಾಷಣ, ಉಪನ್ಯಾಸ, ರೇಡಿಯೋ, ಟಿ.ವಿ. ಎಲ್ಲ ಮಾಧ್ಯಮಗಳನ್ನು ಬಳಸಿದರು. ಜನರಿಗೆ ಆರೋಗ್ಯ ಶಿಕ್ಷಣವನ್ನಿತ್ತರು. ಮನೋರೋಗಗಳ ಬಗ್ಗೆ ಇದ್ದ ಭಯವನ್ನು ಹೋಗಲಾಡಿಸಿದರು.
ಕೇಂದ್ರದಿಂದ ಡಾ|| ಬಿ.ಸಿ. ರಾಯ್ ಪ್ರಶಸ್ತಿ, ರಾಜ್ಯದಿಂದ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದು ಡಾ|| ಅಶೋಕಪೈ ಅವರ ಹೆಗ್ಗಳಿಕೆ.
ರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠಿತ ಡಾ|| ಬಿ.ಸಿ. ರಾಯ್ ಪ್ರಶಸ್ತಿಯನ್ನು ಪಡೆದ ಏಕಮಾತ್ರ ಮನೋವೈದ್ಯ.
ಆಧುನಿಕ ಮನೋವಿಜ್ಞಾನ ಪಿತಾಮಹ ಸಿಗ್ಮಂಡ್ ಫ್ರಾಯ್ಡ್ನ 150ನೆಯ ವರ್ಷ ಜಯಂತಿಯ ಅಂಗವಾಗಿ ಆಸ್ಟ್ರಿಯದ ವಿಯೆನ್ನಾದಲ್ಲಿ ನಡೆದ ಉತ್ಸವಕ್ಕೆ ಆಹ್ವಾನ ಪಡೆದ ಭಾರತದ ಏಕೈಕ ಮನೋವೈದ್ಯ.
ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ತಜ್ಞರ ಕೊರತೆಯನ್ನು ನೀಗಿಸಲು ವೈದ್ಯರು, ಜನಸಾಮಾನ್ಯರು ಆಪ್ತಸಮಾಲೋಚನೆ ಮಾಡುವಂತೆ ಪ್ರೇರೇಪಿಸಲು ಮಾನಸಿಕ ಆರೋಗ್ಯ ವಿಜ್ಞಾನದ ಬಗ್ಗೆ ದೂರ ಕಲಿಕೆಯ ಕೋರ್ಸ್ಗಳನ್ನು ಪ್ರಾರಂಭಿಸಿದ ಭಾರತದ ಪ್ರಪ್ರಥಮ ಮನೋವೈದ್ಯ.
ಕುವೆಂಪು ವಿಶ್ವವಿದ್ಯಾಲಯ, ಕರ್ನಾಟಕ ಮತ್ತು ಅಮೆರಿಕದ ಟ್ರಿನಿಟಿ ವಿಶ್ವವಿದ್ಯಾಲಯ- ಹೀಗೆ ಎರಡು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪಡೆದ ಕರ್ನಾಟಕದ (ಭಾರತದ) ಏಕೈಕ ಮನೋವೈದ್ಯ.
ಕುವೆಂಪು ವಿಶ್ವವಿದ್ಯಾಲಯ, ಕರ್ನಾಟಕ ಮತ್ತು ಅಮೆರಿಕದ ಟ್ರಿನಿಟಿ ವಿಶ್ವವಿದ್ಯಾಲಯ – ಹೀಗೆ ಎರಡು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪಡೆದ ಕರ್ನಾಟಕದ (ಭಾರತದ ಏಕೈಕ ಮನೋವೈದ್ಯ.
ನಿರ್ಮಾಣ ಮಾಡಿದ ಮೊದಲ ಚಿತ್ರಕ್ಕೆ (ಕಾಡಿನ ಬೆಂಕಿ) ರಾಷ್ಟ್ರಪತಿಯ ರಜತ ಪದಕವನ್ನು (ರಾಷ್ಟ್ರಮಟ್ಟದಲ್ಲಿ) ಪಡೆದರು. ನಿರ್ಮಾಣ ಮಾಡಿದ ಮೂರೂ ಚಿತ್ರಗಳಿಗೆ ರಾಜ್ಯ- ರಾಷ್ಟ್ರಪ್ರಶಸ್ತಿಗಳನ್ನು ಗಳಿಸಿದರು. ಅಮೆರಿಕದ ಕೊಲರಾಡೊ ವಿಶ್ವವಿದ್ಯಾಲಯದ ಅಂಗ ಸಂಸ್ಥೆ ‘International Academy of Behavioral Medicine and Counseling & Psychotherapy’ ಡಾ|| ಪೈ ಅವರನ್ನು ಅಡ್ಮಿನಿಸ್ಟ್ರೇಟಿವ್ ಡೈರೆಕ್ಟರ್ ಆಗಿ, ಹಾಗೆಯೇ ಭಾರತದಲ್ಲಿ ಅವರನ್ನು Co-regional Vice President ಆಗಿ ಕೆಲಸ ಮಾಡಲು ನೇಮಕ ಮಾಡಿತು. ಭಾರತೀಯ ಮನೋವೈದ್ಯರೊಬ್ಬರಿಗೆ ದೊರೆತ ದೊಡ್ಡ ಗೌರವ ಇದು.
ಸಿಂಗಪೂರ್ ಸನ್ ಲವ್ ಮಾನಸಿಕ ಆರೋಗ್ಯ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ (ವಿಸಿಟಿಂಗ್ ಪ್ರೊಫೆಸರ್) ಮತ್ತು ಅದರ ಗೌರವ ಸಲಹೆಗಾರರಾಗಿದ್ದರು. (1995 ರಿಂದ)
ಖಾಸಗೀ ವಲಯದಲ್ಲಿ ದೊಡ್ಡ ಆಸ್ಪತ್ರೆಯೆದೇ ಹೇಳಬಹುದಾದ 100+ ಹಾಸಿಗೆಗಳುಳ್ಳ ಮಾನಸ ನರ್ಸಿಂಗ್ ಹೋಂ ಅಂತಾರಾಷ್ಟ್ರೀಯ ಮಾನಸಿಕ ಸಲಹಾ ಕೇಂದ್ರವಾಗಿ ಪರಿಗಣಿಸಲ್ಪಟ್ಟಿದೆ. ವಿವಿಧ ಮಾನಸಿಕ ಆರೋಗ್ಯ ತಜ್ಞರ ತರಬೇತಿ ಕೇಂದ್ರವಾಗಿ, ಪುನರ್ವಸತಿ ಸೇವಾ ಸೌಲಭ್ಯವುಳ್ಳ ಸಂಸ್ಥೆಯಾಗಿ ಉಪಯುಕ್ತವಾಗಿದೆ.
ಜ್ಞಾನಪೀಠ ಪ್ರಶಸ್ತಿ ವಿಜೇತ ಹೆಸರಾಂತ ನಾಟಕಕಾರ, ಚಲನಚಿತ್ರ ನಿರ್ದೇಶಕ ಮತ್ತು ನಟರಾದ ಗಿರೀಶ್ ಕಾರ್ನಾಡ್ ತಮ್ಮ ನಾಟಕ ‘ಒಡಕಲು ಬಿಂಬ’ವನ್ನು ಡಾ|| ಪೈ ಅವರಿಗೆ ಅರ್ಪಣೆ ಮಾಡಿ ಗೌರವಿಸಿದ್ದಾರೆ. ‘ಮಾನಸ’ ಪುಸ್ತಕದ ಮುನ್ನುಡಿಯಲ್ಲಿ ಕಾರ್ನಾಡ್ ಹೀಗೆ ಬರೆದಿದ್ದಾರೆ.
ಡಾ|| ಪೈ ಅವರು ಮನೋವೈದ್ಯ ಕ್ಷೇತ್ರದಲ್ಲಿ ಕೇವಲ ವೈದ್ಯರಾಗಿ ಮಾತ್ರವಲ್ಲ. ಕಾರ್ಯಕರ್ತರಾಗಿ ಶಿಕ್ಷಕರಾಗಿ ಹೊಸ ಜಾಗೃತಿ ಉಂಟುಮಾಡಲು ದುಡಿದಿದ್ದಾರೆ. ಲೇಖನಗಳನ್ನು ಬರೆದು, ಭಾಷಣಗಳನ್ನೇರ್ಪಡಿಸಿ, ವೈಯಕ್ತಿಕವಾಗಿ ಓಡಾಡಿ ಕಷ್ಟಪಟ್ಟಿದ್ದಾರೆ. ಇವರ ಬರಹಗಳು ನಮ್ಮ ದೈನಂದಿನ ಜೀವನದಲ್ಲಿ ಹೆಚ್ಚಿನ ಸಮಗ್ರತೆಯನ್ನು ಸಹಾನುಭೂತಿಯನ್ನು ಸಾಧಿಸುವುದರಲ್ಲಿ ಸಹಕಾರಿಯಾಗುತ್ತವೆ”.
ಪೈ ಅವರು 12 ಸಂಸ್ಥೆಗಳ ಸರದಾರ
1. ಮಾನಸ ನರ್ಸಿಂಗ್ ಹೋಂ : 100 ಹಾಸಿಗೆಗಳ ಆಸ್ಪತ್ರೆ
2. ಮಾನಸಧಾರಾ : 150 ಹಾಸಿಗೆಗಳ ಪುನರ್ವಸತಿ ಕೇಂದ್ರ
3. ಮಾನಸ ಎಜುಕೇಶನಲ್ ಫೌಂಡೇಶನ್ ಫಾರ್ ಮೆಂಟಲ್ ಹೆಲ್ತ್ : 1500 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಶಿಕ್ಷಣ/ತರಬೇತಿ ನೀಡಿದೆ.
4. ಆಶಾಕಿರಣ : ತೀವ್ರ ಬುದ್ಧಿಮಾಂದ್ಯ ಮಕ್ಕಳ ವಸತಿ ಗೃಹ 160 ಮಕ್ಕಳಿಗೆ
5. ಮಾನಸ ಸ್ಪೂರ್ತಿ : ಶಿಶು ಮಾರ್ಗದರ್ಶನ ಕೇಂದ್ರ
6. ಮಾನಸ ಶಕ್ತಿ : ಫಿಸಿಯೋಥೆರಪಿ/ ಅಂಗಮರ್ದನ ಕೇಂದ್ರ
7. ಮಾನಸ ಸ್ಮøತಿ : ನರಸಂಬಂಧಿ ರೋಗಗಳ ಚಿಕಿತ್ಸಾ ಕೇಂದ್ರ
8. ಮಾನಸ ಆಟ್ರ್ಸ್ : ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಮೂಲಕ ಜನರಿಗೆ ಮಾನಸಿಕ ಆರೋಗ್ಯ ಶಿಕ್ಷಣ
9. ಮಾನಸ ಕಿರಣ : ಆಟಿಸಂ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ವಸತಿ ಮತ್ತು ತರಬೇತಿ ಕೇಂದ್ರ, ಕರ್ನಾಟಕದಲ್ಲಿ ಮೊದಲನೆಯದು.
10. ಮಾನಸ ಟ್ರಸ್ಟ್ : ಮಾನಸಿಕ ಆರೋಗ್ಯ ಚಿಕಿತ್ಸಾ ಶಿಬಿರಗಳು, ಕಾರ್ಯಾಗಾರಗಳು.
11. ಮಾನಸ ವಿನೋದಿನಿ: ಪದವಿಯೇತರ ತರಬೇತಿ ಕೇಂದ್ರ.
12. ಮಾನಸ ಕೆ.ವಿ. ಕಾಮತ್ ಬ್ಲಾಕ್ : ಮನೋರೋಗಿಗಳಿಗೆ ಕಾರ್ಯಾಗಾರ ಮತ್ತು ಉದ್ಯೋಗ ತರಬೇತಿ ಚಿಕಿತ್ಸೆ.
ಡಾ|| ಅಶೋಕ್ ಪೈ ಅವರ ಜೀವನದ ಪ್ರಮುಖ ಘಟನಾವಳಿಗಳನ್ನು ಹೀಗೆ ಪಟ್ಟಿ ಮಾಡಬಹುದು.
• ಆನನ : 30-12-1946 : ಕಟೀಲು, ದಕ್ಷಿಣ ಕನ್ನಡ ಜಿಲ್ಲೆ
• ಎಂ.ಬಿ.ಬಿ.ಎಸ್. ಪದವಿ : 1969-70
• ಮನೋವೈದ್ಯ ಡಿಪ್ಲೊಮಾ : 1974
• ಅಸಿಸ್ಟೆಂಟ್ ಪ್ರೊಫೆಸರ್, ಮನೋವೈದ್ಯ ವಿಭಾಗ, ಕೆಎಂಸಿ ಮಣಿಪಾಲ: 1974-75
• ಅಸಿಸ್ಟೆಂಟ್ ಸರ್ಜನ್, ಮೆಗಾನ್ ಆಸ್ಪತ್ರೆ, ಶಿವಮೊಗ್ಗ : 1975
• ಡಾ|| ರಜನಿ ಅವರೊಂದಿಗೆ ವಿವಾಹ : 1977
• ಮಗಳು ಪ್ರೀತಿಯ ಜನನ : 1979
• ಮಾನಸ ನರ್ಸಿಂಗ್ ಹೋಂ ಸ್ಥಾಪನೆ : 1980
• ‘ಆಶಾಕಿರಣ’ ಬುದ್ಧಿಮಾಂದ್ಯರ ವಸತಿ ಶಾಲೆ : 1980
• ಫೆಲೋಷಿಪ್ ಡಿಪ್ಲೊಮೇಟ್ ಕೊಲರಾಡೊ, ಅಮೆರಿಕ : 1989
• ಪ್ರಥಮ ಸಿನೆಮಾ ‘ಕಾಡಿನ ಬೆಂಕಿ’ ಗೆ ರಾಷ್ಟ್ರಪ್ರಶಸ್ತಿ : 1990
• ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ : 1991
• ‘ಪ್ರಥಮ ಉಷಾಕಿರಣ’ ಚಿತ್ರಕ್ಕೆ ಫಿಲಂ ಫೇರ್ ಪ್ರಶಸ್ತಿ : 1993
• ಸಂದೇಶ – ರಾಜ್ಯಮಟ್ಟದ ಪ್ರಶಸ್ತಿ : 1994
• ಮಾನಸ ಎಜುಕೇಶನಲ್ ಟ್ರಸ್ಟ್ನಿಂದ ಪ್ರಥಮ ದೂರಸಂಪರ್ಕ ಕೌನ್ಸೆಲಿಂಗ್ ಕೋರ್ಸ್ನ ಪ್ರಾರಂಭ : 2003-04
• ಅಬುಧಾಬಿ ವಿಶ್ವಕನ್ನಡ ಸಮ್ಮೇಳನದ ಅಧ್ಯಕ್ಷ : 2004
• ಶ್ರೇಷ್ಟ ಮನೋವೈದ್ಯ ಪ್ರಶಸ್ತಿ : 2008
• ಗೌರವ ಡಾಕ್ಟರೇಟ್ ಕುವೆಂಪು ವಿಶ್ವವಿದ್ಯಾಲಯ : 2010
• ಅಮೆರಿಕ ಟ್ರಿನಿಟಿ ವಿಶ್ವವಿದ್ಯಾಲಯ ದ ಗೌರವ ಡಾಕ್ಟರೇಟ್ : 2011
• ಡಾ|| ಪೈ ಅವರು ಒಟ್ಟು 12 ಕೃತಿಗಳನ್ನು ರಚಿಸಿದ್ದಾರೆ.
‘ಕನ್ನಡ ಪ್ರಭ’ ಪತ್ರಿಕೆಯಲ್ಲಿ 5 ವರ್ಷಗಳ ಕಾಲ ಮಾನಸಿಕ ಆರೋಗ್ಯ ಅಂಕಣಕಾರರಾಗಿ ಸೇವೆ ಸಲ್ಲಿಸಿದ್ದಾರೆ. ‘ತರಂಗ’ ಪತ್ರಿಕೆಯಲ್ಲಿ 1 ವರ್ಷ ಅಂಕಣಕಾರರಾಗಿ ಬರೆದರು. ಹಿಂದಿ ಭಾಷೆಯಲ್ಲಿ 26 ಕಂತುಗಳ ‘ಅಂತರಾಳ’ ಟಿ.ವಿ. ಸೀರಿಯಲ್ ಮಾಡಿದರು.
ಸಮಾಜಮುಖಿಯಾಗಿಯೇ ಜೀವನ ಸಾರ್ಥಕಪಡಿಸಿಕೊಂಡ ಪೈ ಅವರು 30 ಸೆಪ್ಟೆಂಬರ್ 2016 ರಂದು ನಿಧನರಾದರು.